AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯ ಕವಚದಲ್ಲಿ ಅವಳಿ ಹೆಣ್ಣು ಮಕ್ಕಳ ಜನನ; ವಿಜಯಪುರ ಮಾರ್ಗಮಧ್ಯೆ ಆಂಬುಲೆನ್ಸ್​ನಲ್ಲೇ ಹೆರಿಗೆ

ಆಸ್ಪತ್ರೆಗೆ ಆಗಮಿಸುವ ಮಾರ್ಗ ಮಧ್ಯೆಯೇ ಆಂಬುಲೆನ್ಸ್ನಲ್ಲಿಯೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಾಯಿ ದಿಲಶಾದ್ ಹಾಗೂ ಅವಳಿಗಳನ್ನು ಹೂವಿನ ಹಿಪ್ಪರಗಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಯಿತು.

ಆರೋಗ್ಯ ಕವಚದಲ್ಲಿ ಅವಳಿ ಹೆಣ್ಣು ಮಕ್ಕಳ ಜನನ; ವಿಜಯಪುರ ಮಾರ್ಗಮಧ್ಯೆ ಆಂಬುಲೆನ್ಸ್​ನಲ್ಲೇ ಹೆರಿಗೆ
ಆಂಬುಲೆನ್ಸ್​ನಲ್ಲೇ ಅವಳಿ ಹೆಣ್ಣು ಮಕ್ಕಳ ಜನನ
Follow us
preethi shettigar
| Updated By: ganapathi bhat

Updated on: Apr 11, 2021 | 3:08 PM

ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಬ್ಯಾಕೋಡ ಗ್ರಾಮದಲ್ಲಿ ಆಂಬುಲೆನ್ಸ್​​ನಲ್ಲಿಯೇ ಅವಳಿ ಮಕ್ಕಳ ಹೆರಿಗೆಯಾದ ಘಟನೆ ನಡೆದಿದೆ. ದಿಲಶಾದ್ ರಫೀಕ್ ಚಪ್ಪರಬಂದ್ ( 26 ) ಅವಳಿ ಮುದ್ದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ದಿಲಶಾದ್ ಅವರನ್ನು ಹೆರಿಗೆಗಾಗಿ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಆಕೆಯ ಕುಟುಂಬಸ್ಥರು 108 ಆಂಬುಲೆನ್ಸ್​​ಗೆ ಕರೆ ಮಾಡಿದ್ದರು. ಕರೆ ಮಾಡಿದ 30 ನಿಮಿಷದಲ್ಲಿ ಆಂಬುಲೆನ್ಸ್​ ದಿಲಶಾದ್ ಮನೆಯ ಬಳಿ ಬಂದು ನಿಂತಿತ್ತು. ಕೂಡಲೇ ದಿಲಶಾದ್​ ಅವರನ್ನುಆಂಬುಲೆನ್ಸ್​​ನಲ್ಲಿ ಹೂವಿನಹಿಪ್ಪರಗಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಹೊರಡಲಾಯಿತು.

ಆದರೆ ಬ್ಯಾಕೋಡ ಗ್ರಾಮದಿಂದ ಹೂವಿನಹಿಪ್ಪರಗಿಯತ್ತ ಆಂಬುಲೆನ್ಸ್​ ಹೊರಟಾಗಲೇ ದಿಲಶಾದ್ ಅವರಿಗೆ ಹೆರಿಗೆ ನೋವು ಹೆಚ್ಚಾಗಿತ್ತು. ಆಂಬುಲೆನ್ಸ್​​ನಲ್ಲಿದ್ದ ಇಎಂಟಿ ( ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್ ) ರಮೇಶ ಹಾಗೂ ಆಂಬುಲೆನ್ಸ್​ ಚಾಲಕ ಬಸವರಾಜಯ್ಯ ಗುರುಮಠ ಧೈರ್ಯ ಹೇಳಿದರು. ಆದರೆ ಹೆರಿಗೆ ನೋವಿಗೆ ಭಯಪಟ್ಟಿದ್ದ ದಿಲಶಾದ್ ಬಹಳಷ್ಟು ಹೆದರಿದ್ದರು. ಹೀಗಾಗಿ ಸಮಯ ಪ್ರಜ್ಞೆ ಮೆರೆದ ಆಂಬುಲೆನ್ಸ್​ ಇಎಂಟಿ ರಮೇಶ ಹಾಗೂ ಚಾಲಕ ಬಸವರಾಜಯ್ಯ ಗುರುಮಠ ಆಂಬುಲೆನ್ಸ್​ನ್ನು ರಸ್ತೆ ಬದಿಗೆ ನಿಲ್ಲಿಸಿ, ದಿಲಶಾದ್ ಅವರ ತಾಯಿಯ ಸಹಾಯ ಪಡೆದು ಆಕೆಗೆ ಹೆರಿಗೆ ಮಾಡಿಸಿಕೊಳ್ಳಲು ಮುಂದಾದರು. ಆಗ ದಿಲಶಾದ್ ಆಂಬುಲೆನ್ಸ್​ನಲ್ಲಿಯೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರು.

