
ಮಂಡ್ಯ: ಕೊರೊನಾ ಎರಡನೇ ಅಲೆಯ ಹರಡುವಿಕೆ ತೀವ್ರವಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಇನ್ನು ಸಾವಿನ ಸಂಖ್ಯೆ ಕೂಡ ಹೆಚ್ಚಾಗಿರುವುದರಿಂದ, ಜನ ಮೊದಲ ಅಲೆಗಿಂತ ಕೊರೊನಾ ಎರಡನೇ ಅಲೆ ಬಗ್ಗೆ ಹೆಚ್ಚು ಭಯಗೊಂಡಿದ್ದಾರೆ. ಅಷ್ಟೇ ಅಲ್ಲ ಕೊವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬಸ್ಥರ ಅಂತ್ಯಸಂಸ್ಕಾರ ಮಾಡುವುದಕ್ಕೂ ಜನ ಹಿಂಜರಿದ ಅದೆಷ್ಟೋ ಸನ್ನಿವೇಶಗಳನ್ನು ಇತ್ತೀಚೆಗೆ ನಾವು ಓದಿದ್ದೇವೆ. ಆದರೆ ಕೊವಿಡ್ ಹಿನ್ನೆಲೆಯಲ್ಲಿ ಅಳಿಯನೊಬ್ಬ ತನ್ನ ಅತ್ತೆಯನ್ನು ಮನೆಗೆ ಸೇರಿಸದ ಘಟನೆ ಇಂದು ಮಂಡ್ಯದಲ್ಲಿ ನಡೆದಿದೆ.
ಅರೆಚಾಕನಹಳ್ಳಿಯ ಸಿದ್ದಮ್ಮ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಸಿಬ್ಬಂದಿಗಳು ಸಿದ್ದಮ್ಮನನ್ನು ಹೋಂ ಐಸೋಲೇಷನ್ ಮಾಡಲು ಸೂಚನೆ ನೀಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಸಿದ್ದಮ್ಮನ ಅಳಿಯ ಮುತ್ತೇಗೌಡ ಮನೆಗೆ ಸೇರಿಸಿಕೊಳ್ಳದೆ ದುರ್ವರ್ತನೆ ತೋರಿದ್ದಾನೆ.
ಅಷ್ಟಕ್ಕೂ ಅರೆಚಾಕನಹಳ್ಳಿ ಗ್ರಾಮದಲ್ಲಿ ಇರುವ ಈ ಮನೆ ಸಿದ್ದಮ್ಮನವರದ್ದು, ಮದುವೆಯಾದ ಮೇಲೆ ಹೆಂಡತಿ ಮನೆ ಸೇರಿಕೊಂಡಿದ್ದ ಅಳಿಯ ಮುತ್ತೇಗೌಡ, ಈಗ ಅತ್ತೆಯನ್ನೇ ಹೊರಗಟ್ಟಿದ್ದಾನೆ. ಯಾರೇ ಮನವೊಲಿಸಿದರು ಮನೆಗೆ ಸೇರಿಸಿಕೊಳ್ಳಲು ಒಪ್ಪದೆ ಇದ್ದಿದ್ದರಿಂದ, ಕೊನೆಗೆ ಸಿದ್ದಮ್ಮರನ್ನು ಮದ್ದೂರು ತಾಲೂಕು ಆಸ್ಪತ್ರೆಗೆ ಸಿಬ್ಬಂದಿ ದಾಖಲು ಮಾಡಿದ್ದಾರೆ.
ಅಂತ್ಯಕ್ರಿಯೆಗೆ ಬಾರದ ಕುಟುಂಬ
ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾಗೆ ರುದ್ರಿಬಾಯಿ (47) ಎಂಬವರು ಬಲಿಯಾಗಿದ್ದರು. ಆದರೆ, ಮಹಿಳೆಯ ಅಂತ್ಯಕ್ರಿಯೆಗೆ ಕುಟುಂಬಸ್ಥರು ಬಂದಿಲ್ಲ. ಆ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕರು ಮೃತಳ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಶಿಕಾರಿಪುರದಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿದ್ದಾರೆ. ಮೊಹಮ್ಮದ್ ಇರ್ಫಾನ್ ಸೇರಿದಂತೆ 6 ಜನರ ತಂಡದಿಂದ ಹಿಂದೂ ವಿಧಿವಿಧಾನದ ಅನುಸಾರ ಅಂತ್ಯಸಂಸ್ಕಾರ ನಡೆಸಲಾಗಿದೆ.
ಕೊರೊನಾ ಸೋಂಕು ಹೆಚ್ಚಳ ಹಾಗೂ ಕೊರೊನಾದಿಂದ ಮೃತರಾಗುತ್ತಿರುವವರ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಅಂತ್ಯಸಂಸ್ಕಾರ ನಡೆಸುವುದು ಕೂಡ ಕೆಲವೆಡೆ ಕಷ್ಟ ಎಂಬಂತಾಗಿದೆ. ಈ ವೇಳೆ, ಜಾತಿ, ಧರ್ಮಕ್ಕೂ ಮೀರಿ ಮಾನವೀಯತೆಯ ಕಾರ್ಯ ನಡೆಸಿರುವುದು ಪ್ರಶಂಸೆಗೆ ಕಾರಣವಾಗಿದೆ.
ಇದನ್ನೂ ಓದಿ:
ಮಹಿಳೆಯ ಅಂತ್ಯಕ್ರಿಯೆಗೆ ಬಾರದ ಕುಟುಂಬಸ್ಥರು; ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿದ ಮುಸ್ಲಿಂ ಯುವಕರು
ಸೋಂಕಿತೆಯ ಅಂತ್ಯಕ್ರಿಯೆಗೆ ಹಿಂದೇಟು; ಪಿಪಿಇ ಕಿಟ್ ಧರಿಸಿ ಶವಸಂಸ್ಕಾರ ಮಾಡಲು ಮುಂದಾದ ತುಮಕೂರು ತಹಶಿಲ್ದಾರ್