Karnataka Airports: ಮೋದಿ ಉದ್ಘಾಟಿಸಿದ ಶಿವಮೊಗ್ಗ ವಿಮಾನ ನಿಲ್ದಾಣ ಸೇರಿದಂತೆ ರಾಜ್ಯದಲ್ಲಿ ಎಷ್ಟು ಏರ್ಪೋರ್ಟ್ಗಳಿವೆ? ಇಲ್ಲಿದೆ ವಿವರ
ಕರ್ನಾಟಕದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಸೇರಿದದ್ದಂತೆ ಒಟ್ಟು 9 ವಿಮಾನ ನಿಲ್ದಾಣಗಳಿವೆ. ಇದರಲ್ಲಿ 2 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿದ್ದರೆ 2 ದೇಶಿಯ ವಿಮಾನ ನಿಲ್ದಾಣಗಳಿವೆ. ಹಾಗಿದ್ದರೆ ಈ ವಿಮಾನ ನಿಲ್ದಾಣಗಳ ಕಾರ್ಯವೈಖರಿ ಮತ್ತು ವೈಶಿಷ್ಟ್ಯಗಳ ಕುರಿತು ಇಲ್ಲಿದೆ ಸಂಕ್ಷಿಪ್ತ ನೋಟ
ಬೆಂಗಳೂರು: ರಾಜ್ಯದಲ್ಲಿ ವಿಮಾನಯಾನ ಪ್ರಯಾಣಿಕರು ಹೆಚ್ಚುತ್ತಿರುವ ಹಿನ್ನೆಲೆ ವಿಮಾನ ನಿಲ್ದಾಣಗಳ ಸಂಖ್ಯೆನು ಹೆಚ್ಚುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು (ಫೆ.27) ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಕನಸಿನ ವಿಮಾನ ನಿಲ್ದಾಣವನ್ನು ಅವರ ಹುಟ್ಟು ಹಬ್ಬದ ದಿನದಂದೇ ಲೋಕಾರ್ಪಣೆಗೊಳಿಸಿರುವುದು ವಿಶೇಷ. ಈ ಮೂಲಕ ಕರ್ನಾಟಕದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಸೇರಿದದ್ದಂತೆ ಒಟ್ಟು 9 ವಿಮಾನ ನಿಲ್ದಾಣಗಳಿವೆ. ಇದರಲ್ಲಿ 2 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿದ್ದರೆ 2 ದೇಶಿಯ ವಿಮಾನ ನಿಲ್ದಾಣಗಳಿವೆ. ಹಾಗಿದ್ದರೆ ಈ ವಿಮಾನ ನಿಲ್ದಾಣಗಳ ಕಾರ್ಯವೈಖರಿ ಮತ್ತು ವೈಶಿಷ್ಟ್ಯಗಳ ಕುರಿತು ಇಲ್ಲಿದೆ ಸಂಕ್ಷಿಪ್ತ ನೋಟ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು
1. ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇವನಹಳ್ಳಿ, ಬೆಂಗಳೂರು
2. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಾಜಪೆ, ಮಂಗಳೂರು
ದೇಶಿಯ ವಿಮಾನ ನಿಲ್ದಾಣ
1. ಬೆಳಗಾವಿ ವಿಮಾನ ನಿಲ್ದಾಣ(ಸಾಂಬ್ರಾ)
2. ಹುಬ್ಬಳ್ಳಿ-ಧಾರವಾಡ ವಿಮಾನ ನಿಲ್ದಾಣ
3. ಕಲಬುರಗಿ ವಿಮಾನ ನಿಲ್ದಾಣ
4. ಬೀದರ್ ವಿಮಾನ ನಿಲ್ದಾಣ
5. ಬಳ್ಳಾರಿ ವಿಮಾನ ನಿಲ್ದಾಣ
6. ಮೈಸೂರು ವಿಮಾನ ನಿಲ್ದಾಣ
7. ಶಿವಮೊಗ್ಗ ವಿಮಾನ ನಿಲ್ದಾಣ
