ಶಿವಮೊಗ್ಗ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಕಳೆದ ಕೆಲವು ವರ್ಷಗಳಿಂದ ಮಾಡಿರುವ ಗೋಲ್ ಮಾಲ್ ಕೊನೆಗೂ ಬಯಲಾಗಿದೆ. ಬಿಸಿಎಂ ಹಾಸ್ಟೆಲ್ ಗಳ ವಿದ್ಯಾರ್ಥಿಗಳಿಗೆ ಸೌಲಭ್ಯಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಗುಳಂ ಮಾಡಿದ್ದಾನೆ ಈತ. ಕೊನೆಗೂ ಈತನ ಕಳ್ಳಾಟವು ಹೊರಬಿದ್ದಿದೆ. ತನ್ನ ಪ್ರಭಾವದಿಂದ ಇಷ್ಟು ದಿನ ಇಲಾಖೆಯಲ್ಲೇ ಉಳಿದುಕೊಂಡಿದ್ದ ಭ್ರಷ್ಟ ಅಧಿಕಾರಿಯ ಕರ್ಮಕಾಂಡದ ಕುರಿತು ಒಂದು ವರದಿ ಇಲ್ಲಿದೆ.
ಈ ಸುದ್ದಿಯ ಕೇಂದ್ರಬಿಂದು ಗೋಪಿನಾಥ್ – ಈತ ಶಿವಮೊಗ್ಗ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಈತ ಕೆಲಸ ಮಾಡುತ್ತಿದ್ದಾನೆ. ಈ ಎರಡು ತಾಲೂಕಿನಲ್ಲಿ ಬಿಸಿಎಂ ಹಾಸ್ಟೆಲ್ ಗಳಲ್ಲಿ ವಿವಿಧ ಅಗತ್ಯ ವಸ್ತುಗಳ ಖರೀದಿಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಟೋಪಿ ಹಾಕಿದ್ದಾನೆ.
1) ಭದ್ರಾವತಿ ತಾಲೂಕಿನಲ್ಲಿ 2021 ಮತ್ತು 2022 ರಲ್ಲಿ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಅಗತ್ಯ ಮೂಲಭೂತ ಸಾಮಗ್ರಿಗಳ ಖರೀದಿಯಲ್ಲಿ ಗೋಲ್ ಮಾಲ್ ನಡೆದಿರುವ ತನಿಖೆಯಿಂದ ಬಯಲು ಆಗಿದೆ.
ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರ_ವಿದ್ಯಾರ್ಥಿನಿಲಯಗಳಿಗೆ ಅಗತ್ಯವಿರುವ ಮೂಲಭೂತ ಸಾಮಾಗ್ರಿಗಳಾದ ವುಡನ್ ಆಫೀಸ್ ಟೇಬಲ್, ವುಡನ್ ರಿವಾಲ್ವಿಂಗ್ ಛೇರ್, ಬಟ್ಟೆ ಒಣಗಿಸುವ ಸ್ಟ್ಯಾಂಡ್, ಶೌಚಾಲಯಗಳಿಗೆ ಬಾಗಿಲು ಲೈಬ್ರರಿ ಬೀರುಗಳು, ಸ್ಟೀಲ್ ಲೋಟ, ಇಡ್ಲಿ ಪಾತ್ರೆ, ಪ್ಲಾಸ್ಟಿಕ್ ಛೇರ್‌ಗಳು, ಟ್ರಂಕುಗಳು, ಸ್ಟೀಲ್ ತಟ್ಟೆಗಳು, ಜಾಮೂನು ಬಟ್ಟಲು, ಸೊಳ್ಳೆ ಪರದೆ, ತರಕಾರಿ ಸ್ಟ್ಯಾಂಡ್ ಖರೀದಿಸಿದ್ದಾರೆ. ಎಲ್ಲವೂ ಫೇಕ್ ಟೆಂಡರ್ ಮತ್ತು ಗೋಲ್ ಮಾಲ್ ಮಾಡಿ ಸುಮಾರು 24.62 ಲಕ್ಷ ರೂಪಾಯಿ ಅವ್ಯವಹಾರ ಮಾಡಿದ್ದು ಲೆಕ್ಕ ಪರಿಶೋಧನೆ ಸಮಯದಲ್ಲಿ ಕಂಡು ಬಂದಿದೆ.
