ಎಲ್ಲಾ ಮಸೀದಿಗಳಲ್ಲೂ ಶಿವನ ವಿಗ್ರಹ ಹುಡುಕಾಡಬೇಡಿ: ​ಈಶ್ವರಪ್ಪ ವಿರುದ್ಧ ಸ್ವಪಕ್ಷದ ನಾಯಕ ​ವಾಗ್ದಾಳಿ

|

Updated on: Mar 23, 2023 | 2:41 PM

ಶಿವಮೊಗ್ಗ ಕ್ಷೇತ್ರಕ್ಕೆ ನಾನು ಸಹ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ. 32 ವರ್ಷಗಳ ಕಾಲ ಕೆ.ಎಸ್​.ಈಶ್ವರಪ್ಪಗೆ ಪಕ್ಷ ಅವಕಾಶ ನೀಡಿದೆ. ಎಲ್ಲ ರೀತಿಯ ಅಧಿಕಾರವನ್ನು ಕೆ.ಎಸ್​.ಈಶ್ವರಪ್ಪ ಪಡೆದಿದ್ದಾರೆ. -ಆಯನೂರು ಮಂಜುನಾಥ್

ಎಲ್ಲಾ ಮಸೀದಿಗಳಲ್ಲೂ ಶಿವನ ವಿಗ್ರಹ ಹುಡುಕಾಡಬೇಡಿ: ​ಈಶ್ವರಪ್ಪ ವಿರುದ್ಧ ಸ್ವಪಕ್ಷದ ನಾಯಕ ​ವಾಗ್ದಾಳಿ
ಕೆ.ಎಸ್​.ಈಶ್ವರಪ್ಪ, ಆಯನೂರು ಮಂಜುನಾಥ್
Follow us on

ಶಿವಮೊಗ್ಗ: ಎಲ್ಲಾ ಮಸೀದಿಗಳಲ್ಲೂ ಶಿವನ ವಿಗ್ರಹ ಹುಡುಕಾಟ ಮಾಡಬೇಡಿ ಎಂದು ಕೆ.ಎಸ್​.ಈಶ್ವರಪ್ಪ(KS Eshwarappa) ವಿರುದ್ಧ ಆಯನೂರು ಮಂಜುನಾಥ್(​Ayanur Manjunath) ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗ ಕ್ಷೇತ್ರಕ್ಕೆ ನಾನು ಸಹ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ. 32 ವರ್ಷಗಳ ಕಾಲ ಕೆ.ಎಸ್​.ಈಶ್ವರಪ್ಪಗೆ ಪಕ್ಷ ಅವಕಾಶ ನೀಡಿದೆ. ಎಲ್ಲ ರೀತಿಯ ಅಧಿಕಾರವನ್ನು ಕೆ.ಎಸ್​.ಈಶ್ವರಪ್ಪ ಪಡೆದಿದ್ದಾರೆ. ಈಶ್ವರಪ್ಪ ತಮ್ಮ ಮಗನಿಗೆ ಟಿಕೆಟ್ ಕೇಳುತ್ತಿದ್ದಾರೆ. ಬೇರೆ ಮುಖಂಡರ ಹೆಸರನ್ನು K.S.ಈಶ್ವರಪ್ಪ ಪ್ರಸ್ತಾಪ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ. ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ ಎಂದರು.

ಎಲ್ಲಾ ಮಸೀದಿಗಳಲ್ಲೂ ಶಿವನ ವಿಗ್ರಹ ಹುಡುಕಾಟ ಮಾಡಬೇಡಿ. ಅಲ್ಪಸಂಖ್ಯಾತರ ಜೊತೆ ಸೌಹಾರ್ದತೆಯಿಂದ ಇರಬೇಕು. ಶಿವಮೊಗ್ಗದಲ್ಲಿ ಶಾಂತಿಯಿಂದ ಇರಬೇಕು ಎಂದು ಹೇಳುವುದು ತಪ್ಪಾ? ನಾನು ಶಿವಮೊಗ್ಗ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿರುವುದೇ ತಪ್ಪಾ? 25 ವರ್ಷದ ರಾಜಕೀಯ ಜೀವನದಲ್ಲಿ ಎಲ್ಲವನ್ನೂ ಎದುರಿಸಿದ್ದೇನೆ. ನನ್ನ ಬಗ್ಗೆ ಟೀಕೆ ಮಾಡುವವರು ತಮ್ಮ ಅರ್ಹತೆ ಬಗ್ಗೆ ತಿಳಿದುಕೊಳ್ಳಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಈಶ್ವರಪ್ಪ ವಿರುದ್ಧ ರಾರಾಜಿಸಿದ ಬಿಜೆಪಿ ನಾಯಕನ ಸೌಹಾರ್ದತೆ ಫ್ಲೆಕ್ಸ್​

