ನೀರೆಚ್ಚರದ ಬದುಕು | ಬೆಂಗಳೂರಿನಲ್ಲಿ ಜನಪ್ರಿಯವಾಗಿರುವ ಇಂಗುಬಾವಿ ಪರಿಕಲ್ಪನೆ ಇಡೀ ಕರ್ನಾಟಕ ರಾಜ್ಯಕ್ಕೆ ಹಬ್ಬಬೇಕಿದೆ: ಶ್ರೀಪಡ್ರೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 29, 2021 | 4:48 PM

ರೈನ್ ವಾಟರ್ ಹಾರ್ವೆಸ್ಟಿಂಗ್ ಎನ್ನುವುದು ಒಂದು ವಿಜ್ಞಾನ. ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ನಿರ್ಮಾಣ ಮಾಡಲು ಮುಂದಾದರೆ ಅದು ಅಪಾಯ ತರಲೂಬಹುದು. ಅಷ್ಟೇ ಅಲ್ಲ, ನಿರೀಕ್ಷಿತ ಫಲ ಸಿಗದೆ ಹೋಗಲೂಬಹುದು. ಹಲವು ದೊಡ್ಡ ದೊಡ್ಡ ಕಾಲೇಜು ಕಟ್ಟಡಗಳಲ್ಲಿ ಹತ್ತಾರು ಬೃಹತ್ ಇಂಗುಗುಂಡಿ ಮಾಡಿ ಕಷ್ಟ ಪಡುವ ಬದಲು ಇಂಗುಬಾವಿ ಮಾಡಿಕೊಳ್ಳಬಹುದು.

ನೀರೆಚ್ಚರದ ಬದುಕು | ಬೆಂಗಳೂರಿನಲ್ಲಿ ಜನಪ್ರಿಯವಾಗಿರುವ ಇಂಗುಬಾವಿ ಪರಿಕಲ್ಪನೆ ಇಡೀ ಕರ್ನಾಟಕ ರಾಜ್ಯಕ್ಕೆ ಹಬ್ಬಬೇಕಿದೆ: ಶ್ರೀಪಡ್ರೆ
ಬೆಂಗಳೂರಿನ ಮಳೆ ಚರಂಡಿಯಲ್ಲಿ ತೋಡಿರುವ ಸರಣಿ ಇಂಗುಬಾವಿಗಳು
Follow us on

