ಶಿವಮೊಗ್ಗ: ಕಾಲೇಜು ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

ಎರಡು ಪ್ರತ್ಯೇಕ ಘಟನೆ: ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜು ಕಟ್ಟದ ಮೇಲಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮತ್ತೊಂದು ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿ ಗ್ರಾಮದ ಬಳಿಯ ಚರಂಡಿ ಕಾಲುವೆಯಲ್ಲಿ ಎರಡು ವರ್ಷದ ಹೆಣ್ಣು ಮಗುವಿನ ಮೃತದೇಹ ಪತ್ತೆಯಾಗಿದೆ.

ಶಿವಮೊಗ್ಗ: ಕಾಲೇಜು ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ
ಸಾಂದರ್ಭಿಕ ಚಿತ್ರ
Follow us
Basavaraj Yaraganavi
| Updated By: ವಿವೇಕ ಬಿರಾದಾರ

Updated on:Dec 05, 2023 | 3:05 PM

ಶಿವಮೊಗ್ಗ, ಡಿಸೆಂಬರ್​ 05: ಶಿವಮೊಗ್ಗದ (Shivamogga) ಶರಾವತಿ ನಗರದಲ್ಲಿರುವ ಆದಿಚುಂಚನಗಿರಿ (Adichunchanagiri) ಕಾಲೇಜು ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ (Student) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದ್ವಿತೀಯ ಪಿಯುಸಿ ಓದುತ್ತಿದ್ದ ಮೇಘಶ್ರೀ (18) ಮೃತ ವಿದ್ಯಾರ್ಥಿನಿ. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿನಿ ಮೇಘಶ್ರೀ ಹೋಮ್​ ಸಿಕ್​​ಗೆ‌ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತ ಮೇಘಶ್ರೀ ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ಚೆನ್ನಾಪುರ ಗ್ರಾಮದ ನಿವಾಸಿ ಓಂಕಾರಯ್ಯ ಎಂಬುವರ ಪುತ್ರಿ. ಕಾಲೇಜಿನ ಹಾಸ್ಟೆಲ್​ನಲ್ಲಿದ್ದು ವಿದ್ಯಾಭ್ಯಾಸ ನಡೆಸುತ್ತಿದ್ದಳು. ಇಂದು (ಡಿ.05) ಬಯಾಲಾಜಿ ಪರೀಕ್ಷೆ ಬರೆಯಲು ಕಾಲೇಜಿಗೆ ಬಂದಿದ್ದಳು. ಪರೀಕ್ಷೆ ನಡುವೆ ವಾಶ್​ ರೂಂಗೆ ಹೋಗುವುದಾಗಿ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಮೇಘಶ್ರಿ ಅವರ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮಗಳ ಸಾವಿಗೆ ವಾರ್ಡನ್, ಕಾಲೇಜು ಆಡಳಿತ ಮಂಡಳಿ ಕಾರಣ

ಮಗಳು ಮೇಘಶ್ರಿ ಸಾವಿನ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೋಷಕರು ಆಗಮಿಸಿದರು. ಈ ವೇಳೆ ಕಾಲೇಜು ಸಿಬ್ಬಂದಿ ಪೋಷಕರನ್ನು ಕಾಲೇಜು ಒಳಗಡೆ ಬಿಡಲಿಲ್ಲ. ಇದರಿಂದ ಕೋಪಗೊಂಡ ಮೇಘಶ್ರೀ ತಂದೆ ಓಂಕಾರಯ್ಯ ಕಾಲೇಜಿನ ಗೇಟ್ ಮುಂಭಾಗ ಆಕ್ರೋಶ ಹೊರಹಾಕಿದರು. ಪೋಷಕರ ಆಕ್ರೋಶದ ಬಳಿಕ ಕಾಲೇಜು ಸಿಬ್ಬಂದಿ ಗೇಟ್ ಓಪನ್ ಮಾಡಿದರು. ಒಳ ಹೋದ ಪೋಷಕರು ಪ್ರಾಂಶುಪಾಲರ ಚೇಂಬರ್ ಹಾಗೂ ಕಾಲೇಜು ಆವರಣದಲ್ಲಿ ರೋದಿಸಿದರು. ಈ ವೇಳೆ ಮಗಳ ಸಾವಿಗೆ ವಾರ್ಡನ್, ಉಪನ್ಯಾಸಕರು, ಕಾಲೇಜು ಆಡಳಿತ ಮಂಡಳಿ ಕಾರಣ ಎಂದು ಆರೋಪಿಸಿದರು. ನಾಲ್ಕೂವರೆ ಲಕ್ಷ ಫೀಸ್ ಕಟ್ಟಿದ್ದೇವೆ ಎಂದು ಅಳಲು ತೋಡಿಕೊಂಡರು. ಸ್ಥಳಕ್ಕೆ ಡಿವೈಎಸ್​ಪಿ ಸುರೇಶ್ ಭೇಟಿ ನೀಡಿದರು. ಈ ವೇಳೆ ಪೋಷಕರು ಡಿವೈಎಸ್​​​ಪಿ ಅವರ ಜೊತೆ ವಾಗ್ವಾದಕ್ಕೆ ಇಳಿದರು. ಸ್ಥಳದಲ್ಲಿ ಬಿಗುವಿನ ವಾತವರಣವಿದ್ದು,  ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ಪಸಿಟ್ ಕಾಲೇಜು ಕಟ್ಟಡ ಮೇಲಿನಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ನಗರದ ಪಸಿಟ್ ಕಾಲೇಜು ಕಟ್ಟಡ ಮೇಲಿನಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ರಚನಾ (21)ಗಾಯಗೊಂಡ ವಿದ್ಯಾರ್ಥಿನಿ. ರಚನಾ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ‌ ಮೂಲದವರಾಗಿದ್ದು, ಪಸಿಟ್​ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾರೆ. ವಿದ್ಯಾರ್ಥಿನಿ ರಚನಾ ಅವರಿಗೆ ಮುಟ್ಟಿನ ಸಮಸ್ಯೆಯಾಗಿ ಹೊಟ್ಟೆ ನೋವಿನಿಂದ ಮಾನಸಿಕವಾಗಿ ಕುಗ್ಗಿದ್ದರು.

