ಶಿವಮೊಗ್ಗ: ದಲಿತ ಯುವತಿಯ ವಿವಾಹವಾದ ಯುವಕನ ಕುಟುಂಬದವರಿಗೆ ಬಹಿಷ್ಕಾರ
ಹೊರಬೈಲು ಗ್ರಾಮದಲ್ಲಿ ಸುಮಾರು 80 ಮನೆಗಳಿದ್ದು, ಅದರಲ್ಲಿ 60 ಮನೆಗಳು ಜೋಗಿ ಸಮುದಾಯಕ್ಕೆ ಸೇರಿವೆ. ಜೋಗಿ ಸಮುದಾಯದ ಯುವಕ ಹಾಗೂ ದಲಿತ ಯುವತಿ ಪರಸ್ಪರ ಪ್ರೀತಿಸುತ್ತಿದ್ದು, ಸೆಪ್ಟೆಂಬರ್ 10 ರಂದು ಮದುವೆಯಾಗಿದ್ದರು. ಸೆಪ್ಟೆಂಬರ್ 27 ರಂದು ವಿವಾಹ ನೋಂದಣಿ ಮಾಡಿಕೊಂಡಿದ್ದರು.
ಶಿವಮೊಗ್ಗ, ಡಿಸೆಂಬರ್ 28: ಶಿವಮೊಗ್ಗ (Shivamogga) ತಾಲೂಕಿನ ಕುಮ್ಸಿ ಹೋಬಳಿಯ ಹೊರಬೈಲು ಗ್ರಾಮದಲ್ಲಿ ಜೋಗಿ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ದಲಿತ ಯುವತಿಯನ್ನು (Dalit) ವಿವಾಹವಾದ ಹಿನ್ನೆಲೆಯಲ್ಲಿ ಆತನ ಕುಟುಂಬಕ್ಕೆ ಅದೇ ಸಮುದಾಯದ ಕೆಲ ಮುಖಂಡರು ಸಾಮಾಜಿಕ ಬಹಿಷ್ಕಾರ ಹಾಕಿರುವ ಬಗ್ಗೆ ವರದಿಯಾಗಿದೆ. ಮದುವೆಯ ಬಗ್ಗೆ ಅಸಮಾಧಾನಗೊಂಡ ಸಮುದಾಯದ ಮುಖಂಡರು, ಸಮುದಾಯದ ಜನರನ್ನು ವ್ಯಕ್ತಿಯ ಕುಟುಂಬದೊಂದಿಗೆ ಮಾತನಾಡದಂತೆ ಸೂಚಿಸಿದ್ದಲ್ಲದೆ, ತಪ್ಪಿದರೆ 1,000 ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸೂಚನೆ ಪಾಲಿಸದವರ ಬಗ್ಗೆ ಮಾಹಿತಿ ನೀಡುವವರಿಗೆ 500 ರೂಪಾಯಿ ಬಹುಮಾನ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ವಿಚಾರವಾಗಿ ವಧೂವರರು ದೂರು ದಾಖಲಿಸಿದ್ದಾರೆ. ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿದ್ದು, ಕುಮ್ಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೊರಬೈಲು ಗ್ರಾಮದಲ್ಲಿ ಸುಮಾರು 80 ಮನೆಗಳಿದ್ದು, ಅದರಲ್ಲಿ 60 ಮನೆಗಳು ಜೋಗಿ ಸಮುದಾಯಕ್ಕೆ ಸೇರಿವೆ. ಜೋಗಿ ಸಮುದಾಯದ ಯುವಕ ಹಾಗೂ ದಲಿತ ಯುವತಿ ಪರಸ್ಪರ ಪ್ರೀತಿಸುತ್ತಿದ್ದು, ಸೆಪ್ಟೆಂಬರ್ 10 ರಂದು ಮದುವೆಯಾಗಿದ್ದರು. ಸೆಪ್ಟೆಂಬರ್ 27 ರಂದು ವಿವಾಹ ನೋಂದಣಿ ಮಾಡಿಕೊಂಡಿದ್ದರು.
ಈ ಕಾರಣಕ್ಕಾಗಿ ಸಮುದಾಯದವರು ಯುವಕನ ಕುಟುಂಬವನ್ನು ಬಹಿಷ್ಕರಿಸಿದ್ದಾರೆ. ಸಭೆ ನಡೆಸುವ ಮೂಲಕ, ಕುಟುಂಬವನ್ನು ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದರ ಜತೆಗೆ, ಕುಟುಂಬದ ಜತೆಗೆ ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂಗ್ಲಿಷ್ ಬೋರ್ಡ್ಗಳು ಪೀಸ್ ಪೀಸ್: ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ
‘ಜೋಗಿ ಸಮುದಾಯದ ಕೆಲವರು ನಕಲಿ ಎಸ್‌ಸಿ ಪ್ರಮಾಣ ಪತ್ರ ಪಡೆದು ಸರ್ಕಾರದ ಸವಲತ್ತು, ಸೌಲಭ್ಯ ಪಡೆಯುತ್ತಿದ್ದಾರೆ. ಅವರು ಜೋಗಿ ಸಮುದಾಯಕ್ಕೆ ಎಸ್‌ಸಿ ಮಾನ್ಯತೆ ಹೊಂದಲು ಮತ್ತು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಬಯಸುತ್ತಾರೆ. ಆದರೆ ಎಸ್‌ಸಿ ಸಮುದಾಯದ ಹುಡುಗಿಯನ್ನು ಸ್ವೀಕರಿಸಲು ಸಿದ್ಧರಿಲ್ಲ. ಇದು ಸ್ವೀಕಾರಾರ್ಹವಲ್ಲ’ ಎಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಹಾಲೇಶಪ್ಪ ಹೇಳಿರುವುದಾಗಿ ವರದಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