1.ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರಾಜಧಾನಿ ಬೆಂಗಳೂರಿನ ನಗರದ ಉತ್ತರಕ್ಕೆ ಸುಮಾರು 30 ಕಿಲೋಮೀಟರ್ ದೂರದ ದೇವನಹಳ್ಳಿಯಲ್ಲಿ ಈ ವಿಮಾನ ನಿಲ್ದಾಣವಿದೆ. ದಿನಕ್ಕೆ ಸಾವಿರಾರು ಅಂತಾರಾಷ್ಟ್ರೀಯ ಪ್ರಯಾಣಿಕರು, ಇಲ್ಲಿಂದ ಪ್ರಯಾಣಿಸುತ್ತಾರೆ. ಈ ವಿಮಾನ ನಿಲ್ದಾಣದ ವೈಶಿಷ್ಟ್ಯದ ಬಗ್ಗೆ ಇಲ್ಲಿದೆ ಮಾಹಿತಿ
ಮೂಲತಃ ಬೆಂಗಳೂರಿನಲ್ಲಿ ಮೊದಲಿಗೆ ಇದ್ದಿದ್ದು, ಹೆಚ್ಎಎಲ್ ವಿಮಾನ ನಿಲ್ದಾಣ. ಇದನ್ನು 1942 ರಲ್ಲಿ ಮಿಲಿಟರಿ ಮತ್ತು ರಕ್ಷಣಾ ಉದ್ದೇಶಗಳಿಗಾಗಿ ಸ್ಥಾಪಿಸಲಾಯಿತು. ಸ್ವಾತಂತ್ರ್ಯ ನಂತರ 1970 ರ ದಶಕದ ಅಂತ್ಯದಲ್ಲಿ ಮೊದಲ ಬಾರಿಗೆ ದೇಶೀಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತು. ಮುಂದೆ ದಿನ ಕಳೆದಂತೆ ಜನ ದಟ್ಟಣೆ ಹೆಚ್ಚಾದಂತೆ ಬೇರೊಂದು ವಿಮಾನ ನಿಲ್ದಾಣದ ಅವಶ್ಯಕತೆ ಉಂಟಾಯಿತು. ಈ ಹಿನ್ನೆಲೆ ಮಾರ್ಚ್ 1991 ರಲ್ಲಿ, ಭಾರತೀಯ ರಾಷ್ಟ್ರೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಿರ್ಧರಿಸಿತು. ಆಗ ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ 4,000 ಎಕರೆಯಲ್ಲಿ ತೆಲೆಯತ್ತಿದ್ದೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣವನ್ನು 2008ರ ಮೇ 24ರಂದು ಉದ್ಘಾಟಿಸಲಾಯಿತು. ಇದಕ್ಕೆ 2013ರ ಡಿಸೆಂಬರ್ 14 ರಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡಲಾಯಿತು. ಅಂದಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಯಿತು.
ವಿಮಾನ ನಿಲ್ದಾಣದ ವೈಶಿಷ್ಟ್ಯ
1. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕ್ಲೀನ್ಮ್ಯಾಕ್ಸ್ ಸೋಲಾರ್ ಅಭಿವೃದ್ಧಿಪಡಿಸಿದ ಕರ್ನಾಟಕದ ಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣವಾಗಿದೆ.
2. ಎರಡು ಟರ್ಮಿಲ್ಗಳನ್ನು ಒಳಗೊಂಡಿದೆ.
3. ಟರ್ಮಿನಲ್-1 ವಾರ್ಷಿಕ 40ಮಿಲಿಯನ್ ಪ್ರಯಾಣಿಕರ ನಿರ್ವಹಣೆಯ ಸಾಮರ್ಥ್ಯ ಹೊಂದಿದೆ.
3. ಟರ್ಮಿನಲ್-2 ಏಷ್ಯಾ ಖಂಡದ ಮೊದಲ ಗಾರ್ಡನ್ ಟರ್ಮಿನಲ್-2 ಆಗಿದೆ. 2.55 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿರುವ ಟರ್ಮಿನಲ್ ನಿರ್ಮಾಣಕ್ಕೆ 5 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ವಾರ್ಷಿಕ 5ರಿಂದ 6 ಕೋಟಿ ಪ್ರಯಾಣಿಕರ ನಿರ್ವಹಣೆಯ ಸಾಮರ್ಥ್ಯ ಈ ಟರ್ಮಿನಲ್ಗೆ ಇದೆ.
2. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಾಜ್ಯದ ಕರಾವಳಿ ಭಾಗವಾಗದ ದಕ್ಷಿಣ ಕನ್ನಡದ ಮಂಗಳೂರಿನಲ್ಲಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕರ್ನಾಟಕದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ಮಂಗಳೂರು ನಗರದಿಂದ ಈಶಾನ್ಯಕ್ಕೆ ಸುಮಾರು 13 ಕಿಮೀ (8.1 ಮೈಲಿ) ಬಜ್ಪೆ ಸಮೀಪದಲ್ಲಿದೆ. ಈ ವಿಮಾನ ನಿಲ್ದಾಣವನ್ನು 1951ರ ಡಿಸೆಂಬರ್ 25 ರಂದು ಅಂದಿನ ಪ್ರಧಾನಿ ಜವಾಹರ್ ಲಾಲ ನೆಹರು ಅವರು ಉದ್ಘಾಟಿಸಿದರು. ಇದು ಬೆಟ್ಟದ ಮೇಲಿದ್ದು, ಎರಡು ಟೇಬಲ್ಟಾಪ್ ರನ್ವೇಗಳನ್ನು ಹೊಂದಿದೆ. ಇದರ ವಿಶೇಷತೆ ಕುರಿತು ಇಲ್ಲಿದೆ ಮಾಹಿತಿ
1. ಭಾರತದಲ್ಲಿ ಮೂರು ವಿಮಾನ ನಿಲ್ದಾಣಗಳು ಮಾತ್ರ ಟೇಬಲ್ಟಾಪ್ ರನ್ವೇಗಳನ್ನು ಹೊಂದಿವೆ. ಇದರಲ್ಲಿ ಮಂಗಳೂರು ವಿಮಾನ ನಿಲ್ದಾಣ ಕೂಡ ಒಂದು.
2. 2000ರ ದಶಕದ ಆರಂಭದಲ್ಲಿ ಚಿಕ್ಕದಾಗಿದ್ದ ಇದರ ಟರ್ಮಿನಲ್ನ್ನು ನವೀಕರಿಲಸಾಗಿದೆ.
3. 2006 ರಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ದುಬೈಗೆ ಪ್ರಯಾಣ ಮಾಡುವ ಮೂಲಕ ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ಪ್ರಾರಂಭವಾಯಿತು.
4. 28 ಸೆಪ್ಟೆಂಬರ್ 2012 ರಂದು, ಏರ್ಬಸ್ A310, ಮೊದಲ ಬಾರಿಗೆ ಇಲ್ಲಿ ಲ್ಯಾಂಡ್ ಆಯಿತು.
5. ಈ ವಿಮಾನ ನಿಲ್ದಾಣದಿಂದ ಮಧ್ಯಪ್ರಾಚ್ಯದ ಪ್ರಮುಖ ನಗರಗಳಿಗೆ ಹೆಚ್ಚು ವಿಮಾನ ಹೋಗುತ್ತವೆ.
ದೇಶಿಯ ವಿಮಾನ ನಿಲ್ದಾಣ
ದೇಶದ ಒಳಗೆ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳಿಗೆ ಡೊಮೆಸ್ಟಿಕ್ ವಿಮಾನ ಎನ್ನುವರು. ಈ ವಿಮಾನಗಳು ಲ್ಯಾಂಡ್ ಆಗುವ ನಿಲ್ದಾಣಗಳನ್ನು ಡೊಮೆಸ್ಟಿಕ್ ವಿಮಾನ ನಿಲ್ದಾಣ ಎನ್ನುವರು. ಈ ಡೊಮೆಸ್ಟಿಕ್ ವಿಮಾನಗಳು ಅಂತರಾಷ್ಟ್ರೀಯ ವಿಮಾನಲ್ದಾಣದಲ್ಲೂ ಕೂಡ ಲ್ಯಾಂಡ್ ಆಗುತ್ತವೆ.
1. ಬೆಳಗಾವಿ ವಿಮಾನ ನಿಲ್ದಾಣ
ಬೆಳಗಾವಿ ವಿಮಾನ ನಿಲ್ದಾಣ ಕುಂದಾನಗರಿ ಬೆಳಗಾವಿ ನಗರದಿಂದ ಪೂರ್ವಕ್ಕೆ 10 ಕಿ.ಮೀ. ದೂರದ ಸಾಂಬ್ರಾ ನಗರದಲ್ಲಿದೆ. ಈ ವಿಮಾನ ನಿಲ್ದಾಣವನ್ನು ಸಾಂಬ್ರಾ ವಿಮಾನ ನಿಲ್ದಾಣ ಎಂದೂ ಕರೆಯುತ್ತಾರೆ. 14 ಸೆಪ್ಟೆಂಬರ್ 2017 ರಂದು ಉದ್ಘಾಟನೆಯಾಯಿತು.
