ಬೇಸಿಗೆ ರಜೆ: ಈ ಜಿಲ್ಲೆಗಳಿಗೆ ವಿಶೇಷ ರೈಲುಗಳು, ಎಲ್ಲಿಂದ ಎಲ್ಲಿಗೆ? ಇಲ್ಲಿದೆ ಸಂಪೂರ್ಣ ವಿವರ

ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಈ ಕೆಳಗಿನ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಅದರಂತೆ, ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಬೆಳಗಾವಿ ನಡುವೆ ಎರಡು ಟ್ರಿಪ್ಗಳು, ಯಶವಂತಪುರ-ವಿಜಯಪುರ ಮತ್ತು ಎಸ್ಎಂವಿಟಿ ಬೆಂಗಳೂರು-ಮಧುರೈ ನಡುವೆ ತಲಾ ಒಂದು ಟ್ರಿಪ್ ಸೇರಿವೆ. ಈ ವಿಶೇಷ ರೈಲುಗಳ ವಿವರ ಇಲ್ಲಿದೆ.

ಬೇಸಿಗೆ ರಜೆ: ಈ ಜಿಲ್ಲೆಗಳಿಗೆ ವಿಶೇಷ ರೈಲುಗಳು, ಎಲ್ಲಿಂದ ಎಲ್ಲಿಗೆ? ಇಲ್ಲಿದೆ ಸಂಪೂರ್ಣ ವಿವರ
ಪ್ರಾತಿನಿಧಿಕ ಚಿತ್ರ
Edited By:

Updated on: Apr 28, 2025 | 6:50 PM

ಹುಬ್ಬಳ್ಳಿ, (ಏಪ್ರಿಲ್ 28): ಬೇಸಿಗೆ ರಜೆಯ (summer holidays) ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ನೈಋತ್ಯ ರೈಲ್ವೆ (South Western Railway) ಹಲವು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು (Special Express trains) ಬಿಟ್ಟಿದೆ. ಬೆಂಗಳೂರಿನಿಂದ ಬೆಳಗಾವಿ, ಯಶವಂತಪುರ ಟು ವಿಜಯಪುರ ಮತ್ತು ಬೆಂಗಳೂರು ಟು ಮಧುರೈ ನಡುವೆ ಈ ವಿಶೇಷ ರೈಲುಗಳು ಸಂಚರಿಸಲಿವೆ. ಹಾಗಾದ್ರೆ, ಈ ವಿಶೇಷ ರೈಲುಗಳು ಯಾವಾಗಿನಿಂದ ಸಂಚರಿಸಲಿವೆ? ಯಾವೆಲ್ಲಾ ಸ್ಟೇಷನ್​ಗಳಲ್ಲಿ ನಿಲುಗಡೆಯಾಗಲಿವೆ ಎನ್ನುವ ಸಂಪೂರ್ಣ ಈ ಕೆಳಗಿನಂತಿದೆ.

1.ಬೆಂಗಳೂರು–ಬೆಳಗಾವಿ ನಡುವೆ  ವಿಶೇಷ ರೈಲು

06551 ನಂಬರಿನ ವಿಶೇಷ ರೈಲು ಎಸ್ಎಂವಿಟಿ ಬೆಂಗಳೂರು ಟು ಬೆಳಗಾವಿ ನಡುವೆ ಸಂಚರಿಸಲಿದೆ. ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್​ನಿಂದ ಏಪ್ರಿಲ್ 30 ಮತ್ತು ಮೇ 2, 2025 ರಂದು ಸಂಜೆ 7:00 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 07:30 ಗಂಟೆಗೆ ಬೆಳಗಾವಿಯನ್ನು ತಲುಪಲಿದೆ.

ಇನ್ನು ಸಂಖ್ಯೆ 06552 ಬೆಳಗಾವಿ ಟು ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ಬೆಳಗಾವಿಯಿಂದ ಮೇ 1 ಮತ್ತು 3, 2025 ರಂದು ಸಂಜೆ 05:30 ಗಂಟೆಗೆ ಹೊರಟು, ಮರುದಿನ ಬೆಳಗಿನ ಜಾವ 04:30 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರನ್ನು ತಲುಪಲಿದೆ.

ಈ ರೈಲುಗಳು ಎರಡೂ ಮಾರ್ಗಗಳಲ್ಲಿ ತುಮಕೂರು, ಅರಸಿಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್ಎಂಎಂ. ಹಾವೇರಿ, ಎಸ್ಎಸ್ಎಸ್. ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.


ಈ ರೈಲಿನಲ್ಲಿ 1 ಎಸಿ-ಟು ಟೈರ್, 01 ಎಸಿ-ತ್ರಿ ಟೈರ್, 08 ಸ್ಲೀಪರ್ ಕ್ಲಾಸ್, 04 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 02 ಎಸ್ಎಲ್ಆರ್/ಡಿ ಬೋಗಿಗಳು ಸೇರಿದಂತೆ ಒಟ್ಟು 16 ಬೋಗಿಗಳು ಇರಲಿವೆ.