ಮುಂದೊಂದು ದಿನ ವಿಶ್ವದಲ್ಲಿ ಮಹಾಯುದ್ಧವೋ, ದೇಶ-ರಾಜ್ಯಗಳೊಳಗೆ ಅಂತರ್ಯುದ್ಧವೋ ಅಗುವುದಿದ್ದರೆ ಅದು ನೀರಿಗಾಗಿಯೇ ಎಂಬ ಮಾತುಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ನಮ್ಮನ್ನಾಳುವ ಸರ್ಕಾರಗಳ ಪಾಲಿಗೆ ಕರ್ನಾಟಕದ ಮಲೆನಾಡು-ಕರಾವಳಿ ಎಂಬುದು ಎಂದೂ ಬತ್ತದ ನೀರಿನ ಖಜಾನೆಯಂತೆ ಕಾಣಿಸುತ್ತಿದೆ. ಅಲ್ಲಿಂದ ಬಯಲುಸೀಮೆಗೆ ನೀರು ಹರಿಸುವ ಯೋಜನೆಗಳನ್ನು ಕಾಲಕ್ಕೊಬ್ಬರು, ಕಾಲಕ್ಕೊಂದು ರೀತಿಯಲ್ಲಿ ಜನರ ಮುಂದಿಟ್ಟು ಮರೀಚಿಕೆಯನ್ನು ನಿಜವೆಂದು ನಂಬಿಸಲು ಹಾತೊರೆಯುತ್ತಾರೆ. ಇಂಥ ದೊಡ್ಡದೊಡ್ಡ ಯೋಜನೆಗಳಲ್ಲಿ ನಿಜಕ್ಕೂ ಯಾರಿಗೆ ಲಾಭವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ನಮ್ಮ ನಮ್ಮ ಊರುಗಳ ನೀರ ನೆಮ್ಮದಿಗೆ ನಮ್ಮ ಮಿತಿಯಲ್ಲಿಯೇ ನಾವು ಎಷ್ಟೆಲ್ಲಾ ಮಾಡಬಹುದು ಗೊತ್ತೆ? ಹತ್ತಾರು ವರ್ಷಗಳಿಂದ ನಾಡಿನಲ್ಲಿ ನೀರೆಚ್ಚರ ಮೂಡಿಸಲು ಶ್ರಮಿಸುತ್ತಿರುವ ಹಿರಿಯ ಅಭ್ಯುದಯ ಪತ್ರಕರ್ತ ಶ್ರೀಪಡ್ರೆ ಇಂಥ ಹಲವು ಸರಳ ಉಪಾಯಗಳನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಜನಪ್ರಿಯವಾಗಿರುವ ಇಂಗುಬಾವಿ ಪರಿಕಲ್ಪನೆಯು ಕರ್ನಾಟಕದ ಇತರ ಭಾಗಗಳಿಗೂ ಹಬ್ಬಬೇಕು. ಪೇಟೆ ಮತ್ತು ಹಳ್ಳಿಗಳಲ್ಲಿ ಹಸಿರುಕೊಡೆ, ಮದಗಗಳಂತಹ ಪಾರಂಪರಿಕ ಜಲಸಂರಕ್ಷಣಾ ವ್ಯವಸ್ಥೆಗಳನ್ನು ಉಳಿಸಿಕೊಂಡಿದ್ದರೆ ಇವತ್ತು ನಾವು ಇಂಗುಬಾವಿಗಳ ಮೊರೆ ಹೋಗುವ ಅವಶ್ಯಕತೆ ಇರಲಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ನೀರನೆಮ್ಮದಿ ತರಲು ಈ ವಿಧಾನದ ಮೊರೆ ಹೋಗಬೇಕಾಗಿದೆ‌. ಒಂದು ಜಾಗದಲ್ಲಿ ಸಾರ್ವಜನಿಕರಿಗೆ ಸಾಕಷ್ಟು ನೀರನ್ನು ಪೂರೈಸುವ ಬೋರ್‌ವೆಲ್ ಇದೆ ಎಂದು ಭಾವಿಸೋಣ. ಆ ಬೋರ್‌ವೆಲ್‌ನಲ್ಲಿ ನೀರು ಬತ್ತುತ್ತಾ ಇದೆ ಎಂದಾಗ, ಬೇರೆ ಬೋರ್‌ವೆಲ್ ತೋಡುವ ಬದಲು ಅಲ್ಲೇ ಹತ್ತಿರದಲ್ಲಿ ಸಾಕಷ್ಟು ಮಳೆನೀರು ಹರಿದು ಹೋಗುವ ಜಾಗವಿದ್ದರೆ ಇಂಗುಬಾವಿ ತೋಡಬಹುದು. ಕೊಳಕು ನೀರು ಸೇರಿಕೊಳ್ಳದ ಜಾಗದಲ್ಲಿ ಇಂಗುಬಾವಿ ತೋಡಬೇಕು. ಈ ಕಾರ್ಯದಿಂದ ಬೋರ್‌ವೆಲ್‌ನಲ್ಲಿ ನೀರು ಹೆಚ್ಚಾಗುತ್ತದೆ.

ಕೃಷಿ ಭೂಮಿಯಲ್ಲಿ ಕೂಡ ಇಂಗುಬಾವಿ ಮಾಡಬಹುದು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮಳೆ ಜೋರಾಗಿ ಬಂದು ಮಣ್ಣು ಕೊಚ್ಚಿಹೋಗುವುದನ್ನು ನಾವು ನೋಡುತ್ತೇವೆ. ಎಲ್ಲೆಲ್ಲಿ ಜಲಪಾತಳಿಯನ್ನು ಮೇಲೆ ತರಬೇಕಿದೆ. ಅಲ್ಲಿ ಸರಿಯಾದ ಯೋಜನೆ ಮಾಡಿ, ಎತ್ತರದ ಪ್ರದೇಶಗಳಲ್ಲಿ ಇಂಗುಬಾವಿ ಮಾಡುವುದು ಒಳ್ಳೆಯದು.

