ಒತ್ತಡಕ್ಕೆ ಬಲಿಯಾಯಿತೇ ಮರಿ?: ಡಾ. ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆಯ ಮರಿಯೂ ಗರ್ಭದಲ್ಲೇ ಸಾವು!

ಶಿವಮೊಗ್ಗದ ತ್ಯಾವರೆಕೊಪ್ಪ ಸಫಾರಿಯಲ್ಲಿ ಕಳೆದ ಮಾರ್ಚ್ 19 ರಂದು ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಮೇಲೆ ಹಂಸಿನಿ ನೀರಾನೆ ದಾಳಿ ನಡೆಸಿ ಅವರ ಸಾವಿಗೆ ಕಾರಣವಾಗಿತ್ತು. ಇದೀಗ ಅದೇ ಗರ್ಭಿಣಿ ಹಂಸಿನಿ ನೀರಾನೆಯ ಮರಿಯು ಗರ್ಭದಲ್ಲೇ ಸಾವನ್ನಪ್ಪಿದೆ. ಇದು ಹಂಸಿನಿ ಕಳೆದುಕೊಳ್ಳುತ್ತಿರುವ ಮೂರನೇ ಮರಿಯಾಗಿದ್ದು, ಹಿಂದಿನ ಘಟನೆಯ ಮಾನಸಿಕ ಒತ್ತಡವೇ ಕಾರಣವೆಂದು ಶಂಕಿಸಲಾಗಿದೆ. ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.

ಒತ್ತಡಕ್ಕೆ ಬಲಿಯಾಯಿತೇ ಮರಿ?: ಡಾ. ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆಯ ಮರಿಯೂ ಗರ್ಭದಲ್ಲೇ ಸಾವು!
Shivamogga Safari, Tyavarekoppa Wildlife
Edited By:

Updated on: Apr 11, 2026 | 2:52 PM

ಶಿವಮೊಗ್ಗ, ಏ.11: ಕಳೆದ ಮಾರ್ಚ್ 19 ರಂದು ತ್ಯಾವರೆಕೊಪ್ಪ ಸಫಾರಿಯಲ್ಲಿ ತರಬೇತಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರು ಗರ್ಭಿಣಿ ನೀರಾನೆ ಹಂಸಿನಿಯ (Hamsini Hippo) ಆರೋಗ್ಯ ತಪಾಸಣೆ ನಡೆಸುತ್ತಿದ್ದಾಗ, ಹಂಸಿನಿ ಏಕಾಏಕಿ ದಾಳಿ ಮಾಡಿ ಅವರ ಸಾವಿಗೆ ಕಾರಣವಾಗಿತ್ತು. ಈಗ ಅದೇ ನೀರಾನೆಯ ಮರಿಯು ಗರ್ಭದಲ್ಲೇ ಸಾವನ್ನಪ್ಪಿದೆ. ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಹೀಗೆ ಸರಣಿ ದುರಂತಗಳು ನಡೆಯುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಕೂಡ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. ಇದೀಗ ಹಂಸಿನಿಯ ಮರಿಯು ಸಾವನ್ನಪ್ಪಿರುವುದಕ್ಕೆ ಸಫಾರಿ ಸಿಬ್ಬಂದಿ ಹಾಗೂ ಪ್ರಾಣಿ ಪ್ರೇಮಿಗಳಲ್ಲಿ ತೀವ್ರ ವಿಷಾದ ಮೂಡಿಸಿದೆ.

ಮಾರ್ಚ್ 19 ರಂದು ತ್ಯಾವರೆಕೊಪ್ಪ ಸಫಾರಿಯಲ್ಲಿ ಕರ್ತವ್ಯದಲ್ಲಿದ್ದ ತರಬೇತಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರು ಗರ್ಭಿಣಿ ನೀರಾನೆ ಹಂಸಿನಿಯ ಆರೋಗ್ಯ ತಪಾಸಣೆ ನಡೆಸಲು ಮುಂದಾಗಿದ್ದರು. ಈ ವೇಳೆ ಹಂಸಿನಿ ಏಕಾಏಕಿ ದಾಳಿ ಮಾಡಿತ್ತು. ಈ ಭೀಕರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಮೀಕ್ಷಾ ರೆಡ್ಡಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಇದು ಅಲ್ಲಿನ ಸ್ಥಳೀಯರನ್ನು ಹಾಗೂ ಸಮೀಕ್ಷಾ ಅವರ ಮನೆಯವರ ಆಕ್ರೋಶಕ್ಕೆ ಕಾರಣವಾಗಿತ್ತು. ಸರಿಯಾದ ಸುರಕ್ಷತೆಯ ಕ್ರಮಗಳು ಇಲ್ಲದೆ ಕಳಿಸಿರುವುದು ಅರಣ್ಯಾ ಹಾಗೂ ಅಲ್ಲಿನ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ.

