ಶಿವಮೊಗ್ಗ: ತಮ್ಮನ ಅನುಮಾನಸ್ಪದ ಸಾವು ಪ್ರಕರಣ; ಅಕ್ಕನ ಕುಟುಂಬಕ್ಕೆ ಬಹಿಷ್ಕಾರ
ಸೊರಬ ತಾಲೂಕಿನಲ್ಲಿ ಎರಡು ತಿಂಗಳ ಹಿಂದೆ ಒಂದು ಕೊಲೆ ಪ್ರಕರಣ ನಡೆದಿತ್ತು. ಬೈಕ್ ಅಪಘಾತದಂತೆ ಸೃಷ್ಟಿಸಿ ವ್ಯಕ್ತಿಯನ್ನು ಮರ್ಡರ್ ಮಾಡಿದ್ದರು. ಇದೇ ಕೊಲೆ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿದ ಮಗ ಜೈಲಿನಲ್ಲಿದ್ದಾನೆ. ಆತನ ತಾಯಿ ಮತ್ತು ಆತನ ಅಕ್ಕಳನ್ನು ಈಡಿಗ ಸಮಾಜದವರು ಬಹಿಷ್ಕಾರ ಹಾಕಿದ್ದಾರೆ. ಸದ್ಯ ತಮ್ಮ ಸಮಾಜದವರೇ ಹಾಕಿರುವ ಬಹಿಷ್ಕಾರಕ್ಕೆ ಕುಟುಂಬಸ್ಥರ ಪರದಾಡುತ್ತಿದ್ದಾರೆ.
![ಶಿವಮೊಗ್ಗ: ತಮ್ಮನ ಅನುಮಾನಸ್ಪದ ಸಾವು ಪ್ರಕರಣ; ಅಕ್ಕನ ಕುಟುಂಬಕ್ಕೆ ಬಹಿಷ್ಕಾರ](https://images.tv9kannada.com/wp-content/uploads/2024/02/shivamogga-brother-suspicious-death-case-exclusion-from-sisters-family.jpg?w=1280)
ಶಿವಮೊಗ್ಗ, ಫೆ.20: ತಮ್ಮನ ಅನುಮಾನಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಕನ ಕುಟುಂಬಕ್ಕೆ ಗ್ರಾಮದಲ್ಲಿರುವ ಕೆಲ ಮುಖಂಡರು ಬಹಿಷ್ಕಾರ ಹಾಕಿದ ಘಟನೆ ಜಿಲ್ಲೆಯ ಸೊರಬ(Soraba) ತಾಲೂಕಿನಲ್ಲಿ ನಡೆದಿದೆ. ಈ ಹಿನ್ನಲೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ತಾಯಿ ಸರೋಜಮ್ಮ ಮತ್ತು ಮಗಳು ಪವಿತ್ರ ಇಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸರೋಜಮ್ಮಳ ತಮ್ಮ ಮಂಜಪ್ಪ ಅನುಮಾನಸ್ಪದವಾಗಿ ಕಳೆದ ವರ್ಷ ಅಕ್ಟೋಬರ್ನಲ್ಲಿ ಮೃತಪಟ್ಟಿದ್ದನು. ಇದೊಂದು ಆಸ್ತಿಗಾಗಿ ಕೊಲೆ ಮಾಡಿ ಅಪಘಾತವೆನ್ನುವ ರೀತಿಯಲ್ಲಿ ಬಿಂಬಿಸಿದ್ದಾರೆಂದು ಮೃತನ ಕುಟುಂಬಸ್ಥರು ದೂರು ನೀಡಿದ್ದರು. ಈ ಹಿನ್ನಲೆ ಮೃತನ ಅಕ್ಕ ಸರೋರಜಮ್ಮ, ಗಂಡ ಕರಿಯಪ್ಪ ಮತ್ತು ಮಕ್ಕಳಾದ ಪ್ರವೀಣ ಮತ್ತು ಪವನ ಮೇಲೆ ದೂರು ದಾಖಲಾಗಿತ್ತು.
