ಕಲ್ಲು ತೂರಿದವರು ನಮ್ಮ‌ ಸಮಾಜದವರಲ್ಲ, ಬಿಜೆಪಿ, ಆರ್‌ಎಸ್‌ಎಸ್​​ನವರು: ಕಾಶಪ್ಪನವರ್​ ಹೊಸ ಬಾಂಬ್​

| Updated By: ಗಂಗಾಧರ​ ಬ. ಸಾಬೋಜಿ

Updated on: Dec 12, 2024 | 6:02 PM

ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ ಮೇಲೆ ನಡೆದ ಲಾಠಿಚಾರ್ಜ್‌ ಕುರಿತು ವಿಜಯಾನಂದ ಕಾಶಪ್ಪನವರ್ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಆರೋಪ ಮಾಡಿದ್ದಾರೆ. ಕಲ್ಲು ತೂರಲು ಸ್ವಾಮೀಜಿಯೇ ಪ್ರಚೋದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಘಟನೆಯಿಂದಾಗಿ ವಿಧಾನಸಭೆಯ ಕಲಾಪವನ್ನು ಮುಂದೂಡಬೇಕಾಯಿತು. ಲಾಠಿಚಾರ್ಜ್‌ ವಿಚಾರವಾಗಿ ವಿಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಕಲ್ಲು ತೂರಿದವರು ನಮ್ಮ‌ ಸಮಾಜದವರಲ್ಲ, ಬಿಜೆಪಿ, ಆರ್‌ಎಸ್‌ಎಸ್​​ನವರು: ಕಾಶಪ್ಪನವರ್​ ಹೊಸ ಬಾಂಬ್​
ಕಲ್ಲು ತೂರಿದವರು ನಮ್ಮ‌ ಸಮಾಜದವರಲ್ಲ, ಬಿಜೆಪಿ, ಆರ್‌ಎಸ್‌ಎಸ್​​ನವರು: ಕಾಶಪ್ಪನವರ್​ ಹೊಸ ಬಾಂಬ್​
Follow us on

ಬೆಳಗಾವಿ, ಡಿಸೆಂಬರ್​ 12: 2ಎ ಮೀಸಲಾತಿಗಾಗಿ (Panchamasali reservation) ಹೋರಾಟ ಮಾಡುತ್ತಿದ್ದ ಪಂಚಮಸಾಲಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಸದ್ಯ ಸದನದ ಒಳಗೂ ಮತ್ತು ಹೊರಗೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿಪಕ್ಷ ಬಿಜೆಪಿ ನಾಯಕರು ಇದನ್ನೇ ಅಸ್ತ್ರವಾಗಿಸಿಕೊಂಡಿದ್ದು, ಆಡಳಿತಾರೂಢ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಮಧ್ಯೆ ಅದೇ ಸಮುದಾಯದ ಶಾಸಕ ವಿಜಯಾನಂದ ಕಾಶಪ್ಪನವರ್,​ ಕಲ್ಲು ತೂರಿದವರು ನಮ್ಮ‌ ಸಮಾಜದವರಲ್ಲ. ಅವರು ಬಿಜೆಪಿ ಕಾರ್ಯಕರ್ತರು, ಆರ್‌ಎಸ್‌ಎಸ್​ನವರು ಎಂದು ಹೊಸ ಬಾಂಬ್​ ಹಾಕಿದ್ದಾರೆ.

ಕಲ್ಲು ತೂರಲು ಪ್ರವೋಕ್ ಮಾಡಿದ್ದು ಸ್ವಾಮೀಜಿ: ವಿಜಯಾನಂದ ಕಾಶಪ್ಪನವರ್

ಬೆಳಗಾವಿ ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರ್​, ನಮ್ಮ ಸಮಾಜದ ಅಮಾಯಕರ ಮೇಲೆ ಲಾಠಿ ಚಾರ್ಜ್​ ಮಾಡುವ ಹಾಗಾಯಿತು. ಕಲ್ಲು ತೂರಿದವರು ನಮ್ಮ‌ ಸಮಾಜದವರಲ್ಲ. ಅವರು ಬಿಜೆಪಿ ಕಾರ್ಯಕರ್ತರು, ಆರ್‌ಎಸ್‌ಎಸ್​​ನವರು. ಪೊಲೀಸರ ಮೇಲೆ ಕಲ್ಲು ತೂರಲು ಪ್ರವೋಕ್ ಮಾಡಿದ್ದು ಸ್ವಾಮೀಜಿ. ಸಮಾಜವನ್ನ ಕಟ್ಟುವ ಕೆಲಸ ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಖಾದರ್ ಜತೆ ಬಿಜೆಪಿ ಶಾಸಕರ ಜಗಳ: ಸ್ಪೀಕರ್ ಕಚೇರಿಯಲ್ಲಿ ಉದ್ವಿಗ್ನ ಪರಿಸ್ಥಿತಿ

