ಬೊಮ್ಮಾಯಿ ಸರಕಾರಕ್ಕೆ ಆರು ತಿಂಗಳು; ಮುಂದಿನ 15 ತಿಂಗಳ ಅಗ್ನಿಪರೀಕ್ಷೆಗೆ ತಯಾರಿ

CM Basavaraj Bommai Birthday: 62 ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬೆಳಿಗ್ಗೆ ತಮ್ಮ ಪಕ್ಷದ ಹಿರಿಯ ನಾಯಕ ಬಿ.ಎಸ್​ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಬೊಮ್ಮಾಯಿ ಸರಕಾರಕ್ಕೆ ಆರು ತಿಂಗಳು; ಮುಂದಿನ 15 ತಿಂಗಳ ಅಗ್ನಿಪರೀಕ್ಷೆಗೆ ತಯಾರಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 28, 2022 | 1:50 PM

ಇಂದು ಮುಖ್ಯಮಂತ್ರಿಯಾಗಿ ಆರು ತಿಂಗಳು ಪೂರೈಸುತ್ತಿರುವ ಬಸವರಾಜ ಬೊಮ್ಮಾಯಿ ಬೆಳಿಗ್ಗೆ ತಮ್ಮ ಪಕ್ಷದ ಹಿರಿಯ ನಾಯಕ ಬಿ.ಎಸ್​. ಯಡಿಯೂರಪ್ಪ (BS Yediyurappa) ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬೊಮ್ಮಾಯಿ ಮುಖ್ಯಮಂತ್ರಿ ಆದಾಗಿನಿಂದ ಆಗಾಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ಮಾಡುತ್ತಲೇ ಬಂದಿದ್ದಾರೆ. ಅದೇ ರೀತಿ ಇಂದು 62 ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಬೊಮ್ಮಾಯಿಯವರಿಗೆ ಮತ್ತೊಮ್ಮೆ ಆಶೀರ್ವದಿಸಿ, ಸಹಕಾರ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಈ ದೃಷ್ಟಿಯಿಂದ ಅವರಿಬ್ಬರ ಭೇಟಿ ಮುಖ್ಯವಾಗುತ್ತದೆ. ಜನ ಏನಾದರೂ ಹೇಳಲಿ, ಯಡಿಯೂರಪ್ಪನವರ ಆಶೀರ್ವಾದ ಇದ್ದರೆ, ಬೊಮ್ಮಯಿಯವರಿಗೆ ತಮ್ಮ ಸರಕಾರ ಸುಸೂತ್ರವಾಗಿ ನಡೆಯುತ್ತದೆ ಎಂಬುದು ಗೊತ್ತು. ಹಾಗಾಗಿ, ಯಡಿಯೂರಪ್ಪನವರನ್ನು ಎದುರು ಹಾಕಿಕೊಳ್ಳುವ ಯಾವ ಕೆಲಸವನ್ನು ಕಳೆದ ಆರು ತಿಂಗಳಲ್ಲಿ ಬೊಮ್ಮಾಯಿಯವರು ಮಾಡಿಲ್ಲ.

ಬಿ. ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಸುಮಾರು ವರ್ಷಗಳ ಕಾಲ ಆಡಳಿತವನ್ನು ನಿರ್ವಹಿಸಿದ್ದಾರೆ. ಇವರಿಗೆ ಜೊತೆಯಾಗಿ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದವರು ಬಸವರಾಜ ಬೊಮ್ಮಾಯಿ. ಇಬ್ಬರು ಕೂಡಾ ಒಳ್ಳೆಯ ಆಡಳಿತಗಾರರು. ಪ್ರತಿಯೊಂದು ನಿರ್ಧಾರಗಳನ್ನು ಪರಸ್ಪರ ಚರ್ಚಿಸಿ ಕ್ರಮಕೈಗೊಳ್ಳುತ್ತಿದ್ದವರು. ಯಡಿಯೂರಪ್ಪ ಕೇಂದ್ರ ಕರ್ನಾಟಕವಾದರೇ, ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕದವರು ಅನ್ನುವುದನ್ನು ಬಿಟ್ಟರೇ, ಇವರಿಬ್ಬರೂ ಲಿಂಗಾಯತರೇ. ಯಾವಾಗಲೇ ಆಗಲಿ ಅಥವಾ ಯಾವುದೇ ಸಂದರ್ಭದಲ್ಲಾಗಲಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಬಸವರಾಜ ಬೊಮ್ಮಾಯಿ ಕೆಟ್ಟದಾಗಿ ಮಾತನಾಡಿಲ್ಲವೆಂದು ಹೇಳಬಹುದು.