ಇದನ್ನೂ ಓದಿ: ನೀರೆಚ್ಚರದ ಬದುಕು | ನೀರು ಪೋಲು ಮಾಡುವುದೂ ಸಮಾಜದ್ರೋಹ ಅಂತಾರೆ ಶ್ರೀಪಡ್ರೆ

ಮಳೆ ನೀರ ಚರಂಡಿಯಲ್ಲೇ ಮರುಪೂರಣ
ಇಂಗುಬಾವಿಗಳ ಬದಲಿಗೆ ಇನ್ನೂ ಚಿಕ್ಕ ಮಟ್ಟದಲ್ಲಿ, ಅಂದರೆ ಎಲ್ಲೆಲ್ಲಾ ನಾವು ಹೊಸ ಮಳೆನೀರ ಚರಂಡಿಯನ್ನು ನಿರ್ಮಾಣ ಮಾಡಲು ಕೋಟಿಗಟ್ಟಲೆ ವೆಚ್ಚ ಮಾಡುತ್ತೇವೆಯೋ, ಅಲ್ಲಿ 5 ಮೀಟರಿಗೊಂದು ರಿಚಾರ್ಜ್ ಪಿಟ್ ಮಾಡಬೇಕು. ಬೆಂಗಳೂರಿನ ಕೆಲವು ಕಡೆ ಈ ರೀತಿ ಪ್ರಾಯೋಗಿಕವಾಗಿ ಮಳೆ ನೀರ ಚರಂಡಿಯಲ್ಲೇ ನೀರಿಂಗಿಸುವ ರಚನೆ ಮಾಡಿದ್ದಾರೆ. ಮಳೆ ನೀರ ಚರಂಡಿಯಲ್ಲಿ ಮಳೆಯ ನೀರನ್ನು ಮಾತ್ರ ಹರಿಸಲಾಗುತ್ತದೆ. ನಾವು ಇಂಗಿಸುವ ನೀರಿನ ಗುಣಮಟ್ಟ ಬಹಳ ಮುಖ್ಯ. ಅದರ ಜತೆ ಕೊಳಕು ಸೇರಿಕೊಳ್ಳಬಾರದು. ಅದು ಅಪಾಯಕಾರಿ.
ಇಂಗುಬಾವಿಗಳು ಗ್ರಾಮೀಣ ಭಾಗದಲ್ಲಿ , ಅದೂ, ಸಾರ್ವಜನಿಕ ವಲಯದಲ್ಲಿ ಬಳಕೆಗೆ ಬರಬೇಕಿದೆ.

ಇಂಗುಬಾವಿ ನಿರ್ಮಾಣವನ್ನೂ ಪುಣ್ಯದ ಕೆಲಸ ಎಂದು ಭಾವಿಸಬೇಕು. ಕುಂದಾಪುರದ ಹತ್ತಿರದ ಕೋಟೇಶ್ವರದಲ್ಲಿ ಗುರುಕುಲ ಶಿಕ್ಷಣ ಸಮಚ್ಛಯ ಇದೆ. ಅಲ್ಲಿ ನೀರಿನ ಸಮಸ್ಯೆ ಬಂತ್ತು. ಹೋಗಿ ನೋಡಿದಾಗ ಐದಾರು ಇಂಗುಬಾವಿ ತುಂಬಿಸುವಷ್ಟು ನೀರು ಹೊರಗೆ ಹರಿದು ಹೊಗುತ್ತಾ ಇತ್ತು. ಆ ಸಮಚ್ಛಯದ ಒಳಗಡೆ ಒಂದು ಕಾಲೇಜು ಇದೆ. ಅಲ್ಲಿಂದ ಆರು ಇಂಚಿನಷ್ಟು ವ್ಯಾಸದ ಪೈಪ್​ನಲ್ಲಿ ನೀರು ಗಟಾರಕ್ಕೆ ಹೋಗುತ್ತಿತ್ತು. ಆಯಾಕಟ್ಟಿನ ಸ್ಥಳದಲ್ಲಿ ಎರಡು ಇಂಗುಬಾವಿಗಳನ್ನು ಬೆಂಗಳೂರಿನ ಮಣ್ಣು ವಡ್ಡರು ತೋಡಿಕೊಟ್ಟಿದ್ದಾರೆ. ಅಲ್ಲಿ ಆಮೇಲೆ ಅವರಿಗೆ ನೀರಿನ ಸಮಸ್ಯೆ ಬರಲಿಲ್ಲ.

