AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವೇರಿ: ಬತ್ತಿದ ಜಿಲ್ಲೆಯ ನಾಲ್ಕು ಪ್ರಮುಖ ನದಿಗಳು; ಜನ-ಜಾನುವಾರುಗಳು ನೀರಿಲ್ಲದೇ ಪರದಾಟ

ರಾಜ್ಯದಲ್ಲಿ ಭೀಕರ ಬರಗಾಲದ ತಾಂಡವಾಡುತ್ತಿದ್ದು, ವರಣನ ಮುನಿಸಿಗೆ ನದಿಗಳ ಒಡಲು ಬರಿದಾಗಿದೆ. ಬಿಸಿಲಿನ ತಾಪಕ್ಕೆ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಇದರಿಂದ ಜೀವ ಜಲಕ್ಕಾಗಿ ಜನರು ಪರದಾಡುತ್ತಿದ್ದಾರೆ. ಇದಕ್ಕೆ ಹಾವೇರಿ ಜಿಲ್ಲೆಯೇನು ಹೊರತಾಗಿಲ್ಲ. ಜಿಲ್ಲೆಯಲ್ಲಿ ನಾಲ್ಕು ಪ್ರಮುಖ ನದಿಗಳು ಇದ್ದರು ಬೇಸಿಗೆ ಆರಂಭದಲ್ಲೇ ಜಲಕ್ಷಾಮ ಎದುರಾಗಿದೆ.

ಹಾವೇರಿ: ಬತ್ತಿದ ಜಿಲ್ಲೆಯ ನಾಲ್ಕು ಪ್ರಮುಖ ನದಿಗಳು; ಜನ-ಜಾನುವಾರುಗಳು ನೀರಿಲ್ಲದೇ ಪರದಾಟ
ಬತ್ತಿದ ಹಾವೇರಿ ಜಿಲ್ಲೆಯ ನಾಲ್ಕು ಪ್ರಮುಖ ನದಿಗಳು
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Mar 03, 2024 | 7:00 PM

Share

ಹಾವೇರಿ, ಮಾ.03: ಈ ಭಾರಿ ಬರಗಾಲಕ್ಕೆ ರಾಜ್ಯದ ಜನರು ಕಂಗಾಲಾಗಿದ್ದಾರೆ. ರಾಜ್ಯ ರಾಜಧಾನಿ ಸೇರಿದಂತೆ ಹಲವಾರು ಜಿಲ್ಲೆಗಳು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಂತೆ ಮಳೆಯ ಕಣ್ಣಾಮುಚ್ಚಾಲೆ ಆಟಕ್ಕೆ ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಇದಕ್ಕೆ ಹಾವೇರಿ(Haveri) ಜಿಲ್ಲೆ ಹೊರತಾಗಿಲ್ಲ. ಜಿಲ್ಲೆಯಲ್ಲಿ ಇರುವ ನಾಲ್ಕು ಪ್ರಮುಖ ನದಿಗಳಾದ ತುಂಗಭದ್ರಾ, ವರದಾ, ಕುಮಧ್ವತಿ, ಧರ್ಮಾ ಈ ನಾಲ್ಕು ನದಿಗಳ ಒಡಲು ಬರಿದಾಗಿದೆ. ಪರಿಣಾಮ ಜಿಲ್ಲೆಯಲ್ಲಿ ನೀರಿನ ಬವಣೆ ಶುರುವಾಗಿದೆ.