ವಿಶೇಷತೆ
1. ಈ ವಿಮಾನ ನಿಲ್ದಾಣದ ಸಮೀಪ, ಭಾರತೀಯ ವಾಯುಪಡೆಯ ನಿಲ್ದಾಣವಿದೆ. ವಾಯುಪಡೆಗೆ ಹೊಸದಾಗಿ ನೇಮಗೊಳ್ಳುವರು ಇಲ್ಲಿ ತರಬೇತಿ ಪಡೆಯುತ್ತಾರೆ.
2. ಒಂದು ಟರ್ಮಿನಲ್ ಇದೆ.
3. ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಯ ಭಾಗವಾಗಿ 14 ಸೆಪ್ಟೆಂಬರ್ 2017 ರಂದು ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಾಯಿತು. ಟರ್ಮಿನಲ್ ಕಟ್ಟಡವು 3,600 ಚದರ ಮೀಟರ್ ವಿಸ್ತೀರ್ಣದಲ್ಲಿದೆ ಮತ್ತು 300 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ.
ವಾಯುಪಡೆ ನಿಲ್ದಾಣ ಕರ್ನಾಟಕದ ವಿಶೇಷ ಮೀಸಲು ಪಡೆ ಪೊಲೀಸರು 1948 ರಲ್ಲಿ ವಾಯುನೆಲೆಯನ್ನು ತಮ್ಮ ಸುಪರ್ದಿಗೆ ಪಡೆದುಕೊಂಡರು. 1961 ರಲ್ಲಿ ಆಪರೇಷನ್ ವಿಜಯ್ ಸಮಯದಲ್ಲಿ ವಾಯುಪಡೆಯ ಕೇಂದ್ರವು ವಾಯು ಕಾರ್ಯಾಚರಣೆಯ ಪ್ರಮುಖ ನೆಲೆಯಾಗಿತ್ತು. ಎರಡು ವರ್ಷಗಳ ನಂತರ, ಜಾಲಹಳ್ಳಿಯ ತರಬೇತಿ ಶಾಲೆಯನ್ನು ಸ್ಥಳಾಂತರಿಸಲಾಯಿತು.
2. ಹುಬ್ಬಳ್ಳಿ-ಧಾರವಾಡ ವಿಮಾನ ನಿಲ್ದಾಣ
ವಾಣಿಜ್ಯ ನಗರಿ ಹುಬ್ಬಳ್ಳಿಯ ಗಾಂಧಿನಗರದಲ್ಲಿ ಹುಬ್ಬಳ್ಳಿ-ಧಾರವಾಡ ವಿಮಾನ ನಿಲ್ದಾಣವಿದೆ. ಇದು ಹುಬ್ಬಳ್ಳಿ ಮತ್ತು ಧಾರವಾಡ ಎರಡು (ಅವಳಿ) ನಗರಕ್ಕೆ ಸೇರಿದ ಒಂದೇ ವಿಮಾನ ನಿಲ್ದಾಣವಾಗಿದೆ. ಧಾರವಾಡದಿಂದ 20 ಕಿಮೀ ದೂರದಲ್ಲಿದೆ. ಇದು ದೇಶದಾದ್ಯಂತ 10 ನಗರಗಳಿಗೆ ಸಂಪರ್ಕ ಹೊಂದಿದೆ.