ಹಂಸಿನಿ ನೀರಾನೆಯು ಮರಿಯನ್ನು ಕಳೆದುಕೊಳ್ಳುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆಯೂ ಎರಡು ಬಾರಿ ಮರಿಗಳಿಗೆ ಜನ್ಮ ನೀಡಿದ್ದ ಹಂಸಿನಿ, ಹುಟ್ಟಿದ ಕೆಲವೇ ದಿನಗಳಲ್ಲಿ ಅವುಗಳನ್ನು ಕಳೆದುಕೊಂಡಿತ್ತು. ಈ ಬಾರಿಯಾದರೂ ಮರಿ ಉಳಿಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಫಾರಿ ಸಿಬ್ಬಂದಿಗೆ ಈಗ ನಿರಾಸೆಯಾಗಿದೆ. ವನ್ಯಜೀವಿ ತಜ್ಞರ ಪ್ರಕಾರ, ಮಾರ್ಚ್‌ನಲ್ಲಿ ನಡೆದ ಆ ಅನಿರೀಕ್ಷಿತ ಘಟನೆಯ ಸಮಯದಲ್ಲಿ ಹಂಸಿನಿ ತೀವ್ರ ದೈಹಿಕ ಅನಾರೋಗ್ಯ ಮತ್ತು ಮಾನಸಿಕ ಒತ್ತಡಕ್ಕೆ (Stress) ಒಳಗಾಗಿತ್ತು. ಸಾಮಾನ್ಯವಾಗಿ ಗರ್ಭಿಣಿ ಪ್ರಾಣಿಗಳು ಅತಿಯಾದ ಸೂಕ್ಷ್ಮತೆಯನ್ನು ಹೊಂದಿರುತ್ತವೆ. ವೈದ್ಯೆಯ ಮೇಲೆ ದಾಳಿ ಮಾಡಿದ ಆಘಾತ ಮತ್ತು ನಂತರದ ಚಿಕಿತ್ಸಾ ಪ್ರಕ್ರಿಯೆಗಳು ಹಂಸಿನಿಯ ದೈಹಿಕ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಿದ್ದವು. ಈ ಮಾನಸಿಕ ಆಘಾತ ಮತ್ತು ಹಾರ್ಮೋನುಗಳ ಏರುಪೇರಿನಿಂದಾಗಿ ಮರಿಯು ಗರ್ಭದಲ್ಲೇ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಕೊಪ್ಪಳ: ಬಸ್‌ನಲ್ಲಿ ಅರಳಿದ ಪ್ರೇಮ, ದೇವಸ್ಥಾನದಲ್ಲಿ ಮದುವೆಯಾದ ಜೋಡಿಗೆ ಈಗ ಜೀವಭಯ!

ಪ್ರಸ್ತುತ ಹಂಸಿನಿಯ ಆರೋಗ್ಯದ ಮೇಲೆ ಅರಣ್ಯ ಇಲಾಖೆ ಮತ್ತು ಪಶುವೈದ್ಯರು ತೀವ್ರ ನಿಗಾ ಇರಿಸಿದ್ದಾರೆ. ಗರ್ಭದಲ್ಲಿರುವ ಮೃತ ಮರಿಯನ್ನು ಹೊರತೆಗೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಹಂಸಿನಿಯ ಜೀವಕ್ಕೆ ಅಪಾಯವಾಗದಂತೆ ವೈದ್ಯಕೀಯ ತಂಡ ಜಾಗ್ರತೆ ವಹಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

Follow Us