ಈ ನಾಲ್ಕು ನದಿಗಳು ನೂರಾರು ಹಳ್ಳಿಗಳ ನೀರಿನ ಬವಣೆ ನೀಗಿಸುತ್ತಿದ್ದವು. ಜೊತೆಗೆ ಜಾನುವಾರುಗಳ ನೀರಿನ ದಾಹ ನೀಗಿಸುತ್ತಿದ್ದವು. ಅದರಲ್ಲೂ ಹಾವೇರಿ ಜಿಲ್ಲೆಯ ಜೀವನಾಡಿ ನದಿಯಾದ ವರದಾ ನದಿ ಸಂಪೂರ್ಣವಾಗಿ ಬತ್ತಿ ಹೋಗಿದೆ. ವರದಾ ನದಿಗೆ ನಿರ್ಮಿಸಲಾಗಿದ್ದ ಚಾಕ್ ಡ್ಯಾಂ ನಲ್ಲಿ ಸೇರಿದಂತೆ ಜಿಲ್ಲೆಯ 15 ಕ್ಕೂ ಅಧಿಕ ಚೆಕ್ ಡ್ಯಾಂ ನಲ್ಲಿ ನೀರು ಇಲ್ಲದೆ ಬರಿದಾಗಿವೆ. ವರದಾ ನದಿಯಿಂದ ದೇವಗಿರಿ, ದೇವಗಿರಿ ಯಲ್ಲಾಪುರ, ಮನ್ನಂಗಿ ಮತ್ತು ಮೇಳಗಟ್ಟಿಗೆ ಗ್ರಾಮಕ್ಕೆ ಬಹು ಕುಡಿಯುವ ನೀರಿನ ಯೋಜನೆ ಮೂಲಕ ನೀರನ್ನ ಗ್ರಾಮಗಳಿಗೆ ಒದಗಿಸಲಾಗುತ್ತಿತ್ತು. ಈಗ ವರದಾ ನದಿ ಸಂಪೂರ್ಣವಾಗಿ ಖಾಲಿಯಾಗಿದ್ದು, ಜನ ಮತ್ತು ಜಾನುವಾರಗಳಿಗೆ ಸಹ ಸರಿಯಾಗಿ ನೀರು ಸಿಗುತ್ತಿಲ್ಲ. ಇದರಿಂದ ಅನ್ನದಾತರು ಮತ್ತು ಬಾನಾಡಿ ಪಕ್ಷಿಗಳ ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿವೆ.

ಇದನ್ನೂ ಓದಿ:ರಾಯಚೂರು ಸರ್ಕಾರಿ ಶಾಲೆಯಲ್ಲಿ ನೀರಿಲ್ಲದೇ ವಿದ್ಯಾರ್ಥಿಗಳ ಪರದಾಟ: ಊಟದ ತಟ್ಟೆ ತೊಳೆಯಲು ನಾಲೆಗೆ ಹೋಗುತ್ತಿರೋ ಮಕ್ಕಳು

ಕಂಗಾಲಾದ ರೈತ

ಇನ್ನೊಂದೆಡೆ ಸಾಲ ಶೂಲ ಮಾಡಿ ಬೇಸಿಗೆ ಬೆಳೆ ಬೆಳೆಯಲು ಮುಂದಾಗಿದ್ದ ರೈತ ಕಂಗಾಲಾಗಿದ್ದಾನೆ. ಮಳೆಯ ಕಣ್ಣಾಮುಚ್ಚಾಲೆ ಆಟಕ್ಕೆ ಬೇಸತ್ತು, ನದಿ ನೀರು ನಂಬಿ ಬೇಸಿಗೆ ಬೆಳೆ ಬೆಳೆಯಲು ಮುಂದಾಗಿದ್ದ ರೈತರು ನದಿಯಲ್ಲಿ ನೀರು ಖಾಲಿಯಾಗಿದ್ದಕ್ಕೆ ನೀರಿಲ್ಲದೇ ಬೆಳೆ ಒಣಗುವುದನ್ನು ಕಂಡು ಕಣ್ಣೀರು ಇಡುತ್ತಿದ್ದಾನೆ. ರೈತರು ಪಂಪ್​ಗಳನ್ನ ನದಿಯ ಮಧ್ಯೆದಲ್ಲಿ ಇಟ್ಟು ಇದ್ದ ಅಲ್ಪಸ್ವಲ್ಪ ನೀರನ್ನು ಎತ್ತುವ ಕೆಲಸ ಮಾಡುತ್ತಿದ್ದು, ಹನಿ ನೀರಿಗೂ ಪದದಾಡುವ ಪರಸ್ಥಿತಿ ನಿರ್ಮಾಣವಾಗಿದೆ.

ಜಾನುವಾರು ಮಾರಿ ಊರು ಬಿಡುವ ನಿರ್ಧಾರ

ಒಟ್ಟಾರೆ ಹಾವೇರಿ ಜನರ ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಸಾಲಶೂಲ ಮಾಡಿ ಬೆಳೆ ಒಣಗುತ್ತಿರುವುದು ಒಂದಡೆಯಾದರೆ, ಇನ್ನೊಂದಡೆ ತನ್ನ ಒಡನಾಡಿ ಜಾನುವಾರುಗಳಿಗೆ ಮೇವು ನೀರು ಒದಗಿಸುವುದೇ ದೊಡ್ಡ ತಲೆ ನೋವಾಗಿದೆ. ಹೀಗಾಗಿ ರೈತರು ಒಲ್ಲದ ಮನಸ್ಸಿನಿಂದ ಜಾನುವಾರು ಮಾರಿ ಊರು ಬಿಡುವ ನಿರ್ಧಾರ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಜನಸಾಮಾನ್ಯರ ನೆರವಿಗೆ ಬರಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