ಅಡಿಕೆ ಬೆಳೆಗಾರರಿಗೆ ಕೇಂದ್ರ ಸಚಿವ ಚೌಹಾಣ್ ಭರ್ಜರಿ ಭರವಸೆ: ಸಾಗರದಲ್ಲಿ ಹೇಳಿದ್ದೇನು ನೋಡಿ
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸಾಗರದಲ್ಲಿ ಅಡಿಕೆ ಬೆಳೆಗಾರರನ್ನು ಉದ್ದೇಶಿಸಿ ಮಾತನಾಡಿ, ಅಡಿಕೆ ಆಮದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಅಡಿಕೆಗೆ ವೈಜ್ಞಾನಿಕ ಬೆಲೆ ಒದಗಿಸುವುದಾಗಿ ಭರವಸೆ ನೀಡಿದರು. ರೈತರಿಗೆ ಸರಿಯಾದ ಬೆಲೆ ದೊರೆಯುವಂತೆ ಮಾಡಲು ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಸರ್ಕಾರ ಬದ್ಧವಾಗಿದೆ ಎಂದೂ ಅವರು ಹೇಳಿದರು.
ಸಾಗರ, ಜನವರಿ 18: ಅಡಿಕೆ ಆಮದು ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜತೆಗೆ, ಅಡಿಕೆಗೆ ವೈಜ್ಞಾನಿಕ ಬೆಲೆ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭರವಸೆ ನೀಡಿದರು. ಸಾಗರ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದ ಅವರು, ಬೆಳಗೆ ತಕ್ಕ ಬೆಲೆ ನೀಡಬೇಕಿದೆ. ಬೆಳೆ ಹಾನಿಯಾದಾಗ ಪರಿಹಾರ ನೀಡಬೇಕು. ರೈತರಿಗೆ ತಾವು ಬೆಳೆದ ಬೆಳೆಗೆ ಸರಿಯಾದ ಹಣ ಸಿಗುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ತಾವು ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗುವಂತೆ ಮಾಡಬೇಕು. ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಬನ್ನಿ ಎಂದರು, ಹಾಗಾಗಿ ನಾನಿಲ್ಲಿಗೆ ಬಂದೆ. ನಾನಿಲ್ಲಿಗೆ ನಾನು ಯಾವುದೇ ಪಕ್ಷದ ನಾಯಕನಾಗಿ ಬಂದಿಲ್ಲ. ಕೇಂದ್ರದ ಸಚಿವನಾಗಿ ಯಾವುದೇ ಗರ್ವದಿಂದ ಬಂದಿಲ್ಲ. ನಿಮ್ಮ ಸೇವೆ ಮಾಡಲು ಬಂದಿದ್ದೇನೆ. ಯಾರಿಗೆ ರೈತರ ಬಗ್ಗೆ ಕಾಳಜಿ ಇರುವುದಿಲ್ಲವೋ ಅವರು ಕೃಷಿ ಸಚಿವರಾಗಬಾರದು. ಪ್ರತಿ ಮನೆಯಲ್ಲೂ ನಾವು ಅಡಿಕೆ ಬಳಸುತ್ತೇವೆ. ನಮ್ಮ ಭಾಗದಲ್ಲಿ ಅಡಕೆ ಬಳಸುತ್ತೇವೆ. ಪೂಜೆ ಸಂದರ್ಭದಲ್ಲಿ ಅಡಿಕೆ ಗಣೇಶನಾಗಿ, ದೇವರಾಗಿ ಬದಲಾಗುತ್ತದೆ. ಎಲ್ಲಾ ಕ್ಷೇತ್ರದಲ್ಲೂ ಅಡಿಕೆಯ ಉಪಯೋಗ ಇದೆ. ನಾನು ಕೃಷಿ ಮಂತ್ರಿಯನ್ನು ಭೇಟಿಯಾಗಿ ಬಂದೆ. ನಮಗೆ ಯಾವ ಸರ್ಕಾರ ಇಲ್ಲಿ ಇದೆ ಎಂಬುವುದು ಮುಖ್ಯ ಅಲ್ಲ, ರೈತರ ಸಮಸ್ಯೆ ಬಗೆಹರಿಸುವುದು ಮುಖ್ಯ ಎಂದು ಅವರು ಹೇಳಿದರು.
