AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಪೊರೇಟ್ ಕುಳಗಳಿಗೆ ನೀಡಿರುವ 10 ಲಕ್ಷ ಕೋಟಿ ಸಾಲ ವಸೂಲು ಮಾಡಿಲ್ಲ; ರೈತರಿಗೆ ಸಾಲ ನೀಡಿ, ಆರ್ಥಿಕತೆಯೇನೂ ಮುಳುಗುವುದಿಲ್ಲ -ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

Siddaramaiah Letter to Yediyurappa: ಕಾರ್ಪೊರೇಟ್ ಕುಳಗಳಿಗೆ ನೀಡಿರುವ 10 ಲಕ್ಷ ಕೋಟಿ ಸಾಲ ವಸೂಲು ಮಾಡಿಲ್ಲ; ರೈತರಿಗೆ ಸಾಲ ನೀಡಿ, ಆರ್ಥಿಕತೆಯೇನೂ ಮುಳುಗುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕಾರ್ಪೊರೇಟ್ ಕುಳಗಳಿಗೆ ನೀಡಿರುವ 10 ಲಕ್ಷ ಕೋಟಿ ಸಾಲ ವಸೂಲು ಮಾಡಿಲ್ಲ; ರೈತರಿಗೆ ಸಾಲ ನೀಡಿ, ಆರ್ಥಿಕತೆಯೇನೂ ಮುಳುಗುವುದಿಲ್ಲ -ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
ಸಿದ್ದರಾಮಯ್ಯ
ಸಾಧು ಶ್ರೀನಾಥ್​
|

Updated on: Apr 30, 2021 | 12:57 PM

Share

ಬೆಂಗಳೂರು: ರಾಜ್ಯದಲ್ಲಿ ಈಗ ಕೊರೊನಾ ಸೋಂಕಿನಿಂದಾಗಿ ಲಾಕ್‍ಡೌನ್ ಹೇರಿಕೆ ಮಾಡಿರುವುದರಿಂದ ದುಡಿಯುವ ವರ್ಗದ ಜನ ಈಗಾಗಲೇ ಬಸವಳಿದು ಹೋಗಿದ್ದಾರೆ. ಅವರಿಗೆ ನ್ಯಾಯಯುತವಾದ ಆರ್ಥಿಕ ಪ್ಯಾಕೇಜನ್ನು ಘೋಷಿಸುವ ಮೂಲಕ ಬಿಕ್ಕಟ್ಟಿನಲ್ಲಿರುವ ರಾಜ್ಯದ ದುಡಿಯುವ ಸಮುದಾಯಗಳ ಸಂಕಷ್ಟವನ್ನು ಹೋಗಲಾಡಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಜೊತೆಗೆ ಇನ್ನೂ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.

ಸಿದ್ದರಾಮಯ್ಯ ಅವರ ಸಲಹೆಗಳು: * ಉತ್ತರ ಕರ್ನಾಟಕವೂ ಸೇರಿದಂತೆ ಅನೇಕ ಜಿಲ್ಲೆಗಳ ಜನ ಬೇಸಿಗೆಯಲ್ಲಿ ನಗರಗಳಿಗೆ ವಲಸೆ ಹೋಗಿ ಕೂಲಿ ನಾಲಿ ಮಾಡಿ ಒಂದಿಷ್ಟು ಹಣ ಸಂಪಾದಿಸಿ ಅದನ್ನು ಮುಂಗಾರಿನ ಕೃಷಿ ಕೆಲಸಗಳಿಗೆ ವಿನಿಯೋಗಿಸುತ್ತಾರೆ. ಈಗ ಲಾಕ್ ಡೌನ್ ಹೇರಿಕೆ ಮಾಡಿರುವುದರಿಂದ ಅವರ ದುಡಿಮೆ ಸಂಪೂರ್ಣ ಹಾಳಾಗಿದೆ. ದುಡಿಯಲೆಂದು ಬಂದವರು ಮರಳಿ ವಾಪಸ್ಸು ಹೋಗಿದ್ದಾರೆ. ಆದ್ದರಿಂದ ಸರ್ಕಾರ ಈ ಎಲ್ಲ ರೈತಾಪಿ ಕುಟುಂಬಗಳಿಗೆ ಬೀಜ, ಗೊಬ್ಬರ, ಔಷಧ ಮುಂತಾದವುಗಳನ್ನು ಉಚಿತವಾಗಿ ವಿತರಿಸಬೇಕು.