ಹುಬ್ಬಳ್ಳಿ-ಧಾರವಾಡ ವಿಮಾನ ನಿಲ್ದಾಣದ ವಿಶೇಷತೆ
1. ಈ ವಿಮಾನ ನಿಲ್ದಾಣದಿಂದ 2021ರ ಏಪ್ರಿಲ್ನಿಂದ ಹುಬ್ಬಳ್ಳಿ ಏರ್ಪೋರ್ಟ್ ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಾಗಿ ರೂಪುಗೊಂಡಿದೆ. ವಿಮಾನ ನಿಲ್ದಾಣದಲ್ಲಿ ಅಳವಡಿಸಿರುವ 8 ಮೆ.ವ್ಯಾ. ಗ್ರಿಡ್-ಸಂಪರ್ಕಿತ ಸೌರ ವಿದ್ಯುತ್ ಸ್ಥಾವರದಿಂದಾಗಿ ಏರ್ಪೋರ್ಟ್ ಶೇ.100ರಷ್ಟು ಹಸಿರು ವಿಮಾನ ನಿಲ್ದಾಣವಾಗಿದೆ. ಈ ಸ್ಥಾವರದಿಂದ ಉತ್ಪತ್ತಿಯಾಗುವ ಸೌರಶಕ್ತಿಯನ್ನು ಹುಬ್ಬಳ್ಳಿಯ ಗ್ರಿಡ್ಗೆ ನೀಡಲಾಗುತ್ತಿದೆ. ವಿಮಾನ ನಿಲ್ದಾಣದ 38 ಎಕರೆ ಪ್ರದೇಶದಲ್ಲಿ ಸೌರಶಕ್ತಿ ಘಟಕ ಸ್ಥಾಪಿಸಲಾಗಿದ್ದು, ಅಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈ ಮೂಲಕ ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2. ಒಂದು ಟರ್ಮಿನಲ್ ಇದೆ.
3. ಕಾರ್ಗೋ ಟರ್ಮಿನಲ್ ಇದೆ.
4. ಡೊಮೆಸ್ಟಿಕ್ ಕಾರ್ಗೋ ಕಾಂಪ್ಲೆಕ್ಸ್ ಇದ್ದು, ಮಾರ್ಚ್ 2021 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಇದು ಉತ್ತರ ಕರ್ನಾಟಕದ ಮೊದಲ ಮೀಸಲಾದ ದೇಶೀಯ ಏರ್ ಕಾರ್ಗೋ ಟರ್ಮಿನಲ್ ಆಗಿದೆ.
3. ಕಲಬುರಗಿ ವಿಮಾನ ನಿಲ್ದಾಣ
ತೊಗರಿ ನಾಡು ಕಲಬುರಗಿ ನಗರದಿಂದ 12 ಕಿ.ಮೀ ದೂರದಲ್ಲಿರುವ ಶ್ರೀನಿವಾಸ ಸರಡಗಿ ಗ್ರಾಮದ ಸಮೀಪವಿರುವ ರಾಜ್ಯ ಹೆದ್ದಾರಿ 10 (ಸೆಡಮ್ ರಸ್ತೆ) ಬದಿ ಇರುವ 742.23 ಎಕರೆ ಪ್ರದೇಶದಲ್ಲಿದೆ. ಕಲಬುರಗಿ ವಿಮಾನ ನಿಲ್ದಾಣವಿದೆ. ಈ ವಿಮಾಣ ನಿಲ್ದಾಣವನ್ನು ಸಂಪೂರ್ಣವಗಿ ಕರ್ನಾಟಕ ಸರ್ಕಾರ 742.23 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದೆ. 26 ಆಗಸ್ಟ್ 2018 ರಂದು ವಿಮಾನ ಪ್ರಾಯೋಗಿಕ ಹಾರಾಟ ಯಶಸ್ವಿಯಾಯಿತು.
4. ಬೀದರ ವಿಮಾನ ನಿಲ್ದಾಣ
ಬೀದರ ವಿಮಾನ ನಿಲ್ದಾಣ, ಕರ್ನಾಟಕ ಉತ್ತರದ ತುತ್ತತುದಿಯಲ್ಲಿರುವ ಬೀದರನಲ್ಲಿದೆ. ಇದು ಭಾರತೀಯ ವಾಯುಪಡೆಯ, ಬೀದರ್ ವಾಯುನೆಲೆಯ ಸಿವಿಲ್ ಎನ್ಕ್ಲೇವ್ಗಾಗಿ ಕಾರ್ಯನಿರ್ವಹಿಸುತ್ತದೆ.
