ಅಕಾಲಿಕ ಮಳೆಗೆ ತುತ್ತಾದ ವಿಜಯಪುರ ರೈತರ ಬೆಳೆ; ಕೈಕೊಟ್ಟ ಮಾರುಕಟ್ಟೆ, ಹಾಕಿದ ಬಂಡವಾಳ ಮಣ್ಣು ಪಾಲು
ಮಾರುಕಟ್ಟೆಯಲ್ಲಿ 10ಕೆಜಿ ಮೆಣಸಿನಕಾಯಿಗೆ 15 ರಿಂದ 20ರೂಪಾಯಿ ಬೆಲೆ ಇದೆ. ಮಾರಾಟ ಮಾಡಲು ಹೋದ ರೈತನಿಗೆ ಸಿಗುವುದು 10ಕೆಜಿ ಮೆಣಸಿನಕಾಯಿಗೆ ಬರೀ 20 ರೂಪಾಯಿ ಮಾತ್ರ. ಇಂಥ ಪರಿಸ್ಥಿತಿಯಲ್ಲಿ ಕೆಲಸದವರ ಕೂಲಿ, ಹೊಲದಿಂದ ಮಾರುಕಟ್ಟೆ ತಂದ ಗಾಡಿ ಖರ್ಚು ಸೇರಿ, ಹಾಕಿದ ಒಟ್ಟು ಬಂಡವಾಳದ ಅರ್ಧ ಖರ್ಚು ಬರುತ್ತಿಲ್ಲ.
ವಿಜಯಪುರ: ಕೊರೊನಾ ಎರಡನೇ ಅಲೆಯಿಂದಾಗಿ ಜನ ಜೀವನ ಅಸ್ತವ್ಯಸ್ಥವಾಗಿದೆ. ಕೊವಿಡ್ ಸೋಂಕು ಹೆಚ್ಚಾಗುತ್ತಿರುವುದರಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಕೊರೊನಾ ನಿಯಂತ್ರಣಕ್ಕೆ ಜಾರಿಗೆ ತಂದ ಲಾಕ್ಡೌನ್ ವ್ಯಾಪಾರ ವ್ಯವಹಾರಕ್ಕೆ ತಡೆ ಉಂಟುಮಾಡಿದ್ದು, ಜೀವನವನ್ನು ಸಾಗಿಸಲು ಆದಾಯದ ಮೂಲವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ರೈತರ ಸ್ಥಿತಿ ಹದಗೆಟ್ಟಿದ್ದು, ಅಕಾಲಿಕ ಮಳೆ ಸಮಸ್ಯೆ ಕೂಡ ಎದುರಾಗಿದೆ. ಇದರಿಂದಾಗಿ ಭೂಮಿಯನ್ನೆ ನಂಬಿಕೊಂಡು ಜೀವನ ನಡೆಸುತ್ತಿದ್ದ ರೈತರು ಕಂಗಾಲಾಗಿದ್ದಾರೆ.
