ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ: ಸತೀಶ್ ಜಾರಕಿಹೊಳಿಗೆ ಬಿಗ್​ ರಿಲೀಫ್

ಪ್ರತ್ಯೇಕ ಪ್ರಕರಣಗಳಲ್ಲಿ ಅತ್ತ ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್​ ಹಾಗೂ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಸ್​ ರದ್ದಗೊಂಡಿದೆ. ಮತ್ತೊಂದೆಡೆ. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ: ಸತೀಶ್ ಜಾರಕಿಹೊಳಿಗೆ ಬಿಗ್​ ರಿಲೀಫ್
ಕರ್ನಾಟಕ ಹೈಕೋರ್ಟ್
Follow us
Ramesha M
| Updated By: ರಮೇಶ್ ಬಿ. ಜವಳಗೇರಾ

Updated on: Dec 12, 2024 | 4:44 PM

ಬೆಂಗಳೂರು, (ಡಿಸೆಂಬರ್ 12): ಸಚಿವ ಸತೀಶ್ ಜಾರಕಿಹೊಳಿ ವಿರುದ್ಧದ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ ಪ್ರಕರಣವನ್ನು ಹೈಕೋರ್ಟ್​ ರದ್ದುಗೊಳಿಸಿದೆ. ಹಿಂದೂ ಧರ್ಮ‌ ನಿಂದನೆ‌ ಮೂಲಕ ಅಶಾಂತಿ ಮೂಡಿಸಲು ಯತ್ನ, ಸಮುದಾಯಗಳ ನಡುವೆ ದ್ವೇಷ ಮೂಡಿಸಲು ಯತ್ನಿಸಿದ್ದಾರೆಂದು ವಕೀಲ ಕೆ.ದಿಲೀಪ್ ಕುಮಾರ್ ಅವರು ದಾಖಲಿಸಿದ್ದ ಖಾಸಗಿ ದೂರನ್ನು ಇಂದು (ಡಿಸೆಂಬರ್ 12) ಹೈಕೋರ್ಟ್​ ರದ್ದುಪಡಿಸಿದೆ ಇದರಿಂದ ಸಚಿವ ಸತೀಶ್ ಜಾರಕಿಹೊಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಪ್ರಕರಣ ಹಿನ್ನೆಲೆ

2022ರ ನವೆಂಬರ್​ನಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಆಯೋಜಿಸಲಾಗಿದ್ದ ಮಾನವ ಬಂದುತ್ವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವ ಸತೀಶ್​ ಜಾರಕಿಹೊಳಿ, ಹಿಂದೂ ಎಂಬ ಪದ ಎಲ್ಲಿಂದ ಬಂತು? ಇದು ನಮ್ಮ ಪದವಲ್ಲ ಪರ್ಷಿಯನ್​ನಿಂದ ಬಂದಿದ್ದು. ಭಾರತಕ್ಕೂ ಪರ್ಷಿಯನ್​ಗೂ ಏನು ಸಂಬಂಧ? ಎಂದು ಹೇಳಿದ್ದರು.  ಮುಂದುವರೆದು ಹಿಂದೂ ಭಾರತೀಯ ಪದವೇ ಅಲ್ಲ, ಅದು ಪರ್ಷಿಯನ್​ ಪದ, ಹಿಂದೂ ನಮ್ಮದು ಹೇಗೆ ಆಯಿತು ಅನ್ನೋದು ಚರ್ಚೆ ಆಗಬೇಕಿದೆ. ಹಿಂದೂ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಅದು ನಿಮಗೆ ತಿಳಿದರೆ ನಾಚಿಕೆ ಆಗುತ್ತೆ. ಎಲ್ಲಿಂದಲೋ ಬಂದಿರುವ ಧರ್ಮವನ್ನು ತಂದು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ ಎಂದು ಅವಹೇಳಕಾರಿ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ: ಸತೀಶ್ ಜಾರಕಿಹೊಳಿಗೆ ಸಮನ್ಸ್​​

ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಖುದ್ದು ಡಿಕೆ ಶಿವಕುಮಾರ್ ಅವರೇ ಈ ಹೇಳಿಕೆಯನ್ನು ಖಂಡಿಸಿದ್ದರು, ಅಲ್ಲದೇ ತಮ್ಮ ಹೇಳಿಕೆ ವಾಪಸ್ ಪಡೆಯುವಂತೆ ಸತೀಶ್ ಜಾರಕಿಹೊಳಿಗೆ ಸೂಚಿಸಿದ್ದರು.

ಹಿಂದೂ ಧರ್ಮ‌ಕ್ಕೆ ನಿಂದನೆ ಮಾಡುವ‌ ಮೂಲಕ ಅಶಾಂತಿ ಮೂಡಿಸಲು ಯತ್ನಿಸಲಾಗುತ್ತಿದೆ. ಸಮುದಾಯಗಳ ನಡುವೆ ದ್ವೇಷ ಮೂಡಿಸಲು ಯತ್ನಿಸಲಾಗಿದೆ ಎಂದು 2022ರಲ್ಲಿ ವಕೀಲ ಕೆ.ದಿಲೀಪ್ ಕುಮಾರ್ ಎಂಬುವರು ಖಾಸಗಿ ದೂರು ದಾಖಲಿಸಿದ್ದರು. ದೂರು ಪರಿಗಣಿಸಿದ್ದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದ ನ್ಯಾ. ಕೆ.ಎನ್.ಶಿವಕುಮಾರ್ ಅವರಿದ್ದ ಪೀಠ ವಿಚಾರಣೆಗೆ ಹಾಜರಾಗುವಂತೆ ಸತೀಶ್ ಜಾರಕಿಹೊಳಿಗೆ ಸಮನ್ಸ್ ಜಾರಿ ಮಾಡಿತ್ತು.

ಬಳಿಕ ಈ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸತೀಶ್ ಜಾರಕಿಹೊಳಿ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್​ ಸತೀಶ್ ಜಾರಕಿಹೊಳಿಯವರ ಅರ್ಜಿಯನ್ನು ಪುರಸ್ಕರಿಸಿ ಕೇಸ್​ ರದ್ದುಗೊಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