ತುಮಕೂರು/ಹಾವೇರಿ (ಅಕ್ಟೋಬರ್ 24): ತೀವ್ರ ಕಗ್ಗಂಟಾಗಿದ್ದ ಶಿಗ್ಗಾಂವಿ ಉಪಚುನಾವಣೆ ಟಿಕೆಟ್ ಕೊನೆಗೂ ಬಗೆಹರಿದಿದೆ. ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಮುಸ್ಲಿಂ ಸಮುದಾಯದ ಯಾಸೀರ್ ಅಹ್ಮದ್ ಖಾನ್ ಪಠಾಣ್‌ಗೆ ಟಿಕೆಟ್ ನೀಡಿದೆ. ಇದರ ಬೆನ್ನಲ್ಲೇ ಅಸಮಾಧಾನ ಸ್ಫೋಟವಾಗಿದೆ. ಅಜ್ಜಂಫೀರ್ ಖಾದ್ರಿಗೆ ಶಿಗ್ಗಾಂವಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.
ಶಿಗ್ಗಾಂವಿಯ ಚೆನ್ನಮ್ಮ ಸರ್ಕಲ್ನಲ್ಲಿ ಖಾದ್ರಿ ಬೆಂಬಲಿಗರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ನಾಯಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಅಲ್ಲದೇ ಗೋ ಬ್ಯಾಕ್ ಪಠಾಣ್ ಎಂದು ಘೋಷಣೆ ಕೂಗಿದರು. ಇನ್ನು ಟಿಕೆಟ್ ಕೈತಪ್ಪಿದ್ದಕ್ಕೆ ಅಜ್ಜಂಪೀರ್ ಖಾದ್ರಿ ಆಕ್ರೋಶ ವ್ಯಕ್ತಪಡಿಸಿದ್ದು, ಇಲ್ಲಿಯವರೆಗೂ ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡಿ ಬೊಮ್ಮಾಯಿಯನ್ನು ಗೆಲ್ಲಿಸಿಕೊಂಡಿ ಬಂದಿದ್ದಾರೆ ಎಂದು ತಮ್ಮದೇ ಪಕ್ಷದ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಜ್ಜಂಪೀರ್ ಖಾದ್ರಿ, ಕಳೆದ 23 ವರ್ಷದಿಂದ ಕಾಂಗ್ರೆಸ್ ಕಟ್ಟಿದ್ದೇನೆ. ಒಮ್ಮೆ ಶಾಸಕನಾಗಿದ್ದೇನೆ. ಮೂರು ಬಾರಿ ಬಸವರಾಜ ಬೊಮ್ಮಾಯಿ ವಿರುದ್ದ ಅತ್ಯಂತ ಕಡಿಮೆ ಅಂತರದಿಂದ ಸೋತಿದ್ದೇನೆ. ಬೊಮಾಯಿ ವಿರುದ್ದ ಸ್ಪರ್ಧಿಸಲು ತಯಾರು ಇರಲಿಲ್ಲ. ಆ ಸಂದರ್ಭದಲ್ಲಿ ನಾನು ನಿಂತಿದ್ದೇನೆ. ನಾನು ಸ್ಪರ್ಧೆ ಮಾಡಿದಾಗ ಬೊಮ್ಮಾಯಿ ವಿರುದ್ದ ಕಾಂಗ್ರೆಸ್ ನ ಯಾವ ಮುಖಂಡರು ಪ್ರಚಾರಕ್ಕೆ ಬರಲಿಲ್ಲ. ಹೇ ಬೊಮ್ಮಾಯಿ ನಿಂತಿದ್ದಾರೆ ಹೇಗೆ ಪ್ರಚಾರ ಮಾಡಲಿ ಅಂತಿದ್ರು.ಕೈ ಮುಗಿದು ಕೇಳಿದರೂ ಯಾರೂ ಪ್ರಚಾರಕ್ಕೆ ಬಂದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ: ಮತ್ತೊಮ್ಮೆ ಅಲ್ಪಸಂಖ್ಯಾತ ಸಮುದಾಯಕ್ಕೆ ಮಣೆ
ಈಗ ಹಾನಗಲ್ಲಿನ ಪಠಾಣ್ ಗೆ ಟಿಕೆಟ್ ಕೊಟ್ಟಿದ್ದಾರೆ. ಅವನೊಬ್ಬ ರೌಡಿಶೀಟರ್, ಅವನ ಮೇಲೆ 17 ಕೇಸ್ ಇದೆ . ಕ್ಷೇತ್ರದ ಜನ ಸ್ಥಳೀಯ ಅಭ್ಯರ್ಥಿ ಬಯಸುತ್ತಾರೆ. ನಾನು ಸ್ಥಳೀಯನಾಗಿದ್ದೇನೆ. ಮುಂದಿನ ದಿನದಲ್ಲಿ ಪಿತೂರಿಯ ಎಲ್ಲಾ ವಿಚಾರ ಬಹಿರಂಗವಾಗಲಿದೆ. ನಾನು ಸಿದ್ಧರಾಮಯ್ಯರ ಅಭಿಮಾನಿ. ಅವರ ವಿರುದ್ದ ಮಾತನಾಡುವಷ್ಟು ದೊಡ್ಡ ವ್ಯಕ್ತಿ ಅಲ್ಲ. ಟಿಕೆಟ್ ಕೈತಪ್ಪಿದ್ದರ ಹಿಂದೆ ಕಾಣದ ಕೈಗಳ ಪಿತೂರಿ ನಡೆದಿದೆ. ಒಳ ಒಪ್ಪಂದ ಆಗಿದೆ ಎಂದು ಜನ ಮಾತಾಡಿಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ.
