ಯುವತಿಯಿದ್ದ ಪಿಜಿಯಲ್ಲಿ 9.20 ರೂ. ಲಕ್ಷ ಹಣ ಪತ್ತೆ! ಸಿಡಿ ಹಿಂದೆ ಉದ್ಯಮಿ ಕೈವಾಡ?

| Updated By: ಸಾಧು ಶ್ರೀನಾಥ್​

Updated on: Mar 18, 2021 | 11:20 AM

ನರೇಶ್ ಜೊತೆ ನಾಲ್ವರು ನಾಪತ್ತೆ ಆಗಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ನರೇಶ್​, ಶ್ರವಣ್ ಹಾಗೂ ಯುವತಿಯ ಜೊತೆಗೆ ಓರ್ವ ಉದ್ಯಮಿಯೂ ನಾಪತ್ತೆಯಾಗಿರುವ ಸಂಗತಿ ಬಯಲಾಗಿದೆ. ಬೆಂಗಳೂರಿನ ಜೆ.ಪಿ.ನಗರದ ನಿವಾಸಿಯಾಗಿರುವ ಉದ್ಯಮಿಯೊಬ್ಬರು ನಾಪತ್ತೆಯಾಗಿದ್ದು, ಸಿಡಿ ಕೇಸ್​ನಲ್ಲಿ ನರೇಶ್​ಗೆ ನೆರವು ನೀಡಿದ್ದ ಎಂಬ ಆರೋಪ ಕೇಳಿಬಂದಿದೆ.

ಯುವತಿಯಿದ್ದ ಪಿಜಿಯಲ್ಲಿ 9.20 ರೂ. ಲಕ್ಷ ಹಣ ಪತ್ತೆ! ಸಿಡಿ ಹಿಂದೆ ಉದ್ಯಮಿ ಕೈವಾಡ?
ಸಿಡಿಯಲ್ಲಿದ್ದ ಯುವತಿ
Follow us on

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಬಿಡುಗಡೆ ಕೇಸ್​ಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್​ಐಟಿ ಅಧಿಕಾರಿಗಳಿಗೆ ಯುವತಿ ಪಿಜಿಯಲ್ಲಿ ₹9.20 ಲಕ್ಷ ಮೌಲ್ಯದ ಹಣ ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿದೆ. ಈ ಕುರಿತು ಟಿವಿ9ಗೆ ಎಸ್‌ಐಟಿ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದ್ದು, ಸಿಡಿಯಲ್ಲಿದ್ದ ಯುವತಿಗೆ ₹25 ಲಕ್ಷ ಸಂದಾಯವಾಗಿದೆ. ಅದರಲ್ಲಿ ಯುವತಿ ₹23 ಲಕ್ಷ ವ್ಯವಹಾರ ನಡೆಸಿರುವುದು ತಿಳಿದುಬಂದಿದೆ ಎನ್ನುವುದೂ ಗೊತ್ತಾಗಿದೆ. ಇದಕ್ಕೂ ಮುನ್ನ ಯುವತಿ ಪಿಜಿಯಲ್ಲಿ ₹23 ಲಕ್ಷ ನಗದು ಪತ್ತೆಯಾಗಿತ್ತು ಎಂದು ಕೆಲವೆಡೆ ಸುದ್ದಿಯಾಗಿತ್ತಾದರೂ ಇದೀಗ ಟಿವಿ9 ಗೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು ₹23 ಲಕ್ಷ ವ್ಯವಹಾರದ ಪೈಕಿ ₹9.20 ಲಕ್ಷ ಪತ್ತೆಯಾಗಿದೆ ಎಂದಿದ್ದಾರೆ. ಆದರೆ ಇದಿಷ್ಟೇ ಮೊತ್ತ ಯುವತಿಗೆ ಸಂದಾಯವಾಗಿರುವುದು ಎನ್ನುವ ಹಾಗಿಲ್ಲ; ಅದು ಕೋಟಿಗಳ ವ್ಯವಹಾರವೂ ಆಗಿರಬಹುದು ಎಂದು ಉನ್ನತ ಅಧಿಕಾರಿಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದಲ್ಲದೇ ನರೇಶ್ ಮನೆಯಲ್ಲಿ ₹18.5 ಲಕ್ಷ ಚಿನ್ನ ಖರೀದಿ ಮಾಡಿರುವ ರಶೀದಿ ಪತ್ತೆಯಾಗಿದ್ದು, ಲ್ಯಾಪ್‌ಟಾಪ್, ಪೆನ್​ಡ್ರೈವ್ ಸೇರಿ ಇತರ ದಾಖಲೆಗಳು ತನಿಖಾ ತಂಡಕ್ಕೆ ಲಭ್ಯವಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಿತ್, ಅರುಣ್, ಲಕ್ಷ್ಮೀಪತಿ, ಯುವತಿಯ ಬಾಯ್‌ಫ್ರೆಂಡ್ ಆಕಾಶ್, ಚೇತನ್​ ಎಂಬ ಆರು ಜನರನ್ನು ವಶಕ್ಕೆ ಪಡೆದಿರುವ ವಿಶೇಷ ತನಿಖಾ ತಂಡ ವಿಚಾರಣೆಯನ್ನು ಚುರುಕುಗೊಳಿಸಿದೆ.