ಈಡಿಗ ಸಮಾಜದ ಮುಖಂಡರಿಂದ ಬಹಿಷ್ಕಾರ
ಪ್ರಕರಣದಲ್ಲಿ ಪ್ರವೀಣ್ ಮತ್ತು ಪವನ ಇಬ್ಬರ ಮಕ್ಕಳ ಬಂಧನವಾಗಿತ್ತು. ತಂದೆ ತಾಯಿ ಇಬ್ಬರು ಪ್ರಕರಣದಲ್ಲಿ ಬೇಲ್ ಪಡೆದಿದ್ದರು. ಸದ್ಯ ಪವನ್ಗೂ ಪ್ರಕರಣದಲ್ಲಿ ಬೇಲ್ ಸಿಕ್ಕಿದೆ. ಮಗ ಪ್ರವೀಣ ಮಾತ್ರ ಜೈಲಿನಲ್ಲಿದ್ದಾನೆ. ಇದೇ ಘಟನೆಯನ್ನು ಮುಂದೆ ಇಟ್ಟುಕೊಂಡು ಗ್ರಾಮದಲ್ಲಿರುವ ಈಡಿಗ ಸಮಾಜದ ಮುಖಂಡರು ಸರೋಜಮ್ಮಳ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಇದು ಬಹುತೇಕ ಈಡಿಗ ಸಮಾಜವೇ ಜಾಸ್ತಿ ಇರುವ ಗ್ರಾಮವಾಗಿದೆ. ಕಳೆದ ಮೂರು ತಿಂಗಳಿನಿಂದ ಈ ಕುಟುಂಬಸ್ಥರು ತಮ್ಮ ಮನೆ ದನ,ಕರು ಮತ್ತು ತೋಟ ಬಿಟ್ಟು ಈಗ ಸಂಬಂಧಿಗಳ ಮನೆಯಲ್ಲಿ ವಾಸವಾಗಿದ್ದಾರೆ. ಹಂತ ಹಂತವಾಗಿ ಮನೆಗೆ ನೀಡಿದ ವಿದ್ಯುತ್, ನೀರಿನ ಸಂಪರ್ಕ, ಯಾರು ಜೊತೆ ಮಾತನಾಡದಂತೆ ಗ್ರಾಮದಲ್ಲಿ ಆದೇಶವನ್ನು ಗ್ರಾಮದ ಮುಖಂಡರು ಹೊರಡಿಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ: ದಲಿತ ಯುವತಿಯ ವಿವಾಹವಾದ ಯುವಕನ ಕುಟುಂಬದವರಿಗೆ ಬಹಿಷ್ಕಾರ
ಜಿಲ್ಲಾಧಿಕಾರಿಗಳಿಗೆ ಮನವಿ
ಇದರಿಂದ ಕಂಗಾಲಾಗಿರುವ ಕುಟುಂಬವು ವಾಪಸ್ ತಮ್ಮ ಮನೆಗೆ ಹೋಗಿ ಬದುಕಬೇಕು. ಈ ಬಹಿಷ್ಕಾರದಿಂದ ತಮ್ಮನ್ನು ಮುಕ್ತಗೊಳಿಸಿ ಎಂದು ಶಿವಮೊಗ್ಗ ಡಿಸಿ ಗುರುದತ್ತ ಹೆಗ್ಗಡೆ ಅವರಿಗೆ ಸರೋಜಮ್ಮ ಮನವಿ ಮಾಡಿದ್ದಾಳೆ. ತಾಯಿಗೆ ಮಗಳು ಕೂಡಾ ಸಾಥ್ ಕೊಟ್ಟಿದ್ದಾರೆ. ಪತಿ ಕರಿಯಪ್ಪ ಮತ್ತು ಮಗ ಪವನ ಇಬ್ಬರು ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರಂತೆ. ಸದ್ಯ ತಮ್ಮನ್ನು ಈ ಶಿಕ್ಷೆಯಿಂದ ಹೊರಗೆ ತನ್ನಿ ಎಂದು ಸರೋಜಮ್ಮ ನೊಂದುಕೊಂಡು ಮನವಿ ಮಾಡಿದ್ದಾಳೆ. ಅಪಘಾತದ ಪ್ರಕರಣ ನಡೆದು ನಾಲ್ಕು ತಿಂಗಳು ಕಳೆದಿದೆ. ಈ ನಡುವೆ ಪ್ರಕರಣದ ತನಿಖೆಯು ಒಂದೆಡೆ ನಡೆಯುತ್ತಿದೆ. ಇದೊಂದು ಪೂರ್ವನಿಯೋಜಿತ ಕೃತ್ಯ ಎನ್ನುವ ರೀತಿಯಲ್ಲಿ ಮೃತನ ಕುಟುಂಬಸ್ಥರು ದೂರು ನೀಡಿದ್ದರು. ಇದೇ ಪ್ರಕರಣವನ್ನು ಮುಂದೆಯಿಟ್ಟುಕೊಂಡು ಮೃತನ ಅಕ್ಕ ಸರೋಜಮ್ಮಳ ಕುಟುಂಬಕ್ಕೆ ಬಹಿಷ್ಕಾರ ಎನ್ನುವ ದೊಡ್ಡ ಶಿಕ್ಷೆಯನ್ನು ಗ್ರಾಮಸ್ಥರು ಕೊಟ್ಟಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸ್ವಕೇತ್ರದಲ್ಲೇ ಅಮಾನವೀಯ ಘಟನೆ