ಈ ಹಿನ್ನೆಲಯಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಕಾಲೇಜು ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದರು. ಸದ್ಯ ರಚನಾ ಅವರನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ರಚನಾಗೆ ಆಪರೇಶನ್ ಮಾಡಿದ್ದು, ಸದ್ಯ ತೀವ್ರ ನಿಗಾಘಟಕದಲ್ಲಿ ಇರಿಸಲಾಗಿದೆ.  ರಚನಾ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ: ನೆಲಮಂಗಲ: ಮಕ್ಕಳಾಗಿಲ್ಲ ಎಂದು ಮನನೊಂದು ನೀರಿನ ಸಂಪ್‌ಗೆ ಬಿದ್ದು ಗೃಹಿಣಿ ಆತ್ಮಹತ್ಯೆ

ಚರಂಡಿ ಕಾಲುವೆಯಲ್ಲಿ 2 ವರ್ಷದ ಹೆಣ್ಣು ಮಗು ಪತ್ತೆ

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿ ಗ್ರಾಮದ ಬಳಿಯ ಚರಂಡಿ ಕಾಲುವೆಯಲ್ಲಿ ಎರಡು ವರ್ಷದ ಹೆಣ್ಣು ಮಗುವಿನ ಮೃತದೇಹ ಪತ್ತೆಯಾಗಿದೆ. ಮಗುವಿನ ದೇಹ ಚಾಪೆಯಿಂದ ಸುತ್ತಿದ ರೀತಿಯಲ್ಲಿ ಪತ್ತೆಯಾಗಿದೆ. ಮಗುವಿನ ದೇಹದ ಮೇಲೆ ಯಾವುದೇ ಗಾಯದ ಗುರುತು ಕಂಡು ಬಂದಿಲ್ಲ. ಮಗುವನ್ನು ಕೊಲೆ ಮಾಡಲಾಗಿದೆಯೋ ಅಥವಾ ಸಹಜ ಸಾವಾ ಎಂಬ ಅನುಮಾನ ವ್ಯಕ್ತವಾಗಿದೆ. ದೊಡ್ಡಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಎತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬೈಕ್​​: ಸವಾರ ಸ್ಥಳದಲ್ಲೇ ಸಾವು

ಕೊಪ್ಪಳ: ಭತ್ತದ ಮೇವು ಸಾಗಿಸುತ್ತಿದ್ದ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗಂಗಾವತಿ ತಾಲೂಕಿನ ಉಡಮಕಲ್ ಗ್ರಾಮದ ಬಳಿ ನಡೆದಿದೆ. ಉಡುಮಕಲ್ ಗ್ರಾಮದ ನಿವಾಸಿ ಹನುಮಂತಪ್ಪ ಭಜಂತ್ರಿ (31) ಮೃತ ದುರ್ದೈವಿ.

ಹನುಮಂತಪ್ಪ ಉಡಮಕಲ್ ಗ್ರಾಮದಿಂದ ಆರ್ಹಾಳ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:43 pm, Tue, 5 December 23