ಬೆಂಗಳೂರು, (ಅಕ್ಟೋಬರ್ 24): ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆಯಾಗಿ ಸುಮಾರು 14 ವರ್ಷಗಳ ನಂತರ ತೀರ್ಪು ಹೊರಬಿದ್ದಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ತೀರ್ಪು ನೀಡಿದ್ದು, ಕಾಂಗ್ರೆಸ್ ಶಾಸಕ ಸತೀಶ್ ಸೈಲ್, ಬಂದರು ಅಧಿಕಾರಿ ಮಹೇಶ್ ಬಿಳಿಯೆ ಸೇರಿದಂತೆ ಅದಿರು ಕಳ್ಳತನದಲ್ಲಿ ಭಾಗಿಯಾದ ಆರೋಪಿಗಳನ್ನು ದೋಷಿಗಳು ಎಂದು ತೀರ್ಪು ನೀಡಿದೆ. ಒಟ್ಟು ಆರು ಪ್ರಕರಣದ ತೀರ್ಪು ನೀಡಿದೆ. ಆರು ಪ್ರಕರಣದಲ್ಲೂ ದೋಷಿಯಾಗಿರುವ ಆಡಳಿತರೂಢ ಕಾಂಗ್ರೆಸ್ ಪಕ್ಷದ ಶಾಸಕ ಸತೀಶ್ ಸೈಲ್ ಈಗ ಜೈಲು ಸೇರಿದ್ದಾರೆ.
ಬೇಲೆಕೇರಿ ಅದಿರು ನಾಪತ್ತೆ ಕೇಸ್‌ನಲ್ಲಿ ಶಾಸಕ ಸತೀಶ್ ಸೈಲ್ ಜೊತೆಗೆ ಮಹೇಶ್ ಬಿಳಿಯೆ, ಮಹೇಶ್ ಕುಮಾರ್ ಕೆ, ಪ್ರೇಮ್ ಚಂದ್ ಗರ್ಗ್, ಸುಶೀಲ್ ಕುಮಾರ್ ವಲೇಚ ಎಂಬುವವರನ್ನೂ ದೋಷಿ ಎಂದು ಕೋರ್ಟ್ ತೀರ್ಪು ನೀಡಿದ್ದು, ಕೂಡಲೇ ಎಲ್ಲಾ ಅಪರಾಧಿಗಳನ್ನು ಕೂಡಲೇ ವಶಕ್ಕೆ ಪಡೆದುಕೊಳ್ಳುವಂತೆ ಆದೇಶಿಸಿ , ಶಿಕ್ಷೆ ಪ್ರಮಾಣವನ್ನೂ ನಾಳೆಗೆ (ಅಕ್ಟೋಬರ್ 25) ಕಾಯ್ದಿರಿಸಿದ್ದಾರೆ. ಕೋರ್ಟ್ ಸೂಚನೆಯಂತೆ ಸಿಬಿಐ ಅಧಿಕಾರಿಗಳು ಸತೀಶ್ ಸೈಲ್ ಸೇರಿದಂತೆ ಇತರೆ ಅಪರಾಧಿಗಳು ಕೋರ್ಟ್ನಲ್ಲೇ ವಶಕ್ಕೆ ಪಡೆದುಕೊಂಡು ಬೋರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಬಳಿಕ ಆಸ್ಪತ್ರೆಯಿಂದ ನೇರವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಬಿಟ್ಟರು.
ಇದನ್ನೂ ಓದಿ: ಬೇಲೆಕೇರಿ ಅದಿರು ಸಾಗಾಟ ಪ್ರಕರಣ: 6 ಕೇಸ್ನಲ್ಲೂ ಕೈ ಶಾಸಕ ಸತೀಶ್ ಸೈಲ್ ದೋಷಿ!
ಈ ಮೊದಲು ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ನ ಘಟಾನುಘಟಿ ನಾಯಕರೆಲ್ಲರೂ ಸೇರಿ ಅಕ್ರಮ ಗಣಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿ ಗಣಿ ಧಣಿಗಳ ವಿರುದ್ಧ ತೊಡೆತಟ್ಟಿದ್ದರು. ಇದೀಗ ಕಾಂಗ್ರೆಸ್ನ ಶಾಸಕ ಆಗಿರುವ ಸತೀಶ್ ಸೈಲ್ ಈಗ ಬೇಲೆಕೇರಿ ಅದಿರು ಪಕರಣದಲ್ಲಿ ಅಪರಾಧಿಯಾಗಿ ಜೈಲುಪಾಲಾಗಿದ್ದಾರೆ.