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಸ್ವಕ್ಷೇತ್ರ ಸೊರಬ. ಇದೇ ಕ್ಷೇತ್ರದಲ್ಲಿ ಇಂತಹೊಂದು ಅಮಾನವೀಯ ಘಟನೆ ನಡೆದಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಸೊರಬ ಪೊಲೀಸರು, ತಹಸೀಲ್ದಾರ್ ಸೇರಿದಂತೆ ಯಾರು ಕೂಡ ಈ ನೊಂದ ಕುಟುಂಬಕ್ಕೆ ಸಹಾಯ ಮಾಡಿಲ್ಲ. ಬಹಿಷ್ಕಾರದ ಹಿನ್ನಲೆಯಲ್ಲಿ ಮನೆ, ಮಠ, ತೋಟ, ದನಕರು ಬಿಟ್ಟು ಸಂಬಂಧಿಗಳ ಇಂದುವಳ್ಳಿ ಗ್ರಾಮದಲ್ಲಿ ವಾಸವಾಗಿದ್ದಾರೆ. ಸರೋಜಮ್ಮ ಕುಟುಂಬಸ್ಥರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಇವರ ಯಾರ ಜೊತೆ ಮಾತನಾಡುವುದಿಲ್ಲ. ಯಾವುದೇ ಶುಭ ಕಾರ್ಯಗಳಿಗೆ ಇವರನ್ನು ಆಹ್ವಾನಿಸದಂತೆ ಮುಖಂಡರು ಸೂಚಿಸಿದ್ದಾರೆ. ಇವರ ಜೊತೆ ಯಾರಾದ್ರೂ ಮಾತನಾಡಿದ್ರೆ ಅವರಿಗೆ 1000 ಸಾವಿರ ದಂಡ ವಿಧಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರಂತೆ.
ಸದ್ಯ ಈ ಬಹಿಷ್ಕಾರದಿಂದ ತಮ್ಮನ್ನು ರಕ್ಷಣೆ ಮಾಡಬೇಕೆಂದು ಡಿಸಿಗೆ ಮನವಿ ಮಾಡಿದ್ದಾರೆ. ಡಿಸಿ ಅವರು ತತಕ್ಷಣ ಸ್ಥಳೀಯ ಪೊಲೀಸರಿಗೆ ಮತ್ತು ತಹಸೀಲ್ದಾರ್ ಅವರಿಗೆ ಬಹಿಷ್ಕಾರ ಕುರಿತು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ. ಕುಟುಂಬಕ್ಕೆ ಬಹಿಷ್ಕಾರ ಹಾಕುವ ಕಾನೂನು ಹಕ್ಕು ಗ್ರಾಮಸ್ಥರಿಗೆ ಇಲ್ಲ. ಮಾನಸಿಕವಾಗಿ ಬಹಿಷ್ಕಾರದ ಅಸ್ತ್ರದ ಮೂಲಕ ಕುಟುಂಬಕ್ಕೆ ಚಿತ್ರಹಿಂಸೆ ನೀಡಲಾಗುತ್ತಿದೆ. ಸದ್ಯ ನೊಂದ ಕುಟುಂಬಸ್ಥರು ಶಿವಮೊಗ್ಗ ಡಿಸಿ ಕಚೇರಿ ಬಾಗಿಲು ತಟ್ಟಿದ್ದಾರೆ. ಈ ಬಹಿಷ್ಕಾರದಿಂದ ಕುಟುಂಬವನ್ನು ಮುಕ್ತಗೊಳಿಸುವುದಕ್ಕೆ ಡಿಸಿ ಏನೆಲ್ಲಾ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