ಬೆಂಗಳೂರು, ಮೇ 12: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಅಧ್ಯಕ್ಷೆ ಮಂಜುಶ್ರೀ ಅವರು ಗುರುವಾರ (ಮೇ 09) 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ (SSLC Result) ಪ್ರಕಟಿಸಿದ್ದಾರೆ. ಈ ಬಾರಿ ಪರೀಕ್ಷೆ ಬರೆದಿದ್ದ 8.59 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಶೇ.73.40ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ ಶೇ.83.89ರಷ್ಟು ಫಲಿತಾಂಶಕ್ಕೆ ಹೋಲಿಸಿದರೆ ಶೇ.10.49ರಷ್ಟು ಕುಸಿತ ಕಂಡಿದೆ.
ವಿದ್ಯಾರ್ಥಿಗಳು ಉತ್ತೀರ್ಣರಾಗುವ ಇದ್ದ ಶೇ 35 ಅರ್ಹ ಅಂಕಗಳನ್ನು ಇಲಾಖೆ ಶೇ 25ಕ್ಕೆ ಇಳಿಸಿದೆ. ಅಲ್ಲದೆ ಈ ಬಾರಿ ಕೃಪಾಂಕವನ್ನೂ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಮೂರು ವಿಷಯಗಳಲ್ಲಿ 35 ಅಂಕ ಪಡೆದು ಇನ್ನುಳಿದ ಮೂರು ವಿಷಯಗಳಲ್ಲಿ ಫೇಲ್ ಆಗಿದ್ದರೆ, ಆ ವಿದ್ಯಾರ್ಥಿಗೆ ಇಲಾಖೆ 10 ಕೃಪಾಂಕ ನೀಡಿ ಪಾಸ್ ಮಾಡುತ್ತಿತ್ತು. ಆದರೆ ಈ ಬಾರಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೃಪಾಂಕ ಪಡೆಯಲು ಇದ್ದ ಶೇ 35 ಅರ್ಹ ಅಂಕಗಳನ್ನು ಶೇ 25ಕ್ಕೆ ಇಳಿಸಿ 20 ಕೃಪಾಂಕ ನೀಡಲಾಗಿದೆ. ಈ ಕೃಪಾಂಕವನ್ನು ದುಪ್ಪಟ್ಟುಗೊಳಿಸದೆ ಹೋಗಿದ್ದರೆ ಫಲಿತಾಂಶ ಶೇ.53ಕ್ಕೆ ಕುಸಿಯುತ್ತಿತ್ತು. ಅಂದರೆ ಕಳೆದ ವರ್ಷಕ್ಕಿಂತ ಶೇ.30ರಷ್ಟು ಫಲಿತಾಂಶ ಇಳಿಕೆಯಾಗುತ್ತಿತ್ತು ಅಂತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಸಿಂಗ್ ಹೇಳಿದ್ದಾರೆ.
ಶೇ 75 ಪರ್ಸೆಂಟ್ ರಿಸಲ್ಟ್ ಬರಬೇಕು ಅನ್ನೋ ಉದ್ದೇಶದಿಂದ ಈ ಬಾರಿ ಏಕಾಏಕಿ 20 ಕೃಪಾಂಕ ಕೊಡಲಾಗಿದೆ. ಈ ಕೃಪಾಂಕ ನೀಡದಿದ್ದರೆ ಈ ಬಾರಿ ಶೇ50 ರಷ್ಟು ಫಲಿತಾಂಶ ಹೊರ ಬರುತ್ತಿತ್ತು. 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿದ್ದರೂ, ಕಳೆದ ಬಾರಿಗಿಂತ ಈ ಸಲ ಶೇ 10 ರಷ್ಟು ಫಲಿತಾಂಶ ಕುಸಿದಿದೆ. ಕಳಪೆ ಗುಣಮಟ್ಟ ಶಿಕ್ಷಣದ ಕೈಗನ್ನಡಿ. ತೇಪೆ ಹಚ್ಚುವ ಕೆಲಸ ಮಾಡಲಾಗುತ್ತಿದೆ ಅಂತ ಪೋಷಕರು ಕಿಡಿಕಾರಿದ್ದಾರೆ.
ಇದನ್ನೂ ಓದಿ: SSLC Exam 2 Time Table: ಎಸ್‌ಎಸ್‌ಎಲ್‌ಸಿ ಪರೀಕ್ಷೆ- 2ರ ವೇಳಾಪಟ್ಟಿ ಪ್ರಕಟ
ಶಿಕ್ಷಣ ಇಲಾಖೆಯ ನಡೆಗೆ ಪೋಷಕ ಸಂಘಟನೆಗಳ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಬಾರಿಯ ಫಲಿತಾಂಶದ ಕುಸಿತಕ್ಕೆ ವೆಬ್ ಕಾಸ್ಟಿಂಗ್ ಕಾರಣ. ಪರೀಕ್ಷೆಗೂ ಮೊದಲೆ ವೆಬ್ ಕಾಸ್ಟಿಂಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಹೀಗಿದ್ದರೂ ಶಿಕ್ಷಣ ಇಲಾಖೆ ವೆಬ್ ಕಾಸ್ಟಿಂಗ್ ಮಾಡಿದೆ. ಈ ಬಾರಿ ನಡೆದ ಪರೀಕ್ಷೆಯಲ್ಲಿ ಮಕ್ಕಳು ನಕಲು ಮಾಡದೆ ಇದ್ದರೂ ಹೆದರಿ ಮಾನಸಿಕ ಸ್ಥೈರ್ಯ ಕಡಿಮೆ ಆಗಿ ಅನುತ್ತೀರ್ಣರಾಗಿದ್ದಾ ಎಂದು ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಯೋಗಾನಂದ ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಶಿಕ್ಷಣ ನೀತಿಯಲ್ಲಿನ ಗೊಂದಲವೊ, ಶೈಕ್ಷಣಿಕ ವ್ಯವಸ್ಥೆಯ ಕಾರಣವೊ, ವಿದ್ಯಾರ್ಥಿಗಳ ಆಸಕ್ತಿಯ ಕೊರತೆಯ ಕಾರಣವೊ, ಗೊತ್ತಿಲ್ಲ. ಈ ಬಾರಿಯ ಫಲಿತಾಂಶ ಕುಸಿತಿದೆ. ಇನ್ನು ಎರಡು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಅವಕಾಶವಿದ್ದರೂ ಕೃಪಾಂಕ ನೀಡಿದ್ದು ಯಾಕೆ ಅನ್ನೋದೆ ಸದ್ಯದ ಪ್ರಶ್ನೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