ಕಾಂಗ್ರೆಸ್‌ನಲ್ಲಿ ಸೆಪ್ಟೆಂಬರ್ ಕ್ರಾಂತಿ..ಬಿಜೆಪಿಯಲ್ಲೂ ಬದಲಾಗುತ್ತಾ ಕುರ್ಚಿ? ಕುತೂಹಲ ಮೂಡಿಸಿದ ಇಂದಿನ ರಹಸ್ಯ ಸಭೆ
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯದ್ದೇ ಮಾತು. ಬದಲಾವಣೆಯದ್ದೇ ಚರ್ಚೆ. ಬದಲಾವಣೆಯದ್ದೇ ಬಿರುಗಾಳಿ. ಸೆಪ್ಟೆಂಬರ್ ನಲ್ಲಿ ಕಾಂಗ್ರೆಸ್ ಮಹತ್ವದ ಬದಲಾವಣೆ ಮಾತು ಸ್ಪೋಟಗೊಂಡಿದ್ದರೆ, ಮತ್ತೊಂದೆಡೆ ಬಿಜೆಪಿಯಲ್ಲೂ ಬದಲಾವಣೆ ಚರ್ಚೆ ಜೋರಾಗಿದೆ. ವಿಜಯೇಂದ್ರ ಬದಲಾಗ್ತಾರಾ? ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸಬರು ಬರ್ತಾರಾ? ವಿಪಕ್ಷ ಸ್ಥಾನವೂ ಚೇಂಜ್ ಆಗುತ್ತಾ ಅನ್ನೋ ಕುತೂಹಲ ಕಮಲ ಮನೆಯಲ್ಲಿ ಗರಿಗೆದರಿದೆ. ಈ ಮಧ್ಯೆ ವಿಜಯೇಂದ್ರ ರಹಸ್ಯ ಸಭೆ ನಡೆಸಿದ್ದ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಬೆಂಗಳೂರು, (ಜೂನ್ 27): ಕಾಂಗ್ರೆಸ್ ನಲ್ಲಿ (Congress) ಬದಲಾವಣೆ ಮಾತುಗಳು ಕೇಳಿಬರುತ್ತಿವೆ. ಸೆಪ್ಟೆಂಬರ್ ನಲ್ಲಿ ಮಹತ್ವದ ಬದಲಾವಣೆಗಳಾಗಲಿವೆ ಎಂದು ಹಿರಿಯ ನಾಯಕ, ಸಚಿವ ಕೆಎನ್ ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ (BJP) ಪಾಳೆಯದಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಪಕ್ಷದಲ್ಲಿನ ಮಹತ್ವದ ಬದಲಾವಣೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ದೆಹಲಿ ಹೋಗಿ ಬಮದ ಬಳಿಕ ಕೆಲ ಬದಲಾವಣೆಯಾಗಲಿವೆ ಎನ್ನುವ ಮಾತುಗಳನ್ನಾಡಿದ್ದು. ಇನ್ನು ವಿಪಕ್ಷ ನಾಯಕ ಆರ್ ಅಶೋಕ್ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದು (ಜೂನ್ 27) ಬೆಂಗಳೂರಿನಲ್ಲಿ ಬಿಜೆಪಿ ಕೆಲ ಪ್ರಮುಖ ನಾಯಕರ ಗೌಪ್ಯ ಸಭೆ ನಡೆದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಪ್ರಮುಖ ನಾಯಕರ ಗೌಪ್ಯ ಸಭೆ
ಹೌದು… ನಾಲ್ಕು ದಿನ, ನಾಲ್ಕು ದಿನಗಳ ಕಾಲ ನವದೆಹಲಿಯಲ್ಲೇ ಉಳಿದು ರಾಜ್ಯ ಬಿಜೆಪಿಗರಿಗೆ ಸಸ್ಪೆನ್ಸ್ ಎನ್ನಿಸಿದ್ದ ವಿಪಕ್ಷ ನಾಯಕ ಆರ್. ಅಶೋಕ್ ಬೆಂಗಳೂರು ತಲುಪುವ ಮೊದಲೇ, ರಾಜ್ಯದಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ. ರಾಜ್ಯಾಧ್ಯಕ್ಷ ಕುರ್ಚಿಯ ಸುತ್ತ ಟಾಕ್ ನಡೆಯುತ್ತಿರುವಾಗಲೇ ರಾಜ್ಯ ಬಿಜೆಪಿಯಲ್ಲಿ ಇಂದು ಮಹತ್ವದ ಸಭೆಯೊಂದು ನಡೆದಿದೆ. ಇಷ್ಟು ದಿನಗಳ ಕಾಲ ಅಸಮಾಧಾನಿತರ ತಂಡದಲ್ಲಿದ್ದ ಮಾಜಿ ಸಚಿವ ಅರವಿಂದ ಲಿಂಬಾವಳಿ ಉಪಸ್ಥಿತಿಯಲ್ಲಿ ಶಾಸಕ ಡಾ. ಅಶ್ವಥ್ ನಾರಾಯಣ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಹತ್ವದ ಸಭೆ ನಡೆದಿದ್ದು, ಈ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡಾ ಹಾಜರಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಯಾಕಂದ್ರೆ ತಮ್ಮ ವಿರೋಧ ಬಣದ ನಾಯಕ ಅರವಿಂದ ಲಿಂಬಾವಳಿ ಇರುವ ಸಭೆಯಲ್ಲಿ ವಿಜಯೇಂದ್ರ ಉಪಸ್ಥಿತಿ. ಇದು ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರಗೆ ಕೊಕ್? ಮುಂಚೂಣಿಯಲ್ಲಿ ಕೇಳಿಬರುತ್ತಿದೆ ಈ ನಾಯಕರ ಹೆಸರು!
