ಶಿವಮೊಗ್ಗ, ಮಾ.06: ಶಿವಮೊಗ್ಗ(Shivamogga) ತಾಲೂಕಿನ ಕುಚ್ಚುಲು, ಹೊಸಗದ್ದೆ, ಹೊನ್ನಾಸ್ ಗದ್ದೆ ಮೂರು ಗ್ರಾಮಗಳಿಂದ ಸರಕಾರಿ ಶಾಲೆ ಮೂರು ಕಿ.ಮೀ ದೂರದಲ್ಲಿದೆ. ಈ ಗ್ರಾಮಗಳಿಂದ ನಿತ್ಯ ಮಕ್ಕಳು ಸರಕಾರಿ ಶಾಲೆಗೆ ಹೋಗಲು ಸರಿಯಾದ ರಸ್ತೆಯಿಲ್ಲ. ಇನ್ನು ಶಾಲೆವರೆಗೂ ಹೋಗಲು ಕಲ್ಲು ಮಣ್ಣಿನ ರಸ್ತೆಯಿದ್ದು, ಈ ರಸ್ತೆ ಕೂಡ ಸರಿಯಿಲ್ಲ. ಹೀಗಾಗಿ ಕಾಡುರಸ್ತೆಯನ್ನು ಮಕ್ಕಳು ಬಳಕೆ ಮಾಡುತ್ತಿದ್ದಾರೆ. ಈ ಹಿನ್ನಲೆ ಶಾಲೆಗೆ ಹೋಗಲು ಟಾರ್ ರಸ್ತೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈಗಾಗಲೇ ತೀರ್ಥಹಳ್ಳಿ ಶಾಸಕ ಮಾಜಿ ಗೃಹ ಸಚಿವ ಆರಗ ಜ್ಷಾನೇಂದ್ರ ಅವರಿಗೆ ಗ್ರಾಮಸ್ಥರು ರಸ್ತೆಗಾಗಿ ಮನವಿ ಕೊಟ್ಟಿದ್ದಾರೆ. ಆದ್ರೆ, ಯಾವುದೇ ಪ್ರಯೋಜನವಾಗಿಲ್ಲ. ಸರಕಾರಿ ಶಾಲೆಗೆ ಹೋಗುವ ಮಕ್ಕಳ ಭವಿಷ್ಯಕ್ಕಾಗಿ ಆದರೂ ರಸ್ತೆ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸರಕಾರಿ ಶಾಲೆ ಎಂದರೆ, ಮಕ್ಕಳನ್ನು ದಾಖಲಿಸಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ಆದ್ರೆ, ಈ ಗ್ರಾಮಗಳ ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುತ್ತಿದ್ದಾರೆ. ಮಕ್ಕಳು ಸರಕಾರಿ ಶಾಲೆಯಲ್ಲಿ ಓದಬೇಕು. ಸರಕಾರಿ ಶಾಲೆ ಉಳಿಬೇಕೆನ್ನುವುದು ಗ್ರಾಮಸ್ಥರು ಅಭಿಪ್ರಾಯವಾಗಿದೆ. ಈ ನಡುವೆ ಸರಕಾರಿ ಶಾಲೆಗೆ ಕೇವಲ ಮೂರು ಕಿ.ಮೀ ರಸ್ತೆ ನಿರ್ಮಾಣ ಮಾಡಲು ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿರುವುದಕ್ಕೆ ಗ್ರಾಮಸ್ಥರು ಅಕ್ರೋಶ ಹೊರಹಾಕಿದ್ದಾರೆ. 