ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಬೋಧಕರ ಕೊರತೆ; ವಿವಿಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಲ್ಲಿ ಆತಂಕ

preethi shettigar

preethi shettigar | Edited By: shruti hegde

Updated on: Apr 11, 2021 | 2:54 PM

ವಿಶ್ವವಿದ್ಯಾಲಯದಲ್ಲಿ ಬರೋಬ್ಬರಿ 189 ಭೋದಕ ಹುದ್ದೆಗಳು ಖಾಲಿಯಿದ್ದರೆ, 486 ಬೋಧಕೇತರ ಹುದ್ದೆಗಳು ಅನೇಕ ವರ್ಷಗಳಿಂದ ಖಾಲಿಯಿವೆ. ವಿಚಿತ್ರವೆಂದರೆ ವಿವಿಯಲ್ಲಿರುವ ಪತ್ರಿಕೋದ್ಯಮ ವಿಭಾಗ ಸೇರಿದಂತೆ ಅದೆಷ್ಟೋ ವಿಭಾಗಗಳಿಗೆ ಮುಖ್ಯಸ್ಥರು ಸೇರಿದಂತೆ ಯಾವುದೇ ಖಾಯಂ ಉಪನ್ಯಾಸಕರು ಇಲ್ಲ.

ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಬೋಧಕರ ಕೊರತೆ; ವಿವಿಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಲ್ಲಿ ಆತಂಕ
ಗುಲ್ಬರ್ಗ ವಿಶ್ವವಿದ್ಯಾಲಯ


ಕಲಬುರಗಿ: ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಗೊಳ್ಳುವುದು, ಉತ್ತಮ ಬೋಧಕರಿಂದ, ಉತ್ತಮ ಶೈಕ್ಷಣಿಕ ವಾತಾವರಣ ಮತ್ತು ಶೈಕ್ಷಣಿಕ ಸೌಲಭ್ಯಗಳಿಂದ. ಆದರೆ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕಿದ್ದ ಕಲಬುರಗಿ ನಗರದಲ್ಲಿರುವ ಗುಲ್ಬರ್ಗ ವಿಶ್ವವಿದ್ಯಾಲಯ ಬೋಧಕರ ಕೊರತೆಯಿಂದ ಬಳಲುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾರಂಭವಾದ ಮೊದಲ ಮತ್ತು ಈ ಭಾಗದಲ್ಲಿರುವ ಹಳೆಯ ವಿಶ್ವವಿದ್ಯಾಲಯ ಎನ್ನುವ ಕೀರ್ತಿಗೆ ಪಾತ್ರವಾಗಿರುವ ವಿವಿಯಲ್ಲಿ ಪಾಠ ಮಾಡಲು ಖಾಯಂ ಬೋಧಕರೆ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದ್ದು, ಅತಿಥಿ ಉಪನ್ಯಾಸಕರ ಮೇಲೆ ವಿಶ್ವವಿದ್ಯಾಲಯ ನಡೆಯುತ್ತಿದೆ.

ಇತ್ತೀಚೆಗೆ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿನ ಸ್ಥಿತಿಗತಿ ನೋಡಿ ವಿದ್ಯಾರ್ಥಿಗಳು ಹೈರಾಣಾಗಿ ಹೋಗಿದ್ದಾರೆ. ಒಂದೆಡೆ ಮೂಲಭೂತ ಸಮಸ್ಯೆಗಳು ಹೆಚ್ಚಾಗಿದ್ದರೆ. ಇನ್ನೊಂದಡೆ ಉಪನ್ಯಾಸಕರ ಕೊರತೆಯಿಂದಾಗಿ ಸರಿಯಾಗಿ ಪಾಠ ಪ್ರವಚನ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಉನ್ನತ ಶಿಕ್ಷಣದಲ್ಲಿ ಸಂಶೋಧನೆ ಮತ್ತು ಆಳವಾದ ಅಧ್ಯಯನ ಮಾಡಲಾಗುತ್ತದೆ. ಇದಕ್ಕೆ ಸೂಕ್ತ ಮಾರ್ಗದರ್ಶಕರ ಅವಶ್ಯಕತೆ ಹೆಚ್ಚಿರುತ್ತದೆ. ಆದರೆ ಕಲಬುರಗಿಯಲ್ಲಿರುವ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರೇ ಇಲ್ಲದಂತಾಗಿದೆ.

