ಸಚಿವ ಮಧು ಬಂಗಾರಪ್ಪ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಓಪನ್: ಅವಹೇಳನಕಾರಿ ಪೋಸ್ಟ್
ಸಚಿವ ಮಧು ಬಂಗಾರಪ್ಪ ಅವರ ಹೆಸರಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆಯಲಾಗಿದ್ದು, ಕಾಂಗ್ರೆಸ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಫೋಟೋ ಹಾಕಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ. ಈ ಬಗ್ಗೆ ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಶಿವಮೊಗ್ಗ,(ನವೆಂಬರ್ 28): ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu bangarappa) ಅವರ ಹೆಸರಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ (Fake Facebook) ಖಾತೆ ತೆರೆದು ಅವರ ವ್ಯಕ್ತಿತ್ವ, ಪಕ್ಷ ಚುಟುವಟಿಕೆಗೆ ಧಕ್ಕೆ ಬರುವಂತಹ ಪೋಸ್ಟ್‌ಗಳನ್ನು ಹಾಕುತ್ತಿರುವುದು ಬೆಳಕಿಗೆ ಬಂದಿದೆ. ‘ಶ್ರೀಮಾನ್ಯ ಮಧು ಬಂಗಾರಪ್ಪ ಜಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು’ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಗ್ರೂಪ್ ತೆರೆದು ಡಿಪಿಗೆ ಸಚಿವರ ಫೋಟೋ ಬಳಸಿ ಹಲವು ಪೋಸ್ಟ್‌ಗಳನ್ನು ಹಾಕಲಾಗಿದೆ.
ಮುಖ್ಯವಾಗಿ ಎಐಸಿಸಿ ಮುಖಂಡರಾದ ಸೋನಿಯಾಗಾಂಧಿ, ರಾಹುಲ್ ಅವರು ಹಣ ಲೂಟಿ ಹೊಡೆದಿದ್ದಾರೆ ಎಂದೂ, ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಅಪಹಾಸ್ಯ ಮಾಡಿದಂತೆ ಪೋಸ್ಟ್‌ಗಳಿವೆ. ಆ ಮೂಲಕ ಸಚಿವರಿಗೆ ಕೆಟ್ಟ ಹೆಸರು ಬರುವಂತೆ ಮತ್ತು ಅವರ ಘನತೆಗೆ ಧಕ್ಕೆ ತರುವಂತೆ ಮಾಡಲಾಗಿದೆ. ಕುಂದಾಪುರ ವಿರಾಟ ಹೆಸರಿನ ಫೇಸ್‌ಬುಕ್ ಬಳಕೆದಾರರಿಂದ ದುರ್ಬಳಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಶಿವಮೊಗ್ಗ: ಆರು ವರ್ಷ ಪ್ರೀತಿಸಿ ಕೈಕೊಟ್ಟ ಯುವಕ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ
ಅಚ್ಚೆದಿನ್ ವಿಚಾರವಾಗಿ ಸಚಿವರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧವಾದಂತಹ ಫೋಸ್ಟ್ ಹಾಕಲಾಗಿದೆ. ಯೇ ಹೈ ಅಚ್ಚೇ ದಿನ್ ದೇಶವನ್ನು ನುಂಗಿ ನೀರು ಕುಡಿದಿದ್ದ ಕಾಂಗ್ರೆಸ್. ಬಹಳ ಜನ ಅಚ್ಚೇ ದಿನ್ ಎಲ್ಲಿ ಅಂತ ಕೇಳಿದ್ರು .ಇದು ಅಚ್ಚೇ ದಿನ್ ನೋಡಿ ಖುಷಿ ಪಡಿ ಎಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಫೋಟೋ ಹಾಕಿ ಅವಹೇಳನ ಮಾಡಲಾಗಿದೆ.
ಈ ಬಗ್ಗೆ ಕಾಂಗ್ರೆಸ್ ಮುಖಂಡ ಜಿಡಿ ಮಂಜುನಾಥ್ ಎನ್ನುವರು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:04 am, Tue, 28 November 23