ಅಡಿಕೆ ಬೆಳೆಗಾರರು ಯಾರೂ ಚಿಂತೆ ಮಾಡಬೇಡಿ, ನಿಮ್ಮೊಂದಿಗೆ ನಾವು ಇದ್ದೇವೆ. ವಿಕಸಿತ ಭಾರತ, ವಿಕಸಿತ ಕರ್ನಾಟಕ ನಿರ್ಮಾಣ ಮಾಡಬೇಕಿದೆ. ನಾವು ದೇಶವನ್ನು ನಡೆಸಬೇಕಿದೆ, ಜನರ ಜೀವನ ಸುಧಾರಿಸಬೇಕಿದೆ. ಜನರ ಜೀವನ ಸುಧಾರಿಸಿದರೆ ನಮ್ಮ ಸರ್ಕಾರದ ಆಶಯ ಈಡೇರುತ್ತದೆ ಎಂದು ಚೌಹಾಣ್ ಹೇಳಿದರು.
ಅಡಿಕೆಗೆ ಬಾಧಿಸುವ ರೋಗಗಳ ಸಂಶೋಧನೆಗೆ ತಂಡ
ಕಳೆದ ವರ್ಷ ಅಡಕೆ ಬೆಳೆಗೆ ಸಾಕಷ್ಟು ಹಾನಿ ಆಗಿದೆ. ಅಡಿಕೆಗೆ ಬಾಧಿಸುವ ರೋಗಗಳ ಸಂಶೋಧನೆಗೆ ತಂಡ ರಚಿಸುತ್ತೇವೆ. ಇದಕ್ಕಾಗಿ ಈ ಬಜೆಟ್ನಲ್ಲಿ 67 ಸಾವಿರ ಕೋಟಿ ರೂ. ಮೀಸಲಿಡಲಾಗುವುದು. ಅಡಿಕೆ ತಿನ್ನುವುದರಿಂದ ಕಾನ್ಸರ್ ಬರುತ್ತದೆ ಎಂಬ ವದಂತಿ ಇದೆ. ಆದರೆ, ಅಡಿಕೆಯನ್ನು ಹಿಂದಿನಿಂದಲೂ ಜನ ಬಳಸುತ್ತಿದ್ದಾರೆ. ಈ ಬಗ್ಗೆ ಸಂಶೋಧನೆ ನಡೆಸಿ ವರದಿ ಸಲ್ಲಿಸಲು 16 ಸಂಸ್ಥೆಗಳಿಗೆ ಸೂಚನೆ ನೀಡಿದ್ದೇವೆ. ಅಡಿಕೆಯಿಂದ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. ಅಡಿಕೆಗೆ ಬಗ್ಗೆ ಇರುವ ವಂದತಿಗಳನ್ನು ದೂರ ಮಾಡುತ್ತೇವೆ ಎಂದರು ಸಚಿವರು ಹೇಳಿದರು.
ಇದನ್ನೂ ಓದಿ: ಶೀಘ್ರದಲ್ಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಶಿವರಾಜ್ ಸಿಂಗ್ ಚೌಹಾಣ್
ಪ್ರಧಾನಿ ನರೇಂದ್ರ ಮೋದಿ ಕನಸಿನಂತೆ ವಿಕಸಿತ ಭಾರತ ಆಗಬೇಕಾದರೆ ಪ್ರತಿ ರಾಜ್ಯವು ಅಭಿವೃದ್ದಿ ಆಗಬೇಕು. ದೇಶದಲ್ಲಿ ಬಡತನ ನಿರ್ಮೂಲನೆ ಮಾಡುವ ಸಂಕಲ್ಪ ಮಾಡಿದ್ದೇವೆ. ಸಾಗರಕ್ಕೆ ಬಂದು ಯಡಿಯೂರಪ್ಪನವರನ್ನು ನೆನಪಿಸಿಕೊಳ್ಳದೆ ಹೋದರೆ ಹೇಗೆ? ನಾನು ಮಂತ್ರಿ ಆಗಿರುವುದರಿಂದ ದೊಡ್ಡ ವ್ಯಕ್ತಿ ಅಲ್ಲ. ಜನರ ಸೇವೆಯೇ ನನ್ನ ಕಾಯಕ. ಕರ್ನಾಟಕದ ರೈತರ ಪರವಾಗಿ ನಮ್ಮ ಕೇಂದ್ರ ಸರ್ಕಾರ ಇದೆ. ಅಡಿಕೆಯ ಐಸ್ ಕ್ರಿಮ್ ತಿನ್ನಿಸಿದ್ದೀರಿ, ಅದನ್ನು ನಾನು ಎಲ್ಲ ಕಡೆ ಹೇಳುತ್ತೇನೆ ಎಂದು ಚೌಹಾಣ್ ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