ಕಾಂಗ್ರೆಸ್ ಶಾಸಕರ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದ ಕೆಎನ್ ರಾಜಣ್ಣ: ಕ್ರಾಂತಿ, ಪವರ್ ಸೆಂಟರ್ ಹೇಳಿಕೆಯಿಂದ ಸಂಚಲನ
ಕರ್ನಾಟಕ ರಾಜಕೀಯದಲ್ಲಿ ಸಚಿವ ಕೆಎನ್ ರಾಜಣ್ಣ ಅವರ ‘‘ಸೆಪ್ಟೆಂಬರ್ ಕ್ರಾಂತಿ’’ ಹಾಗೂ ‘‘ಪವರ್ ಸೆಂಟರ್’’ ಹೇಳಿಕೆ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಶಾಸಕರ ಅಸಮಾಧಾನ, ಅನುದಾನದ ಕೊರತೆ ಮತ್ತು ಸಚಿವರ ನಿರ್ಲಕ್ಷ್ಯದ ಆರೋಪಗಳು ಹೈಕಮಾಂಡ್‌ವರೆಗೂ ತಲುಪಿರುವ ಸಂದರ್ಭದಲ್ಲೇ ಸಚಿವರಿಂದಲೇ ಬಹಿರಂಗ ಹೇಳಿಕೆ ಮೂಡಿಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು, ಜೂನ್ 27: ಸೆಪ್ಟೆಂಬರ್ನಲ್ಲಿ ಕ್ರಾಂತಿಯಾಗಲಿದೆ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಹೇಳಿರುವುದು ಕರ್ನಾಟಕ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಅದು ಯಾವ ರೀತಿಯ ಕ್ರಾಂತಿಯೋ ಗೊತ್ತಿಲ್ಲ. ರಾಜಣ್ಣ ಸ್ಫೋಟಿಸಿರುವ ಮಾತಿನ ಬಾಂಬ್ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಎಬ್ಬಿಸಿದೆ. ಅನುದಾನ ಸಿಗುತ್ತಿಲ್ಲ, ಸಚಿವರು ಸ್ಪಂದಿಸುತ್ತಿಲ್ಲ, ಮನೆ ಕೊಡಲು ಹಣ ಕೇಳುತ್ತಾರೆ ಎಂದು ಕಾಂಗ್ರೆಸ್ ಶಾಸಕರೇ ತಮ್ಮದೇ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದರು. ಹೈಕಮಾಂಡ್‌ವರೆಗೂ ಈ ವಿಚಾರ ಮುಟ್ಟಿತ್ತು. ನಂತರ ಹೈಕಮಾಂಡ್ ಸೂಚನೆ ಮೇರೆಗೆ ಶಾಸಕರನ್ನು ಕರೆದು ಸಿಎಂ ಪ್ರತ್ಯೇಕವಾಗಿ ಮಾತನಾಡಿದರು. ಬಹಿರಂಗ ಹೇಳಿಕೆ ಕೊಡದಂತೆ ಸೂಚನೆ ಕೂಡ ಕೊಟ್ಟರು. ಅದರ ಬೆನ್ನಲ್ಲೇ ಇದೀಗ ಸಚಿವ ಕೆಎನ್ ರಾಜಣ್ಣ ಹೊಸ ಕಿಚ್ಚು ಹಚ್ಚಿದ್ದಾರೆ.
ಕೆಎನ್ ರಾಜಣ್ಣ ಹೇಳಿದ್ದೇನು?
ಇಷ್ಟು ದಿನ ಬಿಜೆಪಿ ನಾಯಕರು ಸರ್ಕಾರದಲ್ಲಿ ಬದಲಾವಣೆ ಆಗುತ್ತದೆ ಎಂದು ಭವಿಷ್ಯ ಹೇಳುತ್ತಿದ್ದರು. ಇದೀಗ ಸಚಿವ ರಾಜಣ್ಣ ಅವರೇ ಸೆಪ್ಟೆಂಬರ್‌ನ ಭವಿಷ್ಯ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಇರಿಸುಮುರಿಸು!
ಸಚಿವ ರಾಜಣ್ಣ ಹೇಳಿಕೆ ಹೊರಬರುತ್ತಿದ್ದಂತೆಯೇ ಸಹಜವಾಗಿ ಸರ್ಕಾರಕ್ಕೆ ಮುಜುಗರ ತಂದಿಟ್ಟಿದೆ. ಈ ಬಗ್ಗೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರು, ಅದೆಲ್ಲಾ ಏನಿಲ್ಲ ಎಂದಿದ್ದಾರೆ.
ಸಿಎಂ ಹಿಡಿತ ಕಳೆದುಕೊಂಡಿಲ್ಲ ಎಂದು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ರಾಜಣ್ಣ ಯಾಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಭಾರೀ ಏನಲ್ಲ, ಬದಲಾವಣೆ ಆಗಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಎಸ್ಟಿ ಸೋಮಶೇಖರ್, ಕ್ರಾಂತಿಯೂ ಇಲ್ಲ, ಬದನೆಕಾಯಿನೂ ಇಲ್ಲ. ರಾಜಣ್ಣಗೆ ಅರಳು ಮರಳು ಎಂದಿದ್ದಾರೆ.
ಸುರ್ಜೇವಾಲ ವಿರುದ್ಧವೇ ಅಸಮಾಧಾನ
ಸಚಿವರು-ಶಾಸಕರ ಹೇಳಿಕೆಗಳು ಕಾಂಗ್ರೆಸ್‌ಗೆ ನುಂಗಲಾರದ ತುಪ್ಪವಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜೂನ್ 30 ರಂದು ರಾಜ್ಯಕ್ಕೆ ಬರಲಿದ್ದಾರೆ. ಆದರೆ, ಅವರು ಬರುವ ಮುನ್ನವೇ ಕೆಲ ಸಚಿವರು ಸುರ್ಜೇವಾಲ ಬದಲಾವಣೆಗೆ ಒತ್ತಾಯಿಸಿದ್ದಾರೆ. ಸುರ್ಜೇವಾಲ ಅವರು ಸಮಸ್ಯೆ ಆಲಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಹೇಳಿದ್ದೇ ಅಂತಿಮ, ಎಲ್ಲರೂ ಅದಕ್ಕೆ ಬದ್ಧರಾಗಿರುತ್ತೇವೆ: ಸಿದ್ದರಾಮಯ್ಯ
ಅದೇನೇ ಇರಲಿ, ರಾಜಣ್ಣ ಹೇಳಿದಂತೆ ಕ್ರಾಂತಿ ಆಗುತ್ತದೆಯೋ ಬಿಡುತ್ತದೆಯೋ, ಸದ್ಯ ಕಾಂಗ್ರೆಸ್ ಪಾಳಯದಲ್ಲಿ ಕ್ರಾಂತಿಯಂತೂ ನಡೆಯುತ್ತಿದೆ!