ಮೊನ್ನೆಯ ದಿನ ಯುಗಾದಿಯ ಶುಭಾಶಯ ಕೋರಿ ಫ್ಲೆಕ್ಸ್ ಹಾಕಿದ್ದೆ. ನನ್ನ ನೀರಿಕ್ಷೆಗೂ ಮೀರಿ ಎಲ್ಲರ ಗಮನ ಸೆಳೆದಿರುವುದು ಗಮನಕ್ಕೆ ಬಂದಿದೆ. ಬಹಳಷ್ಟು ಜನ ಸ್ವಾಗತಿಸಿ, ನಗರಕ್ಕೆ ಶಾಂತಿ ಬೇಕು ಎಂದು ಹೇಳಿದ್ದಾರೆ. ವ್ಯಾಪಾರಸ್ಥರು, ಹಿಂದೂ-ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲರೂ ಸ್ವಾಗತಿಸಿದ್ದಾರೆ. ಶಿವಮೊಗ್ಗದಲ್ಲಿ ಯಾವುದರ ಕೊರತೆ ಇದೆಯೋ ಅದನ್ನ ಹೇಳಿದ್ದೇನೆ ಎಂದು ಎಲ್ಲರ ಪ್ರತಿಕ್ರಿಯೆಯಿಂದ ಅರ್ಥ ಆಗಿದೆ. ಜನಪ್ರತಿನಿಧಿಯಾಗಿ ನಾನು ನನ್ನ ಕೆಲಸ ಮಾಡಿದ್ದೇನೆ. ವಾಸ್ತವಿಕತೆ ಹತ್ತಿರ ಇರೋ ಫ್ಲೆಕ್ಸ್, ಜನರ ನಾಡಿಮಿಡಿತದ ರೀತಿಯಲ್ಲಿ ಪ್ರಕಟ ಆಗಿದೆ. ಬಡವರ ಬದುಕು, ಶಿವಮೊಗ್ಗ ಜನರ ಸಾಮಾಜಿಕ ಜನರ ಸ್ವಾಸ್ಥ್ಯಕ್ಕಾಗಿ ಹೇಳಿದ್ದೇನೆ. ಅದು ಯಾವುದೋ ವ್ಯಕ್ತಿಗೆ ಹೇಳಿದ್ದಲ್ಲ. ಅದ್ರೇ, ವ್ಯಕ್ತಿಗೆ ಹೇಳಿದಂತೆ ಭಾಸವಾಗಿದೆ. ಚುನಾವಣಾ ಹಿನ್ನೆಲೆ ಎಲ್ಲರ ಅನುಭವಕ್ಕೆ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ಇದನ್ನೂ ಓದಿ: Bengaluru: ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಪಿಸಮಾತುಗಳಲ್ಲಿ ಚರ್ಚಿಸಿದ್ದು ಏನು ಗೊತ್ತಾ?