1 ರಿಂದ 5 ನೇ ತರಗತಿ ವರೆಗೆ ಈ ಪ್ರಾಥಮಿಕ ಶಾಲೆಯಲ್ಲಿ 13ಕ್ಕೂ ಹೆಚ್ಚು ಮಕ್ಕಳು ವ್ಯಾಸ್ಯಾಂಗ ಮಾಡುತ್ತಿದ್ದಾರೆ. ಈ ಮಕ್ಕಳು ನಿತ್ಯ ರಸ್ತೆ ಇಲ್ಲದೇ ಕಾಡುದಾರಿಯಲ್ಲಿ ಓಡಾಡಿಕೊಂಡು ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ:ಹಳೆಯದಾದ ಮೊಬೈಲ್ಗಳು; ಗ್ಯಾರಂಟಿ ಯೋಜನೆಗಳ ಸರ್ವೆಗೆ ಅಂಗನವಾಡಿ ಕಾರ್ಯಕರ್ತೆಯರ ಪರದಾಟ
ಟಾರ್ ರಸ್ತೆ ಆದರೆ ಖಾಸಗಿ ಬಸ್ ಮತ್ತು ವಾಹನಗಳ ಸಂಚಾರಕ್ಕೆ ಅನುಕೂಲವಾಗುತ್ತದೆ. ಜೊತೆಗೆ ವಾಹನಗಳು ಕೂಡ ಸಂಚರಿಸುತ್ತದೆ. ಮಕ್ಕಳಿಗೆ ನಿತ್ಯ ಕಾಡುದಾರಿ ಓಡಾಟದ ಸಮಸ್ಯೆಗೆ ಪರಿಹಾರವು ಸಿಗುತ್ತದೆ. ಮಕ್ಕಳು ಸುರಕ್ಷಿತವಾಗಿ ಮನೆಯಿಂದ ಶಾಲೆಗೆ ಬಂದು ಹೋಗಬಹುದು. ಈ ಭಾಗದಲ್ಲಿ ಕೇವಲ ರಸ್ತೆ ಮಾತ್ರವಲ್ಲ, ಶಾಲೆಯಲ್ಲಿ ಶಿಕ್ಷಕರಿಲ್ಲ. ಸದ್ಯ ಒಬ್ಬರೇ ಶಿಕ್ಷಕರೇ ಎಲ್ಲ ನಿರ್ವಹಣೆ ಮಾಡುತ್ತಿದ್ದಾರೆ. ಮತ್ತೊಬ್ಬ ಶಿಕ್ಷಕರ ಅಗತ್ಯ ಕೂಡ ಇದೆ. ಇದಷ್ಟೇ ಅಲ್ಲ, ಈ ಭಾಗದಲ್ಲಿ ಮೊಬೈಲ್ ನೆಟವರ್ಕ್ ಸಮಸ್ಯೆಯಿಂದ ಮಕ್ಕಳು ಪೋಷಕರು ಮತ್ತು ಶಿಕ್ಷಕರ ನಡುವೆ ಸಂಪರ್ಕ ಇಲ್ಲದಂತಾಗಿದೆ.
ಹೀಗೆ ಈ ಭಾಗದಲ್ಲಿ ಮೂಲ ಸೌಲಭ್ಯಗಳಿಲ್ಲದೇ ಮಲೆನಾಡಿನ ಕಾಡಿನಂಚಿನಲ್ಲಿರುವ ಗ್ರಾಮಸ್ಥರು ಪರದಾಡುವಂತಾಗಿದೆ. ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಸರಕಾರಿ ಶಾಲೆಯ ಮಕ್ಕಳು ನಿತ್ಯ ರಸ್ತೆಯಿಲ್ಲದೇ ಪರದಾಡುತ್ತಿದ್ಧಾರೆ. ಮತ್ತೊಂದೆಡೆ ಶಾಲೆಗೆ ಒಬ್ಬರೇ ಶಿಕ್ಷಕರಿಂದ ಸರಿಯಾದ ಪಾಠ ಮಕ್ಕಳಿಗೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಗ್ರಾಮಗಳಿಗೆ ಅಗತ್ಯವಿರುವ ಸೌಲಭ್ಯಗಳ ಒದಗಿಸಲು ಸಚಿವರು, ಸಂಸದರು, ಶಾಸಕರು ಗಮನ ಹರಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