ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್​ಗೆ ಎಸ್​ಐಟಿ ಮನವಿ: ರೆಡ್ ಕಾರ್ನರ್​ಗೂ ಇದಕ್ಕೂ ಏನು ವ್ಯತ್ಯಾಸ? ಇಲ್ಲಿದೆ ವಿವರ

| Updated By: Ganapathi Sharma

Updated on: May 04, 2024 | 2:19 PM

Blue Corner Notice; ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಬೇಕೆಂದು ವಿಶೇಷ ತನಿಖಾ ತಂಡದ ಅಧಿಕಾರಿಗಳು ಸಿಬಿಐ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹಾಗಾದರೆ, ಬ್ಲೂ ಕಾರ್ನರ್ ನೋಟಿಸ್ ಎಂದರೇನು?, ಇದಕ್ಕೂ ರೆಡ್ ಕಾರ್ಡ್ ನೋಟಿಸ್​​​ಗೂ ಏನು ವ್ಯತ್ಯಾಸ? ವಿವರ ಇಲ್ಲಿದೆ.

ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್​ಗೆ ಎಸ್​ಐಟಿ ಮನವಿ: ರೆಡ್ ಕಾರ್ನರ್​ಗೂ ಇದಕ್ಕೂ ಏನು ವ್ಯತ್ಯಾಸ? ಇಲ್ಲಿದೆ ವಿವರ
ಪ್ರಜ್ವಲ್ ರೇವಣ್ಣ
Follow us on

ಬೆಂಗಳೂರು, ಮೇ 4: ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಬ್ಲೂ ಕಾರ್ನರ್ (Blue Corner Notice) ನೋಟಿಸ್​​ಗೆ ಎಸ್ಐಟಿ (SIT) ಅಧಿಕಾರಿಗಳು ಸಿಬಿಐ ಅಧಿಕಾರಿಗಳಿಗೆ ಇಂಟರ್ ಪೋಲ್ ಮೂಲಕ ಮನವಿ ಮಾಡಿದ್ದಾರೆ. ಬ್ಲೂ ಕಾರ್ನರ್ ನೋಟಿಸ್​ ಮೂಲಕ ಪ್ರಜ್ವಲ್ ಇರುವ ಸ್ಥಳ, ಚಟುವಟಿಕೆಗಳು ಸೇರಿದಂತೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಪ್ರಯತ್ನ ಮಾಡಬಹುದಾಗಿದೆ. ಹೀಗಾಗಿ ಇಂಟರ್ ಪೋಲ್​​ನಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲು ತಯಾರಿ ನಡೆಯುತ್ತಿದೆ.

ಏನಿದು ಬ್ಲೂ ಕಾರ್ನರ್ ನೋಟಿಸ್?

ವಿದೇಶಗಳಲ್ಲಿರುವ ಆರೋಪಿಗಳ ಬಂಧನಕ್ಕಾಗಿ ಸಾಮಾನ್ಯವಾಗಿ ಸಿಬಿಐ ಇಂಟರ್​ಪೋಲ್ ಮೂಲಕ ರೆಡ್ ಕಾರ್ನರ್ ಹಾಗೂ ಬ್ಲೂ ಕಾರ್ನರ್ ನೋಟಿಸ್​ಗಳನ್ನು ಹೊರಡಿಸುತ್ತವೆ. ಸಾಮಾನ್ಯವಾಗಿ ಇಂಥ ಪ್ರಕರಣಗಳಲ್ಲಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗುತ್ತಿದೆ. ರೆಡ್ ಕಾರ್ನರ್ ನೋಟಿಸ್ ಅಂದರೆ, ಪ್ರಪಂಚದ ಯಾವುದೇ ಕಡೆಯಲ್ಲಿರುವ ಆರೋಪಿ ಅಥವಾ ಅಪರಾಧಿಯನ್ನು ಹಸ್ತಾಂತರಿಸಲು ಅಥವಾ ಅಂತಹುದೇ ಕಾನೂನು ಕ್ರಮ ಕೈಗೊಳ್ಳಲು ಮಾಡುವ ವಿನಂತಿಯಾಗಿದೆ. ಮತ್ತೊಂದೆಡೆಯಲ್ಲಿ, ಬ್ಲೂ ಕಾರ್ನರ್ ಮೂಲಕ ಇಂಟರ್‌ಪೋಲ್ ವಿದೇಶಿ ಸಂಸ್ಥೆಗಳ ಸಹಯೋಗದೊಂದಿಗೆ ಅಪರಾಧಿ / ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತದೆ. ಅಂದರೆ, ಇಂಟರ್‌ಪೋಲ್ ತನ್ನ ಯಾವುದೇ ಸದಸ್ಯ ರಾಷ್ಟ್ರದಿಂದ ಬ್ಲೂ ಕಾರ್ನರ್ ನೋಟಿಸ್ ಅನ್ನು ಜಾರಿಗೊಳಿಸಿ ಅಪರಾಧಿಯ ಗುರುತು, ಸ್ಥಳ ಅಥವಾ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಎಸ್​ಐಟಿ ಕೆಲವು ದಿನಗಳ ಹಿಂದಷ್ಟೇ ಲುಕ್​ಔಟ್ ನೋಟಿಸ್ ಜಾರಿಗೊಳಿಸಿತ್ತು. ಯಾವುದೇ ಒಂದು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಅಥವಾ ನಾಪತ್ತೆಯಾಗಿರುವ ಆರೋಪಿಯ ಪತ್ತೆಗೆ ತನಿಖಾ ಸಂಸ್ಥೆಗಳು ಅನುಸರಿಸುವ ಕ್ರಮ ಇದಾಗಿದೆ. ಇದನ್ನು ದೇಶದ ವಲಸೆ ಬ್ಯೂರೋ ಹಾಗೂ ಗೃಹ ಸಚಿವಾಲಯ ಮಾತ್ರ ನೀಡಬಹುದು.

ಲುಕ್​ ಓಸ್​ ನೋಟಿಸ್ ಬಗ್ಗೆ ಹೆಚ್ಚಿನ ವಿವರಗಳಿಗೆ ಓದಿ: ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್, ಏನಿದು ನೋಟಿಸ್? ಪ್ರಜ್ವಲ್ ಮೇಲಾಗುವ ಪರಿಣಾಮವೇನು?

ಎಸ್​ಐಟಿ ಅಧಿಕಾರಿಗಳ ಜತೆ ಸಿದ್ದರಾಮಯ್ಯ ಚರ್ಚೆ

ಪ್ರಜ್ವಲ್ ಪ್ರಕರಣ ಸಂಬಂಧ ಎಸ್​ಐಟಿ ಅಧಿಕಾರಿಗಳ ಜತೆ ಸಿಎಂ ಸಿದ್ದರಾಮಯ್ಯ ಶನಿವಾರ ಚರ್ಚೆ ನಡೆಸಿದರು. ಸಂಸದ ಪ್ರಜ್ವಲ್ ಕೇಸ್​ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಸರ್ಕಾರ ಮಧ್ಯಪ್ರವೇಶಿಸಿ ಬಂಧಿಸಬೇಕೆಂಬ ಒತ್ತಡ ಹೆಚ್ಚಳವಾಗ್ತಿದೆ. ಇನ್ನೂ ಬಂಧನವಾಗಿಲ್ಲವೇಕೆ ಎಂದು ಸಿಎಂ ಅಧಿಕಾರಿಗಳನ್ನು ತರಾಟೆ ತಗೆದುಕೊಂಡರು.

ಸಿಎಂ ಸಿದ್ದರಾಮಯ್ಯ ಗರಂ ಆಗ್ತಿದ್ದಂತೆ ಸ್ಪಷ್ಟನೆ ಕೊಟ್ಟ ಅಧಿಕಾರಿಗಳು, ಸೂಕ್ತ ಕ್ರಮಗಳೊಂದಿಗೆ ಬಂಧಿಸುತ್ತೇವೆ ಎಂದು ಭರವಸೆ ನೀಡಿದರು.

ಎಸ್​ಐಟಿಗೆ ಹೆಚ್ಚುವರಿ ಸಿಬ್ಬಂದಿ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಾಗಿ ರಚಿಸಲಾಗಿರುವ ಎಸ್​ಐಟಿಗೆ ರಾಜ್ಯ ಸರ್ಕಾರ ಮತ್ತಷ್ಟು ಅಧಿಕಾರಿ, ಸಿಬ್ಬಂದಿಯನ್ನು ನೀಡಿದೆ. ತನಿಖೆಗೆ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ನೇಮಿಸಿ ಆದೇಶ ಹೊರಡಿಸಿದೆ. ಮತ್ತೆ 8 ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಿ ಆದೇಶ ಹೊರಡಿಸಲಾಗಿದೆ. ಓರ್ವ ಎಸ್​ಪಿ, ಇಬ್ಬರು ಇನ್ಸ್​ಪೆಕ್ಟರ್​ಗಳು​, ಓರ್ವ ಎಎಸ್ಐ, ಓರ್ವ ಹೆಡ್ ಕಾನ್ಸ್​ಟೇಬಲ್, 3 ಕಾನ್ಸ್​ಟೇಬಲ್​ಗಳ ನಿಯೋಜನೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:06 pm, Sat, 4 May 24