ಸಿಡಿ ಬಿಡುಗಡೆಗೂ ಮುನ್ನ ಐವರ ಸಭೆ
ಇನ್ನು ಸಿಡಿ ಬಿಡುಗಡೆ ಸೂತ್ರಧಾರರ ಸಂಪರ್ಕದಲ್ಲಿದ್ದವರ ಬೆನ್ನು ಬಿದ್ದಿರುವ ಎಸ್​ಐಟಿ ಸುಮಾರು 30ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಸಿಡಿ ಕಿಂಗ್​ಪಿನ್​ಗಳಾದ ನರೇಶ್, ಶ್ರವಣ್, ಯುವತಿ, ಲಕ್ಷ್ಮೀಪತಿ ಮತ್ತು ಆಕಾಶ್ ಸಿಡಿ ಬಿಡುಗಡೆ ದಿನ ಆರ್​ಟಿ ನಗರದಲ್ಲಿ ಸಭೆ ನಡೆಸಿದ್ದಾರೆ ಎನ್ನುವ ವಿಚಾರವೂ ಬೆಳಕಿಗೆ ಬಂದಿದೆ. ಈ ಐದು ಜನರ ಮೊಬೈಲ್​ ಲೊಕೇಷನ್ ಸುಮಾರು 2 ಗಂಟೆಗಳ ಕಾಲ ಒಂದೇ ಟವರ್​ನಲ್ಲಿತ್ತು ಎಂಬ ಸಂಗತಿ ಬಯಲಾಗಿರುವ ಕಾರಣ ಐವರ ನಿಕಟ ಸಂಪರ್ಕದಲ್ಲಿರುವವರನ್ನು ಎಸ್​ಐಟಿ ವಿಚಾರಣೆಗೆ ಒಳಪಡಿಸಿದೆ.

ಸಿಡಿ ಬಿಡುಗಡೆಗೆ ಸಂಬಂಧಿಸಿದ ಪ್ರಮುಖ ಆರೋಪಗಳಿಗೆ ದೊಡ್ಡ ಮಟ್ಟದ ಹಣ ಸಂದಾಯವಾಗಿದೆ ಎನ್ನುವ ಅನುಮಾನ ಬಲವಾಗುತ್ತಿದ್ದು, ಆರೋಪಿ ಶ್ರವಣ್‌ ಅಣ್ಣ ಚೇತನ್ ಅಕೌಂಟ್​ಗೆ ₹20 ಲಕ್ಷಕ್ಕೂ ಹೆಚ್ಚು ಹಣ ಸಂದಾಯವಾಗಿರುವುದು ಪತ್ತೆಯಾಗಿದೆ. ಈ ಕಾರಣದಿಂದ ಎಸ್​ಐಟಿ ಅಧಿಕಾರಿಗಳು ಹಣ ಎಲ್ಲಿಂದ ಬಂತು? ಹಣವನ್ನ ಹಾಕಿರುವ ವ್ಯಕ್ತಿ ಯಾರು? ಎಲ್ಲಿಂದ ಹಣ ಹಾಕಿದ್ದಾರೆ? ಯಾವ ಕಾರಣಕ್ಕೆ ಹಾಕಲಾಗಿದೆ? ₹20 ಲಕ್ಷ ಹಣದ ಮೂಲ ಯಾವುದು? ಎಂದು ಹುಡುಕಾಟ ನಡೆಸುತ್ತಿದ್ದಾರೆ. ಕೆಲ ಮೂಲಗಳ ಪ್ರಕಾರ ಐದೈದು ಲಕ್ಷದಂತೆ ಒಟ್ಟು ನಾಲ್ಕು ಬಾರಿ ಶ್ರವಣ್ ಅಣ್ಣ ಚೇತನ್ ಖಾತೆ​ಗೆ ಹಣ ಸಂದಾಯವಾಗಿದ್ದು, ಅಕೌಂಟ್ ಟು ಅಕೌಂಟ್ ವರ್ಗಾವಣೆ ಆಗಿರುವುದು ಗೊತ್ತಾಗಿದ್ದು, ಹಲವು ಬ್ಯಾಂಕ್ ಖಾತೆಗಳಿಂದ ಹಣ ಸಂದಾಯವಾಗಿರುವುದಕ್ಕೆ ದಾಖಲೆ ಲಭ್ಯವಾಗಿದೆ. ಹೀಗಾಗಿ ಎಸ್​ಐಟಿಯಿಂದ ಐವರ ಬ್ಯಾಂಕ್​ ಖಾತೆಗಳ ಪರಿಶೀಲನೆ ನಡೆಯುತ್ತಿದೆ.