ಲಿಂಗಾಯತ ನಾಯಕರು, ಕುರುಬ, ನಾಯಕ ಸಮುದಾಯದ ಯಾವೊಬ್ಬ ನಾಯಕರೂ ಬಂದಿರಲಿಲ್ಲ. ಅವರೆಲ್ಲ ಬಂದು ಪ್ರಚಾರ ಮಾಡಿದರೆ ನಾನು ಗೆದ್ದು ಬಸವರಾಜ ಬೊಮ್ಮಾಯಿ ಸೋಲುತ್ತಿದ್ದರು. ನಾನು ಒಬ್ಬ ಅಲ್ಪ ಸಂಖ್ಯಾತ, ಅನ್ನೋ ಕಾರಣಕ್ಕೆ ಬೇರೆ ಸಮುದಾಯದ ಯಾರೂ ಬಂದೂ ಪ್ರಚಾರ ಮಾಡಿಲ್ಲ. ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡಿ ಬೊಮ್ಮಾಯಿಯನ್ನು ಗೆಲ್ಲಿಸಿಕೊಂಡಿ ಬಂದಿದ್ದಾರೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಗೂಂಡಾಗರಿ ಮಾಡಿದವನಿಗೆ ಟಿಕೆಟ್ ಕೊಟ್ಟಿದ್ದಾರೆ. ಸೋಲೋರಿಗೆ ಟಿಕೆಟ್ ಕೊಟ್ಟಿದ್ದಾರೆ. ಪಕ್ಷೇತರವಾಗಿ ನಿಲ್ಲಲು ಕಾರ್ಯಕರ್ತರ ಒತ್ತಡ ಹೆಚ್ಚಾಗಿದೆ. ನನ್ನ ಕಾರ್ಯಕರ್ತರು ವಿಷ ಕುಡಿಯಲು ಹೋಗಿದ್ದಾರೆ. ಬೊಮ್ಮಾಯಿ ಅವರು ಶಿಗ್ಗಾವಿಯಲ್ಲಿ ತಿರಸ್ಕೃತವಾಗಿದ್ದಾರೆ.ಅವರ ವಿರುದ್ದ ವಿರೋಧಿ ಅಲೆ ಜೋರಾಗಿದೆ. ಈಗಾಗಲೇ ನನ್ನನ್ನ ಎಮ್ ಐ ಎಮ್ ಪಕ್ಷದವರು ಸಂಪರ್ಕ ಮಾಡಿದ್ದಾರೆ. ಅದೊಂದು ಅಪಾಯಕಾರಿ ಪಕ್ಷ, ಅದಕ್ಕಾಗಿ ನಾನು ತಿರಸ್ಕರಿಸಿದ್ದೇನೆ ಎಂದು ಹೇಳಿದ ಖಾದ್ರಿ ಪಕ್ಷೇತರವಾಗಿ ನಿಲ್ಲುವ ಸುಳಿವು ಕೊಟ್ಟಿದ್ದಾರೆ.
ಒಟ್ಟಿನಲ್ಲಿ ಅಜ್ಜಂಫೀರ್ ಖಾದ್ರಿ ಅವರ ಆಕ್ರೋಶಭರಿತ ಮಾತುಗಳನ್ನು ನೋಡಿದರೆ ಕಾಂಗ್ರೆಸ್ಗೆ ಮಗ್ಗಲು ಮುಳ್ಳಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.