2. ಯಶವಂತಪುರ–ವಿಜಯಪುರ ನಡುವೆ ಎಕ್ಸ್​ಪ್ರೆಸ್ ಟ್ರೈನ್

ರೈಲು ಸಂಖ್ಯೆ 06561 ಯಶವಂತಪುರ – ವಿಜಯಪುರ ವಿಶೇಷ ಎಕ್ಸ್ ಪ್ರೆಸ್ ಯಶವಂತಪುರದಿಂದ ಏಪ್ರಿಲ್ 30, 2025 ರಂದು ರಾತ್ರಿ 10:00 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 02:05 ಗಂಟೆಗೆ ವಿಜಯಪುರವನ್ನು ತಲುಪಲಿದೆ. ಹಿಂತಿರುಗುವ ಮಾರ್ಗದಲ್ಲಿ, ರೈಲು ಸಂಖ್ಯೆ 06562 ವಿಜಯಪುರ–ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ವಿಜಯಪುರದಿಂದ ಮೇ 1, 2025 ರಂದು ಸಂಜೆ 7:00 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 11:15 ಗಂಟೆಗೆ ಯಶವಂತಪುರವನ್ನು ತಲುಪಲಿದೆ.

ಈ ರೈಲುಗಳು ಎರಡೂ ಮಾರ್ಗಗಳಲ್ಲಿ ತುಮಕೂರು, ಅರಸಿಕೆರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆಂಟ್, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಬದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.

ಈ ರೈಲಿನಲ್ಲಿ 02 ಎಸಿ-ಟು ಟೈರ್, 06 ಎಸಿ-ತ್ರಿ ಟೈರ್, 07 ಸ್ಲೀಪರ್ ಕ್ಲಾಸ್, 04 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 02 ಲಗೇಜ್/ಜನರೇಟರ್/ಬ್ರೇಕ್ ವ್ಯಾನ್ಗಳು ಸೇರಿದಂತೆ ಒಟ್ಟು 21 ಬೋಗಿಗಳು ಇರಲಿವೆ.

3. ಎಸ್ಎಂವಿಟಿ ಬೆಂಗಳೂರು–ಮಧುರೈ ವಿಶೇಷ ರೈಲು

ರೈಲು ಸಂಖ್ಯೆ 06521 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಮಧುರೈ ವಿಶೇಷ ಎಕ್ಸ್ ಪ್ರೆಸ್ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಏಪ್ರಿಲ್ 30, 2025 ರಂದು ಸಂಜೆ 07:00 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 06:15 ಗಂಟೆಗೆ ಮಧುರೈಯನ್ನು ತಲುಪಲಿದೆ.

ಹಿಂತಿರುಗುವ ಮಾರ್ಗದಲ್ಲಿ, ರೈಲು ಸಂಖ್ಯೆ 06522 ಮಧುರೈ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ವಿಶೇಷ ಎಕ್ಸ್ ಪ್ರೆಸ್ ಮಧುರೈಯಿಂದ ಮೇ 1, 2025 ರಂದು ಬೆಳಿಗ್ಗೆ 09:10 ಗಂಟೆಗೆ ಹೊರಟು, ಅದೇ ದಿನ ಸಂಜೆ 07:50 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರನ್ನು ತಲುಪಲಿದೆ.

ಈ ರೈಲುಗಳು ಎರಡೂ ಮಾರ್ಗಗಳಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರು, ದಿಂಡಿಗುಲ್ ಮತ್ತು ಕೊಡೈಕೆನಾಲ್ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ. ಈ ರೈಲಿನಲ್ಲಿ 2 ಎಸಿ-ಟು ಟೈರ್, 16 ಎಸಿ-ತ್ರಿ ಟೈರ್ ಮತ್ತು 2 ಲಗೇಜ್/ಜನರೇಟರ್/ಬ್ರೇಕ್ ವ್ಯಾನ್ಗಳು ಸೇರಿದಂತೆ ಒಟ್ಟು 20 ಬೋಗಿಗಳು ಇರಲಿವೆ.

ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ ಮತ್ತು ನಿರ್ಗಮನದ ವೇಳಾಪಟ್ಟಿಯನ್ನು ತಿಳಿಯಲು ಭಾರತೀಯ ರೈಲ್ವೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು ಅಥವಾ ನಿಮ್ಮ ಹತ್ತಿರದ ರೈಲ್ವೆ ಬುಕಿಂಗ್ ಕೌಂಟರ್’ಗಳನ್ನು ಸಂಪರ್ಕಿಸಬಹುದು.

Published On - 6:48 pm, Mon, 28 April 25