AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಸರ್ಕಾರ ಅನುದಾನ ಒದಗಿಸಿದರೂ ವೆಚ್ಚ ಭರಿಸಲು ರಾಜ್ಯ ಸರ್ಕಾರ ನಕಾರ; ಕನಸಾಗಿಯೇ ಉಳಿಯಲಿದೆಯಾ ಕೋಲಾರದ ರೈಲ್ವೆ ವರ್ಕ್​ಶಾಪ್ ಯೋಜನೆ!

ಜಿಲ್ಲೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವರ್ಕ್​ಶಾಪ್ ಕಾರ್ಖಾನೆಗೆ ಅಗತ್ಯ ಜಾಗ ಹಾಗೂ ಯೋಜನೆ ವೆಚ್ಚದ ಶೇ.50ರಷ್ಟನ್ನು ರಾಜ್ಯ ಸರ್ಕಾರ ಭರಿಸಬೇಕಿದೆ. ಆದರೆ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಕಾರ್ಖಾನೆ ನಿರ್ಮಾಣ ಘೋಷಣೆಯಾಗಿಯೇ ಉಳಿಯುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.

ಕೇಂದ್ರ ಸರ್ಕಾರ ಅನುದಾನ ಒದಗಿಸಿದರೂ ವೆಚ್ಚ ಭರಿಸಲು ರಾಜ್ಯ ಸರ್ಕಾರ ನಕಾರ; ಕನಸಾಗಿಯೇ ಉಳಿಯಲಿದೆಯಾ ಕೋಲಾರದ ರೈಲ್ವೆ ವರ್ಕ್​ಶಾಪ್ ಯೋಜನೆ!
ರೈಲ್ವೆ ವರ್ಕ್​ಶಾಪ್ ಮಾಡಬೇಕಾದ ಜಾಗ
sandhya thejappa
|

Updated on: Mar 18, 2021 | 11:06 AM

Share

ಕೋಲಾರ: ಜಿಲ್ಲೆಯಲ್ಲಿ ರೈಲ್ವೆ ವರ್ಕ್​ಶಾಪ್ ನಿರ್ಮಿಸಲು ಕೇಂದ್ರ ಸರ್ಕಾರ ಅನುದಾನ ಒದಗಿಸಿದರೂ, ಕಾರ್ಖಾನೆ ನಿರ್ಮಾಣಕ್ಕೆ ಜಾಗ ಹಾಗೂ ತನ್ನ ಪಾಲಿನ ಶೇ.50ರಷ್ಟು ಹಣ ನೀಡಲು ರಾಜ್ಯ ಸರ್ಕಾರ ಮುಂದಾಗಿಲ್ಲ. ಈ ಹಿಂದೆ ಯುಪಿಎ ಸರ್ಕಾರದಲ್ಲಿ ಜಿಲ್ಲೆಗೆ ರೈಲ್ವೆ ಕೋಚ್ ಫ್ಯಾಕ್ಟರಿ ಘೋಷಣೆ ಮಾಡಲಾಗಿದ್ದರೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯೋಜನೆಯನ್ನು ರದ್ದುಗೊಳಿಸಿತ್ತು. ಕೋಚ್ ಫ್ಯಾಕ್ಟರಿ ಬದಲಿಗೆ ವರ್ಕ್ಶಾಪ್ ಕಾರ್ಖಾನೆಯನ್ನು ಘೋಷಿಸಿತ್ತು. ಅದರಂತೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ರೈಲ್ವೆ ವರ್ಕ್​ಶಾಪ್ ನಿರ್ಮಿಸಲು ಕೇಂದ್ರ ಸರ್ಕಾರ ಈಗಾಗಲೇ 2020-21 ನೇ ಸಾಲಿನ ಬಜೆಟ್​ನಲ್ಲಿ 495.3 ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು. ಜಿಲ್ಲೆಯಲ್ಲಿ ರೈಲ್ವೆ ವರ್ಕ್​ಶಾಪ್ ನಿರ್ಮಾಣವಾದರೆ ಎರಡು ಸಾವಿರಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿತ್ತು. ಆದರೆ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡದಿರುವುದು ಕಂಡುಬಂದಿದೆ.

ಜಿಲ್ಲೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವರ್ಕ್​ಶಾಪ್ ಕಾರ್ಖಾನೆಗೆ ಅಗತ್ಯ ಜಾಗ ಹಾಗೂ ಯೋಜನೆ ವೆಚ್ಚದ ಶೇ.50ರಷ್ಟನ್ನು ರಾಜ್ಯ ಸರ್ಕಾರ ಭರಿಸಬೇಕಿದೆ. ಆದರೆ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಕಾರ್ಖಾನೆ ನಿರ್ಮಾಣ ಘೋಷಣೆಯಾಗಿಯೇ ಉಳಿಯುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.

ರೈಲ್ವೆ ಯೋಜನೆಗೆ ಬೇಕಿರುವುದು 560 ಎಕರೆ ಭೂಮಿ; ಇರುವುದು 315 ಎಕರೆ ಜಾಗ ರೈಲ್ವೆ ಇಲಾಖೆಯಿಂದ ಶ್ರೀನಿವಾಸಪುರದಲ್ಲಿ ನಿರ್ಮಿಸಲು ಉದ್ದೇಶಸಿರುವ ವರ್ಕ್​ಶಾಪ್ ಕಾರ್ಖಾನೆಗೆ 560 ಎಕರೆ ಜಾಗ ಬೇಕಾಗಿದೆ. ಯೋಜನೆ ಪ್ರಕಾರ ಅಗತ್ಯವಾದ ಜಾಗವನ್ನು ರಾಜ್ಯ ಸರ್ಕಾರ ನೀಡಬೇಕಿದೆ. ಆದರೆ ರಾಜ್ಯ ಸರ್ಕಾರ ಕೇವಲ 315 ಎಕರೆ ಜಾಗ ಸರ್ಕಾರಿ ಜಾಗ ಲಭ್ಯವಿದೆ ಎಂದು ಖಚಿತಪಡಿಸಿದೆ. ಉಳಿದ ಬಾಕಿ ಜಾಗವನ್ನು ರೈತರಿಂದ ಭೂಸ್ವಾಧೀನ ಪಡಿಸಿಕೊಂಡು ನೀಡಬೇಕಿದೆ. ಆದರೆ ಅದಕ್ಕೆ ರಾಜ್ಯ ಸರ್ಕಾರ ಸದ್ಯದ ಪರಿಸ್ಥಿತಿಯಲ್ಲಿ ಸಿದ್ಧವಿಲ್ಲ.

2014 ರಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣಕ್ಕೆ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು

ಯೋಜನೆಯ ಅರ್ಧದಷ್ಟು ವೆಚ್ಚ ಭರಿಸಲು ಸಾಧ್ಯವಿಲ್ಲ ಎಂದಿರುವ ರಾಜ್ಯ ಸರ್ಕಾರ ಕಾರ್ಖಾನೆ ನಿರ್ಮಾಣಕ್ಕೆ ತಗಲುವಂತಹ ವೆಚ್ಚವನ್ನು ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರ 50:50 ರ ಅನುಪಾತದಲ್ಲಿ ವೆಚ್ಚ ಭರಿಸಬೇಕಾಗಿದೆ. ಆದರೆ ಯೋಜನೆಗೆ ತನ್ನ ಪಾಲಿನ ಶೇ.50ರಷ್ಟು ಹಣವನ್ನು ಭರಿಸಲು ರಾಜ್ಯ ಸರ್ಕಾರ ಸಿದ್ಧವಿಲ್ಲವೆಂದು ಲೋಕಸಭೆಯಲ್ಲಿ ಸಂಸದ ಎಸ್.ಮುನಿಸ್ವಾಮಿ ಅವರು ಕೇಳಿರುವ ಚುಕ್ಕೆ ಗುರುತಿನ ಪ್ರಶ್ನೆಗೆ ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಉತ್ತರ ನೀಡಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿದ್ದ ಯೋಜನೆ, ಬಿಜೆಪಿ ಕಾಲದಲ್ಲಿ ನೆನೆಗುದಿಗೆ ಬಿತ್ತು ಯುಪಿಎ ಸರ್ಕಾರದಲ್ಲಿ ರೈಲ್ವೆ ಖಾತೆ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ ಅವರು ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ 2012-13ನೇ ಸಾಲಿನ ಬಜೆಟ್​ನಲ್ಲಿ ಯೋಜನೆಯನ್ನು ಬಜೆಟ್​ನಲ್ಲಿ ಘೋಷಿಸಲಾದ್ದರೂ ಜಾರಿಯಾಗಿರಲಿಲ್ಲ. ಆದರೆ 2014 ರಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಖಾತೆ ಸಚಿವರಾಗಿದ್ದಾಗ ಚುನಾವಣೆ ಹೊಸ್ತಿಲಲ್ಲಿ ಶ್ರೀನಿವಾಸಪುರ ತಾಲೂಕಿನಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣಕ್ಕೆ ರಾಜ್ಯದ ಸಿಎಂ ಸಿದ್ದರಾಮಯ್ಯನವರಿಂದ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಮೂಲಕ ಫ್ಯಾಕ್ಟರಿಯಿಂದ 2 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಅಂದಾಜಿಸಲಾಗಿತ್ತಾದರೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಹಿನ್ನೆಲೆಯಲ್ಲಿ ಯೋಜನೆ ಕಾಗದದಲ್ಲಿಯೇ ಉಳಿಯಿತು.

2018ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಸಂಸದರು ಆಯ್ಕೆಯಾದ ಬಳಿಕ ಕೋಚ್ ಫ್ಯಾಕ್ಟರಿ ಯೋಜನೆ ಕೈಬಿಟ್ಟು, ವರ್ಕ್​ಶಾಪ್ ಯೋಜನೆ ಜಾರಿಗೊಳಿಸಲಾಗಿದೆ. ಅದರಂತೆ 2020-21 ರ ಬಜೆಟ್​ನಲ್ಲಿ ಅನುದಾನ ಮೀಸಲಿಟ್ಟಿದ್ದು, 2 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಅಂದಾಜು ಮಾಡಲಾಗಿತ್ತು. ರಾಜ್ಯ ಸರ್ಕಾರದ ಸಹಕಾರ ದೊರೆಯದ ಹಿನ್ನೆಲೆಯಲ್ಲಿ ಯೋಜನೆ ಅನುಷ್ಠಾನ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ

ರೈಲ್ವೆಯಲ್ಲಿ ಖಾಸಗಿ ಹೂಡಿಕೆ ಅಷ್ಟೇ, ಸಂಪೂರ್ಣ ಖಾಸಗೀಕರಣ ಇಲ್ಲ ಎಂದ ಕೇಂದ್ರ ಸರ್ಕಾರ

ಹೆಜ್ಜಾಲ-ಚಾಮರಾಜನಗರ ರೈಲ್ವೆ ಯೋಜನೆಗೆ ಬೇಗ ಚಾಲನೆ ನೀಡಿ ಎಂದು 30 ಸೆಕೆಂಡ್​ನಲ್ಲಿ ಮನವಿ ಸಲ್ಲಿಸಿದ ಸಂಸದೆ ಸುಮಲತಾ!