ಸ್ವಾಮೀಜಿಗೆ ಗೌರವ ಕೊಡುತ್ತೇನೆ. 712 ಕಿ.ಮೀ ಹೋರಾಟ ಮಾಡಿದ್ದೇವೆ. ಪ್ರತಿಭಟನೆ ವೇಳೆ ಒಂದಾದರೂ ಗಲಾಟೆ ಆಯ್ತಾ? ಉದ್ದೇಶ ಪೂರ್ವಕವಾಗಿ ಈಗ ಗಲಾಟೆ ಮಾಡಿಸಿದ್ದಾರೆ. ಗಾಯಾಳುಗಳನ್ನ ಯಾರು ನೋಡಿಕೊಳ್ಳುತ್ತಾರೆ. ಸ್ವಾಮೀಜಿ ನೋಡ್ಕೋತಾರಾ? ಅಥವಾ ಮುಖಂಡರು ನೋಡಿಕೊಳ್ಳುತ್ತಾರಾ? ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ ಅದನ್ನ ತೆಗೆಯಬೇಕು. ಸ್ವಾಮೀಜಿ ತೀರ್ಮಾನ ಒಂದೇ ಅಲ್ಲಾ ಸಮಾಜ ಇದೆ. ನಾವು 12 ಜನ ಶಾಸಕರು ಇದ್ದೇವೆ. ಬಿಜೆಪಿ ಪಾರ್ಟಿಯ ವೇದಿಕೆಗೆ ಹೋಗಿ ಭಾಷಣ ಮಾಡುತ್ತಾರೆ. ನಾವು ಮೀಸಲಾತಿ ಕೊಡಿಸುತ್ತೇವೆ ಎಂದಿದ್ದಾರೆ.

ಸಂವಿಧಾನ ವಿರೋಧಿ ಆಗುತ್ತೆ ಎನ್ನುವ ಸಿಎಂ‌ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ಸುಪ್ರೀಂಕೋರ್ಟ್​ನಲ್ಲಿ ಪ್ರಕರಣ ಇದೆ. ಹೇಗೆ ಸಿಎಂ ಕೊಡುವುದಕ್ಕೆ ಆಗುತ್ತೆ. ಸಿಎಂ‌ ಸುಗ್ರಿವಾಜ್ಞೆ ಹೋರಡಿಸಲು ಆಗುವುದಿಲ್ಲ. ನಾನು ಸದನದಲ್ಲಿ ಮಾತಾಡಿದರೆ, ಸಭಾಪತಿಗಳ ಮೇಲೆ ಹಲ್ಲೆ ಮಾಡಲು ಬಿಜೆಪಿಯವರು ಹೋಗಿದ್ದಾರೆ ಎಂದು ಹೇಳಿದ್ದಾರೆ.

ಕಲಾಪ ಮುಂದೂಡಿಕೆ

ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್‌ ವಿಚಾರವಾಗಿ ಸದ್ಯ ವಿಜಯಾನಂದ ಕಾಶಪ್ಪನವರ್​​ ಆರ್​ಎಸ್​ಎಸ್​ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ. ಇದೇ ವಿಚಾರಕ್ಕೆ ವಿಧಾನಸಭೆಯಲ್ಲಿ ಗದ್ದಲ ಉಂಟಾಯಿತು. ಕಲಾಪವನ್ನು ಮುಂದೂಡಲಾಯಿತು.

ಇದನ್ನೂ ಓದಿ: ಪಂಚಮಸಾಲಿ ಹೋರಾಟ: ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್: ಆದೇಶ ಪಾಲನೆ ಸರಿಯಾದ ಕ್ರಮವೆಂದ ಸಿಎಂ ಸಿದ್ದರಾಮಯ್ಯ

ಸದನ ಮುಂದೂಡಲ್ಪಟ್ಟ ಬಳಿಕ ವಿಪಕ್ಷ ಬಿಜೆಪಿ ಶಾಸಕರು ಅನೌಪಚಾರಿಕವಾಗಿ ಕೊಠಡಿಯಲ್ಲಿ ಸಭೆ ಮಾಡಿದ್ದಾರೆ. ವಿಜಯಾನಂದ ಕಾಶಪ್ಪನವರ್‌ ಮಾತಿಗೆ ತಿರುಗೇಟು ನೀಡಲು ಸದನದ ಒಳಗೂ ಹಾಗೂ ಸದನದ ಹೊರಗೂ ಹೋರಾಟಕ್ಕೆ ಚರ್ಚೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:45 pm, Thu, 12 December 24