ಸೆ 28ರಂದು ಬಿಸಿ ರೋಡ್ ಚಲೋ: ಮೈಸೂರು ಬಳಿಕ ಮಂಗಳೂರು ಪೊಲೀಸರ ವಿರುದ್ಧವೂ ಪ್ರತಾಪ್ ಸಿಂಹ ಹೋರಾಟ
ಮೈಸೂರಿನ ಟಿ.ನರಸೀಪುರದಲ್ಲಿ ಗಣಪತಿ ಮಹೋತ್ಸವ ಶಾಂತಿ ಸಭೆ ವೇಳೆ ಇನ್ಸ್‌ಪೆಕ್ಟರ್ ಧನಂಜಯ್ ನೀಡಿದ್ದ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅದೊಂದು ಹೇಳಿಕೆ ಇನ್ಸ್‌ಪೆಕ್ಟರ್ ಮತ್ತು ಪ್ರತಾಪ್ ಸಿಂಹ ಮಧ್ಯೆ ತೀವ್ರ ಜಟಾಪಟಿಗೂ ಕಾರಣವಾಗಿತ್ತು. ಸದ್ಯ ಇದೆಲ್ಲದರ ಮಧ್ಯೆ ಟಿ.ನರಸೀಪುರ ಬಳಿಕ ಪ್ರತಾಪ್ ಸಿಂಹ ಮಂಗಳೂರು ಪೊಲೀಸರ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಮಂಗಳೂರು, ಸೆಪ್ಟೆಂಬರ್ 24: ಮೈಸೂರಿನ ಟಿ.ನರಸೀಪುರದಲ್ಲಿ ಪೊಲೀಸರ ವಿರುದ್ಧ ಹೋರಾಟ ಮಾಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ, ಇದೀಗ ಮಂಗಳೂರಿನ ಹಿಂದೂ ಸಂಘಟನೆಗಳ ಕಾರ್ಯಕರ್ತರ ಪರ ಹೋರಾಟಕ್ಕಿಳಿಯಲು ಸಜ್ಜಾಗಿದ್ದಾರೆ. ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯಿದೆ ಹೇರಿರುವುದನ್ನು ವಿರೋಧಿಸಿ ಸೆ.28ರಂದು ಬೃಹತ್ ಬಿ.ಸಿ.ರೋಡ್ ಚಲೋಗೆ ಬಜರಂಗದಳ ಕರೆ ನೀಡಿದೆ. ಹೋರಾಟದಲ್ಲಿ ಪ್ರತಾಪ್ ಸಿಂಹ ಭಾಗಿಯಾಗಲಿದ್ದು, ಮಂಗಳೂರು ಪೊಲೀಸರ ವಿರುದ್ಧವೂ ಹೋರಾಟ ನಡೆಸಲಿದ್ದಾರೆ.
ಹಿಂದೂ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯಿದೆ
ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿ, ಅವರ ವಿರುದ್ಧ ಕೋಕಾ ಕಾಯಿದೆ ದಾಖಲಿಸಿ ಜೈಲಿಗಟ್ಟಲಾಗಿತ್ತು. ಈ ಪ್ರಕರಣದಲ್ಲಿ ಮೈಸೂರಿನ ಕೋಕಾ ನ್ಯಾಯಾಲಯವು ಎಂಟು ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು.