ವಿಶ್ವವಿದ್ಯಾಲಯದಲ್ಲಿ ಬರೋಬ್ಬರಿ 189 ಭೋದಕ ಹುದ್ದೆಗಳು ಖಾಲಿಯಿದ್ದರೆ, 486 ಬೋಧಕೇತರ ಹುದ್ದೆಗಳು ಅನೇಕ ವರ್ಷಗಳಿಂದ ಖಾಲಿಯಿವೆ. ವಿಚಿತ್ರವೆಂದರೆ ವಿವಿಯಲ್ಲಿರುವ ಪತ್ರಿಕೋದ್ಯಮ ವಿಭಾಗ ಸೇರಿದಂತೆ ಅದೆಷ್ಟೋ ವಿಭಾಗಗಳಿಗೆ ಮುಖ್ಯಸ್ಥರು ಸೇರಿದಂತೆ ಯಾವುದೇ ಖಾಯಂ ಉಪನ್ಯಾಸಕರು ಇಲ್ಲ. ಬದಲಾಗಿ ಬೇರೆ ಬೇರೆ ವಿಭಾಗದಲ್ಲಿರುವ ಕೆಲವು ಪ್ರೊಫೆಸರ್​ಗಳಿಗೆ ಹೆಚ್ಚುವರಿಯಾಗಿ ಖಾಲಿಯಿರುವ ವಿಭಾಗಗಳ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಈ ಹಿಂದೆ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಅರ್ಜಿ ಕರೆಯಾಲಗಿತ್ತು. ಆದರೆ ಅದು ತಾಂತ್ರಿಕ ಕಾರಣಗಳಿಂದ ರದ್ದಾಗಿತ್ತು. ಇದೀಗ ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ನೇಮಖಾತಿಗೆ ಗ್ರೀನ್ ಸಿಗ್ನಲ್ ನೀಡಿಲ್ಲ. ಆದರೆ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಆದಷ್ಟು ಬೇಗನೆ ವಿವಿಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ್ ಅಗಸರ್ ಹೇಳಿದ್ದಾರೆ.

ವಿಶ್ವವಿದ್ಯಾಲಯ ಪ್ರಾರಂಭವಾದಾಗ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿ ನೇಮಕವಾಗಿತ್ತು. ಈ ಹಿಂದೆ ನಮೇಕವಾಗಿದ್ದ ಬಹುತೇಕರು ನಿವೃತ್ತರಾಗಿದ್ದಾರೆ. ನಿವೃತ್ತರಾದ ನಂತರ, ಆ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಬೇಕು. ಆದರೆ ಹೊಸದಾಗಿ ನೇಮಕಾತಿ ನಡೆಯದೇ ಇರುವುದರಿಂದ ತಾತ್ಕಾಲಿಕವಾಗಿ ಅನೇಕ ವರ್ಷಗಳಿಂದ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವುದು, ಅವರ ಮೂಲಕ ಪಾಠ ಪ್ರವಚನವನ್ನು ವಿದ್ಯಾರ್ಥಿಗಳಿಗೆ ಕೊಡಿಸುವ ಕೆಲಸವನ್ನು ವಿವಿ ಕುಲಪತಿಗಳು ಮಾಡುತ್ತ ಬಂದಿದ್ದಾರೆ.

ಇನ್ನು ವಿವಿಯಲ್ಲಿಯೇ ಅನೇಕ ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಅದೆಷ್ಟೋ ಜನರು, ವಿವಿಯಲ್ಲಿ ನೇಮಕಾತಿ ನಡೆದರೆ, ತಾವು ಅರ್ಜಿ ಹಾಕಿ, ವಿವಿಯಲ್ಲಿ ಖಾಯಂ ಪ್ರಾಧ್ಯಾಪಕರಾಗಿ ನೇಮಕವಾಗಬೇಕು ಎಂದು ಅನೇಕ ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ವಿವಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಯ ನೇಮಕಾತಿ ಪಕ್ರಿಯೇ ಕಂಗ್ಗಂಟಾಗಿ ಪರಿಣಮಿಸಿದೆ.