ಕಳೆದ ವಾರವಷ್ಟೇ ಅಸಮಾಧಾನಿತರನ್ನು ವಿಶ್ವಾಸಕ್ಕೆ ಪಡೆಯುವ ಚಟುವಟಿಕೆಗೆ ಚಾಲನೆ ಸಿಕ್ಕಿತ್ತು. ಇದರ ಮುಂದುವರಿದ ಭಾಗವಾಗಿ ಇಂದು ಪ್ರಮುಖ ನಾಯಕರು ಸಭೆ ಸೇರಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ಶಾಸಕ ಡಾ. ಅಶ್ವಥ್ ನಾರಾಯಣ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರಹ್ಲಾದ್ ಜೋಷಿ, ಡಿ.ವಿ. ಸದಾನಂದ ಗೌಡ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಕೆಲವು ನಾಯಕರು ಭಾಗಿಯಾಗಿದ್ದರು. ಆದರೆ ಇಷ್ಟು ದಿನಗಳ ಕಾಲ ರಾಜ್ಯಾಧ್ಯಕ್ಷ ವಿಜಯೇಂದ್ರ ನಾಯಕತ್ವವನ್ನು ವಿರೋಧಿಸುತ್ತಲೇ ಬಂದಿದ್ದ ಮಾಜಿ ಸಚಿವ ಅರವಿಂದ ಲಿಂಬಾವಳಿ ಇಂದು ವಿಜಯೇಂದ್ರ ಉಪಸ್ಥಿತಿರಿದ್ದ ಪಕ್ಷದ ಸಭೆಗೆ ಹಾಜರಾಗಿದ್ದು ಗಮನಾರ್ಹವಾಗಿದೆ.
ಪಥ ಬದಲಿಸಿದ್ರಾ ವಿಜಯೇಂದ್ರ?
ಒಂದು ರೀತಿಯಲ್ಲಿ ರಹಸ್ಯ ಎನ್ನುವಂತೆ ಮಾಧ್ಯಮಗಳ ಕಣ್ಣು ತಪ್ಪಿಸುವ ರೀತಿಯಲ್ಲೇ ಇಂದಿನ ಸಭೆ ನಡೆದಿದೆ. ಇಷ್ಟು ದಿನಗಳ ಕಾಲ ರೆಬೆಲ್ ಕ್ಯಾಂಪ್ ಮೆಂಬರ್ ಮತ್ತು ಮೆಂಟರ್ ಆಗಿದ್ದ ಅರವಿಂದ ಲಿಂಬಾವಳಿ ಈ ಸಭೆಗೆ ಹಾಜರಾಗಿದ್ದು ಗಮನಿಸಿದರೆ, ಹಿರಿಯರನ್ನು, ಅಸಮಾಧಾನಿತರನ್ನು ಪೂರ್ಣ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ತಮ್ಮ ಪ್ರಯತ್ನವನ್ನು ವಿಜಯೇಂದ್ರ ಗಂಭೀರವಾಗಿ ಕೈಗೆತ್ತಿಕೊಂಡಂತಿದೆ. ಆದರೆ ಇಂದಿನ ಸಭೆ ಕೇವಲ ಸರ್ಕಾರದ ವಿರುದ್ಧದ ಹೋರಾಟ ರೂಪಿಸಲು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರೇ ಸಮಜಾಯಿಷಿಕೊಟ್ಟುಕೊಂಡಿದ್ದಾರೆ.
ವಿಜಯೇಂದ್ರ ಬದಲಿಸಿದ್ರೂ ಮತ್ತೆ ಲಿಂಗಾಯತರಿಗೆ ಮಣೆ?
ಹಾಲಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನ ಬದಲಿಸಿದ್ರೂ ಮತ್ತೆ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ಹೈಕಮಾಂಡ್ ಮಟ್ಟದಲ್ಲಿ ಮೂವರು ಲಿಂಗಾಯತರ ಹೆಸರು ಮುಂಚೂಣಿಯಲ್ಲಿವೆ. ಕೇಂದ್ರ ಸಚಿವ ವಿ.ಸೋಮಣ್ಣ, ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಮತ್ತು ವಿಧಾನ ಮಂಡಲ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಸಿ.ಸಿ. ಪಾಟೀಲ್ ಹೆಸರುಗಳು ರಾಜ್ಯಾಧ್ಯಕ್ಷ ರೇಸ್‌ನಲ್ಲಿವೆ. ಹೀಗಾಗಿಯೇ ರಾಜ್ಯ ಬಿಜೆಪಿ ಪಾಳಯದಲ್ಲಿ ಗುಸು ಗುಸು ಚರ್ಚೆಗಳು, ಗುಪ್ತ್ ಗುಪ್ತ್ ಮೀಟಿಂಗಳು ಹೆಚ್ಚಾಗಿವೆ.
ಬದಲಾವಣೆಗಳು ಏನೇ ಇರಲಿ, ಅತೃಪ್ತ ಬಣದ ಲಿಂಬಾವಳಿಯವರನ್ನ ಕರೆಸಿಕೊಂಡು ಸಭೆ ಮಾಡಿರುವುದು ಕುತೂಹಲ ಮೂಡಿಸಿದೆ. ಯಾಕಂದ್ರೆ, ರಾಜ್ಯಾಧ್ಯಕ್ಷ ರೇಸ್‌ನಲ್ಲಿ ಲಿಂಬಾವಳಿ ಹೆಸರು ಕೂಡಾ ಇದೆ. ಜುಲೈ ತಿಂಗಳಲ್ಲಿ ಬಿಜೆಪಿಯಲ್ಲಿ ಕ್ರಾಂತಿಯಾಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.