ಬೀದರ್ ವಾಯುನೆಲೆ ಭಾರತದ ಅತ್ಯಂತ ಹಳೆಯ ಮಿಲಿಟರಿ ವಾಯುನೆಲೆಗಳಲ್ಲಿ ಒಂದಾಗಿದೆ. ಈ ವಾಯುಪಡೆಯಲ್ಲಿ ಪೈಲಟ್ಗಳಿಗೆ ತರಬೇತಿ ಶಾಲೆ ಇದೆ. ಬೀದರ್ನಲ್ಲಿ ನಾಗರಿಕ ವಿಮಾನ ನಿಲ್ದಾಣದ ದೀರ್ಘಾವಧಿಯ ಬೇಡಿಕೆಗೆ ನಂತರ, ಭಾರತೀಯ ವಾಯುಪಡೆಯು ವಾಣಿಜ್ಯ ವಿಮಾನಗಳ ಕಾರ್ಯಾಚರಣೆಗೆ ಅನುಮತಿ ನೀಡಿದೆ.
5. ಬಳ್ಳಾರಿ ವಿಮಾನ ನಿಲ್ದಾಣ
ಬಳ್ಳಾರಿ ವಿಮಾನ ನಿಲ್ದಾಣವನ್ನು ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣವೆಂದೂ ಕರೆಯುತ್ತಾರೆ. ಈ ವಿಮಾನ ನಿಲ್ದಾಣ ಬಳ್ಳಾರಿಯ ವಿದ್ಯಾನಗರದ ವಿದ್ಯಾನಗರ ಟೌನ್ಶಿಪ್ ಬಳಿ ಇರುವ ಕಾರಣ, ವಿಮಾನ ನಿಲ್ದಾಣವನ್ನು ವಿದ್ಯಾನಗರ ವಿಮಾನ ನಿಲ್ದಾಣ ಎಂದೂ ಕರೆಯುತ್ತಾರೆ. ಈ ವಿಮಾನ ಬಳ್ಳಾರಿಯಲ್ಲಿರುವ ತೋರಣಗಲ್ಲು ಪ್ರದೇಶದಲ್ಲಿರುವ (JSW ಸ್ಟೀಲ್) ಜಿಂದಾಲ್ ಉಕ್ಕಿನ ಕಾರ್ಖಾನೆಯ ಖಾಸಗಿ ವಿಮಾನ ನಿಲ್ದಾಣವಾಗಿತ್ತು. ಈ ಹಿನ್ನೆಲೆ ವಿಮಾನ ನಿಲ್ದಾಣಕ್ಕೆ ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್ (JVSL) ನಿಂದ ಬಳ್ಳಾರಿ ವಿಮಾನ ನಿಲ್ದಾಣ ಬಂದಿದೆ. ಈ ಜೆವಿಎಸ್ಎಲ್ 2005 ರಲ್ಲಿ JSW ಸ್ಟೀಲ್ನಲ್ಲಿ ವಿಲೀನಗೊಂಡಿತು. 2004 ರಲ್ಲಿ, ಕರ್ನಾಟಕ ಸರ್ಕಾರ ಇದನ್ನು ಸ್ವಯತ್ತತೆ ಪಡೆದ ಮೇಲೆ, 2006ರ ಡಿಸೆಂಬರ್ನಿಂದ ಸಾರ್ವಜನಿಕರ ಪ್ರಯಾಣ ಆರಂಭವಾಯಿತು. ಬಳ್ಳಾರಿ ವಿಮಾನ ನಿಲ್ದಾಣದ ರನ್ವೇ ತುಂಬಾ ಚಿಕ್ಕದಾಗಿದೆ ಮತ್ತು ಕಿರಿದಾಗಿದೆ.
6. ಮೈಸೂರು ವಿಮಾನ ನಿಲ್ದಾಣ
ಮೈಸೂರು ವಿಮಾನ ನಿಲ್ದಾಣವನ್ನು, ಮಂಡಕಳ್ಳಿ ವಿಮಾನ ನಿಲ್ದಾಣ ಎಂದೂ ಕರೆಯುತ್ತಾರೆ, ಇದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ದೇಶೀಯ ವಿಮಾನ ನಿಲ್ದಾಣವಾಗಿದೆ. ಇದು ನಗರದ ದಕ್ಷಿಣಕ್ಕೆ 10 ಕಿಲೋಮೀಟರ್ ದೂರದಲ್ಲಿರುವ ಮಂಡಕಳ್ಳಿ ಗ್ರಾಮದ ಬಳಿ ಇದೆ. ಮತ್ತು ಇದು ಏರ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಯ ಒಡೆತನದಲ್ಲಿದೆ ಮತ್ತು ನಿರ್ವಹಿಸುತ್ತದೆ. ಈ ವಿಮಾನ ನಿಲ್ದಾಣ 1940 ರ ದಶಕದಲ್ಲಿ ಮೈಸೂರು ಸಾಮ್ರಾಜ್ಯದಿಂದ ನಿರ್ಮಿಸಲ್ಪಟ್ಟಿತು.
