Free Bus Travel For Women Scheme: ಭಾನುವಾರ ಬಿಎಂಟಿಸಿ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿದ್ದರಾಮಯ್ಯ…!
ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸ್ ಕಂಡಕ್ಟರ್ ಸಿದ್ದರಾಮಯ್ಯ ಆಗಿ ಬದಲಾಗಲಿದ್ದಾರೆ. ಅರೇ ಇದೇನಿದು ಅಂತೀರಾ. ಈ ಸ್ಟೋರಿ ಓದಿ
ಬೆಂಗಳೂರ: ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(siddaramaiah) ಅವರು ಬಸ್ ಕಂಡಕ್ಟರ್(conductor) ಆಗಿ ಬದಲಾಗಲಿದ್ದಾರೆ. ಹೌದು….ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಪೈಕಿ ಮೊಟ್ಟಮೊದಲ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ(Free Bus Travel For Women Scheme) ‘ಶಕ್ತಿ’ಯೋಜನೆಗೆ (Shakti Yojana)ಜೂನ್ 11ರಂದು ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಹೀಗಾಗಿ ಸಿಎಂ ಭಾನುವಾರ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಹೊರಡುವ ಮಾರ್ಗ ಸಂಖ್ಯೆ 43ರ ಬಿಎಂಟಿಸಿ ಬಸ್‌ನಲ್ಲಿ ಆ ದಿನ ಪಾರ್ಟ್‌ಟೈಂ ಕಂಡಕ್ಟರ್ ಆಗಿ ಮಹಿಳಾ ಪ್ರಯಾಣಿಕರ ಬಳಿ ತೆರಳಿ ‘ಟಿಕೆಟ್ ಟಿಕೆಟ್…’ ಎನ್ನುತ್ತಾ ಉಚಿತ ಟಿಕೆಟ್ ವಿತರಿಸಲಿದ್ದಾರೆ.
ಇದೇ ಭಾನುವಾರ (ಜೂ.11) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಜೆಸ್ಟಿಕ್‌ನಿಂದ ನಾಡಿನ ಶಕ್ತಿಕೇಂದ್ರವಾದ ವಿಧಾನಸೌಧಕ್ಕೆ ತೆರಳುವ ರೂಟ್ ನಂ.43 ಬಸ್‌ನಲ್ಲಿ ಕಂಡಕ್ಟರ್ ರೀತಿ ಟಿಕೆಟ್ ವಿತರಿಸುವ ಮೂಲಕ ಈ ಮಹಾತ್ವಾಕಾಂಕ್ಷಿ ಯೋಜನೆಗೆ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಲಿದ್ದಾರೆ. ಅನಂತರ ವಿಧಾನಸೌಧದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಯೋಜನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಇಡೀ ರಾಷ್ಟ್ರದ ಗಮನ ಸೆಳೆದಿರುವ ಗ್ಯಾರಂಟಿ ಯೋಜನೆಗಳ ಉದ್ಘಾಟನೆಯೂ ಸಹ ವಿಭಿನ್ನವಾಗಿರಬೇಕು ಎಂಬ ಆಲೋಚನೆಯಲ್ಲಿರುವ ಸಿದ್ದರಾಮಯ್ಯ ಅವರ ಥಿಂಕ್ ಟ್ಯಾಂಕ್ ಈ ಶೈಲಿಯಲ್ಲಿ ಕಾರ್ಯಕ್ರಮ ರೂಪಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಈ ವಿಶಿಷ್ಟ ರೀತಿಯ ಉದ್ಘಾಟನೆಯು ಕೇವಲ ಶಕ್ತಿ ಯೋಜನೆಗೆ ಸೀಮಿತವಲ್ಲ. ಉಳಿದ ನಾಲ್ಕು ಯೋಜನೆಗಳನ್ನು ಕೂಡ ವಿಶಿಷ್ಟವಾಗಿ ಉದ್ಘಾಟಿಸುವ ಚಿಂತೆನಗಳು ನಡೆದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಕಾರ್ಯಕ್ರಮಗಳು ಕೇವಲ ರಾಜ್ಯ ರಾಜಧಾನಿಗೆ ಸೀಮಿತವಾಗಬಾರದು ಎಂಬ ಕಾರಣಕ್ಕೆ ರಾಜ್ಯದ ಐದೂ ವಿಭಾಗೀಯ ಕೇಂದ್ರಗಳಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಶಕ್ತಿ ಕಾರ್ಯಕ್ರಮ ಬೆಂಗಳೂರಿನಲ್ಲಿ ಉದ್ಘಾಟನೆಯಾದರೆ, ಕುಟುಂಬದ ಸದಸ್ಯರಿಗೆ 10 ಕೆ.ಜಿ. ಆಹಾರ ಧಾನ್ಯ ನೀಡುವ ಅನ್ನಭಾಗ್ಯ ಯೋಜನೆಯು ಜು.1ರಂದು ಮೈಸೂರಿನಲ್ಲಿ ಉದ್ಘಾಟಿಸಲು ತೀರ್ಮಾನಿಸಲಾಗಿದೆ.
ಇನ್ನು ಕುಟುಂಬದ ಯಜಮಾನಿಗೆ 2000 ರೂ. ನೀಡುವ ಗೃಹ ಲಕ್ಷ್ಮೀ ಯೋಜನೆಗೆ ಆಗಸ್ಟ್ 17 ಅಥವಾ 18ರಂದು ಬೆಳಗಾವಿಯಲ್ಲಿ ಚಾಲನೆ ನೀಡಲು ಪ್ಲಾನ್ ಮಾಡಲಾಗಿದೆ. ನಿರುದ್ಯೋಗಿ ಯುವಕರಿಗಾಗಿ ರೂಪಿಸಿರುವ ಮಹತ್ವದ ಯುವ ನಿಧಿ ಯೋಜನೆಯನ್ನು ಮಂಗಳೂರು ನಗರದಲ್ಲಿ ಉದ್ಘಾಟಿಸಲು ಮತ್ತು ನಾಡಿನಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ 200 ಯೂನಿಟ್‌ವರೆಗಿನ ಉಚಿತ ವಿದ್ಯುತ್ ಯೋಜನೆಯಾದ ಗೃಹ ಜ್ಯೋತಿಯನ್ನು ಕಲಬುರಗಿ ನಗರದಲ್ಲಿ ಅದ್ಧೂರಿಯಾಗಿ ಉದ್ಘಾಟನೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.