ಸಣ್ಣಪುಟ್ಟ ಕಾರಣಕ್ಕೆ ಘಟನೆ ನಡದರೇ, ಎಲ್ಲಿಯೂ ಅತಿಯಾಗಿ ಪ್ರತಿಕ್ರಿಯಿಸಬೇಡಿ. ಚುನಾವಣಾ ಸಂದರ್ಭದಲ್ಲಿ ಬಹುತೇಕರಿಗೆ ಇದು ಬೇಡ. ಕೆಲವರಿಗೆ ಮಾತ್ರ ಬೇಕು. ಕೆಲವರ ಹಿತಾಸಕ್ತಿಗೆ ಶಿವಮೊಗ್ಗ ನಗರ ಸ್ಪಂದಿಸದೇ ಇರಲಿ. ನೆಮ್ಮದಿ ಕಲಕದೇ ಇರಲಿ. ಕೆಲವರು ನನ್ನ ನಿಲುವನ್ನು ಟೀಕಿಸಿ, ಅಪಹಾಸ್ಯವನ್ನು ಮಾಡಿದ್ದಾರೆ. ಮನೋರಂಜನೆ ಪಡೆಯುತ್ತಿದ್ದಾರೆ. ಶಿವಮೊಗ್ಗದ ಶಾಂತಿ ಅಪಹಾಸ್ಯದ, ಮನೋರಂಜನೆ ವಸ್ತುವಾಗುತ್ತಿರುವುದು ಬೇಸರ ತರಿಸಿದೆ. ಕೆಲವರು ನನ್ನನ್ನು ನಿತ್ಯ ಸುಮಂಗಲಿಗೆ ಹೋಲಿಸಿದ್ದಾರೆ. ಯಾರು ನಿತ್ಯ ಸುಮಂಗಲಿ ಬಯಸಿ ಆಗುವುದಿಲ್ಲ, ಸಮಾಜ ಅವರನ್ನು ಹಾಗೇ ಮಾಡುತ್ತದೆ. ಜನ ಸಾಮಾನ್ಯರ ಬದುಕಿಗಾಗಿ ನಾನೋರ್ವ ಜನಪ್ರತಿನಿಧಿಯಾಗಿ ನಿತ್ಯ ಸುಮಂಗಲಿಯಾಗಲು ಸಿದ್ದನಿದ್ದೇನೆ. ವಿದ್ಯಾರ್ಥಿ ಜೀವನದಲ್ಲೇ ಹೋರಾಟ ಮಾಡಿ, ಜೈಲಿಗೆ ಬಂದವನು ನಾನು. ನಾನೋಂದು ಸೀಟ್ ಕೇಳಿದರೇ, ಇಷ್ಟೋಂದು ಕೆಳಮಟ್ಟದ ಕಮೆಂಟ್ ಗಳೇ. ನಿಜ, ಪಕ್ಷ ನನಗೆ ಎಲ್ಲಾ ಅವಕಾಶವನ್ನು ಮಾಡಿ ಕೊಟ್ಟಿದೆ. ಎಲ್ಲಾ ಸದನಕ್ಕೂ ಹೋಗಿ ಬಂದಿದ್ದೇನೆ. ಯಾಕೇ ನನಗೆ ಟಿಕೆಟ್ ಕೇಳುವ ಹಕ್ಕಿಲ್ಲವೇ? ಈ ಹಿಂದೆ ಹೊಸನಗರ ಕ್ಷೇತ್ರದಲ್ಲೂ ಸ್ಫರ್ದಿಸಿ, ಶಾಸಕನಾಗಿ ಕೆಲಸ ಮಾಡಿದ್ದೇ. ಬಳಿಕ ಪಕ್ಷ ಹೇಳಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದೇ. ಬಂಗಾರಪ್ಪನವರ ವಿರುದ್ದ ಪಕ್ಷದಿಂದ ಸ್ಫರ್ಧಿಸಿ, ಲೋಕಸಭೆಗೆ ಹೋಗಿದ್ದೇ. ಪಕ್ಷ ಹೇಳಿದಂತೆ ಮಾಡಿದ್ದೇನೆ. ಬರೀ ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು, ಒಂದೇ ಕಡೇ ಗೂಟ ಹೊಡೆದುಕೊಂಡು ಕೂತಿಲ್ಲ. ಶಿವಮೊಗ್ಗ ನನಗೆ ಕಾರ್ಯಕ್ಷೇತ್ರ. ಇಲ್ಲೊಂದು ಅವಕಾಶ ಕೊಡಿ ಎಂದು ಕೇಳಿದ್ರೆ ಎಷ್ಟೋಂದು ಅಸಹಿಷ್ಣುತೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:39 pm, Thu, 23 March 23