2) ಇನ್ನು ಶಿವಮೊಗ್ಗ ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿ ಆಗಿ 2022 ರಿಂದ 2023 ವರೆಗೆ ಗೋಪಿನಾಥ್ ಸೇವೆ ಸಲ್ಲಿಸಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ ಕೂಡಾ ಗೋಪಿನಾಥ್ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಹಾಸ್ಟೆಲ್ ಸಿಬ್ಬಂದಿಯ ಹೆಸರಿನಲ್ಲಿ ಏಜೆನ್ಸಿಗಳ ಮೂಲಕ 21.17 ಲಕ್ಷ ರೂಪಾಯಿ ವಿವಿಧ ಬಿಸಿಎಂ ಹಾಸ್ಟೇಲ್ ಗಳ ಖರೀದಿಯಲ್ಲಿ ಗೋಲ್ ಮಾಲ್ ಮಾಡಿದ್ದಾನೆ. ಈ ಗೋಲ್ ಮಾಲ್ ಮಾಡಿರುವುದು ಲೆಕ್ಕ ಪರಿಶೋಧನೆ ಸಮಯದಲ್ಲಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಹೀಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲವು ವರ್ಷಗಳಿಂದ ಗೋಪಿನಾಥ್ ಬಡ ದಲಿತ ಹಿಂದುಳಿದ ವರ್ಗಗಳಿಗೆ ಸರಕಾರದ ನೀಡಿದ ಅನುದಾನ ಮನಸ್ಸಿಗೆ ಬಂದಂತೆ ದುರ್ಬಳಕೆ ಮಾಡಿಕೊಂಡಿದ್ದಾನೆ. ನಕಲಿ ಬಿಲ್, ನಕಲಿ ಏಜೆನ್ಸಿಗಳ ಮೂಲಕ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದಾನೆ. ಸದ್ಯ ಈ ಎರಡು ತಾಲೂಕಿನ ಖರೀದಿಯಲ್ಲಿ 45.79 ಲಕ್ಷ ರೂಪಾಯಿ ಅವ್ಯವಹಾರ ಮಾಡಿರುವುದು ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಈತನ ವಿರುದ್ದ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಅನೇಕ ದೂರುಗಳನ್ನು ನೀಡಿದ್ದರು. ಆದ್ರೂ ತನ್ನ ಪ್ರಭಾವದಿಂದ ಈತ ಇಲಾಖೆಯಲ್ಲಿ ತಾನು ಆಡಿದ್ದೇ ಆಟ ಎನ್ನುವಂತೆ ಇದ್ದ. ಕೊನೆಗೂ ಈತನ ಕರ್ಮಕಾಂಡವು ಈಗ ಬಯಲಿಗೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಗೋಪಿನಾಥನನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಡಾ. ರಾಕೇಶ್ ಕುಮಾರ್ ಅವರು ಅಮಾನತು ಮಾಡಿದ್ದಾರೆ.
ಕೆಲವೇ ವರ್ಷದಲ್ಲಿ ಗೋಪಿನಾಥ್ ಸಮಾಜ ಕಲ್ಯಾಣ ಇಲಾಖೆಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದಾನೆ. ಶಿವಮೊಗ್ಗ ನಗರದಲ್ಲಿ ಕೋಟಿ ಕೋಟಿ ವೆಚ್ಚದಲ್ಲಿ ಮನೆ ಕೂಡಾ ಕಟ್ಟಿಸಿದ್ದಾನೆ. ಐಷಾರಾಮಿ ಕಾರ್ ಖರೀದಿಸಿದ್ಧಾನೆ. ಈ ನಡುವೆ ಅಧಿಕಾರಿಗಳು ಅನೇಕ ವರ್ಷಗಳಿಂದ ಈತನ ಕರ್ಮಕಾಂಡದ ಕುರಿತು ಗೊತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಅವ್ಯವಹಾರದ ಕುರಿತು ದಾಖಲೆಗಳು ಮತ್ತು ಅವ್ಯವಹಾರ ಒಂದೊಂದಾಗಿ ಹೊರಗೆ ಬರುವುದಕ್ಕೆ ಶುರುವಾಯ್ತು. ಇದರ ಬೆನ್ನಲ್ಲೇ ಕಳೆದ ನಾಲ್ಕು ತಿಂಗಳ ಹಿಂದೆ ಹಿಂದುಗಳ ವರ್ಗದ ಸ್ಮಶಾನದ ಅಭಿವೃದ್ಧಿ ವಿಚಾರವಾಗಿ ಗುತ್ತಿಗೆದಾರರಿಂದ ಹಣ ಪಡೆಯುತ್ತಿರುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಈ ಭ್ರಷ್ಟ ಗೋಪಿನಾಥ್.