* ರಾಜ್ಯದಲ್ಲಿ ಸುಮಾರು 1.30 ಲಕ್ಷ ಬಿ.ಪಿ.ಎಲ್. ವರ್ಗಕ್ಕೆ ಸೇರಿದ ಕುಟುಂಬಗಳಿವೆ. ಈ ಕುಟುಂಬಗಳಿಗೆ ಸೇರಿದ ಬಹುಪಾಲು ಜನರು ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿದ್ದಾರೆ. ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಸಂಖ್ಯೆ ಸುಮಾರು 1.5 ಕೋಟಿಗಳಷ್ಟಿದೆ. ಎಲ್ಲ ದುಡಿಯುವ ವರ್ಗಗಳು, ಸಮುದಾಯಗಳು ಹಾಗೂ ಬಿ.ಪಿ.ಎಲ್ ವರ್ಗದಡಿ ಬರುವ ಕುಟುಂಬಗಳು ದುಡಿಮೆ ಇಲ್ಲದೆ ಆರ್ಥಿಕ ಚೈತನ್ಯ ಕಳೆದುಕೊಂಡು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ ಅವರೆಲ್ಲರಿಗೂ  ಪ್ರತಿ ತಿಂಗಳು ಕನಿಷ್ಟ 10000 ಸಾವಿರ ರೂಪಾಯಿಗಳ ಆರ್ಥಿಕ ಪ್ಯಾಕೇಜನ್ನು ಈ ಕೂಡಲೇ ಘೋಷಿಸಬೇಕು.

ರಾಜ್ಯದಲ್ಲಿ 87 ಲಕ್ಷ ರೈತಾಪಿ ಕುಟುಂಬಗಳಿವೆ. ರೈತರಲ್ಲಿ ಸಣ್ಣ ,ಅತಿ ಸಣ್ಣ  ಮತ್ತು ಮಧ್ಯಮ ಪ್ರಮಾಣದ ಹಿಡುವಳಿಗಳನ್ನು ಹೊಂದಿರುವ ಕಟುಂಬಗಳು ಶೇ. 90 ರಷ್ಟಿವೆ.  ಬಹುಪಾಲು ಈ ಕುಟುಂಬಗಳೂ ಸಹ ಬಿ.ಪಿ.ಎಲ್ ವರ್ಗದಡಿಯೇ ಇವೆ. ಹಾಗಾಗಿ ಈ ರೈತಾಪಿ ಕುಟುಂಬಗಳಿಗೂ ಸಹ ತಿಂಗಳಿಗೆ 10000 ರೂ ಗಳ ಪ್ಯಾಕೇಜನ್ನು ಘೋಷಿಸಬೇಕು.

* ರಾಜ್ಯದ ಕೃಷಿಕರು ಸಂಕಷ್ಟದಲ್ಲಿರುವುದರಿಂದ ಅವರಿಗೆ ಸಹಕಾರಿ ಬ್ಯಾಂಕುಗಳು, ವಾಣಿಜ್ಯ ಬ್ಯಾಂಕುಗಳ ಮೂಲಕ ಬಡ್ಡಿರಹಿತ ಕೃಷಿ ಸಾಲಗಳನ್ನು ಕನಿಷ್ಟ 5 ಲಕ್ಷ ರೂಗಳವರೆಗೆ ನೀಡಬೇಕು.

ಕಾರ್ಪೊರೇಟ್ ಕುಳಗಳಿಗೆ ನೀಡಿರುವ 10 ಲಕ್ಷ ಕೋಟಿ ಸಾಲ ವಸೂಲು ಮಾಡಿಲ್ಲ:

* ಇದನ್ನು ಮಾಡುವುದು ಕಷ್ಟದ ವಿಚಾರವೇನೂ ಅಲ್ಲ. ದೇಶದ ದೊಡ್ಡ ದೊಡ್ಡ ಕಾರ್ಪೊರೇಟ್ ಕುಳಗಳಿಗೆ ಸಂಬಂಧಿಸಿದ ಸುಮಾರು 10.5 ಲಕ್ಷ ಕೋಟಿಗೂ ಹೆಚ್ಚು ಸಾಲವನ್ನು ವಸೂಲು ಮಾಡದೆ ಕೈ ಬಿಡಲಾಗಿದೆ. ಅಂಥದ್ದರಲ್ಲಿ ರೈತಾಪಿ ವರ್ಗಗಳಿಗೆ ನೀಡುವ ಕೆಲವು ಸಾವಿರ ಕೋಟಿಗಳಷ್ಟು ಬಡ್ಡಿ ರಹಿತ ಸಾಲದಿಂದ ದೇಶದ ಆರ್ಥಿಕತೆ ಮುಳುಗಿ ಹೋಗುವುದಿಲ್ಲ. ಬದಲಿಗೆ ಆರ್ಥಿಕತೆ ಸುಧಾರಣೆಯಾಗುತ್ತದೆ. ಆದ್ದರಿಂದ ಬಡ್ಡಿ ರಹಿತ ಸಾಲವನ್ನು ನೀಡಿ ರೈತರ ನೆರವಿಗೆ ನಿಲ್ಲಬೇಕು.