ಇದನ್ನೂ ಓದಿ: ನೀರೆಚ್ಚರದ ಬದುಕು | ಶ್ರೀಪಡ್ರೆ ಹಂಚಿಕೊಂಡ ಈ ಜಲಜಾಗೃತಿ ಕಥನಗಳಲ್ಲಿ ಬದುಕಿನ ಪಾಠಗಳಿವೆ

500ಕ್ಕೂ ಹೆಚ್ಚು ಇಂಗುಬಾವಿ ತೋಡಿರುವ ಮುನಿಯಪ್ಪ

ಇಂಗುಬಾವಿ ತೋಡಲು ಹೆಚ್ಚು ಖರ್ಚಾಗುತ್ತದೆ. ಆದರೆ ದೀರ್ಘಕಾಲಿಕ ದೃಷ್ಟಿಯಿಂದ ಇದು ನೀರಿನ ಸುಸ್ಥಿರತೆ ತರಬಲ್ಲುದು. ಇಂಗುಬಾವಿ ತೊಡಲು ಮಣ್ಣು ವಡ್ಡರೇ ಆಗಬೇಕು ಎಂದು ಇಲ್ಲ. ಇದನ್ನು ಒಮ್ಮೆ ನೋಡಿಕೊಂಡರೆ ಚಾಲಾಕಿ ಮಂದಿ ತಾವೂ ಮಾಡಬಹುದು. ನನ್ನದೇ ಜಮೀನಿನಲ್ಲಿ ಒಂದು ಇಂಗುಬಾವಿ ಮಾಡಿಸಿಕೊಂಡಿದ್ದೇನೆ. ಇದಕ್ಕೆ 25 ಸಾವಿರ ರೂಪಾಯಿ ಖರ್ಚಾಗಿದೆ. ಒಬ್ಬರು ಸ್ಥಳೀಯರು ಉತ್ಸಾಹದಿಂದ ಇದನ್ನು ಮಾಡಿಕೊಟ್ಟಿದ್ದಾರೆ. ಮೂರು ಅಡಿ ವ್ಯಾಸ ಮತ್ತು ಹತ್ತು ಅಡಿ ಆಳ. ಅದಕ್ಕೊಂದು ಮುಚ್ಚಳವೂ ಇದೆ.

ಜಮೀನಿನಲ್ಲಿ ರಭಸದಿಂದ ಹರಿದು ಬರುವ ನೀರು ಇಂಗುಬಾವಿಗೆ ಮಣ್ಣನ್ನು ಹೊತ್ತು ತರುತ್ತದೆ. ಹಾಗೆ ತಾರದ ಹಾಗೆ ಹೂಳು ನಿಯಂತ್ರಣವನ್ನು ಮಾಡಬೇಕು. ಹೂಳು ಗುಂಡಿಯ ಮೂಲಕ ನೀರು ಹರಿಸಿದಾಗ, ಹೂಳಿಲ್ಲದ ನೀರು ಮಾತ್ರ ಗುಂಡಿಗೆ ಬರುತ್ತದೆ. ಮೇಲುಸ್ತರದ ಜಲಧರ ಪ್ರದೇಶವನ್ನು ಇನ್ನಷ್ಟು ಸಮೃದ್ಧವಾಗಿಸಲು ಇಂಗುಬಾವಿ ಬಹಳ ಸೂಕ್ತ. ಇಂಗುಬಾವಿಯ ಪರಿಕಲ್ಪನೆ ತುಂಬಾ ಜನಪ್ರಿಯವಾಗಿ, ಹೆಚ್ಚು ಹೆಚ್ಚು ಜನ ಮಾಡಿಕೊಂಡರೆ, ಕಾಲಕ್ರಮೇಣ ಅಲ್ಲಿನ ಜಲಪಾತಳಿ ಏರುತ್ತಾ ಬಂದು ಇಂಗುಬಾವಿಯಿಂದ ಐದಾರು ತಿಂಗಳು ನೀರನ್ನು ಎತ್ತಿಕೊಳ್ಳಬಹುದು. ಮಳೆಗಾಲದಲ್ಲಿ ನೀರನ್ನು ಇಂಗಿಸುವ ಬಾವಿ ಕೆಲವು ಕಡೆ ನೀರು ಕೊಡುವ ಬಾವಿಯಾಗಿ ಮಾರ್ಪಾಡಾದ ಉದಾಹರಣೆಗಳು ಬೆಂಗಳೂರಿನಲ್ಲಿವೆ.

