ಸೋಂಕಿತೆಯ ಅಂತ್ಯಕ್ರಿಯೆಗೆ ಹಿಂದೇಟು; ಪಿಪಿಇ ಕಿಟ್ ಧರಿಸಿ ಶವಸಂಸ್ಕಾರ ಮಾಡಲು ಮುಂದಾದ ತುಮಕೂರು ತಹಶಿಲ್ದಾರ್
ಮೃತ ಸೋಂಕಿತೆಯ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಹಿಂದೇಟು ಹಾಕಿದ್ದರಿಂದ ತುಮಕೂರು ತಹಶಿಲ್ದಾರ್ ಮೋಹನ್ ಕುಮಾರ್ ಸ್ವತಃ ತಾವೇ ಪಿಪಿಇ ಕಿಟ್ ಧರಿಸಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಅಂತ್ಯಕ್ರಿಯೆ ಮಾಡಿದ್ದಾರೆ.
ತುಮಕೂರು: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇದರ ಜೊತೆಗೆ ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಹೀಗಾಗಿ ಜನ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಕೂಡ ಬರಲು ಭಯಪಡುತ್ತಿದ್ದಾರೆ. ಇಂತಹದ್ದೇ ಘಟನೆ ತುಮಕೂರಿನ ಕುಪ್ಪೂರಿನಲ್ಲಿ ನಡೆದಿದ್ದು, ಸೋಂಕಿನಿಂದ ಮೃತಪಟ್ಟ 64 ವರ್ಷದ ಮಹಿಳೆಯ ಅಂತ್ಯಕ್ರಿಯೆಗೆ ಕುಟುಂಬಸ್ಥರು ಹಿಂದೇಟು ಹಾಕಿದ್ದಾರೆ. ಆದರೆ ಅನಾತವಾಗಿದ್ದ ಸೋಂಕಿತೆಯ ಶವಕ್ಕೆ ಮುಕ್ತಿ ನೀಡುವ ಕೆಲಸವನ್ನು ತುಮಕೂರು ತಹಶಿಲ್ದಾರ್ ಮಾಡಿದ್ದಾರೆ.
ತುಮಕೂರು ತಹಶಿಲ್ದಾರ್ ಜಿ.ವಿ ಮೋಹನ್ ಕುಮಾರ್ ಸೋಂಕಿತೆಯ ಅಂತ್ಯಕ್ರಿಯೆಯನ್ನು ನೆರವೆರಿಸಿದ್ದಾರೆ. ತಾಲೂಕಿನ ಕುಪ್ಪೂರು ಗ್ರಾಮದ ಜಯಮ್ಮ (64) ಎಂಬ ಮಹಿಳೆಗೆ ಇತ್ತಿಚೆಗೆ ಸೋಂಕು ಧೃಡಪಟ್ಟಿತ್ತು. ಆರೋಗ್ಯ ಸ್ಥಿತಿ ಚೆನ್ನಾಗಿ ಇದ್ದ ಕಾರಣ ಮನೆಯಲ್ಲಿಯೇ ಹೋಮ್ ಐಸೋಲೇಷನ್ನಲ್ಲಿದ್ದರು. ಆದರೆ ಮನೆಯಲ್ಲಿ ನಿನ್ನೆ ಮಧ್ಯಾಹ್ನ ಮೃತಪಟ್ಟಿದ್ದಾರೆ. ಈ ವೇಳೆ ಆಕೆಯ ಶವ ಸಂಸ್ಕಾರಕ್ಕೆ ಕುಟುಂಬಸ್ಥರು ಭಯಪಟ್ಟು ಯಾರು ಮುಂದೆ ಬಂದಿಲ್ಲ.
ಇದನ್ನು ತಿಳಿದ ತುಮಕೂರು ತಹಶಿಲ್ದಾರ್ ಮೋಹನ್ ಕುಮಾರ್ ಸ್ವತಃ ತಾವೇ ಪಿಪಿಇ ಕಿಟ್ ಧರಿಸಿ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಸಿಬ್ಬಂದಿಗಳ ಬಳಿ ಕೇಳಿ ತಿಳಿದುಕೊಂಡಿದ್ದು, ಮೃತೆಯ ಮನೆಗೆ ತೆರಳಿ ,ಶವ ತೆಗೆದುಕೊಂಡು ಬಂದು ತುಮಕೂರು ನಗರದ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೇರವೇರಿಸಿದ್ದಾರೆ. ಈ ವೇಳೆ ಆರ್. ಐ ಶಿವಣ್ಣ, ಗ್ರಾಪಂ ಅಧಿಕಾರಿಗಳಾದ ದೇವರಾಜು, ಶವಸಂಸ್ಕಾರ ಸೇವೆಯಲ್ಲಿ ತೊಡಗಿರುವ ಜಹೀರ್ ತಂಡದವರು ತಹಶಿಲ್ದಾರ್ಗೆ ಸಾಥ್ ನೀಡಿದ್ದಾರೆ.
ಇದನ್ನೂ ಓದಿ:
Published On - 10:59 am, Wed, 12 May 21