ಬೆಂಗಳೂರು, (ಸೆಪ್ಟೆಂಬರ್ 30): ನಿಯಮ ಉಲ್ಲಂಘನೆ ಮಾಡಿ ಸಾಯಿ ಮಿನರಲ್ಸ್ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಆರೋಪ ಇದೀಗ ಕೇಂದ್ರ ಸಚಿವ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದೆ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ಗೆ ಲೋಕಾಯುಕ್ತ ಎಡಿಜಿಪಿ ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದು, 2011ರಲ್ಲಿ ಗಣಿ ಗುತ್ತಿಗೆಯಲ್ಲಿ ಅಕ್ರಮ ಆಗಿದೆ ಅಂತ ಸಂತೋಷ್ ಹೆಗಡೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಕಚೇರಿಯಿಂದ ಅನುಮತಿ ಸಿಕ್ಕಿರಲಿಲ್ಲ. ಹೀಗಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಇದೀಗ ತನಿಖೆಗೆ ಆದೇಶ ನೀಡುವಂತೆ ಪತ್ರ ಬರೆದಿದ್ದಾರೆ. ಈ ಪತ್ರದ ಬೆನ್ನಲ್ಲೇ ಲೋಕಾಯುಕ್ತ ಎಸ್ಐಟಿ ಅಧಿಕಾರಿಗಳು, ನ್ಯಾ.ಸಂತೋಷ್ ಹೆಗಡೆ ವರದಿ ಆಧರಿಸಿಯೇ ತನಿಖೆ ಶುರು ಮಾಡಿದ್ದಾರೆ. ಲೋಕಾಯುಕ್ತ ಎಸ್ಐಟಿಯಿಂದ ಕುಮಾರಸ್ವಾಮಿ ಜಾಮೀನು ರದ್ದುಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಶ್ರೀಸಾಯಿ ಮಿನರಲ್ಸ್ ಪ್ರಕರಣದಲ್ಲಿ ಕುಮಾರಸ್ವಾಮಿ ಜಾಮೀನು ಪಡೆದುಕೊಂಡಿದ್ದರು. ಆದ್ರೆ, ಇದೀಗ ತನಿಖೆಯ ಅಖಾಡಕ್ಕೆ ಲೋಕಾಯುಕ್ತ ಎಸ್ಐಟಿ ಎಂಟ್ರಿ ಕೊಟ್ಟಿದ್ದು, ಹೆಚ್ಡಿಕೆ ಜಾಮೀನು ರದ್ದುಕೋರಿ ಎಸ್ಐಟಿ, ಹೈಕೋರ್ಟ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಹೀಗಾಗಿ ಗಂಗೇನಹಳ್ಳಿ ಜತೆ, ಶ್ರೀಸಾಯಿ ಮಿನರಲ್ಸ್ ಕೇಸ್ ಕುಮಾರಸ್ವಾಮಿಗೆ ಉರುಳಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಹೆಚ್ಡಿ ಕುಮಾರಸ್ವಾಮಿ ನನ್ನ ಮೇಲೆ ಸುಳ್ಳು ಆರೋಪದ ಜೊತೆಗೆ ಬೆದರಿಕೆ ಹಾಕಿದ್ದಾರೆ: ಎಡಿಜಿಪಿ ಚಂದ್ರಶೇಖರ್
ಬಳ್ಳಾರಿಯ ಸಂಡೂರು ತಾಲೂಕಿನ NEBರೇಂಜ್ ಪ್ರದೇಶದಲ್ಲಿನ ಸರ್ಕಾರದ 550 ಎಕರೆ ಪ್ರದೇಶಕ್ಕೆ ಗಣಿ ಗುತ್ತಿಗೆ ಮಂಜೂರಾತಿ ಮಾಡುವಂತೆ 2006 ಏಪ್ರಿಲ್ನಲ್ಲೇ ಅರ್ಜಿ ಸಲ್ಲಿಸಲಾಗಿತ್ತು. ಶ್ರೀಸಾಯಿ ವೆಂಕಟೇಶ್ವರ್ ಮಿನರಲ್ಸ್ ಕಂಪನಿಗೆ ಮಂಜೂರಾತಿ ಮಾಡಲಾಗಿತ್ತಂತೆ. ಸೋಮನಾಥ ವಿ.