ಯಾಕೆ ನೇಮಕಾತಿ ಆಗುತ್ತಿಲ್ಲಾ?
ಗುಲ್ಬರ್ಗ ವಿವಿಯಲ್ಲಿ ಅನೇಕ ವರ್ಷಗಳಿಂದ ಖಾಲಿಯಿರುವ ಹುದ್ದೆಗಳ ನೇಮಕಾತಿಗಾಗಿ ಅನೇಕ ಕುಲಪತಿಗಳು ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಆದರೆ ಕೆಲ ಕಾರಣಗಳಿಂದ ಅದು ಪೂರ್ಣವಾಗುತ್ತಿಲ್ಲ. ಈ ಹಿಂದೆ ವಿವಿಯ ಕುಲಪತಿಯಾಗಿದ್ದ ಡಾ. ಈ. ಟಿ ಪುಟ್ಟಯ್ಯ, ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಹಾಕಿದ್ದರು. ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಕೂಡಾ ಹಾಕಿದ್ದರು. ಆದರೆ ತಾಂತ್ರಿಕ ಕಾರಣಗಳು ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಾತಿ ತೊಂದರೆ ಸೇರಿದಂತೆ ಕೆಲ ಕಾರಣಗಳಿಂದ ಆಗ ನಡೆಯಬೇಕಿದ್ದ ನೇಮಖಾತಿ ಪ್ರಕ್ರಿಯೇ ಸ್ಥಗಿತವಾಗಿತ್ತು. ನಂತರ ವಿವಿಗೆ ಕುಲಪತಿಯಾಗಿ ಬಂದ ಡಾ. ನಿರಂಜನ್ ಅವರು ನೇಮಖಾತಿಗೆ ಮುಂದಾಗಿದ್ದರು. ಆಗ ಕೂಡಾ ಸರ್ಕಾರಕ್ಕೆ ನೇಮಖಾತಿ ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ ಉನ್ನತ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್ ನೀಡಲಿಲ್ಲ. ಕಳೆದ ಒಂದು ವರ್ಷದಿಂದ ಕೊರೊನಾದ ನೆಪ ಹೇಳುತ್ತಿರುವ ಸರ್ಕಾರ, ನೂತನ ನೇಮಖಾತಿಗೆ ಪರವಾನಗಿಯನ್ನು ನೀಡುತ್ತಿಲ್ಲ. ಹೀಗಾಗಿ ಒಂದಿಲ್ಲಾ ಒಂದು ಕಾರಣದಿಂದ ವಿವಿಯಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗೆ ಅವಕಾಶ ಸಿಗುತ್ತಿಲ್ಲ.

ವಿಶ್ವವಿದ್ಯಾಲಯದ ಇತಿಹಾಸ
ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸುಲಭವಾಗಿ ಸಿಗಬೇಕು ಎನ್ನುವ ಉದ್ದೇಶದಿಂದ ವಿದ್ಯೆಯೇ ಅಮೃತ ಅನ್ನೋ ಘೋಷವಾಕ್ಯದಡಿ 1980 ರಲ್ಲಿ ಕಲಬುರಗಿ ನಗರದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. 800 ಎಕರೆ ವಿಸ್ತಾರದಲ್ಲಿರುವ ವಿವಿ ವ್ಯಾಪ್ತಿಗೆ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳು ಬರುತ್ತವೆ. ಈ ಹಿಂದೆ ರಾಯಚೂರು ಜಿಲ್ಲೆ ಕೂಡಾ ವಿವಿ ವ್ಯಾಪ್ತಿಗೆ ಬರುತ್ತಿತ್ತು. ಆದರೆ ರಾಜ್ಯ ಸರ್ಕಾರ 2020-21 ರಲ್ಲಿ ರಾಯಚೂರು ವಿವಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ರಾಯಚೂರು ಜಿಲ್ಲೆ ಇದೀಗ ಗುಲ್ಬರ್ಗ ವಿವಿ ವ್ಯಾಪ್ತಿಯಿಂದ ಹೊರಗಳುದಿದೆ. ಸದ್ಯ ಈ ವಿವಿಯಲ್ಲಿ160 ಪ್ರಾಧ್ಯಾಪಕರಿದ್ದು,700 ಕ್ಕೂ ಹೆಚ್ಚು ಬೋಧಕೇತರ ಸಿಬ್ಬಂಧಿ ಇದ್ದಾರೆ. 3500 ವಿದ್ಯಾರ್ಥಿಗಳು ವಿವಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡಬೇಕು ಅಂತ ಅನೇಕ ವರ್ಷಗಳಿಂದ ಕಾಯುತ್ತಿದ್ದೇನೆ. ಈ ಹಿಂದೆ ನೇಮಖಾತಿಗೆ ಅರ್ಜಿ ಆಹ್ವಾನಿಸಿದಾಗ ಅರ್ಜಿ ಕೂಡ ಹಾಕಿದ್ದೆ. ಆದರೆ ನೇಮಕಾತಿ ಪ್ರಕ್ರಿಯೇ ಅಷ್ಟಕ್ಕೆ ನಿಂತಿದೆ. ಇನ್ನು ವಿವಿಯಲ್ಲಿ ಬೋಧಕರ ಕೊರತೆಯಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗದಂತಾಗಿದೆ. ಹೀಗಾಗಿ ಕೂಡಲೇ ವಿವಿಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಉಪನ್ಯಾಸಕರು ಹೇಳಿದ್ದಾರೆ.

ಇದನ್ನೂ ಓದಿ: ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಹೆಚ್ಚಾಯಿತು ಅನೈತಿಕ ಚಟುವಟಿಕೆಗಳ ಆರೋಪ; ಎಲ್ಲಾ ತಿಳಿದರು ಮೌನವಾಗಿದೆ ಆಡಳಿತ ಮಂಡಳಿ

( Students are worried about Lack of teaching faculty in Gulbarga University )

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada