ಶಿಕಾರಿಪುರದಲ್ಲಿ ಹೋರಿ ಬೆದರಿಸುವ ವೇಳೆ ಮತ್ತೆ ದುರ್ಘಟನೆ, ಮತ್ತೊಬ್ಬ ಯುವಕನ ಸಾವು
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ಯುವಕನ ಬಲಿ... 15 ದಿನಗಳ ಅಂತರದಲ್ಲಿ ಶಿಕಾರಿಪುರದಲ್ಲಿ ಎರಡು ಸಾವು ಆದರೂ ಎಚ್ಚೆತ್ತುಕೊಳ್ಳದ ಶಿವಮೊಗ್ಗ ಜಿಲ್ಲಾಡಳಿತ-ಪೊಲೀಸ್ ಇಲಾಖೆ. ಆಟುಕ್ಕುಂಟು ಲೆಕ್ಕಕ್ಕಿಲ್ಲದ ನಿಯಮಗಳು. ಅಮಾಯಕರ ಬಲಿಗೆ ಹೊಣೆ ಯಾರು?
ಶಿಕಾರಿಪುರದಲ್ಲಿ (Shikaripura, Shivamogga) ಹೋರಿ ಬೆದರಿಸುವ ಹಬ್ಬದ ವೇಳೆ (bull-bullying festival) ಮತ್ತೊಂದು ದುರ್ಘಟನೆ ಸಂಭವಿಸಿದೆ. ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದ 19 ವರ್ಷದ ಯುವಕನಿಗೆ ಹೋರಿ ತಿವಿದಿದೆ. ಇದರ ಪರಿಣಾಮ ಆತ ಮೃತಪಟ್ಟಿದ್ದಾನೆ. ಗ್ರಾಮೀಣ ಸೊಗಡಿ ಹೋರಿ ಹಬ್ಬವೇ ರೋಮಾಂಚನ. ಈ ಕ್ರೀಡೆ ಎಷ್ಟು ನೋಡಲು ಸುಂದರ, ಉತ್ಸಾಹ ಮತ್ತು ಖುಷಿ ಇರುತ್ತದೆಯೋ… ಅದರ ಜೊತೆ ಅಷ್ಟೇ ಡೇಂಜರ್ ಕ್ರೀಡೆ ಕೂಡಾ ಇದಾಗಿದೆ.. ಹೋರಿ ಹಬ್ಬಕ್ಕೆ ಯುವಕ ಬಲಿ (Youth Death) ಕುರಿತು ಒಂದು ವರದಿ ಇಲ್ಲಿದೆ…
ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದಲ್ಲಿ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತಿತ್ತು. ಮೊನ್ನೆ ಸೋಮವಾರ ಮಧ್ಯಾಹ್ನದ ಬಳಿಕ ಹೋರಿ ಹಬ್ಬದ ಕಾವು ಬಿಸಿಲಿನ ಝಳಕ್ಕಿಂತ ನೂರು ಪಟ್ಟು ಜಾಸ್ತಿ ಇತ್ತು. ಎಲ್ಲಿ ನೋಡಿದ್ರೂ ಜನಸಾಗರ. ಅಂದಚಂದ ಮಾಡಿದ ಬಲಿಷ್ಠ ಹೋರಿಗಳು ಅಖಾಡಕ್ಕೆ ಎಂಟ್ರಿ ಕೊಡುತ್ತಿದ್ದವು.
ಈ ವೇಳೆಯಲ್ಲಿ ಶಿಕಾರಿಪುರಕ್ಕೆ ವಿದ್ಯಾಭ್ಯಾಸಕ್ಕೆಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಸಮಳಲಿ ಗ್ರಾಮದ ಪುನೀತ್ (19) ಬಂದಿದ್ದ. ಈತ ನಿನ್ನೆ ಈ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಅಲ್ಲಿಗೆ ತೆರಳಿದ್ದ. ಹತ್ತಿರದಿಂದ ಹೋರಿ ಹಬ್ಬ ನೋಡಿ ಕಣ್ಣು ತುಂಬಿಕೊಳ್ಳುತ್ತಿದ್ದ ಬಿಸಿ ರಕ್ತದ ಯುವಕ. ಚಪ್ಪಾಳೆ ಕೇಕೆ ಹಾಕುತ್ತಾ ಕೊಬ್ಬಿದ ಹೋರಿಗಳ ಮಿಂಚಿನ ಓಟ ಮತ್ತು ಆರ್ಭಟ ನೋಡುತ್ತಿದ್ದ.