ಬೆಂಗಳೂರಿನಲ್ಲೀಗ 10 ಲಕ್ಷ ಇಂಗುಬಾವಿ ಆಗಬೇಕು ಎಂಬ ಕನಸು ಇದೆ. ಆರಂಭದಲ್ಲಿ ಇದನ್ನು ತಲುಪಲು ಸಾಧ್ಯವೇ ಎನ್ನುವ ಗೊಂದಲ ಇತ್ತು. ಆದರೆ ಈ ಪರಿಕಲ್ಪನೆ ನಿಧಾನವಾಗಿ ಜನರ ಒಲವು ಪಡೆದುಕೊಂಡಿದೆ. ಈ ಒಲವು ಬೆಂಗಳೂರೇತರ ಕರ್ನಾಟಕಕ್ಕೂ ಕೂಡ ಹಬ್ಬುವ ಅಗತ್ಯ ಇದೆ. ನಮ್ಮ ನಗರ ಸಭೆಗಳು, ನಮ್ಮ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಇದರ ಬಗ್ಗೆ ಆಸಕ್ತಿ ವಹಿಸಿ, ಪ್ರಯೋಗಕ್ಕೆ ಮುಂದಾದರೆ ಅದು ನೀರಿನ ರಂಗಕ್ಕೆ ಒಂದು ದೊಡ್ಡ ಕೊಡುಗೆಯಾಗುತ್ತದೆ.

ಮಳೆ ನೀರು ಸಂಗ್ರಹ (ರೇನ್ ವಾಟರ್ ಹಾರ್ವೆಸ್ಟಿಂಗ್) ಎನ್ನುವುದು ಒಂದು ವಿಜ್ಞಾನ. ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ನಿರ್ಮಾಣ ಮಾಡಲು ಮುಂದಾದರೆ ಅದು ಅಪಾಯ ತರಲೂಬಹುದು. ಅಷ್ಟೇ ಅಲ್ಲ, ನಿರೀಕ್ಷಿತ ಫಲ ಸಿಗದೆ ಹೋಗಲೂಬಹುದು. ಹಲವು ದೊಡ್ಡದೊಡ್ಡ ಕಾಲೇಜು ಕಟ್ಟಡಗಳಲ್ಲಿ ಹತ್ತಾರು ಬೃಹತ್ ಇಂಗುಗುಂಡಿ ಮಾಡಿ ಕಷ್ಟ ಪಡುವ ಬದಲು ಇಂಗುಬಾವಿ ಮಾಡಿಕೊಳ್ಳಬಹುದು. ಇಂಗುಬಾವಿ ದೊಡ್ಡ ಪ್ರಮಾಣದ ನೀರನ್ನು ಕಡಿಮೆ ಸಮಯದಲ್ಲಿ ಇಂಗಿಸುತ್ತದೆ. ಒಂದು ಕಾಲೊನಿಯಲ್ಲಿ ಇಂಗುಬಾವಿ ಮಾಡಿ ಎಲ್ಲರ ಚಾವಣಿಯ ನೀರನ್ನು ಅದಕ್ಕೆ ಹರಿಸಿದರೆ ಎಲ್ಲರಿಗೂ ಪ್ರಯೋಜನವಾಗುತ್ತದೆ. ವೈಯಕ್ತಿಕವಾಗಿ, ಸಾಮುದಾಯಿಕವಾಗಿ ಮತ್ತು ರಸ್ತೆಯಲ್ಲಿ ನೆರೆಬರದ ಹಾಗೆ ಮಾಡಬಹುದು. ಆದರೆ ಈ ಕೆಲಸವನ್ನು ಸರಿಯಾದ ಅಧ್ಯಯನದ ನಂತರ, ಸೂಕ್ತ ರೀತಿಯಲ್ಲಿ ಮಾಡಬೇಕು, ಅಷ್ಟೇ.

ಪರಿಕಲ್ಪನೆ ಮತ್ತು ನಿರೂಪಣೆ: ಪ್ರೀತಿ ಶೆಟ್ಟಿಗಾರ್

 

ಇದನ್ನೂ ಓದಿ: ನೀರೆಚ್ಚರದ ಬದುಕು | ನಾಡಿನ ಜಲಸುರಕ್ಷೆಗೆ ವರದಾನವಾಗಬಲ್ಲ ಇಂಗುಬಾವಿಗಳು

ಇದನ್ನೂ ಓದಿ: ನೀರೆಚ್ಚರದ ಬದುಕು | ಬೆಂಗಳೂರಿನಲ್ಲಿ ಇಂಗುಬಾವಿ ಜಾಗೃತಿ, ಇದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ

Published On - 4:45 pm, Mon, 29 March 21