
ಬೆಂಗಳೂರು, ಜೂನ್ 29: ಕರ್ನಾಟಕದಲ್ಲಿ ನಾಳೆಯಿಂದ (ಜೂನ್ 29) ಆರಂಭಗೊಳ್ಳಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (SIR) ರಾಜ್ಯ ಚುನಾವಣಾ ಆಯೋಗ ಬೇಕಾದ ತಯಾರಿ ಮಾಡಿಕೊಂಡಿದೆ. ಈ ಸಂಬಂಧ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಪ್ರಸ್ತುತ ಒಟ್ಟು 5,54,32,314 ಮತದಾರಿದ್ದು, ಎಲ್ಲರು ವಿಶೇಷ ಸಮಗ್ರ ಪರಿಷ್ಕರಣೆಗೆ ಒಳಪಡಲಿದ್ದಾರೆ. ಈಗಾಗಲೇ ಶೇ 91.61ನಷ್ಟು ಮತದಾರರು ಮ್ಯಾಪಿಂಗ್‌ಗೆ ಒಳಪಟ್ಟಿದ್ದಾರೆ. 46,52,504 ಮ್ಯಾಪಿಂಗ್‌ನಿಂದ ಹೊರ ಉಳಿದಿದ್ದಾರೆ ಎಂದು ಮಾಹಿತಿ ನೀಡಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್, ನಾಳೆಯಿಂದ ಜುಲೈ 29ರವರೆಗೆ ರಾಜ್ಯದಲ್ಲಿ SIR ಪ್ರಕ್ರಿಯೆ ನಡೆಯುತ್ತೆ. BLOಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡುತ್ತಾರೆ. ಆಗಸ್ಟ್ 5ರಂದು ಮತದಾರರ ಕರಡು ಪಟ್ಟಿ ಬಿಡುಗಡೆ ಮಾಡಲಾಗುವುದು. ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ. ನಂತರ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗುತ್ತೆ ಎಂದು ತಿಳಿಸಿದರು.
ಇದನ್ನೂ ಓದಿ: ಜಿಬಿಎ ವ್ಯಾಪ್ತಿಯಲ್ಲಿ ಶೇ 76.32ರಷ್ಟು ಮ್ಯಾಪಿಂಗ್: ಬೆಂಗಳೂರಿನಲ್ಲಿ SIR ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ ಆಯುಕ್ತರು
ಇನ್ನು ರಾಜ್ಯದಾದ್ಯಂತ 59,050 ಬೂತ್ ಮಟ್ಟದ ಅಧಿಕಾರಿಗಳ ನಿಯೋಜಿಸಲಾಗಿದೆ. 31 ಜಿಲ್ಲಾ ಚುನಾವಣಾಧಿಕಾರಿಗಳು, 4 ಅಪರ ಜಿಲ್ಲಾ ಚುನಾವಣಾಧಿಕಾರಿಗಳು, 224 ನೋಂಣಾಧಿಕಾರಿಗಳು, 336 ಸಹಾಯಕ ನೋಂದಣಾಧಿಕಾರಿಗಳು, 7556 BLOಗಳು, 1,15,112 ಬಿಎಲ್ಎಗಳ ನೇಮಕ ಮಾಡಲಾಗಿದೆ ಎಂದು ಹೇಳಿದರು.
BLOಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಣೆ ಮಾಡುತ್ತಾರೆ. ಭರ್ತಿ ಮಾಡಿದ ನಮೂನೆಗಳನ್ನು BLOಗಳು ಡಿಜಿಟಲೀಕರಣಕ್ಕೆ ಕಳಿಸುತ್ತಾರೆ. ಮನೆಗೆ ಅರ್ಜಿ ನೀಡಿದ ಬಳಿಕ ಮನೆಗಳಿಗೆ ಸ್ಟಿಕ್ಕರ್ ಅಂಟಿಸಲಾಗುತ್ತದೆ. ಎನ್ಯೂಮರೇಷನ್ ಫಾರ್ಮ್ ಭರ್ತಿ ದಯವಿಟ್ಟು ಬಿಎಲ್ಒಗಳಿಗೆ ವಾಪಸ್ ಕೊಡಬೇಕು. ಭರ್ತಿ ಮಾಡಿದ ನಮೂನೆ ಪಡೆಯಲು ಅಗತ್ಯವಿದ್ದರೆ ಕನಿಷ್ಟ ಮೂರು ಬಾರಿ ಅಧಿಕಾರಿಗಳು ಮನೆಗೆ ಭೇಟಿ ನೀಡುತ್ತಾರೆ. ರಾಜ್ಯದಲ್ಲಿ 1 ಕೋಟಿ 88 ಲಕ್ಷ ಮನೆಗಳಿವೆ ಎಂದರು.
