ಮಂಡ್ಯ: ಮಂಡ್ಯದಲ್ಲಿ ಗಣಿ ರಾಜಕೀಯ ದಿನೇದಿನೇ ತಾರಕಕ್ಕೇರುತ್ತಿದೆ. ಸಂಸದೆ ಸುಮಲತಾ ಹಾಗೂ ಜೆಡಿಎಸ್ ನಾಯಕರ ನಡುವೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಮನಸ್ತಾಪ ಮೂಡಿದ್ದು, ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತನ್ನ ವಿರುದ್ಧ ವಾಕ್ಸಮರ ನಡೆಸಿದ್ದ ಜೆಡಿಎಸ್ ಮುಖಂಡರನ್ನು ಈಗ ಗಣಿ ವಿಚಾರದ ಮೂಲಕ ಸುಮಲತಾ ಕಟ್ಟಿಹಾಕುತ್ತಿದ್ದಾರಾ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಡ್ಯಾಂ ಬಿರುಕು ಬಿಟ್ಟಿಲ್ಲ ಎಂದು ಸ್ವತಃ ಕೆಆರ್ಎಸ್ ಇಂಜಿನಿಯರ್ಗಳು ಸ್ಪಷ್ಟೀಕರಣ ನೀಡಿದರೂ ಅದನ್ನು ಒಪ್ಪಿಕೊಳ್ಳದ ಸುಮಲತಾ ತನಿಖೆಗಾಗಿ ಒತ್ತಾಯಿಸಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಡ್ಯಾಂ ಸುರಕ್ಷಿತ ಎಂಬ ಹೇಳಿಕೆ ಕೊಡಿಸಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ತಜ್ಞರ ತಂಡ ನೇಮಿಸಿ ತನಿಖೆ ನಡೆಸಿ ವರದಿ ನೀಡಲಿ ಎಂದು ಪಟ್ಟು ಹಿಡಿದಿದ್ದಾರೆ.
ಡ್ಯಾಂ ಬಿರುಕು ಬಿಟ್ಟಿದೆ ಎಂಬ ಹೇಳಿಕೆ ವಿವಾದದ ರೂಪಕ್ಕೆ ತಿರುಗುತ್ತಿದ್ದಂತೆಯೇ ಡ್ಯಾಂ ಸುರಕ್ಷಿತವಾಗಿದೆ, ಬಿರುಕು ಬಿಟ್ಟಿಲ್ಲ ಎಂದು ನೀರಾವರಿ ನಿಗಮದ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಹಲವರು ಹೇಳಿಕೆ ನೀಡಿದ್ದರು. ಆದರೆ, ಅದಕ್ಕೆ ಪ್ರತ್ಯುತ್ತರ ನೀಡಿರುವ ಸುಮಲತಾ, ಡ್ಯಾಂ ಸುರಕ್ಷಿತವಾಗಿದೆ ಎನ್ನುವುದು ತನಿಖೆಯಿಂದಲೇ ಗೊತ್ತಾಗಲಿ. ಆ ವರದಿಯಲ್ಲೂ ಡ್ಯಾಂ ಸುರಕ್ಷಿತ ಎಂದು ಹೇಳಿದರೆ ನಾನು ಖುಷಿಪಡುತ್ತೇನೆ ಎನ್ನುವ ಮೂಲಕ ತಾವು ಪಟ್ಟು ಸಡಿಲಿಸುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಈ ಬೆಳವಣಿಗೆಗಳ ಬೆನ್ನಲ್ಲೇ ಗಣಿ ವಿಚಾರವನ್ನೇ ಮುಂದಿಟ್ಟುಕೊಂಡು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಲು ಸುಮಲತಾ ಯೋಜನೆ ರೂಪಿಸಿದ್ದಾರೆ ಎಂಬ ಮಾತು ಕೇಳಿಬರಲಾರಂಭಿಸಿದೆ. ಕೊವಿಡ್ ಎರಡನೇ ಅಲೆ ವೇಳೆ ಸಾಕಷ್ಟು ಆರೋಪಗಳಿಗೆ ಗುರಿಯಾಗಿದ್ದ ಸಂಸದೆ ಸುಮಲತಾ ಇದೀಗ ಅಕ್ಷರಶಃ ತಿರುಗಿ ಬಿದ್ದಂತೆ ