ಶಿವಮೊಗ್ಗದ 2 ಅನಮಾನಸ್ಪದ ಬಾಕ್ಸ್​​ಗಳಲ್ಲಿತ್ತು ಬಿಳಿ ಬಣ್ಣದ ವಸ್ತು; ಇಬ್ಬರ ಬಂಧನ

| Updated By: ವಿವೇಕ ಬಿರಾದಾರ

Updated on: Nov 06, 2023 | 8:09 AM

ಅನುಮಾನಾಸ್ಪದ ಬಾಕ್ಸ್​ನಲ್ಲಿ ಎರಡು ಹೊಸ ಟ್ರಂಕ್ ಪತ್ತೆಯಾಗಿದೆ. ಒಂದೊಂದು ಟ್ರಂಕ್​ನಲ್ಲೂ ಬಿಳಿ ಬಣ್ಣದ ವಸ್ತು ಪತ್ತೆಯಾಗಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈಗಾಗಲೇ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಶಿವಮೊಗ್ಗದ 2 ಅನಮಾನಸ್ಪದ ಬಾಕ್ಸ್​​ಗಳಲ್ಲಿತ್ತು ಬಿಳಿ ಬಣ್ಣದ ವಸ್ತು; ಇಬ್ಬರ ಬಂಧನ
ಶಿವಮೊಗ್ಗ ಬಾಕ್ಸ್​​​​​ ಸ್ಪೋಟ
Follow us on

ಶಿವಮೊಗ್ಗ ನ.06: ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ (Shivamogga Railway Station) ಎರಡು ಅನುಮಾನಾಸ್ಪದ ಬಾಕ್ಸ್​​ಗಳು (Box) ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬ್​ ನಿಷ್ಕ್ರಿಯ (Bomb Disposal Squad) ದಳ ಎರಡೂ ಬಾಕ್ಸ್​​​ಗಳನ್ನು ಸ್ಫೋಟಗೊಳಿಸಿದೆ. ಬಾಕ್ಸ್​ನಲ್ಲಿ ಎರಡು ಬ್ಯಾಗ್​ಗಳು ಪತ್ತೆಯಾಗಿದ್ದು, ಅದರಲ್ಲಿ ಬಿಳಿ ಬಣ್ಣದ ಪೌಡರ್ ಸಿಕ್ಕಿದೆ. ನಿನ್ನೆ (ನ.05) ರಾತ್ರಿ ರೈಲ್ವೆ ನಿಲ್ದಾಣದಲ್ಲಿ ಎರಡು ಅನುಮಾನಾಸ್ಪದ ಬಾಕ್ಸ್​​ಗಳು ಪತ್ತೆಯಾಗಿದ್ದವು. ಈ ವಿಚಾರವನ್ನು ತಿಳಿದ ಪೊಲೀಸರು ಸ್ಥಳಕ್ಕೆ ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿದ್ದರು. ಸ್ಥಳಕ್ಕೆ ಆಗಮಿಸಿದ ಬಾಂಬ್​ ನಿಷ್ಕ್ರಿಯ ದಳದ ಸಿಬ್ಬಂದಿ, ಬಾಕ್ಸ್​​ನ ಬೀಗ ಒಡೆಯಲು ವೈರ್ ಅಳವಡಿಸಿದರು. ನಂತರ ಮಧ್ಯರಾತ್ರಿ 2.40 ರ ಸುಮಾರಿಗೆ ಸ್ಫೋಟಗೊಳಿಸಿ ಒಂದು ಬಾಕ್ಸ್​​ನ ಅನ್ನು ಓಪನ್​ ಮಾಡಿದರು.

ಬಳಿಕ ನಸುಕಿನ ಜಾವ 3:24ಕ್ಕೆ ಎರಡನೇ ಬಾಕ್ಸ್​ ಅನ್ನು ಸ್ಪೋಟಗೊಳಿಸಿ ಓಪನ್​ ಮಾಡಿದರು. ಎರಡೂ ಬಾಕ್ಸ್​ನಲ್ಲಿ ಎರಡು ಬ್ಯಾಗ್​ಗಳು ಪತ್ತೆಯಾದವು. ಬ್ಯಾಗ್​ ಒಳಗಡೆ ಬಿಳಿ ಬಣ್ಣದ ಪೌಡರ್ ಇತ್ತು. ಈ ಪೌಡರ್​​ ಅನ್ನು ಪೊಲೀಸರು ಪರೀಕ್ಷೆಗೆ ಎಫ್​ಎಸ್​ಎಲ್​ಗೆ ಕಳುಹಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ನಸುಕಿನ ಜಾವ 3.45ಕ್ಕೆ ಕಾರ್ಯಾಚರಣೆ ಪೂರ್ಣಗೊಳಿಸಿತು.

ಬಾಕ್ಸ್​ನಲ್ಲಿ ಯಾವುದೇ ಸ್ಫೋಟಕ ವಸ್ತು ಇರಲಿಲ್ಲ. ಅನುಮಾನಾಸ್ಪದ ಬಾಕ್ಸ್​ಗಳನ್ನು ನಮ್ಮ ಪರಿಣಿತರ ತಂಡ ಪರಿಶೀಲಿಸಿದೆ. ಬಾಕ್ಸ್​ ತೆಗೆದು ಪರಿಶೀಲಿಸಿದಾಗ ಕೆಲವು ಅನುಪಯುಕ್ತ ವಸ್ತುಗಳು ಪತ್ತೆಯಾಗಿದ್ದವು. ಅಲ್ಲಿ ಸಿಕ್ಕ ವಸ್ತುಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಅನಾಮಧೇಯ ಬಾಕ್ಸ್​ ಪತ್ತೆ; ಇಬ್ಬರು ಶಂಕಿತರ ವಿಚಾರಣೆ

 ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು: ಚನ್ನಬಸಪ್ಪ

ಕಾರ್ಯಾಚರಣೆ ಪೂರ್ಣಗೊಳ್ಳುವರೆಗೂ ಶಿವಮೊಗ್ಗ ಶಾಸಕ ಚನ್ನಬಸಪ್ಪ ಸ್ಥಳದಲ್ಲಿದ್ದರು. ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅನುಮಾನಾಸ್ಪದ ಬಾಕ್ಸ್​ನಲ್ಲಿ ಎರಡು ಹೊಸ ಟ್ರಂಕ್ ಪತ್ತೆಯಾಗಿದೆ. ಒಂದೊಂದು ಟ್ರಂಕ್​ನಲ್ಲೂ ಬಿಳಿ ಬಣ್ಣದ ಪೌಡರ್ ಪತ್ತೆಯಾಗಿದೆ. ಇದು ಮುಖಕ್ಕೆ ಹಚ್ಚುವ ಪೌಡರ್ ಅಂತೂ ಅಲ್ಲ. ಇದು ಯಾವ ಪೌಡರ್ ಎಂಬುದರ ಬಗ್ಗೆ ರಿಪೋರ್ಟ್ ಬರಬೇಕು. ಈಗಾಗಲೇ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:11 am, Mon, 6 November 23