ಪೂರ್ಣಚಂದ್ರ ತೇಜಸ್ವಿ ಫಾರ್ಮ್ ಹೌಸ್​ಗೆ ತುಂಬಾ ಸಲ ಆಹ್ವಾನ ಮಾಡಿದ್ದರು: ನೆನಪು ಹಂಚಿಕೊಂಡ ಸಿದ್ದರಾಮಯ್ಯ

| Updated By: ganapathi bhat

Updated on: Sep 08, 2021 | 2:41 PM

Siddaramaiah: ತೇಜಸ್ವಿ ಫಾರ್ಮ್ ಹೌಸ್​ಗೆ ನನ್ನನ್ನು ತುಂಬ ಸಲ ಅಹ್ವಾನ ಮಾಡಿದ್ದರು. ಆದರೆ, ಒಮ್ಮೆ ಮಾತ್ರ ಹೋಗಲು ಸಾಧ್ಯವಾಗಿತ್ತು. ನಾನು ಅಲ್ಲೇ ವಾಸ್ತವ್ಯ ಹೂಡಿದ್ದೆ ಎಂದು ಪೂರ್ಣಚಂದ್ರ ತೇಜಸ್ವಿ ನೆನಪುಗಳನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಫಾರ್ಮ್ ಹೌಸ್​ಗೆ ತುಂಬಾ ಸಲ ಆಹ್ವಾನ ಮಾಡಿದ್ದರು: ನೆನಪು ಹಂಚಿಕೊಂಡ ಸಿದ್ದರಾಮಯ್ಯ
ಪೂರ್ಣಚಂದ್ರ ತೇಜಸ್ವಿ, ಸಿದ್ದರಾಮಯ್ಯ
Follow us on

ಬೆಂಗಳೂರು: ಪೂರ್ಣ ಚಂದ್ರ ತೇಜಸ್ವಿ ನನಗಿಂತ ದೊಡ್ದವರು. ಅವರು ಒಂದು ವಾರಕ್ಕೆ ಒಂದು ಬಾರಿಯಾದ್ರು ಮೈಸೂರಿಗೆ ಬರ್ತಾ ಇದ್ದರು. ಮೈಸೂರಿನಲ್ಲಿ ರಾಮದಾಸ ಅಂತ ಸ್ನೇಹಿತರ ಮನೆಗೆ ಬರ್ತಾ ಇದ್ದರು. ತೇಜಸ್ವಿ ಫಾರ್ಮ್ ಹೌಸ್​ಗೆ ನನ್ನನ್ನು ತುಂಬಾ ಸಲ ಅಹ್ವಾನ ಮಾಡಿದ್ದರು. ಆದರೆ, ಒಮ್ಮೆ ಮಾತ್ರ ಹೋಗಲು ಸಾಧ್ಯವಾಗಿತ್ತು. ನಾನು ಅಲ್ಲೇ ವಾಸ್ತವ್ಯ ಹೂಡಿದ್ದೆ ಎಂದು ಪೂರ್ಣಚಂದ್ರ ತೇಜಸ್ವಿ ನೆನಪುಗಳನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬ ದಿನವಾದ ಇಂದು (ಸಪ್ಟೆಂಬರ್ 8) ನಡೆದ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದಾರೆ.

ತೇಜಸ್ವಿ ಅವರು ಸಾಹಿತಿ ಅಷ್ಟೇ ಅಲ್ಲ. ಪರಿಸರವಾದಿಯಾಗಿದ್ದರು. ಉತ್ತಮ ಛಾಯಾಚಿತ್ರಗಾರರೂ ಆಗಿದ್ದರು. ಮೀನು ಹಿಡಿಯುವುದು ಅಂದ್ರೆ ತುಂಬ ಇಷ್ಟವಾಗಿತ್ತು ಅವರಿಗೆ. ಗಂಟೆಗಟ್ಟಲೆ ಮೀನು ಹಿಡಿಯಲು ಕುಳಿತಿರುತ್ತಿದ್ದರು. ಒಂದು ಮೀನು ಸಿಕ್ಕರೂ ತುಂಬ ಖುಷಿ‌ ಪಡೋರು. ನಾನು ಬಿಎಸ್ಸಿ ಪದವಿಯಲ್ಲಿ ಸಸ್ಯಶಾಸ್ತ್ರದ ಸ್ಟೂಡೆಂಟ್ ಆಗಿದ್ದೆ. ನಂತರ ನಾನು ಕಾನೂನು ಕಲಿತದ್ದಕ್ಕಾಗಿ ಬಾಟನಿ ಮರೆತು ಹೋಗಿದೆ. ನಾನು ಅದೇ ವಿಷಯದಲ್ಲಿ ಮುಂದುವರೆದಿದ್ದರೇ ಆದರೆ ಉಪನ್ಯಾಸಕನಾಗಿ ಇರುತ್ತಿದೆ. ನಾನು ರಾಜಕಾರಣಕ್ಕೆ ಬಂದಿದ್ದು ಸಹ ಆಕಸ್ಮಿಕ ಎಂದು ಹಳೆಯ ದಿನಗಳನ್ನು ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ.