ಇದರ ಬಳಿಕವೂ ತನ್ನ ಪ್ರಭಾವ ಬಳಸಿ ಮತ್ತೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಾಪಸ್ ಬರುವುದಕ್ಕೆ ಎಲ್ಲ ತಯಾರಿ ಮಾಡಿಕೊಂಡಿದ್ದ. ಈತ ಮತ್ತೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಕ್ಕರಿಸುತ್ತಾನೆ ಎನ್ನುವುದು ಗೊತ್ತಾಗುತ್ತಿದ್ದಂತೆ ಸಾಮಾಜಿಕ ಹೋರಾಟಗಾರರು ಆತನ ಕರ್ಮಕಾಂಡವನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಮತ್ತು ಕಾರ್ಯದರ್ಶಿ, ಕೊನೆಗೆ ಸಚಿವರ ಗಮನಕ್ಕೂ ತಂದಿದ್ದಾರೆ.
ಇದರ ಬೆನ್ನಲ್ಲೇ, ಉನ್ನತ ಮಟ್ಟದಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ಗೋಪಿನಾಥನನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ. ಆದ್ರೆ ಇಲಾಖೆಯು ಲೆಕ್ಕ ಪರಿಶೋಧದ ವೇಳೆ 45.79 ಲಕ್ಷ ರೂಪಾಯಿ ಅವ್ಯವಹಾರ ಕಂಡು ಬಂದಿದೆ. ಆದರೆ ಈತ ಒಟ್ಟು 80 ಲಕ್ಷಕ್ಕೂ ಅಧಿಕ ಅವ್ಯವಹಾರ ಮಾಡಿದ್ದಾನೆ. ಈ ಕುರಿತು ಸೂಕ್ತ ತನಿಖೆಯಾಗಬೇಕೆಂದು ಸ್ಥಳೀಯರು ಸರಕಾರಕ್ಕೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಇನ್ನು ಶಿವಮೊಗ್ಗ ತಾಲೂಕಿನ ಕುಂಸಿಯ ಬಿಸಿಎಂ ಹಾಸ್ಟೇಲ್ ನಲ್ಲಿ ಅಡುಗೆ ಕೆಲಸ ಮಾಡಬೇಕಿದ್ದ ಉಷಾಳನ್ನು ಶಿವಮೊಗ್ಗದ ತನ್ನ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾನೂನುಬಾಹಿರವಾಗಿ ಗೋಪಿನಾಥ್ ನೇಮಕ ಮಾಡಿಕೊಂಡಿದ್ದ. ತನ್ನೆಲ್ಲ ಗೋಲ್ ಮಾಲ್ ನಲ್ಲಿ ಗೋಪಿನಾಥ್ ಗೆ ಉಷಾ ಸಾಥ್ ಕೊಟ್ಟಿದ್ದಾಳಂತೆ. ಇಷ್ಟೇ ಸಾಲದು ಅಂತಾ ಉಷಾಳ ತಾಯಿ ಗಿರಿಜಮ್ಮ ಹೊರಗುತ್ತಿಗೆ ಆಧಾರದಲ್ಲಿ ಮೂರಾರ್ಜಿ ವಸತಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾಳೆ.
ಈ ಗಿರಿಜಮ್ಮ ಹೆಸರಿನಲ್ಲಿ ಎಸ್ ಜಿ ಎಂಟರ್ ಪ್ರೈಸಸ್ ಎಂಬ ಸಂಸ್ಥೆ ಸೃಷ್ಟಿಸಿದ್ದಾನೆ. ಗೋಪಿನಾಥ್ ಉಷಾಳ ತಾಯಿ ಹೆಸರಿನ ಸಂಸ್ಥೆಯ ಮೂಲಕ ಹಾಸ್ಟೇಲ್ ಗಳಿಗೆ ಬೇಕಾಗುವ ಎಲ್ಲ ವಸ್ತುಗಳನ್ನು ಖರೀದಿಸಿ ಗೋಲ್ ಮಾಲ್ ಮಾಡಿದ್ದಾನೆ. ಬೋಗಸ್ ಬಿಲ್ ಗಳನ್ನು ಸೃಷ್ಟಿ ಮಾಡಿ ಈ ಸಂಸ್ಥೆಯ ಮೂಲಕ ಲಕ್ಷಾಂತರ ರೂಪಾಯಿ ಗೋಲ್ ಮಾಲ್ ಮಾಡಿದ್ದಾನೆ. ಈ ಕುರಿತು ಸಮಗ್ರ ತನಿಖೆಯಾಗಬೇಕೆಂದು ಕಾಂಗ್ರೆಸ್ ಜಿಲ್ಲಾ ಪರಿಶಿಷ್ಟ ಜಾತಿ ಅಧ್ಯಕ್ಷರಾದ ಆರ್. ಶಿವಣ್ಣ ಅವರು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:49 pm, Mon, 19 February 24