ಕಂಡ್ರೆ ಹಿಡಿದು ಮಾರಿ ಬಿಡ್ತಾರೋ ಎಂಬ ಭಯಕ್ಕೆ ಯಾವ ಗುಹೆಯಲ್ಲಿ ಹುಲಿಗಳು ಅಡಗಿದ್ಯೋ: ಮೋದಿ ಕಾಲೆಳೆದ ಸಿದ್ದರಾಮಯ್ಯ
ಪ್ರಧಾನಿ ನರೇಂದ್ರ ಮೋದಿ ಅವರು ಬಂಡಿಪುರ ರಾಷ್ಟ್ರೀಯ ಅಭಯಾರಣ್ಯ ಸುಮಾರು 2 ಗಂಟೆ ಕಾಲ 20 ಕಿ.ಮೀ. ಸಫಾರಿ ಮಾಡಿದ್ದಾರೆ. ಆದ್ರೆ, ಅವರಿಗೆ ಒಂದೇ ಒಂದು ಹುಲಿ ಕಂಡಿಲ್ಲ. ಇದಕ್ಕೆ ಸಿದ್ದರಾಮಯ್ಯ ಮಾರ್ಮಿಕವಾಗಿ ಟ್ವೀಟ್ ಮಾಡಿ ಮೋದಿ ಕಾಲೆಳೆದಿದ್ದಾರೆ.

ಚಾಮರಾಜನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರು ಇಂದು(ಏಪ್ರಿಲ್ 09) ಬಂಡಿಪುರ(bandipura Safari) ರಾಷ್ಟ್ರೀಯ ಅಭಯಾರಣ್ಯಕ್ಕೆ ಭೇಟಿ ನೀಡಿದ್ದು, ಕಾಡಿನೊಳಗೆ ಸಫಾರಿ ಕೈಗೊಂಡು ಗಮನ ಸೆಳೆದಿದ್ದಾರೆ. ಖಾಕಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಹ್ಯಾಟ್, ಗಾಗಲ್ಸ್, ಟೀ ಶರ್ಟ್ ಹಾಗೂ ಅರಣ್ಯ ಇಲಾಖೆ ಜಾಕೆಟ್ ಧರಿಸಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯಕ್ಕೆ ಎಂಟ್ರಿ ಕೊಟ್ಟ ಮೋದಿ, ಸುಮಾರು 2 ಗಂಟೆ ಕಾಲ 20 ಕಿ.ಮೀ. ಸಫಾರಿ ಮಾಡಿದರು. ಈ ವೇಳೆ ಕೆಲ ಪ್ರಾಣಿ, ಪಕ್ಷಗಳನ್ನು ನೋಡುವುದರ ಜೊತೆಗೆ ಪ್ರಕೃತಿ ಸೌದರ್ಯವನ್ನು ಸವಿದರು. ಕಡವೆ, ಕಾಡೆಮ್ಮೆ, ಆನೆ, ಕಾಟಿ ಹಾಗೂ ಕೆಲ ಪಕ್ಷಿಗಳು ಮೋದಿ ಕಣ್ಣಿಗೆ ಬಿದ್ದಿವೆ. ಇವುಗಳನ್ನು ನೋಡಿ ಖುಷಿಪಟ್ಟ ಪ್ರಧಾನಿ ಮೋದಿ ಹುಲಿ ಪ್ರತ್ಯಕ್ಷವಾಗಲಿಲೇ ಇಲ್ಲ. ದುರ್ಬಿನ್ ಹಾಗೂ ಕ್ಯಾಮೆರಾ ಹಿಡಿದು ಸುತ್ತಾಡಿದರೂ ಮೋದಿ ಕಣ್ಣಿಗೆ ಒಂದೂ ಹುಲಿ ಕಾಣಿಸಿಲ್ಲ. ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಮಿಕವಾಗಿ ಟ್ವೀಟ್ ಮಾಡಿ ಮೋದಿ ಕಾಲೆಳೆದಿದ್ದಾರೆ.
ದುರ್ಬಿನ್ನಿಂದ ಹುಲಿ ಹುಡುಕಿದ ಮೋದಿ, ಸಫಾರಿ ವೇಳೆ ಪ್ರಧಾನಿಗೆ ಕಂಡ ಪ್ರಾಣಿಗಳಾವುವು? ಇಲ್ಲಿವೆ ಫೋಟೋಸ್
ಪ್ರಧಾನಿ ನರೇಂದ್ರ ಮೋದಿ ಸಫಾರಿ ವೇಳೆ ಹುಲಿ ಕಾಣದಿದ್ದಕ್ಕೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಎಲ್ಲಿ ನನ್ನನ್ನು ಹಿಡಿದು ಮಾರಿ ಬಿಡುತ್ತಾರೋ ಎಂಬ ಭಯದಿಂದ ಯಾವ ಗುಹೆಯೊಳಗೆ ಅಡಗಿ ಕೂತಿದೆಯೋ ಎಂದು ಮೋದಿ ಕಾಲೆಳೆದಿದ್ದು, ಇನ್ನು ಕೆಲವೇ ದಿನಗಳಲ್ಲಿ SaveBandipur ( ಬಂಡಿಪುರ ಉಳಿಸಿ ) ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ. ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ ಎಂದು ಪ್ರಧಾನಿ ನರೇಂದ್ರ ಮೋದಿಗೆ ಟ್ಯಾಗ್ ಮಾಡಿದ್ದಾರೆ.
ಮೋದಿ ಸರ್ಕಾರ ಈಗಾಗಲೇ ಕನ್ನಡಿಗರು ಕಟ್ಟಿ ಬೆಳೆಸಿದ ಬ್ಯಾಂಕ್, ಬಂದರು, ಏರ್‌ಪೋರ್ಟ್‌ಗಳನ್ನು ಖಾಸಗಿಯವರಿಗೆ ಮಾರಿಯಾಗಿದೆ. ಇದೀಗ ನಂದಿನಿ ಹಾಲಿನ ಮೇಲೆ ವಕ್ರದೃಷ್ಟಿ ಬೀರಿರುವ ಮೋದಿ ಸರ್ಕಾರ, ಕೆಎಂಎಫ್ ನುಂಗಲು ಹೊಂಚು ಹಾಕಿ ಕುಳಿತಿದೆ. ಪ್ರಧಾನಿ ಮೋದಿ ಬಂಡಿಪುರ ಭೇಟಿಯಿಂದ ಎಲ್ಲಿ ಬಂಡಿಪುರ ಉಳಿಸಿ ಅಭಿಯಾನ ಮಾಡಬೇಕಾಗಿ ಬರುವುದೋ ಎಂದು ಕನ್ನಡಿಗರು ಆತಂಕಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
”ನಮ್ಮ ವಿಜಯಾ ಬ್ಯಾಂಕನ್ನು ನುಂಗಿದ ಬರೋಡಾ ಬ್ಯಾಂಕ್ ಗುಜರಾತ್‌ನದ್ದು, ಬಂದರು, ಏರ್‌ಪೋರ್ಟ್ ನುಂಗಿದ ಅದಾನಿ ಗುಜರಾತ್‌ನವರು, ಈಗ ಕೆಎಂಎಫ್ ನುಂಗಲು ಹೊರಟಿರುವ ಅಮುಲ್ ಕೂಡ ಗುಜರಾತ್‌ನದ್ದು. ಗುಜರಾತಿಗಳಿಗೆ ಕನ್ನಡಿಗರು ಶತ್ರುಗಳಾ..”? ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
Published On - 6:13 pm, Sun, 9 April 23