2012ರಲ್ಲಿ ಯಡಿಯೂರಪ್ಪ ಕರ್ನಾಟಕ ಜನತಾ ಪಕ್ಷ ಕಟ್ಟಿದಾಗ ಅವರ ಕಟ್ಟಾ ಶಿಷ್ಯಂದಿರಲ್ಲಿ ಕೆಲವರು ಬಿಜೆಪಿ ಬಿಟ್ಟು ಕೆಜೆಪಿಗೆ ಹೋಗಲಿಲ್ಲ. ಅಂಥವರಲ್ಲಿ ಬಸವರಾಜ ಬೊಮ್ಮಾಯಿ ಕೂಡ ಒಬ್ಬರು. ಅಷ್ಟೇ ಅಲ್ಲ, ಬಿಜೆಪಿಯ ಟಿಕೆಟ್ ಪಡೆದು ಅವರು ಶಿಗ್ಗಾಂವ್ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಹಾಗಂತ ಅವರು ಯಡಿಯೂರಪ್ಪನವರ ಮೇಲೆ ದ್ವೇಷ ಕಟ್ಟಿಕೊಂಡು ಅವರನ್ನು ದೂರ ಮಾಡಿಲಿಲ್ಲ. ಈ ಕಾರಣಕ್ಕೆ 2019 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರನ್ನು ಮತ್ತೆ ತಮ್ಮ ಹತ್ತಿರದಲ್ಲಿಟ್ಟುಕೊಂಡರು. ಸಣ್ಣ ವಯಸ್ಸಿನಿಂದ ರಾಜಕೀಯವನ್ನು ನೋಡುತ್ತಾ ಬಂದಿರುವ ಬಸವರಾಜ ಬೊಮ್ಮಾಯಿ ಯಾರನ್ನೂ ದ್ವೇಷಿಸಿದವರಲ್ಲ.

ಬಸವರಾಜ ಬೊಮ್ಮಾಯಿ ಅವರದ್ದು, ಎಲ್ಲರಿಗಿಂತ ವಿಭಿನ್ನ ವ್ಯಕ್ತಿತ್ವ. ಅವರ ಮಾತುಗಾರಿಕೆಯೂ ಕೂಡಾ ಅಷ್ಟೇ ಭಿನ್ನ. ಅವರದ್ದೇ ಆದ ಒಂದು ಛಾಪು ಇದೆ. ಎಂಥಹ ಸಂದರ್ಭವೇ ಇರಲಿ ಅಳೆದು ತೂಗಿ ಮಾತನಾಡುತ್ತಾರೆ. ವಿಧಾನಸಭೆಯಲ್ಲಾಗಲೀ ಅಥವಾ ಹೊರಗಾಗಲಿ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಳ್ಳುವ ವ್ಯಕ್ತಿ ಅಲ್ಲ ಬಸವರಾಜ ಬೊಮ್ಮಾಯಿ. ಇನ್ನೂ ಖಾತೆಗಳನ್ನು ನಿರ್ವಹಣೆಯಲ್ಲಿಯೂ ಅವರದು ಮೇಲುಗೈ. ಮಂತ್ರಿಯಾಗಿ ಖಾತೆ ನಿರ್ವಹಿಸಿದ ರೀತಿ ವಿಭಿನ್ನವಾದದ್ದು. ಪ್ರತಿಯೊಂದು ಯೋಜನೆಯ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿ ಹೇಗೆ ಜಾರಿಗೊಳಿಸಬೇಕು ಮತ್ತು ಅದು ಜನರಿಗೆ ಹೇಗೆ ತಲುಪಬೇಕು ಎಲ್ಲವನ್ನು ಕುರಿತು ಚರ್ಚಿಸಿ ಕ್ರಮಕೈಗೊಳ್ಳುತ್ತಿದ್ದರು.

ಇನ್ನೂ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್. ಆರ್. ಬೊಮ್ಮಾಯಿ ಅವರು ಕೂಡ ಉತ್ತಮ ರಾಜಕೀಯ ವ್ಯಕ್ತಿ ಆಗಿದ್ದವರು. 1962ರಲ್ಲಿ ಎಸ್‌.ಆರ್‌.ಬೊಮ್ಮಾಯಿ ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ನಂತರ 1967ರಲ್ಲಿ ಸ್ಪರ್ಧಿಸಿದ 20,291 ಮತಗಳಿಂದ ಗೆಲುವು ಸಾಧಿಸಿದರು. 1978ರಲ್ಲಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ಜೆಎನ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಎಸ್‌.ಆರ್‌.ಬೊಮ್ಮಾಯಿ ಗೆಲುವು ಸಾಧಿಸಿದರು. ನಂತರ 1983, 85ರ ಚುನಾವಣೆಯಲ್ಲಿಯೂ ಜಯಗಳಿಸಿದ್ದಾರೆ. 1985ರಲ್ಲಿ ಜನತಾ ಪಕ್ಷದಿಂದ ಆಯ್ಕೆಯಾಗಿದ್ದ ಎಸ್.ಆರ್.ಬೊಮ್ಮಾಯಿ ರಾಜ್ಯದ 11ನೇ ಮುಖ್ಯಮಂತ್ರಿಯಾಗಿದ್ದರು. ಮುಖ್ಯಮಂತ್ರಿಯಾಗಿ ಕೆಲವೆ ದಿನಗಳಲ್ಲಿ ಆ ಸ್ಥಾನದಿಂದ ಕೆಳಗಿಳಿದರು.

