ಶಿವಮೊಗ್ಗ-ಬೆಂಗಳೂರು ವಿಮಾನ ಹಾರಾಟ ಎಂದಿನಿಂದ? ಸಂಸದ ಬಿವೈ ರಾಘವೇಂದ್ರ ಹೇಳಿದ್ದಿಷ್ಟು
ಸದ್ಯದಲ್ಲೇ ಶಿವಮೊಗ್ಗ ಬೆಂಗಳೂರು ವಿಮಾನ ಹಾರಾಟ ಆರಂಭವಾಗಲಿದೆ. ಇದಕ್ಕೆ ಬೇಕಾದ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಚುನಾವಣೆ ಮೊದಲೆ ವಿಮಾನ ಹಾರಾಟ ಶುರುವಾಗಬಹುದು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗ: ಇತ್ತೀಚೆಗಷ್ಟೇ ಶಿವಮೊಗ್ಗ(Shivamogga)ದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಗೊಂಡಿದ್ದು, ‘ಇನ್ನೊಂದು ವಾರದಲ್ಲಿ ಶಿವಮೊಗ್ಗ ಬೆಂಗಳೂರು ವಿಮಾನ (Flight) ಹಾರಾಟ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ(B. Y. Raghavendra) ಹೇಳಿದರು. ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಈ ಹಿಂದೆ ಈ ಕುರಿತು ತಿಳಿಸಿದ್ದೆ. ಒಂದು ವಾರದ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಇಂಡಿಗೋ ವಿಮಾನಯಾನ ಸಂಸ್ಥೆಯವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೇಂದ್ರ ವಿಮಾನಯಾನ ಪ್ರಾಧಿಕಾರದ (DGCA) ಜೊತೆಗೆ ಇಂಡಿಗೋ ಒಪ್ಪಂದ ಮಾಡಿಕೊಂಡಿದೆ. ಇಂಡಿಗೋ ಸಂಸ್ಥೆ ತನ್ನ ವೆಬ್‌ಸೈಟಿನಲ್ಲಿ ವಿಮಾನ ಸೇವೆಯ ಟೈಮಿಂಗ್ ಅಪ್‌ಲೋಡ್ ಮಾಡುವುದನ್ನು ಕಾಯುತ್ತಿದ್ದೇವೆ ಎಂದರು.
‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅತ್ಯಾಧುನಿಕ ಫೈರ್ ಇಂಜಿನ್ ಅಗತ್ಯವಿತ್ತು. ಅದನ್ನ ದುಬೈನಿಂದ ಮೂರು ಫೈರ್ ಇಂಜಿನ್ಗಳನ್ನ ತರಿಸಲಾಗಿದೆ. ಇನ್ನೊಂದೆರಡು ದಿನದಲ್ಲಿ ಅವುಗಳು ವಿಮಾನ ನಿಲ್ದಾಣ ತಲುಪಲಿದೆ. ಇಂಡಿಗೋ ಸಂಸ್ಥೆಗೆ 2 ಕೋಟಿ ರೂ. ಸಬ್ಸಿಡಿ ನೀಡಬೇಕಿದೆ. ಅದಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಹಿಂದೆ ಈ ಕುರಿತು ಹೇಳಿದ್ದ ಸಂಸದ ಬಿ.ವೈ.ರಾಘವೇಂದ್ರ
ಕಳೆದ ಮಾರ್ಚ್ ತಿಂಗಳಿನಲ್ಲಿ ಮಾತನಾಡಿದ್ದ ಸಂಸದ ಬಿ.ವೈ.ರಾಘವೇಂದ್ರ‘ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾಗುವ ಮೊದಲೆ ಇಂಡಿಗೋ ಮತ್ತು ಸ್ಟಾರ್ ಏರ್ಲೈನ್ಸ್ನವರು ಬೆಂಗಳೂರು, ಮುಂಬೈ, ದೆಹಲಿಗೆ ಸಂಚಾರ ಸೇವೆ ಒದಗಿಸುವ ಭರವಸೆ ನೀಡಿದ್ದು, ಅದರಂತೆ ಇದೀಗ ಇಂಡಿಗೋ ಏರ್ಲೈನ್ಸ್ ಒಡಂಬಡಿಕೆ ಮಾಡಿಕೊಳ್ಳುತ್ತಿದ್ದು, ಉಡಾನ್ ಯೋಜನೆಯಡಿ ಪ್ರತಿ ಪ್ರಯಾಣಿಕನಿಗೆ ಸರ್ಕಾರ 500 ರೂನಂತೆ ದಿನಕ್ಕೆ 75 ಸಾವಿರ ಪಾವತಿಸಬೇಕಾಗುತ್ತದೆ. ಜೊತೆಗೆ ಶೀಘ್ರದಲ್ಲಿ ಪ್ರಯಾಣ ದರ ಹಾಗೂ ವೇಳಾ ಪಟ್ಟಿಯನ್ನ ಪ್ರಕಟಿಸಲಾಗುವುದು ಎಂದಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