ಸಚಿವ ಮಧು ಬಂಗಾರಪ್ಪ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ, ಕಾಂಗ್ರೆಸ್ ಪಕ್ಷದ ವಿರುದ್ಧ ಪೋಸ್ಟ್
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೂ ನಕಲಿ ಖಾತೆಯ ಹಾವಳಿಯ ಬಿಸಿ ತಟ್ಟಿದೆ. ಅವರ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಪೋಸ್ಟ್ ಮಾಡಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಮುಖಂಡರೊಬ್ಬರು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಐಟಿ ಆ್ಯಕ್ಟ್ ಅಡಿ ಕೇಸ್ ದಾಖಲಾಗಿದೆ.
ಶಿವಮೊಗ್ಗ, ನ.27: ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರಿಗೂ ನಕಲಿ ಖಾತೆಯ ಬಿಸಿ ತಟ್ಟಿದೆ. ಅವರ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಚಿವರು, ಕಾಂಗ್ರೆಸ್ ಪಕ್ಷದ ವಿರುದ್ಧ ಪೋಸ್ಟ್ ಮಾಡಲಾಗಿದೆ. ಅಚ್ಚೆದಿನ್ ಎಲ್ಲಿದೆ ಅಂತಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಎಲ್ಲಿ ಎಂದು ಕೇಳುತ್ತಲೇ ಇದ್ದಾರೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ನಕಲಿ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಶ್ರೀ ಮಾನ್ಯ ಮಧು ಬಂಗಾರಪ್ಪ ಜಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಎಂಬ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೋಸ್ಟ್ ಮಾಡಲಾಗಿದೆ. ಅಲ್ಲದೆ, ಸಾವಿರಾರು ಕೋಟಿ ಹಗರಣ ನಡೆಸಿದ್ದನ್ನು ಮುಂದಿಟ್ಟುಕೊಂಡು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಅಣಕಿಸಿ ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ಸ್ನೇಹಿತನಿಗೆ ಡ್ರಾಪ್ ಕೊಡಲು ನಕಲಿ ಟಿಕೆಟ್ ಬಳಕೆ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ
ಫೇಸ್ಬುಕ್ ಗ್ರೂಪ್ ಡಿಪಿಯಲ್ಲಿ ಮಧು ಬಂಗಾರಪ್ಪ ಪೋಟೋ ಇದ್ದು, 58 ಸಾವಿರ ಫಾಲೋವರ್ಗಳಿದ್ದಾರೆ. ಈ ಪೇಸ್‌ಬುಕ್ ಗ್ರೂಪ್ ಅನ್ನು ಕುಂದಾಪುರ ವಿರಾಟ ಹೆಸರಿನ ಪೇಸ್‌ಬುಕ್ ಬಳಕೆದಾರರು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಅಣಕಿಸುವ ಪೋಸ್ಟ್ನಲ್ಲಿ “ಯೇ ಹೈ ಅಚ್ಚೇ ದಿನ್, ದೇಶವನ್ನು ನುಂಗಿ ನೀರು ಕುಡಿದಿದ್ದ ಕಾಂಗ್ರೇಸ್. ಬಹಳ ಜನ ಅಚ್ಚೇ ದಿನ್ ಎಲ್ಲಿ ಅಂತ ಕೇಳಿದ್ದರು. ಇದು ಅಚ್ಚೇ ದಿನ್ ನೋಡಿ ಖುಷಿ ಪಡಿ ಎಂದು ಬರೆದುಕೊಳ್ಳಲಾಗಿದೆ. ಈ ಸಂಬಂಧ ಕಾಂಗ್ರೆಸ್ ಮುಖಂಡ ಜಿ.ಡಿ ಮಂಜುನಾಥ್ ಎಂಬವರು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಐಟಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