
ಶಿವಮೊಗ್ಗ, ಸೆಪ್ಟೆಂಬರ್ 24): ಶಿವಮೊಗ್ಗ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್ ಪ್ರವೇಶ ದ್ವಾರದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾ ಗಣಪತಿ ವಿಸರ್ಜನೆ ಕಾರ್ಯಕ್ರಮ ನಾಳೆ (ಸೆ.25) ನಡೆಯಲಿದೆ. ಇದಕ್ಕೂ ಮುನ್ನ ಶಿವಮೊಗ್ಗ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದ್ದು,ಈ ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು, ವಾದ್ಯಗಳು, ಡಿಜೆ ಸೌಂಡ್ ಇರಲಿದೆ. ಇನ್ನು ನಗರ ಫುಲ್ ಕೇಸರಿಮಯವಾಗಿದೆ. ಮೆರವಣಿಗೆ ಸಾಗುವ ಎಸ್ ಪಿ ಎಂ ರಸ್ತೆ ರಾಮಣ್ಣ ಶ್ರೇಷ್ಟಿ ಪಾರ್ಕ್, ಗಾಂಧಿ ಬಜಾರ್, ನೆಹರು ರಸ್ತೆ, ಟಿ.ಶೀನಪ್ಪ ಶೆಟ್ಟಿ ವೃತ್ತದಲ್ಲಿ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದುರ್ಗಿಗುಡಿ ಮುಖ್ಯ ರಸ್ತೆ, ಬಿ.ಆರ್.ಅಂಬೇಡ್ಕರ್ ವೃತ್ತ, ಕುವೆಂಪು ರಸ್ತೆ, ವೀರ ಶಿವಮೂರ್ತಿ ವೃತ್ತ, ಸರ್.ಎಂ.ವಿಶ್ವೇಶ್ವರಯ್ಯ ರಸ್ತೆ, ಮಹಾವೀರ ವೃತ್ತ, ಕುವೆಂಪು ರಂಗ ಮಂದಿರ ರಸ್ತೆ, ಬಸವೇಶ್ವರ ವೃತ್ತ, ಕಾನ್ವೆಂಟ್ ರಸ್ತೆ, ಬಿ.ಹೆಚ್.ರಸ್ತೆಯ ಮೂಲಕ ಕೋಟೆ ಠಾಣೆಯ ರಸ್ತೆ ಹೀಗೆ ಗಣಪತಿ ಮೆರವಣಿಗೆ ಸಾಗುವ ರಸ್ತೆಯಲ್ಲಿ ಕೇಸರಿ ಬಂಟಿಗ್ಸ್ ಕಟ್ಟಲಾಗಿದೆ.
ಶಿವಮೊಗ್ಗದ ನಗರದಲ್ಲಿ 82ನೇ ವರ್ಷದ ಹಿಂದೂ ಸಂಘಟನ ಮಹಾ ಮಂಡಲದ ರಾಜಬೀದಿ ಉತ್ಸವ ಬೆಳಗ್ಗೆ 10.30ರ ಸುಮಾರಿಗೆ ವೈಭವದ ರಾಜಬೀದಿ ಉತ್ಸವ ಪ್ರಾರಂಭವಾಗುತ್ತದೆ. ಇದರಿಂದ ಕೇಸರಿ ಹಿಂದೂ ಅಲಂಕಾರ ಸಮಿತಿ ಅವರು ನಗರವನ್ನು ಕೇಸರಿಮಯ ಮಾಡಿದ್ದಾರೆ. ನಗರದ ಗಾಂಧಿ ಬಜಾರ್ ಪ್ರವೇಶ ದ್ವಾರದಲ್ಲಿ ಆಂಜನೇಯ ಎದೆ ಸೀಳಿ ಶ್ರೀರಾಮ ಸೀತಾ ಮಾತೆಯನ್ನು ತೋರಿಸುತ್ತಿರುವ ಅಲಂಕಾರವನ್ನು ಮಾಡಲಾಗಿದೆ.
ಗಣಪತಿ ಮೆರವಣಿಗೆ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ಬೇರೆ ಕಡೆ ಡೈವರ್ಟ್ ಮಾಡಲಾಗಿದೆ. ಅಲ್ಲದೇ ಮೆರವಣಿಗೆಗಾಗಿ ಜಿಲ್ಲಾ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಮಾಹಿತಿ ನೀಡಿದ ಎಸ್ಪಿ ನಿಖಿಲ್ , ಮೆರವಣಿಗೆಗಾಗಿ 3 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಎಸ್ಪಿ ರ್ಯಾಂಕಿಗ್ನಲ್ಲಿ 5 ಜನರನ್ನು ನೇಮಿಸಲಾಗಿದೆ. ಡಿವೈಎಸ್ಪಿ- 22, ಸಿಪಿಐ -84, ಪಿಎಸ್ಐ ಹಾಗೂ ತರಬೇತಿ ಪಿಎಸ್ಐ ಸೇರಿ -289, ಎಎಸ್ಐ-108, ಹೆಚ್ಸಿ-2134, ಹೋಂ ಗಾರ್ಡ್-600 ಕೆಎಸ್ಆರ್ ಪಿ-12, ಡಿಎಆರ್-10, ಕ್ಯೂಆರ್ಟಿ-1, ಡಿ ಸ್ಜ್ಯಾಡ್-1, ಆರ್ಎಎಫ್-2, ಎಸ್ಆರ್ಎಎಫ್ -1 ಹಾಗೂ 7 ಅಗ್ನಿ ಶಾಮಕದಳ, 4 ಅಂಬ್ಯುಲೆನ್ಸ್, 3,500 ಸಿಸಿ ಕ್ಯಾಮರಾ ಹಾಗೂ 12 ಡ್ರೋನ್ಗಳನ್ನು ನೇಮಕ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ 35 ಜನರನ್ನು ಗಡಿಪಾರು ಮಾಡಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರದ ಶಾಲೆಗಳಿಗೆ ನಾಳೆ (ಸೆ.25) ರಜೆ ನೀಡಲು ಸೂಚಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಿವಮೊಗ್ಗ ನಗರ ಶಾಲಾ ಅವಧಿಯಲ್ಲಿ ಬದಲಾವಣೆ ಮಾಡಲಾಗಿದ್ದು, ನಾಳೆ ಬೆಳಿಗ್ಗೆ 8:30 ರಿಂದ 12:30 ರವರೆಗೆ ಮಾತ್ರ ತರಗತಿಗಳು / ಪರೀಕ್ಷೆಗಳು ನಡೆಯಲಿವೆ. ಇನ್ನುಳಿದಂತೆ ಮಧ್ಯಾಹ್ನದ ನಂತರ ಶಿವಮೊಗ್ಗ ನಗರ ವ್ಯಾಪ್ತಿಯ ಶಾಲೆಗಳಿಗೆ ರಜೆ ನೀಡಲು ಮುಖ್ಯ ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಇನ್ನು SSLC ಅರ್ಧವಾರ್ಷಿಕ ಪರೀಕ್ಷೆಗಳು ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ. SSLC ಪರೀಕ್ಷೆ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:30 ರವರೆಗೆ ಯಥಾವತ್ ಆಗಿ ನಡೆಯಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.