ಸದ್ಯ ಇವತ್ತು ಕೋರ್ಟ್‌ಗೆ ಹಾಜರಾಗಿದ್ದ ಆರೋಪಿಗಳನ್ನ ವಶಕ್ಕೆ ಪಡೆದು ಜೈಲಿಗೆ ಶಿಫ್ಟ್ ಮಾಡಲಾಗಿದೆ. ನಾಳೆ(ಅ.25) ಕೋರ್ಟ್ ಶಿಕ್ಷೆ ಪ್ರಕರಟಿಸಲಿದ್ದು, ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆಯಾದ್ರೆ ಜಾಮೀನು ಸಿಗುತ್ತೆ. ಇಲ್ಲವಾದ್ರೆ, ಸತೀಶ್ ಸೈಲ್‌ಗೆ ಜೈಲೇ ಗತಿ. ಜೊತೆಗೆ ಎರಡು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಯಾದ್ರೆ, ಸತೀಶ್ ಸೈಲ್ ಶಾಸಕ ಸ್ಥಾನವೂ ಅನರ್ಹಗೊಳ್ಳಲಿದೆ. ನಾಳೆ ಮಧ್ಯಾಹ್ನ 12.30ಕ್ಕೆ ಶಾಸಕರ ಭವಿಷ್ಯ ನಿರ್ಧಾರವಾಗಲಿದೆ.
ಬಳ್ಳಾರಿಯಿಂದ ಮ್ಯಾಂಗನೀಸ್ ಅದಿರನ್ನ ಸಾಗಿಸಿ, ಬೇಲೆಕೇರಿ ಬಂದರಿನ ಮೂಲಕ ವಿದೇಶಕ್ಕೆ ರಫ್ತು ಮಾಡಲಾಗಿತ್ತು. ಈ ವೇಳೆ 2010ರಲ್ಲಿ 5 ಲಕ್ಷ ಮೆಟ್ರಿಕ್ ಟನ್ ಅದಿರನ್ನ ಜಪ್ತಿ ಮಾಡಲಾಗಿತ್ತು. ಸೀಜ್ ಆಗಿದ್ದ ಅದಿರನ್ನ ಸಾಗಾಟ ಮಾಡಿದ ಆರೋಪ ಸತೀಶ್ ಸೈಲ್ ಮೇಲಿತ್ತು. ಈ ಸ್ಕ್ಯಾಮ್ ಅನ್ನು ಮಾಜಿ ಕರ್ನಾಟಕ ಲೋಕಾಯುಕ್ತರಾದ ಎನ್. ಸಂತೋಶ್ ಹೆಗ್ಡೆ ಬೆಳಕಿಗೆ ತಂದಿದ್ದರು. ಈ ವರದಿಯನ್ವಯ 7.74 ಮಿಲಿಯನ್ ಟನ್ ಕಬ್ಬಿಣದ ಅದಿರು ವಿದೇಶಕ್ಕೆ ರಫ್ತಾಗಿತ್ತು. 2006-07 ಹಾಗೂ 2010-11ರ ನಡುವೆ ಭಾರೀ ಪ್ರಮಾಣದ ಅದಿರು ವಿದೇಶಕ್ಕೆ ರಫ್ತಾಗಿತ್ತು. ಇದರಿಂದ ಸರಕಾರದ ಖಜಾನೆಗೆ ಭಾರೀ ನಷ್ಟವುಂಟಾಗಿತ್ತು.
ಸೀಜ್ ಆಗಿದ್ದ ಅದಿರು ನಾಪತ್ತೆಯಾಗಿದೆ ಎಂದು ಪೊಲೀಸರು ಕೇಸ್ ದಾಖಲಿಸಿದ್ದರು. ನಂತರ ಬೇಲೆಕೇರಿ ಪ್ರಕರಣವನ್ನ ಸಿಬಿಐಗೆ ವರ್ಗಾವಣೆ ಮಾಡಲಾಗಿತ್ತು. ಮಲ್ಲಿಕಾರ್ಜುನ ಶಿಪ್ಪಿಂಗ್ ಕಾರ್ಪೊರೇಷನ್ ಮಾಲೀಕರಾಗಿದ್ದ ಸತೀಶ್ ಸೈಲ್ ವಿರುದ್ಧ ಕ್ರಿಮಿನಲ್ ಕಾನ್ಸ್ಪಿರೆಸಿ, ಚೀಟಿಂಗ್, ಪೋರ್ಜರಿ, ಟ್ರೆಸ್‌ಪಾಸ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಸಿಬಿಐ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ಪ್ರಕರಣ ಸಂಬಂಧಿಸಿ 2013ರ ಸೆಪ್ಟೆಂಬರ್ ತಿಂಗಳಲ್ಲಿ ಸಿಬಿಐ ಸತೀಶ್ ಸೈಲ್ ಅವರನ್ನು ಬಂಧಿಸಿತ್ತು. ಇನ್ನು ಈ ಪ್ರಕರಣದಲ್ಲಿ ಅಂದಿನ ಬಿಎಸ್‌ಆರ್ ಕಾಂಗ್ರೆಸ್ ಕಂಪ್ಲಿ ಶಾಸಕ ಸುರೇಶ್ ಬಾಬು ಸಹ ಅರೆಸ್ಟ್ ಆಗಿದ್ದರು. ಬಳಿಕ ಸತೀಶ್ ಸೈಲ್ ಸಹ ಬಂಧನಕ್ಕೊಳಗಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