ಒಂದು ಕಡೆ ಕೊರೊನಾ ಕಾರಣ ಸರ್ಕಾರ ಲಾಕ್ಡೌನ್ ಹೇರಿದೆ, ಇನ್ನೊಂದೆಡೆ ಅಕಾಲಿಕ ಮಳೆಗೆ ಕಷ್ಟ ಪಟ್ಟು ಬೆಳೆದ ಮೆಣಸಿನಕಾಯಿ, ಶೇಂಗಾ, ಕಲ್ಲಂಗಡಿ ಫಸಲು ಬಂದಿಲ್ಲ. ಮೆಣಸಿನ ಕಾಯಿ ಗೀಡ ಚೆನ್ನಾಗಿ ಬೆಳೆದಿದೆ. ಆದರೆ ಕಾಯಿ ಬಿಟ್ಟಿಲ್ಲ. ಇನ್ನು ಬೆಳೆದ ಕಾಯಿಗಳು ಕೂಡ ರೋಗಕ್ಕೆ ತುತ್ತಾಗಿದೆ. ಗಿಡದಂತೆಯೇ ಮೆಣಸಿನಕಾಯಿ ಫಲವತ್ತಾಗಿ ಬೆಳೆಯಲು ಮಾರುಕಟ್ಟೆಯಲ್ಲಿ ಸಿಗುವ ಫರ್ಟಿಲೈಸರ್ ತಂದು ಹಾಕಿದರೆ ಬೆಳೆ ಬರುತ್ತಿತ್ತು. ಆದರೆ ಏನು ಬೆಳೆ ಬಂದರು ವ್ಯಾಪರಕ್ಕೂ ಅವಕಾಶ ಇಲ್ಲ ಎಂದು ರೈತ ಶ್ರೀಶೈಲ್ ದೊಡ್ಮನಿ ಅಳಲು ತೋಡಿಕೊಂಡಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ 10ಕೆಜಿ ಮೆಣಸಿನಕಾಯಿಗೆ 15 ರಿಂದ 20ರೂಪಾಯಿ ಬೆಲೆ ಇದೆ. ಮಾರಾಟ ಮಾಡಲು ಹೋದ ರೈತನಿಗೆ ಸಿಗುವುದು 10ಕೆಜಿ ಮೆಣಸಿನಕಾಯಿಗೆ ಬರೀ 20 ರೂಪಾಯಿ ಮಾತ್ರ. ಇಂಥ ಪರಿಸ್ಥಿತಿಯಲ್ಲಿ ಕೆಲಸದವರ ಕೂಲಿ, ಹೊಲದಿಂದ ಮಾರುಕಟ್ಟೆ ತಂದ ಗಾಡಿ ಖರ್ಚು ಸೇರಿ, ಹಾಕಿದ ಒಟ್ಟು ಬಂಡವಾಳದ ಅರ್ಧ ಖರ್ಚು ಬರುತ್ತಿಲ್ಲ. ಹೀಗಾಗಿ ನೊಂದ ರೈತರು ಒಂದು ಎಕರೆಯಲ್ಲಿ ಹಾಕಿದ ಮೆಣಸಿನಕಾಯಿ, ಎರಡು ಎಕರೆಯಲ್ಲಿ ಹಾಕಿದ ಶೇಂಗಾ ಎಲ್ಲವನ್ನೂ ಕಿತ್ತು ಹಾಕಿದ್ದಾರೆ.
ವಿಜಯಪುರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಇಂಥದ್ದೇ ನೋವಿನ ಕಥೆಗಳು ನೋಡಲು ಸಿಗುತ್ತವೆ. ಒಂದು ಎರಡು ಎಕರೆ ಜಮೀನಿನಲ್ಲಿ ಸ್ವತಃ ತಾವೇ ಮೈ ಬಗ್ಗಸಿ ದುಡಿದು ಎರಡು ಕಾಸು ಸಂಪಾದನೆ ಮಾಡೋಣ ಎಂದು ಬೆಳೆ ತೆಗೆದರೆ ಮಾರುಕಟ್ಟೆಯಲ್ಲಿ ಬೆಳೆಗೆ ಬೆಲೆ ಸಿಗುತ್ತಿಲ್ಲ. ಹೀಗಾಗಿ ಈ ರೀತಿ ಸಂಕಷ್ಟದಲ್ಲಿರುವ ರೈತರು ನಮಗೆ ಸಹಾಯ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:
ಅಕಾಲಿಕ ಆಲಿಕಲ್ಲು ಮಳೆಗೆ ಬೆಳೆ ನಾಶ; ಚಿಕ್ಕಬಳ್ಳಾಪುರ ರೈತರಲ್ಲಿ ಹೆಚ್ಚಿದ ಆತಂಕ
ಭಾರಿ ಗಾಳಿ, ಮಳೆಗೆ ಮೆಣಸಿಕಾಯಿ ಬೆಳೆ ನಾಶ; ಹೆಚ್ಚು ನಿರೀಕ್ಷೆಯಲ್ಲಿದ್ದ ಮೈಸೂರು ರೈತ ಕಂಗಾಲು