ಈ ನಡುವೆ ಏಕಾಏಕಿ ಒಂದು ಹೋರಿಯು ಬಂದು ವೀಕ್ಷಣೆ ಮಾಡುತ್ತಿದ್ದ ಪುನೀತ್ ನ ಹೊಟ್ಟೆಗೆ ತನ್ನ ಮೊನಚಾದ ಕೊಂಬಿನಿಂದ ತಿವಿದಿದೆ. ಇದರ ಪರಿಣಾಮ ಪುನೀತ್ ಗಂಭಿರವಾಗಿ ಗಾಯಗೊಂಡ. ತಕ್ಷಣ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಆದ್ರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಮೃತನ ಕುಟುಂಬಸ್ಥರು ಶವಾಗಾರದ ಮುಂದೆ ಕಣ್ಣೀರು ಹಾಕುತ್ತಿದ್ದರು. ಸ್ಪರ್ಧೆಯ ಆಯೋಜಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಕಳೆದ ತಿಂಗಳು ಜನವರಿ 24 ರಂದು ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ಇದೇ ರೀತಿ ಹೋರಿ ಬೆದರಿಸುವ ಸ್ಪರ್ಧೆ ನಡೆದಿತ್ತು. ಹೋರಿ ಸ್ಪರ್ಧೆ ನೋಡಲು ತೆರಳಿದ್ದ ಈಸೂರು ಗ್ರಾಮದ ಪರಶುರಾಮನ ಹೊಟ್ಟೆಗೆ ಹೋರಿ ತಿವಿದಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡು ಪರಶುರಾಮ ಮೃಪಟ್ಟಿದ್ದ.
ಇದನ್ನೂ ಓದಿ: ಶಿಕಾರಿಪುರ ಹೋರಿ ಬೆದರಿಸುವ ರಣರೋಚಕ ಸ್ಪರ್ಧೆಯಲ್ಲಿ ಯುವಕನ ಸಾವು, ಆಯೋಜಕರ ವಿರುದ್ದ ದೂರು
ಈ ಘಟನೆಯ ನೋವು ಮಾಸುವ ಮುನ್ನವೇ ಮತ್ತೊಂದು ಇದೇ ತಾಲೂಕಿನಲ್ಲಿ ದುರ್ಘಟನೆ ಸಂಭವಿಸಿದೆ. ಈ ಗ್ರಾಮೀಣ ಕ್ರೀಡೆಗೆ ಜೋಶ್ ಜಾಸ್ತಿ. ಹೋರಿ ಬೆದರಿಸುವ ಸ್ಪರ್ಧೆ ಆಯೋಜಕರು ಮತ್ತು ಸ್ಥಳೀಯ ಆಡಳಿತ ಮುಂಜಾಗ್ರತೆಗೆ ಹೆಚ್ಚು ಒತ್ತು ನೀಡುವುದಿಲ್ಲ. ಜನಸಾಗರ ಸೇರಿದ ಮೇಲೆ ಅಲ್ಲಿ ಯಾರ ಮಾತು ಯಾರೂ ಕೇಳುವುದಿಲ್ಲ.
ಈ ಹಿನ್ನೆಲೆಯಲ್ಲಿ ಹೋರಿಗಳು ವೇಗವಾಗಿ ಓಡಿಬರುವ ಸಂದರ್ಭದಲ್ಲಿ ಯಾರಾದ್ರೂ ಅಡ್ಡ ಬಂದ್ರೆ ಅಕ್ಕಪಕ್ಕದಲ್ಲಿ ನಿಂತಿರುವವರನ್ನು ಟಾರ್ಗಟ್ ಮಾಡುತ್ತವೆ. ಹೋರಿ ಸ್ಪರ್ಧೆ ನೋಡಲು ಎರಡು ಕಣ್ಣುಗಳು ಸಾಕಾಗುವುದಿಲ್ಲ. ಅಷ್ಟೊಂದು ಅದ್ಧೂರಿಯಾಗಿ ಈ ಸ್ಪರ್ಧೆಗಳು ನಡೆಯುತ್ತಿವೆ. ಆದ್ರೆ ಸಂತಸ ಉತ್ಸಾಹದ ನಡುವೆ ಇಂತಹ ದುರ್ಘಟನೆಗಳು ನಡೆಯುತ್ತಿರುತ್ತವೆ ಎಂದು ಗ್ರಾಮಸ್ಥರಾದ ಚಂದ್ರಶೇಖರ್ ಮತ್ತು ಮಲ್ಲೇಶಪ್ಪ ವಿಷಾದದ ದನಿಯಲ್ಲಿ ಹೇಳುತ್ತಾರೆ.
ಶಿವಮೊಗ್ಗದಲ್ಲಿ ಹೋರಿ ಬೆದರಿಸುವ ಗ್ರಾಮೀಣ ಕ್ರೀಡೆಯು ಕೆಲವೇ ದಿನಗಳ ಅಂತರದಲ್ಲಿ ಎರಡು ಬಲಿಯನ್ನು ಪಡೆದಿದೆ. ಎರಡು ಬಲಿ ಪಡೆದ್ರೂ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ, ಪೊಲೀಸ್ ಇಲಾಖೆಗಳು ಎಚ್ಚೆತ್ತಕೊಳ್ಳದಿರುವುದೇ ಸದ್ಯ ಎಲ್ಲರ ಆತಂಕಕ್ಕೆ ಕಾರಣವಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