ಚಾಮುಂಡಿಗೆ ಉಡುಗೊರೆಯಾಗಿ ಬಂದ ಸೀರೆ ಕಾಳಸಂತೆಯಲ್ಲಿ ಮಾರಾಟ: ಸ್ನೇಹಮಯಿ ಕೃಷ್ಣ ದೂರು
ಮೈಸೂರಿನ ಚಾಮುಂಡಿ ದೇವಸ್ಥಾನದ ಕಾರ್ಯದರ್ಶಿ ರೂಪಾ ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ಭಕ್ತರು ಅರ್ಪಿಸಿದ ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ. ವಿಡಿಯೋ ಸಾಕ್ಷ್ಯಗಳೊಂದಿಗೆ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆಯಿಂದ ದೇವಸ್ಥಾನದ ಆಡಳಿತದಲ್ಲಿನ ಭ್ರಷ್ಟಾಚಾರ ಬಹಿರಂಗಗೊಂಡಿದೆ.
ಮೈಸೂರು, ಡಿಸೆಂಬರ್ 12: ಚಾಮುಂಡಿಗೆ (Chamundeshwari) ಉಡುಗೊರೆಯಾಗಿ ಬಂದ ಲಕ್ಷಾಂತರ ರೂ. ಮೌಲ್ಯದ ಸೀರೆಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಚಾಮುಂಡಿಬೆಟ್ಟದ ಕಾರ್ಯದರ್ಶಿ ರೂಪಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡದ್ದಾರೆ. ಈ ಬಗ್ಗೆ ಮೈಸೂರಿನ ಕೃಷ್ಣರಾಜ ಪೊಲೀಸ್ ಠಾಣೆಗೆ ವಿಡಿಯೋ ಸಮೇತ ದೂರು ನೀಡಿದ್ದಾರೆ.
ದೇವಿಗೆ ಉಡುಗೊರೆಯಾಗಿ ಬಂದ ಸೀರೆಗಳನ್ನು ಕಾರ್ಯದರ್ಶಿ ರೂಪಾ ಕಾರಿನಲ್ಲಿ ತುಂಬಿಸಿ ಸಾಗಾಟ ಮಾಡಲಾಗುತ್ತಿದೆ. ಯುವಕನೊಬ್ಬ ಕಾರಿಗೆ ಸೀರೆ ತುಂಬಿಸಿಕೊಂಡು ಹೋಗುವ ವಿಡಿಯೋ ಸಮೇತ ಕೆಆರ್ ಪೊಲೀಸ್ ಠಾಣೆಗೆ ಸ್ನೇಹಮಯಿ ಕೃಷ್ಣ ಇದೀಗ ದೂರು ನೀಡಿದ್ದಾರೆ.
ಸ್ನೇಹಮಯಿ ಕೃಷ್ಣ ದೂರಿನಲ್ಲೇನಿದೆ?
ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ನೀಡುವ ಲಕ್ಷಾಂತರ ಮತ್ತು ಸಾವಿರಾರು ರೂಪಾಯಿ ಮೌಲ್ಯದ ಸೀರೆಗಳನ್ನು ನೌಕರರ ಮೂಲಕ ಕಳ್ಳತನ ಮಾಡುತ್ತಿರುವ ದೇವಸ್ಥಾನದ ಕಾರ್ಯದರ್ಶಿ ರೂಪ ರವರು ಸದರಿ ಸೀರೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ಮಾರಾಟ ಮಾಡಿದ ಹಣವನ್ನು ಸ್ವಂತಕ್ಕೆ ಬಳಸಿಕೊಂಡು, ಸರ್ಕಾರಕ್ಕೆ ವಂಚಿಸುವ ಮೂಲಕ ಅಪರಾಧಿಕ ನಂಬಿಕೆ ದ್ರೋಹ ಮಾಡುತ್ತಿದ್ದಾರೆ. ಇವರಿಗೆ ದೇವಸ್ಥಾನದ ಕೆಲವು ಅಧಿಕಾರಿ ಮತ್ತು ನೌಕರರು ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ: ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ, ಸರ್ಕಾರಕ್ಕೆ ತುಸು ಹಿನ್ನಡೆ
ನನಗೆ ಇತ್ತೀಚೆಗೆ ದೊರೆತಿರುವ ಎರಡು ವಿಡಿಯೋಗಳನ್ನು “ಚಾಮುಂಡಿ ಬೆಟ್ಟ” ಎಂದು ಬರೆದಿರುವ ಸಿ.ಡಿ.ಯಲ್ಲಿ ಹಾಕಿ ಈ ದೂರರ್ಜಿಯೊಂದಿಗೆ ಲಗತ್ತಿಸಿರುತ್ತೇನೆ. ಆ ಎರಡು ವೀಡಿಯೋಗಳನ್ನು ವೀಕ್ಷಿಸಿದಾಗ, ಒಂದು ವಿಡಿಯೋದಲ್ಲಿ, ಹಸಿರು ಬಣ್ಣದ ಬಟ್ಟೆಯೊಂದರಲ್ಲಿ ಸೀರೆಗಳನ್ನು ತೆಗೆದುಕೊಂಡು ಬರುವ ಯುವಕನೋರ್ವ, ದೇವಸ್ಥಾನದ ಕಚೇರಿಗೆ ತೆಗೆದುಕೊಂಡು ಹೋಗುವುದು ಕಂಡು ಬರುತ್ತದೆ.
ಮತ್ತೊಂದು ವಿಡಿಯೋದಲ್ಲಿ ಸದರಿ ಹಸಿರು ಬಣ್ಣದ ಬಟ್ಟೆಯೊಂದರಲ್ಲಿರುವ ಸೀರೆಗಳನ್ನು ಕಚೇರಿಯಿಂದ ತೆಗೆದುಕೊಂಡು ಬರುವ ಯುವಕ ಅದನ್ನು ಕಾರ್ಯದರ್ಶಿಗಳ ಕಾರಿನ ಡಿಕ್ಕಿಯಲ್ಲಿ ಹಾಕುವುದು ಕಂಡು ಬರುತ್ತದೆ.
ಇದನ್ನೂ ಓದಿ: ಅಂಬಾರಿ ಹಸ್ತಾಂತರಿಸುವಲ್ಲಿ ವಿಳಂಬ ಆರೋಪ: ಪತ್ರದ ಮೂಲಕ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ
ಭಕ್ತರು ದೇವಸ್ಥಾನಕ್ಕೆ (ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ) ನೀಡಿದ ಸೀರೆಗಳು ಎಷ್ಟು? ಅವುಗಳ ಸಂಪೂರ್ಣ ಲೆಕ್ಕವನ್ನು ಸರ್ಕಾರಕ್ಕೆ ನೀಡಿರುತ್ತಾರೆಯೆ? ಎಂಬ ಅಂಶಗಳ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಸ್ನೇಹಮಯಿ ಕೃಷ್ಣ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.