ಸಾಕ್ರೆ ರಾಜಕುಮಾರ್ ಅಗರವಾಲ್ ಅವರ ಕಂಪನಿ ಇದ್ದಾಗಿದ್ದು, ಗಣಿ ಗುತ್ತಿಗೆಗೆ ಕೋರಿ ಅರ್ಜಿಯೊಂದಿಗೆ ಎರಡು ಡಿಡಿ, ಚೆಕ್ ಸಲ್ಲಿಸಿದ್ರಂತೆ. 2006ಏ. 17ರಂದು ಗಣಿ & ಭೂ ವಿಜ್ಞಾನ ಇಲಾಖೆಗೆ ಅರ್ಜಿ ಕೂಡ ಸಲ್ಲಿಸಿದ್ರಂತೆ. ಸಾಕ್ರೆ ಹೆಸರಿನ ಬದಲು ವಿನೋದ್ ಗೋಯೆಲ್ ಹೆಸರಿಗೆ ಗುತ್ತಿಗೆ ಮಾಡಲಾಗಿತ್ತಂತೆ. ಲಾಭ ಪಡೆಯುವ ಉದ್ದೇಶ ವಿನೋದ್ ಗೋಯಲ್ ಪ್ಲ್ಯಾನ್ ಮಾಡಿದ್ರು ಅನ್ನೋ ಬಗ್ಗೆ ಮಾಹಿತಿ ಇದೆ. ಇದೇ ವಿನೋದ್ ಗೋಯಲ್ ಇಲಾಖೆ ಅಧಿಕಾರಿಗಳನ್ನ ಟಾರ್ಗೆಟ್ ಮಾಡಿದ್ರಂತೆ. ಜಯಚಂದ್ರ, ಜವರೇಗೌಡ ಅನ್ನೋರ ಜತೆ ಶಾಮೀಲಾಗಿ ಅಕ್ರಮವೆಸಗಿರುವ ಆರೋಪ ಇದೆ. ಸುಳ್ಳು ದಾಖಲೆ ಸೃಷ್ಟಿಸಿ, ಆ ದಾಖಲೆಗಳ ಆಧರಿಸಿ ಅಕ್ರಮಕ್ಕೆ ಅನುಮತಿ ನೀಡಲಾಗಿತ್ತಂತೆ. ಸಾಕ್ರೆ ಹೆಸರಿನ ಬದಲು ವಿನೋದ್ ಗೋಯೆಲ್ ಹೆಸರಿಗೆ ಗುತ್ತಿಗೆ ಪಡೆದುಕೊಂಡು, ಅಕ್ರಮವಾಗಿ ಗಣಿ ಗುತ್ತಿಗೆ ಪಡೆಯಲು ಯತ್ನಿಸಿದ್ದಾರೆಂಬ ಆರೋಪ ಇದೆ. ವಿನೋದ್ ಗೋಯಲ್ ಯಾವುದೇ ಗಣಿ ಗುತ್ತಿಗೆಗೆ ಅರ್ಜಿ ಹಾಕಿರಲಿಲ್ವಂತೆ. ಆಗ ಸಿಎಂ ಆಗಿದ್ದ ಹೆಚ್.ಡಿ ಕುಮಾರಸ್ವಾಮಿ ಒಳಸಂಚಿನಿಂದ ಸಂಡೂರು ಬಳಿಯ 550 ಎಕರೆ ಭೂಮಿ ಮಂಜೂರು ಆರೋಪ ಇದೆ. ಅಕ್ಟೋಬರ್ 5, 2007 ರಂದು ಇಲಾಖೆಗೆ ಕಡತ ಸಲ್ಲಿಸಲು ಖುದ್ದು ಕುಮಾರಸ್ವಾಮಿಯೇ ನಿರ್ದೇಶನ ಕೊಟ್ಟಿರುವ ಬಗ್ಗೆ ಆರೋಪ ಇದೆ.
ಕೇವಲ ಇದಿಷ್ಟೇ ಆರೋಪಗಳು ಮಾತ್ರವಲ್ಲ,, ಕುಮಾರಸ್ವಾಮಿ ಖನಿಜ ರಿಯಾಯಿತಿ ನಿಯಾಮವಳಿ 1960ಕ್ಕೆ ವಿರುದ್ಧವಾಗಿ ಆದೇಶ ನೀಡಿದ್ದು, ಯಾವುದೇ ಸ್ಪಷ್ಟ ಕಾರಣ ನೀಡದಿರುವ ಆರೋಪವೂ ಇದೆ. ನಾನು ದಾಖಲೆಗಳನ್ನ ಪರಿಶೀಲನೆ ಮಾಡಿದ್ದೇನೆ.. ಎಲ್ಲವನ್ನೂ ಪರಿಶೀಲನೆ ಮಾಡಿಯೇ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಗೆ ಭೂಮಿ ಮಂಜೂರು ಮಾಡಲಾಗಿದೆ ಅಂತ ಅಕ್ಟೋಬರ್ 6, 2007 ರ ಕಡತದಲ್ಲಿ ಕುಮಾರಸ್ವಾಮಿ ಬರೆದಿರುವ ಬಗ್ಗೆ ಆರೋಪ ಇದೆ..
ಶ್ರೀಸಾಯಿ ಮಿನರಲ್ಸ್ ಪ್ರಕರಣದಲ್ಲಿ ಕುಮಾರಸ್ವಾಮಿ ಜಾಮೀನು ಪಡೆದುಕೊಂಡಿದ್ದರು. ಆದ್ರೀಗ ತನಿಖೆಯ ಅಖಾಡಕ್ಕೆ ಲೋಕಾಯುಕ್ತ ಎಸ್ಐಟಿ ಎಂಟ್ರಿ ಕೊಟ್ಟಿದ್ದು, ಹೆಚ್ಡಿಕೆಗೆ ಸಂಕಷ್ಟದ ಸುಳಿ ಸುತ್ತಿಕೊಂಡಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:40 pm, Mon, 30 September 24