ದಕ್ಷಿಣ ಕನ್ನಡ: ಓದಿದ ಎಲ್ಲಾ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಮತ್ತು ಅದನ್ನು ಪರೀಕ್ಷೆ ಸಂದರ್ಭದಲ್ಲಿ ಅಥವಾ ಇನ್ನಿತರ ಸಂದರ್ಭದಲ್ಲಿ ಬಳಸಿಕೊಳ್ಳುವುದು ವಿದ್ಯಾರ್ಥಿಗಳಿಗೆ ಒಂದು ಸವಾಲಿನ ಕೆಲಸ. ವಿದ್ಯಾರ್ಥಿ ಜೀವನದಲ್ಲಿ ಈ ರೀತಿ ಪರೀಕ್ಷೆ ಬರೆಯೋದಕ್ಕಂತಲೇ ಹೆಚ್ಚಿನ ವಿದ್ಯಾರ್ಥಿಗಳು ಬಾಯಿಪಾಠ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಮಂಗಳೂರಿನ ಓರ್ವ ವಿದ್ಯಾರ್ಥಿನಿ ಎಸ್ಎಸ್ಎಲ್ಸಿಯ ಪೂರ್ಣ ಪಠ್ಯವನ್ನು ಚಿತ್ರವೊಂದರಲ್ಲೇ ದಾಖಲು ಮಾಡಿದ್ದಾಳೆ. ಈ ವಿದ್ಯಾರ್ಥಿನಿಯ ಸಾಧನೆ ಸದ್ಯ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ.
ಪರೀಕ್ಷೆ ಅಂತಾ ಬಂದಾಗ ಓದಿದನ್ನು ನೆನಪು ಮಾಡಿಕೊಳ್ಳಬೇಕು. ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಬರೆಯಬೇಕು. ಆದರೆ ಮಂಗಳೂರಿನಲ್ಲಿ ಓರ್ವ ವಿದ್ಯಾರ್ಥಿನಿ ಪಠ್ಯವನ್ನು ಕೇವಲ ಚಿತ್ರದಲ್ಲೇ ದಾಖಲು ಮಾಡಿದ್ದಾರೆ. ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯಾಗಿರುವ ಆದಿ ಸ್ವರೂಪ, ಎಸ್ಎಸ್ಎಲ್ಸಿಯ ಆರು ವಿಷಯಗಳ ಪಠ್ಯವನ್ನು ಚಿತ್ರದಲ್ಲಿ ಬಿಡಿಸುವ ಮೂಲಕ ಸಾಧನೆ ಮಾಡಿದ್ದಾಳೆ. ಇದಕ್ಕಾಗಿ ಎ4 ಗಾತ್ರದ ಎಂಟು ಹಾಳೆಗಳನ್ನು ಬಳಸಿದ್ದಾಳೆ.
ಆದಿ ಸ್ವರೂಪ ಅನೌಪಚಾರಿಕ ಶಿಕ್ಷಣದ ಸ್ವಕಲಿಕಾ ಸಂಸ್ಥೆಯಾಗಿರುವ ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಮತ್ತು ಪ್ರಾಂಶುಪಾಲೆ ಸುಮಾಡ್ಕರ್ ದಂಪತಿಯ ಪುತ್ರಿ. ಈ ಸಂಸ್ಥೆ ಮಕ್ಕಳಿಗೆ ಸರಳವಾಗಿ ಕಲಿಯುವ ಮತ್ತು ಮೆದುಳಿನ ಸಾಮರ್ಥ್ಯ ಹೆಚ್ಚಿಸುವ 10 ಕಲಿಕಾ ಕ್ರಮಗಳನ್ನು ಕಲಿಸಿಕೊಡುತ್ತದೆ. ಅದರಲ್ಲಿ ಈ ವಿಶೂವಲ್ ಮೆಮೊರಿ ಆರ್ಟ್ ಸಹ ಒಂದು. ಇದೇ ವಿಧಾನವನ್ನು ಬಳಸಿಕೊಂಡು ಆದಿ ಸ್ವರೂಪ ಈ ಸಾಧನೆ ಮಾಡಿದ್ದಾಳೆ.
ಆರು ವಿಷಯಗಳ ಹತ್ತು ಪಠ್ಯ ಪುಸ್ತಕಗಳನ್ನು ಈ ಚಿತ್ರಗಳಲ್ಲಿ ವಿವರಿಸಿದ್ದಾರೆ. ಇದರಲ್ಲಿ 93 ಸಾವಿರ ಕಿರುಚಿತ್ರಗಳು ಇದೆ. ಇಲ್ಲಿ ಆರ್ಟ್ ಮೂಲಕ ಪೂರ್ತಿ ಪಠ್ಯವನ್ನು ದಾಖಲು ಮಾಡಿರುವುದರಿಂದ ಮನನ ಹೆಚ್ಚು ಸಾಧ್ಯ ಎಂಬುವುದು ವಿದ್ಯಾರ್ಥಿನಿ ಆದಿ ಸ್ವರೂಪಾಳ ಅಭಿಪ್ರಾಯ.
ಆದಿ ಸ್ವರೂಪ ಈಗಾಗಲೇ ಹಾಡುತ್ತಾ ಅದೇ ಸಮಯದಲ್ಲಿ ಎರಡು ಕೈಗಳಲ್ಲಿ ವಿಭಿನ್ನ ಭಾಷೆಗಳಲ್ಲಿ ಬರೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಇದೀಗ ಸುಲಭವಾಗಿ ಎಸ್ಎಸ್ಎಲ್ಸಿಯ ಪಾಠಗಳನ್ನು ಹೇಗೆ ಕಲಿತೆ ಎಂಬುವುದನ್ನು ಇತರ ವಿದ್ಯಾರ್ಥಿಗಳಿಗೆ ತೋರಿಸಲು ಈ ದಾಖಲೆ ಮಾಡಿದ್ದಾರೆ. ನಿನ್ನೆ( ಜುಲೈ 19) ಆದಿ ಸ್ವರೂಪ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದು, ಅತೀ ಹೆಚ್ಚು ಅಂಕ ಗಳಿಸುವ ವಿಶ್ವಾಸ ಹೊಂದಿದ್ದಾರೆ. ಒಟ್ಟಿನಲ್ಲಿ ಆದಿ ಸ್ವರೂಪಳ ಈ ಸಾಧನೆ ನಿಜಕ್ಕೂ ಮೆಚ್ಚುವಂತದ್ದು.
ವರದಿ: ಪೃಥ್ವಿರಾಜ್ ಬೊಮ್ಮನಕೆರೆ
ಇದನ್ನೂ ಓದಿ:
ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ 4 ವರ್ಷದ ಬಾಲಕಿ ಹೆಸರು
ವಿಮಾನದ ಬಾಲ ನೋಡಿ ಫಟಾಫಟ್ ಅಂತ ಒಂದೇ ನಿಮಿಷದಲ್ಲಿ ಅತೀ ಹೆಚ್ಚು ವಿಮಾನಗಳನ್ನು ಗುರುತಿಸಿ ವಿಶ್ವದಾಖಲೆ ಬರೆದ ಪೋರಿ