ಬೆಂಗಳೂರು: ಕೊವಿಡ್ ಚಿಕಿತ್ಸೆಗೆ ಸಂಬಂಧಿಸಿ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ನಿನ್ನೆ ನಡೆದ Facebook Live ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದರು. ಜೊತೆಗೆ, ಮಾಜಿ ಸಿದ್ದರಾಮಯ್ಯ ಸೇರಿ ಇತರೆ ವಿರೋಧ ಪಕ್ಷದ ನಾಯಕರಿಗೆ ನಿಯಂತ್ರಣ ಕಾರ್ಯದಲ್ಲಿ ಸಲಹೆ ನೀಡಲು ಸಹ ಮನವಿ ಮಾಡಿದ್ದರು.
ಇದನ್ನೂ ಓದಿ: ‘ರಾಜ್ಯದ ಜನತೆಗೆ ಲೆಕ್ಕ ಕೊಡಿ’ ಎಂದು ಸರ್ಕಾರಕ್ಕೆ ಸಿದ್ದರಾಮಯ್ಯ ಕೇಳಿರುವ 6 ಪ್ರಶ್ನೆ ಇಲ್ಲಿದೆ
ಈ ನಡುವೆ ಕೊವಿಡ್ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಲು ಮಾಜಿ ಸಿಎಂ ಸಿದ್ದರಾಮಯ್ಯ ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ತಯಾರಿಸುವ ಆರೋಪಪಟ್ಟಿಯ ವಿವರ ಇದೀಗ ಟಿವಿ9ಗೆ ಲಭ್ಯವಾಗಿದೆ. ಅದರ ಪ್ರಕಾರ ವೈದ್ಯಕೀಯ ಪರಿಕರಗಳ ಖರೀದಿ, ಆಹಾರ ಮತ್ತ ಹೆಲ್ತ್ ಕಿಟ್ ವಿತರಣೆ ಮತ್ತು ಇತರೆ ವಿಷಯಗಳಿಗೆ ಸಂಬಂಧಪಟ್ಟಂತೆ ಹಲವು ಪ್ರಶ್ನೆ ಮತ್ತು ಆರೋಪಗಳನ್ನ ಮಾಡಲು ಮುಂದಾಗಿದ್ದಾರೆ. ಅಂದ ಹಾಗೆ, ಸಿದ್ದರಾಮಯ್ಯ ತಯಾರಿಸಿರುವ ಆರೋಪಪಟ್ಟಿ ಹೀಗಿದೆ.
ಸಿದ್ದರಾಮಯ್ಯ ತಯಾರಿಸಿರುವ ಆರೋಪಪಟ್ಟಿಯ ವಿವರ ಹೀಗಿದೆ 1. ಕೇಂದ್ರ ಸರ್ಕಾರ 4 ಲಕ್ಷ ರೂಪಾಯಿಗೆ ಒಂದು ವೆಂಟಿಲೇಟರ್ ಖರೀದಿಸಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಒಂದು ವೆಂಟಿಲೇಟರ್‌ಗೆ 18 ಲಕ್ಷ ರೂಪಾಯಿ ನೀಡಿದ್ದೇಕೆ? 2.ರಾಜ್ಯಕ್ಕೆ ಕೇಂದ್ರ ಸರ್ಕಾರ 1,600 ವೆಂಟಿಲೇಟರ್ಗಳನ್ನ ನೀಡಿದೆ. ಈ ನಡುವೆ ರಾಜ್ಯ ಸರ್ಕಾರ ಎಷ್ಟು ವೆಂಟಿಲೇಟರ್ಗಳನ್ನ ಖರೀದಿಸಿದೆ? ಅದರ ದರ ಹಾಗೂ ವ್ಯತ್ಯಾಸದ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು 3.ತಮಿಳುನಾಡು 4 ಲಕ್ಷ ರೂಪಾಯಿಗೆ ಒಂದು ವೆಂಟಿಲೇಟರ್ ಖರೀದಿ ಮಾಡಿದೆ. ಆದರೆ, ನಮ್ಮ ಸರ್ಕಾರ ಮಾತ್ರ ನಾಲ್ಕು ಪಟ್ಟು ಹೆಚ್ಚಿನ ದರ ಸಂದಾಯ ಮಾಡಿರೋದು ಏಕೆ? 4. ಸರ್ಕಾರದ ಬೇರೆ ಬೇರೆ ಇಲಾಖೆಗಳು 4 ಸಾವಿರ ಕೋಟಿ ರೂಪಾಯಿ ವಿವಿಧ ಕಾರ್ಯಗಳಿಗೆ ಖರ್ಚು ಮಾಡಿದೆ. ಆದರೆ, ಯಾವುದೇ ಟೆಂಡರ್ ಕರೆಯದೆ ಇಷ್ಟು ದೊಡ್ಡ ಮೊತ್ತ ಹೇಗೆ ಖರ್ಚಾಯಿತು? 5. BIEC ಕೊವಿಡ್ ಕೇರ್ ಸೆಂಟರ್‌ನಲ್ಲಿ ಸುಮಾರು 9,000 ರೂಪಾಯಿ ಮೌಲ್ಯದ ಹಾಸಿಗೆ ಸೆಟ್‌ಗಳನ್ನು ದಿನಕ್ಕೆ 800 ರೂಪಾಯಿ ಎಂಬಂತೆ 3 ತಿಂಗಳಿಗೆ ಬಾಡಿಗೆ ಪಡೆದಿರುವುದೇಕೆ? 6. ಈಗ ಬಾಡಿಗೆ ನೀಡಿದವರಿಂದಲೇ ಸರ್ಕಾರ ಅರ್ಧ ದರಕ್ಕೆ ಹಾಸಿಗೆ ಸೆಟ್ ಮಾರಾಟ ಮಾಡುವಂತೆ ಅಧಿಕಾರಿಗಳಿಂದ ತೀವ್ರ ಒತ್ತಡ ಹಾಕಿಸುತ್ತಾ ಇದೆ, ಏಕೆ? 7. ಹೆಲ್ತ್ ಕಿಟ್ ವಿತರಣೆಯಲ್ಲೂ ಭಾರಿ ಗೋಲ್ಮಾಲ್ ಆಗಿದ್ದು, ಸಂಘ ಸಂಸ್ಥೆಗಳು ನೀಡಿದ್ದ ಲೆಕ್ಕವನ್ನ ಸರ್ಕಾರದ ಲೆಕ್ಕದಲ್ಲಿ ತೋರಿಸಲಾಗ್ತಾಯಿದೆ 8. ಆಹಾರ ಕಿಟ್ ವಿತರಣೆಯಲ್ಲೂ ಇದೇ ರೀತಿ ಬಿಲ್ ಮಾಡಲಾಗಿದೆ ಹೀಗೆ, ಸರ್ಕಾರಕ್ಕೆ ಅಷ್ಟಾರೋಪ ಪಟ್ಟಿ ತಯಾರಿಸಿರುವ ಸಿದ್ದರಾಮಯ್ಯ ಇದೀಗ ಇದನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಸಮರ ಸಾರಲು ಸಜ್ಜಾಗಿದ್ದಾರೆ.