ಬಿಎಲ್ಒ, BLAಗಳ ನಂಬರ್ ಕೂಡ ಆಯೋಗದ ವೆಬ್ಸೈಟ್ನಲ್ಲಿದೆ. ಬಿಎಲ್ಒಗಳಿಗೆ ಯಾವುದೇ ದಾಖಲೆ ಕೊಡಬಾರದು. SIR ಬಗ್ಗೆ ಪ್ರತಿದಿನ ಅಪ್ಡೇಟ್ ಕೊಡುತ್ತೇವೆ. ಎಷ್ಟು ಮನೆಗೆ ಭೇಟಿ ಕೊಟ್ಟಿದ್ದೇವೆ, ಎಷ್ಟು ಮತದಾರರು ಮೃತಪಟ್ಟಿದ್ದಾರೆ. ಎಷ್ಟು ಫಾರ್ಮ್ ಕೊಟ್ಟಿದ್ದೇವೆ, ಎಷ್ಟು ಮನೆಗೆ ಭೇಟಿ ಕೊಟ್ಟಿದ್ದೇವೆ, ಎಷ್ಟು ಮತದಾರರು ಮೃತಪಟ್ಟಿದ್ದಾರೆ ಹೀಗೆ ಪ್ರತಿಯೊಂದು ಮಾಹಿತಿಯನ್ನು ಅಪ್ಡೇಟ್ ಮಾಡುತ್ತೇವೆ. ಪ್ರತಿಯೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ವೋಟರ್ ಫೆಸಿಲಿಟಿ ಸೆಂಟರ್ ಇರುತ್ತೆ. ತಾಲೂಕು ವ್ಯಾಪ್ತಿಯಲ್ಲಿ ಬಿಎಲ್ಒ ಅನುಕೂಲಕ್ಕಾಗಿ ಸೆಂಟರ್ ಇರುತ್ತೆ. ಇನ್ನು SIR ಸಂದರ್ಭದಲ್ಲಿ ನೆಟ್ವರ್ಕ್, ಟೆಕ್ನಿಕಲ್ ಸಮಸ್ಯೆಯಾದಂತೆ ಸಿದ್ಧತೆಯಾಗಿದೆ. ನೆಟ್ವರ್ಕ್ ಇಲ್ಲದ ಕಡೆ ಬಿಎಲ್ಒಗಳಿಗೆ ವೈ-ಫೈ ಸೌಲಭ್ಯ ಕೊಟ್ಟಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಮನೆ ಶಿಫ್ಟ್ ಮಾಡಿದವರಿಗೆ ಬಿಗ್ ಶಾಕ್ ಕಾದಿದೆ; ನಾಳೆಯಿಂದ ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ‘SIR’ ಮತದಾರರ ಪಟ್ಟಿ ಪರಿಷ್ಕರಣೆ
ಎನ್ಯೂಮರೇಷನ್ ಫಾರ್ಮ್ಗೆ ಆ ಕುಟುಂಬದ ಯಾರು ಬೇಕಾದರು ಸಹಿ ಹಾಕಬಹುದು. ಆ ಅರ್ಜಿಯ ಮತದಾರ ಹೊರಗಡೆ ಹೋಗಿದ್ದರೆ, ಗಂಡನ ಪರವಾಗಿ ಹೆಂಡತಿ ಅಥವಾ ಅಕ್ಕನ ಪರವಾಗಿ ಸಹೋದರ ಸಹಿ ಮಾಡಬಹುದು. BLOಗಳಿಗೆ ನಿಗದಿತ ಸಮಯ ಇಲ್ಲ. ಮ್ಯಾಪಿಂಗ್ ಮಾಡಿದ ಸಮಯವನ್ನ ಆಧರಿಸಿ ಕೆಲವೊಂದು ಏರಿಯಾ, ಜಿಲ್ಲೆಗಳಿಗೆ ಅನುಗುಣವಾಗಿ ನಿರ್ಧಾರ ಮಾಡುತ್ತಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.
ವರದಿ: ಅರಣ್ ಕುಮಾರ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:30 pm, Mon, 29 June 26