ಪ್ರೊ. ನಂಜುಂಡಸ್ವಾಮಿ ಪ್ರೇರಣೆಯಿಂದ ರಾಜಕಾರಣಕ್ಕೆ ಬಂದಿದ್ದೆ. ರಾಜಕಾರಣಿಗಳ ಬಗ್ಗೆ ತೇಜಸ್ವಿ ಅವರಿಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ನನ್ನ ಬಗ್ಗೆ ವೈಯಕ್ತಿಕವಾಗಿ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿದ್ದರು. ಮಹಾರಾಜ ಕಾಲೇಜಿನಲ್ಲಿ ಸಂಜೆ ಆಯಿತು ಅಂದ್ರೆ ಎಲ್ಲರೂ ಸೇರಿ ಚರ್ಚೆ ಮಾಡುತ್ತಿದ್ದೆವು. ಬರೀ ರಾಜಕೀಯ ಅಷ್ಟೇ ಅಲ್ಲ. ಬದುಕಿನ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಿದ್ದೇವು‌. ಆ ಚರ್ಚೆಗಳು ನನಗೆ ಅನುಕೂಲವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜಾತಿಗಣತಿಗೆ ಲಿಂಗಾಯತ ಸಮುದಾಯ ವಿರೋಧ ವ್ಯಕ್ತಪಡಿಸಿರುವ ವಿಚಾರವಾಗಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಜಾತಿಗಣತಿ ವರದಿ ಬಿಡಗಡೆಯೇ ಮಾಡಿಲ್ಲ. ಜಾತಿಗಣತಿ ಬಿಡುಗಡೆಯಾಗಿರುವ ಬಗ್ಗೆ ಮಾಹಿತಿ ಇದ್ಯಾ? ನನಗೆ ಗೊತ್ತಿರುವಂತೆ ಜಾತಿಗಣತಿ ಮಾಹಿತಿ ಸೋರಿಕೆ ಆಗಿಲ್ಲ. ಜಾತಿಗಣತಿಯಲ್ಲಿ ಏನಿದೆ ಎಂಬುವುದೇ ಗೊತ್ತಿಲ್ಲ. ವಿರೋಧ ಮಾಡಕ್ಕೆ ಅವರಿಗೇನಾದ್ರೂ ಮಾಹಿತಿ ಗೊತ್ತಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

ಎಲ್ಲ ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಸ್ಥಿತಿ ತಿಳಿಯಬೇಕು. ಹೀಗಾಗಿ ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆಯನ್ನು ಮಾಡಲಾಗಿದೆ. ಸಾಮಾಜಿಕ ನ್ಯಾಯ ಸಿಗಬೇಕಾದರೆ ದಾಖಲಾತಿಯ ಅಗತ್ಯವಿದೆ. ದಾಖಲಾತಿ ಇಲ್ಲದೆ ಸಾಮಾಜಿಕ ನ್ಯಾಯ ನೀಡಲು ಅಸಾಧ್ಯ. ಆ ಉದ್ದೇಶದಿಂದ ಸಮೀಕ್ಷೆ ಮಾಡಲಾಗಿದೆ. ಜಾತಿಗಣತಿಯಲ್ಲಿ ಯಾವುದೇ ರೀತಿಯ ದುರುದ್ದೇಶ ಇಲ್ಲ. ಇದು ಯಾವ ಜಾತಿ, ಯಾವ ವರ್ಗದ ವಿರುದ್ಧವೂ ನಾವಿಲ್ಲ. ಜಾತಿಗಣತಿ ವರದಿ ಸ್ವೀಕರಿಸಲು ಕುಮಾರಸ್ವಾಮಿ ಒಪ್ಪಲಿಲ್ಲ. ಈಗಲೂ ಜಾತಿಗಣತಿ ವರದಿ ಹಾಗೇಯೆ ಇದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಸದನದಲ್ಲಿ ಜಾತಿಗಣತಿ ವರದಿ ಪ್ರಸ್ತಾಪಿಸುವ ವಿಚಾರವಾಗಿ ಕೇಳಿದಾಗ, ಈ ಬಗ್ಗೆ ನಾನು ಸದ್ಯಕ್ಕೆ ಹೇಳಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವಿಧಾನಮಂಡಲ ಅಧಿವೇಶನ ಹಿನ್ನೆಲೆ: ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಲ್​ಪಿ ಸಭೆ

ಇದನ್ನೂ ಓದಿ: ಅಧಿಕಾರಕ್ಕೆ ಬಂದ ಮೊದಲ ದಿನವೇ ಉಚಿತ ಅಕ್ಕಿ ಘೋಷಿಸಿದ ನಾಯಕ: ಸಿದ್ದರಾಮಯ್ಯಗೆ ಡಿಕೆಶಿ ತಾರೀಪು