ಲಕ್ಷಗಟ್ಟಲೆ ವ್ಯವಹಾರದ ಹಿಂದೆ ಯಾರಿದ್ದಾರೆ?
ಏತನ್ಮಧ್ಯೆ ಆರೋಪಿ ನರೇಶ್​ ಬ್ಯಾಂಕ್​ ಖಾತೆಯ ಇಂಚಿಂಚೂ ಮಾಹಿತಿ ಕಲೆಹಾಕುತ್ತಿರುವ ಎಸ್​ಐಟಿ ಹಣ ಡೆಪಾಸಿಟ್​ ಮಾಡಿದವರಿಗಾಗಿ ಹುಡುಕಾಟ ನಡೆಸುತ್ತಿದ್ದು, ಅವರೇನಾದರೂ ಪತ್ತೆಯಾದರೆ ಪ್ರಕರಣಕ್ಕೆ ದೊಡ್ಡ ತಿರುವು ಲಭಿಸುವ ಸಾಧ್ಯತೆ ಇದೆ. ನರೇಶ್ ಗೌಡ ಜೀಪ್ ಬುಕ್ ಮಾಡಲು ಅಡ್ವಾನ್ಸ್​ ಕೊಟ್ಟಿರುವ ಬಗ್ಗೆ, 2 ಬಾರಿ ಕಾರು ಬುಕ್ ಮಾಡಿ ಮತ್ತೆ ಕ್ಯಾನ್ಸಲ್ ಮಾಡಿರುವ ಬಗ್ಗೆ, ₹10 ಲಕ್ಷ ಮೌಲ್ಯದ ಚಿನ್ನದ ಚೈನ್ ಖರೀದಿಸಿರುವ ಬಗ್ಗೆ ಹಾಗೂ ಮೈಸೂರು, ಕೊಡಗು, ಸೋಮವಾರಪೇಟೆ ಭಾಗದಲ್ಲಿ ಜಮೀನು ಖರೀದಿಗೆ ಹುಡುಕಾಟ ನಡೆಸಿದ್ದ ಬಗ್ಗೆ ಮಾಹಿತಿ ಸಿಕ್ಕಿರುವುದರಿಂದ ಈತನ ಬೆನ್ನ ಹಿಂದೆ ಯಾರಿರಬಹುದು ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಬೆಂಗಳೂರಿನ ಉದ್ಯಮಿ ನಾಪತ್ತೆ!
ಇನ್ನೊಂದೆಡೆ, ಇದಕ್ಕೆ ಸಂಬಂಧಿಸಿದಂತೆ ನರೇಶ್ ಜೊತೆ ನಾಲ್ವರು ನಾಪತ್ತೆ ಆಗಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ನರೇಶ್​, ಶ್ರವಣ್ ಹಾಗೂ ಯುವತಿಯ ಜೊತೆಗೆ ಓರ್ವ ಉದ್ಯಮಿಯೂ ನಾಪತ್ತೆಯಾಗಿರುವ ಸಂಗತಿ ಬಯಲಾಗಿದೆ. ಬೆಂಗಳೂರಿನ ಜೆ.ಪಿ.ನಗರದ ನಿವಾಸಿಯಾಗಿರುವ ಉದ್ಯಮಿಯೊಬ್ಬರು ನಾಪತ್ತೆಯಾಗಿದ್ದು, ಸಿಡಿ ಕೇಸ್​ನಲ್ಲಿ ನರೇಶ್​ಗೆ ನೆರವು ನೀಡಿದ್ದ ಎಂಬ ಆರೋಪ ಕೇಳಿಬಂದಿದೆ. ರಿಯಲ್ ಎಸ್ಟೇಟ್​, ಗುತ್ತಿಗೆದಾರನ ಕೆಲಸ ಮಾಡ್ತಿದ್ದ ಉದ್ಯಮಿ ನರೇಶ್ ಜತೆ ಒಂದೇ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:
ರಮೇಶ್​ ಜಾರಕಿಹೊಳಿ ‘ಸಿಡಿ’ ಮಾಸ್ಟರ್​ ಮೈಂಡ್​ ಮನೆ ಮೇಲೆ ಎಸ್​ಐಟಿ ಅಧಿಕಾರಿಗಳ ದಾಳಿ 

ಅಶ್ಲೀಲ ಸಿಡಿಯಲ್ಲಿ ಅವಾಚ್ಯ ಶಬ್ದಗಳ ಬಳಕೆ; ಕನ್ನಡಿಗರನ್ನು ನಿಂದಿಸಿದ್ದಕ್ಕಾಗಿ ರಮೇಶ್​ ಜಾರಕಿಹೊಳಿ ವಿರುದ್ಧ ದೂರು ದಾಖಲು

Published On - 11:18 am, Thu, 18 March 21