1. ಒಂದು ಟರ್ಮಿನಲ್ ಇದೆ
7. ಶಿವಮೊಗ್ಗ ವಿಮಾನ ನಿಲ್ದಾಣದ ವಿಶೇಷತೆ
ಇಂದು (ಫೆ.27) ಮಲೆನಾಡ ಹೆಬ್ಬಾಗಿಲಾದ ಶಿವಮೊಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆತಾಗಿದೆ. ಈ ವಿಮಾನ ನಿಲ್ದಾಣ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕನಸಿನ ವಿಮಾನ ನಿಲ್ದಾಣವಾಗಿದೆ. ವಿಶೇಷತೆಗಳು
1. ರಾಜ್ಯದ 2ನೇ ಅತಿ ದೊಡ್ಡ ಏರ್ ಪೋರ್ಟ್ ಎಂಬ ಹೆಗ್ಗಳಿಕೆ ಪಡೆದ ಶಿವಮೊಗ್ಗ ಏರ್ಪೋರ್ಟ್, ಒಟ್ಟು 775 ಎಕರೆ ವಿಸ್ತಿರ್ಣದಲ್ಲಿ ನಿರ್ಮಾಣವಾಗಿದೆ.
2. 449.2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. 3.2 ಕಿ.ಮೀ ರನ್ ವೇ ಹೊಂದಿದ್ದು, ಎಟಿಆರ್ ಸೇರಿದಂತೆ ಎಲ್ಲಾ ರೀತಿಯ ವಿಮಾನಗಳು ಲ್ಯಾಂಡಿಗ್ ಆಗಲಿವೆ.
3. 4320 ಚದರಡಿ ವಿಸ್ತಿರ್ಣದ ಸುಸಜ್ಜಿತ ಪ್ಯಾಸೆಂಜರ್ ಟರ್ಮಿನಲ್ ಹಾಗೂ ವಿಮಾನ ನಿಲ್ದಾಣದ ಸುತ್ತ 15,900 ಮೀಟರ್ ಉದ್ದದ ಕಾಂಪೌಂಡ್ ಇದೆ.
4. ಈ ವಿಮಾನ ನಿಲ್ದಾಣದ ನಿರ್ಮಾಣ ವೆಚ್ಚ ಸುಮಾರು 600 ಕೋಟಿ ರೂಪಾಯಿ. ವಿಮಾನ ನಿಲ್ದಾಣದ ಮೂಲಸೌಕರ್ಯಕ್ಕಾಗಿ ಇದರಲ್ಲಿ 449 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ. ಉಳಿದ ಮೊತ್ತವು ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನಕ್ಕೆ ಬಳಕೆಯಾಗಿದೆ.
5. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕೇಂದ್ರ ಸರಕಾರದ ಉದಾನ್ ಯೋಜನೆಯಡಿ ನಿರ್ಮಿಸಲಾಗಿದೆ. ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣವು ಕರ್ನಾಟಕದ ಎರಡನೇ ದೊಡ್ಡ ರನ್ ವೇ ಹೊಂದಿರುವ ವಿಮಾನ ನಿಲ್ದಾಣವಾಗಿದೆ.
ಇವು ಕರ್ನಾಟಕದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿಮಾನ ನಿಲ್ದಾಣಗಳು. ಇವುಗಳನ್ನು ಹೊರತುಪಡಿಸಿ ಮುಂದಿನ ದಿನಗಳಲ್ಲಿ ವಿಜಯಪುರ ಮತ್ತು ಹಾಸನದಲ್ಲಿ ಹೊಚ್ಚಹೊಸ ವಿಮಾನ ನಿಲ್ದಾಣಗಳು ಕಾರ್ಯಾರಂಭಗೊಳ್ಳಲಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Mon, 27 February 23