ಇದನ್ನೂ ಓದಿ: ‘ಎಲ್ಲ ಆಗಿರುವುದು ತರ್ಲೆ ಇನ್ಸ್ಪೆಕ್ಟರ್ನಿಂದ’: ತಮ್ಮ ಮೇಲಿನ ಎಫ್ಐಆರ್ ಬಗ್ಗೆ ಪ್ರತಾಪ್ ಸಿಂಹ ಕಿಡಿ
ಆದರೆ, ಅವರು ಜೈಲಿನಿಂದ ಬಿಡುಗಡೆಯಾಗುವ ಮುನ್ನವೇ ದಕ್ಷಿಣ ಕನ್ನಡ ಜಿಲ್ಲಾಡಳಿತವು ಬಜರಂಗದಳ ಮುಖಂಡ ಭರತ್ ಕುಮ್ಡೇಲು ಸೇರಿದಂತೆ ಆರು ಆರೋಪಿಗಳ ವಿರುದ್ಧ ಗೂಂಡಾ ಕಾಯಿದೆ ಹೇರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ವಿರುದ್ಧ ಬಜರಂಗದಳ ಆಕ್ರೋಶ
ಅಬ್ದುಲ್ ರೆಹಮಾನ್ ಹತ್ಯೆ ಕೇಸ್‌ನಲ್ಲಿ ಬಜರಂಗದಳ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ಫಿಕ್ಸ್ ಮಾಡಲಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ. ನ್ಯಾಯಾಲಯವೇ ಜಾಮೀನು ನೀಡಿದ್ದರೂ ರಾಜ್ಯ ಸರ್ಕಾರ ಅವರ ಮೇಲೆ ಗೂಂಡಾ ಕಾಯಿದೆ ಹೇರಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಿಎಚ್‌ಪಿ ಮತ್ತು ಬಜರಂಗದಳ, ಜಿಲ್ಲಾ ಪೊಲೀಸ್ ಇಲಾಖೆಯ ವಿರುದ್ಧ ಸೆಪ್ಟೆಂಬರ್ 28ರಂದು ಬೃಹತ್ ಬಿ.ಸಿ.ರೋಡ್ ಚಲೋ ಪ್ರತಿಭಟನೆಗೆ ಕರೆ ನೀಡಿವೆ.
ಸರ್ಕಾರ ಉದ್ದೇಶ ಪೂರ್ವಕವಾಗಿ ಗೂಂಡಾ ಆ್ಯಕ್ಟ್ ಹಾಕಿದೆ: ಗೋವರ್ಧನ
ವಿಶ್ವ ಹಿಂದೂ ಪರಿಷತ್ ಬೆಂಗಳೂರು ಪ್ರಾಂತ ಕಾರ್ಯಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಜರಂಗದಳ ಪ್ರಾಂತ ಸಹ ಸಂಯೋಜಕ ಗೋವರ್ಧನ ಮಾತನಾಡಿದ್ದು, ‘ಕೊಳತ್ತಮಜಲು ಅಬ್ದುಲ್ ರೆಹಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಕಾ ಕಾಯ್ದೆಯಡಿ ಬಂಧಿತರಾಗಿದ್ದ ನಮ್ಮ 6 ಕಾರ್ಯಕರ್ತರಿಗೆ ಜಾಮೀನು ಸಿಕ್ಕ ಬಳಿಕವೂ ಗೂಂಡಾ ಕಾಯ್ದೆಯನ್ನ ಹಾಕಿದ್ದಾರೆ. ಇದರ ಉದ್ದೇಶವೇ 12 ತಿಂಗಳು ಹೊರಬರಬಾರದೆಂಬುದು’ ಎಂದರು.
ಇದನ್ನೂ ಓದಿ: ಚಾಮರಾಜ ಕ್ಷೇತ್ರಕ್ಕಾಗಿ ಜಟಾಪಟಿ: ಪ್ರತಾಪ್ ಸಿಂಹ–ನಾಗೇಂದ್ರ ನಡುವೆ ಮುಸುಕಿನ ಗುದ್ದಾಟ
‘ಸರ್ಕಾರ ಉದ್ದೇಶ ಪೂರ್ವಕವಾಗಿ ಗೂಂಡಾ ಆ್ಯಕ್ಟ್ ಹಾಕಿದೆ. ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಾಟೆ ಮಾಡಿದವರು ಇವರಿಗೆ ಕಾಣಲ್ಲ. ಹಿಂದೂ ಹೋರಾಟಗಾರರೇ ಈ ಸರ್ಕಾರಕ್ಕೆ ಕಾಣುವುದು’ ಎಂದು ಬಜರಂಗದಳ ಮುಖಂಡ ಗೋವರ್ಧನ ವಾಗ್ದಾಳಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