* ಗ್ರಾಮೀಣ ಪ್ರದೇಶಗಳಿಗೆ ವ್ಯಾಪಕ ವಲಸೆ ಹೋಗುತ್ತಿರುವುದರಿಂದ ಕಳೆದ ವರ್ಷದಂತೆ ಈ ವರ್ಷವೂ ಸಹ ಕೃಷಿ ಕ್ಷೇತ್ರದ ಮೇಲೆ ಒತ್ತಡ ಹೆಚ್ಚುತ್ತದೆ. ಆದ್ದರಿಂದ ಕೃಷಿ ಅವಶ್ಯಕ ವಸ್ತುಗಳಾದ ಬೀಜ, ಔಷಧ, ರಸಗೊಬ್ಬರಗಳ ಪೂರೈಕೆಯನ್ನು, ದಾಸ್ತಾನನ್ನು ಅಗತ್ಯಕ್ಕೆ ಅನುಗುಣವಾಗಿ ಹೆಚ್ಚಿಸಬೇಕು.

* ದಿನಾಂಕ: 15-04-21 ರಂದು ರಸಗೊಬ್ಬರಗಳ ಬೆಲೆಗಳನ್ನು ಅದರಲ್ಲೂ ಮುಖ್ಯವಾಗಿ ಡಿ.ಎ.ಪಿ. ಕಾಂಪ್ಲೆಕ್ಸ್‍ಗಳ ಬೆಲೆಗಳನ್ನು ಕ್ವಿಂಟಾಲಿಗೆ  ರೂ.1,250/- ರಿಂದ ರೂ.1,400/- ಗಳವರೆಗೆ ಹೆಚ್ಚಿಸಿ ಸರ್ಕಾರ ಆದೇಶ ಮಾಡಿದೆ. ಸದರಿ ಆದೇಶವನ್ನು ಹಿಂಪಡೆದು ಹಳೆಯ ದರಗಳಲ್ಲೇ ಮಾರಾಟ ಮಾಡಬೇಕು. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ರಿಯಾಯಿತಿ ದರಗಳಲ್ಲಿ ಸಾಧ್ಯವಾದರೆ ಉಚಿತವಾಗಿ ರಸಗೊಬ್ಬರಗಳನ್ನು ವಿತರಿಸಬೇಕು.

* ನಗರಗಳಿಂದ ಗ್ರಾಮಗಳಿಗೆ ವಲಸೆ ಹೊರಟ ಕಾರ್ಮಿಕರಿಗೆ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಯೋಜನೆಯಡಿ (ನರೇಗಾ) ಯೋಜನೆಯಡಿ ಕನಿಷ್ಟ 150 ಮಾನವ ದಿನಗಳಷ್ಟು ಮತ್ತು ಅದಕ್ಕೂ ಹೆಚ್ಚು ಬೇಡಿಕೆ ಇರುವ ಕಡೆ ಬೇಡಿಕೆಯನ್ನು ಆಧರಿಸಿ ಉದ್ಯೋಗ ನೀಡಬೇಕು.

ಹಿಂದೆ ನಿಮ್ಮದೇ ಸರ್ಕಾರವಿದ್ದಾಗ, ಮನಮೋಹನ ಸಿಂಗರು ಪ್ರಧಾನಮಂತ್ರಿಗಳಾಗಿದ್ದಾಗ, ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೆ 150 ಮಾನವ ದಿನಗಳಿಗೆ ಹೆಚ್ಚಿಸಿ ಎಂದಾಗ ಅವರು ಅದಕ್ಕೆ ಸ್ಪಂದಿಸಿ ಬೇಡಿಕೆ ಈಡೇರಿಸಿದ್ದರು. ಈಗಲೂ ರಾಜ್ಯ ಸರ್ಕಾರ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು, ರಾಜ್ಯದ ಬಿ.ಜೆ.ಪಿ ಸಂಸದರುಗಳು ಈ ಕುರಿತು ಪ್ರಧಾನಿಗಳನ್ನು ಒತ್ತಾಯ ಮಾಡಿ ರಾಜ್ಯದ ಜನರ ನೆರವಿಗೆ ನಿಲ್ಲಬೇಕು ಎಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.

(Siddaramaiah writes Letter to chief minister bs Yediyurappa on the present covid 19 pandemic situation)

ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ನಿಯಂತ್ರಣ, ಚಿಕಿತ್ಸೆಗೆಂದು ಮುಖ್ಯಮಂತ್ರಿ ಯಡಿಯೂರಪ್ಪ- ಪ್ರಧಾನಿ ಮೋದಿಗೆ 11 ಸಲಹೆ ನೀಡಿದ ಸಿದ್ದರಾಮಯ್ಯ