ತಾಯಿ ಹಾಗೂ ಅವಳಿ ಮಕ್ಕಳು ಆಸ್ಪತ್ರೆಗೆ ದಾಖಲು: ಆಸ್ಪತ್ರೆಗೆ ಆಗಮಿಸುವ ಮಾರ್ಗ ಮಧ್ಯೆಯೇ ಆಂಬುಲೆನ್ಸ್ನಲ್ಲಿಯೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಾಯಿ ದಿಲಶಾದ್ ಹಾಗೂ ಅವಳಿಗಳನ್ನು ಹೂವಿನ ಹಿಪ್ಪರಗಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಯಿತು. ತಾಯಿ ಹಾಗೂ ಮಗುವನ್ನು ಪರೀಕ್ಷೆ ಮಾಡಿದ ಆಸ್ಪತ್ರೆ ವೈದ್ಯರು ತಾಯಿ ಹಾಗೂ ಅವಳಿ ಹೆಣ್ಣು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಒಂದು ಮಗುವಿನ ತೂಕ 1.75 ಕೆ.ಜಿ ಹಾಗೂ ಇನ್ನೊಂದು ಮಗುವಿನ ತೂಕವು 1.50 ಕೆಜಿ ಇದೆ. ತೂಕ ಕಡಿಮೆಯಿರುವ ಕಾರಣ ಅವಳಿಗಳ ಆರೋಗ್ಯದ ದೃಷ್ಟಿಯಿಂದ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಜಿಲ್ಲಾಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಕೆಲ ದಿನಗಳ ಕಾಲ ಇಡಬೇಕಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಹೆರಿಗೆಗಾಗಿ ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಹೋಗುವಾಗ ಹೆರಿಗೆ ನೋವು ಹೆಚ್ಚಾಗಿತ್ತು. ನನಗೆ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ನೋವು ಹೆಚ್ಚಿದೆ ಎಂದು ನಮ್ಮ ತಾಯಿಗೆ ಹಾಗೂ ಆಂಬುಲೆನ್ಸ್​ನವರಿಗೆ ಹೇಳಿದೆ. ಆಂಬುಲೆನ್ಸ್​ನವರು ನನಗೆ ಚಿಕಿತ್ಸೆ ನೀಡಿದರು. ಆಂಬುಲೆನ್ಸ್​​ನಲ್ಲಿಯೇ ಹೆರಿಗೆಯಾಯ್ತು. ಅವಳಿ ಹೆಣ್ಣು ಮಕ್ಕಳು ಹುಟ್ಟಿದ್ದಾರೆ. ನನಗೆ ತುಂಬಾ ಸಂತೋಷವಾಗಿದೆ. ಮಾರ್ಗ ಮಧ್ಯೆಯೇ ಆಂಬುಲೆನ್ಸ್​​ನಲ್ಲಿ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ. ಇಎಂಟಿ ರಮೇಶ ಹಾಗೂ ಚಾಲಕರಾದ ಬಸವರಾಜಯ್ಯ ಅವರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ ದಿಲಶಾದ್ ಚಪ್ಪರಬಂದ್ ಹೇಳಿದ್ದಾರೆ.

ಸಾಮಾನ್ಯವಾಗಿ ಆಂಬುಲೆನ್ಸ್​ನಲ್ಲಿ ಹೆರಿಗೆಗಳು ಆಗೋದು ವಿರಳ. ಕೆಲ ಮಹಿಳೆಯರಿಗೆ ಹೆರಿಗೆ ನೋವು ಕಾಣಿಸಿಕೊಂಡು ಬಹಳ ಹೊತ್ತಿನ ನಂತರ ಹೆರಿಗೆ ಆಗುತ್ತದೆ. ಇನ್ನು ಕೆಲವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಬೇಗ ಹೆರಿಗೆ ಆಗುತ್ತದೆ. ಕೆಲವರಿಗೆ ಹೆರಿಗೆ ನೋವು ಕಾಣಿಸಿಕೊಳ್ಳದೇ ಇರಬಹುದು. ಇಂದು ದಿಲಶಾದ್ ಮನೆಯವರು 108 ಆಂಬುಲೆನ್ಸ್​ ಸೇವೆಗೆ ಕರೆ ಮಾಡಿದ ತಕ್ಷಣ ನಾವು ಅವರ ಮನೆ ಬಳಿ ಹೋದೆವು. ತುರ್ತಾಗಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಹೆರಿಗೆ ನೋವು ಹೆಚ್ಚಾಯಿತು. ಆದ ಕಾರಣ ನಾವೇ ಹೆರಿಗೆ ಮಾಡಿಸಿದೆವು ಗರ್ಭಿಣಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ. ಅವಳಿಗಳ ತೂಕ ಕಡಿಮೆಯಿದ್ದ ಕಾರಣ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ವೃತ್ತಿ ಜೀವನದಲ್ಲಿ ಇದೆಲ್ಲಾ ಸಹಜವಾದರೂ ಇಂತಹ ಘಟನೆ ವೇಳೆ ಸೇವಾ ಸಾರ್ಥಕತೆ ಮೂಡುತ್ತದೆ ಎಂದು ಇಎಂಟಿ ರಮೇಶ್ ಹೇಳಿದ್ದಾರೆ.

ಇದನ್ನೂ ಓದಿ:ದಾವಣಗೆರೆ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್​ನಲ್ಲಿ ಮಗು ಅದಲು ಬದಲು; ಪಾಲಕರ ಆರೋಪ

(Vijayapura women gave birth to twins in ambulance)