ರಾಜಕೀಯ ಪ್ರವೇಶ:

ಬಸವರಾಜ ಬೊಮ್ಮಾಯಿ ಅವರು ಜನತಾದಳದಿಂದ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. 1998 ಹಾಗೂ 2004ರಲ್ಲಿ ಧಾರವಾಡ ಸ್ಥಳೀಯ ಅಧಿಕಾರಿಗಳ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರು. 2008ರಲ್ಲಿ ಜನತಾದಳವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬೊಮ್ಮಾಯಿ ಆಯ್ಕೆಗೊಂಡಿದ್ದರು. ಈ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಜೆ. ಹೆಚ್. ಪಟೇಲ್ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ಸಚಿವರಾಗಿ, ಸಹಕಾರ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿರುವ ಅನುಭವವನ್ನು ಬಸವರಾಜ ಬೊಮ್ಮಾಯಿ ಹೊಂದಿದ್ದಾರೆ. ಯಡಿಯೂರಪ್ಪ ಅವರ ಸಂಪುಟದಲ್ಲಿ ಗೃಹ ಖಾತೆಯನ್ನು ನಿರ್ವಹಿಸಿದ್ದಾರೆ.ಬಿ.ಎಸ್.ಯಡಿಯೂರಪ್ಪರವರನ್ನು ತಮ್ಮ ರಾಜಕೀಯ ಗುರು ಎಂದು ಸ್ವೀಕರಿಸಿ, ಗುರುವಿನ ಹಾದಿಯಲ್ಲೇ ಸಾಗುತ್ತಿರುವ ಬಸವರಾಜ ಬೊಮ್ಮಾಯಿ ಜುಲೈ 28, 2021ರಂದು ಕರ್ನಾಟಕದ 23ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಮುಂದಿರುವ ಸವಾಲು

ಬಸವರಾಜ ಬೊಮ್ಮಾಯಿ ಅವರು ಈಗ ರಾಜ್ಯದ ಮುಖ್ಯಮಂತ್ರಿಯಾಗಿ ಆರು ತಿಂಗಳು ಪೂರ್ಣಗೊಳಿಸಿದ್ದಾರೆ. ಇಲ್ಲಿಯವರೆಗೂ ಯಶಸ್ವೀಯಾಗಿ ಕಾರ್ಯನಿರ್ವಹಿಸಿಕೊಂಡು ಬಂದಿರುವ ಸಿಎಮ್ ಮುಂದೆ ಕೂಡ ಇದೇ ರೀತಿ ಕಾರ್ಯನಿರ್ವಹಿಸುತ್ತಾರಾ ಎನ್ನುವ ಪ್ರಶ್ನೇ ಕೇಳಿಬರುತ್ತಿದೆ.  ಅವರ ಮುಂದೆ ಮೂರು ಸವಾಲು ಇವೆ: ಒಂದೂವರೆ ವರ್ಷದಲ್ಲಿ ಹೈಕಮಾಂಡ್​ನ ಕಣ್ಣಿಗೆ ಗುರಿಯಾಗದೇ ಅವರಿಂದ ಶಾಭಾಶ್​ಗಿರಿ ಪಡೆಯುವುದು; ತಮ್ಮ ಸಂಪುಟ ಇತರೇ ಸದಸ್ಯರನ್ನು ಕೆಲಸಕ್ಕೆ ತೊಡಗಿಸಿ  ಬಿಜೆಪಿ ಪಕ್ಷ ಮತ್ತು ಸರಕಾರಕ್ಕೆ ಉತ್ತಮ ಹೆಸರು ತರುವುದು ಮತ್ತೂ ಕೊನೆಯದಾಗಿ ರಾಜಕೀಯ ಎದುರಾಳಿಗಳು ಹಾಕುವ ದಾಳಕ್ಕೆ ಪ್ರತಿಯಾಗಿ ರಾಜಕೀಯ ದಾಳ ಉರುಳಿಸಿ ಮುಂದಿನ ಚುನಾವಣೆಗೆ ಸಜ್ಜಾಗುವುದು. ಇವರ ತಂದೆ ಎಸ್. ಆರ್. ಬೊಮ್ಮಾಯಿ ಅವರು  8 ತಿಂಗಳು 6 ದಿನಗಳವರೆ ಮುಖ್ಯಮಂತ್ರಿಯಾಗಿದ್ದವರು. ತಮ್ಮ ತಂದೆಯನ್ನು ಮೀರಿಸಿ ಮುಂದಿನ 2023ರ ಚುಣಾವಣೆವರೆಗೂ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಾರಾ ಎಂಬುಹುದು ಕುತೂಹಲ. ಈ ಮೂರು ಸವಾಲನ್ನು ಅವರು ನಿರ್ವಹಿಸಿದರೆ ಬಸವರಾಜ ಬೊಮ್ಮಾಯಿ ಮುಂದಿನ ಚುನಾವಣೆಗೆ ಗಟ್ಟಿಯಾಗಿ ಸಜ್ಜಾಗಬಹುದು.

ಇದನ್ನೂ ಓದಿ;

Karnataka News Live: 6 ತಿಂಗಳ ಸಾಧನೆಯ ಕಿರು ಹೊತ್ತಿಗೆ ಬಿಡುಗಡೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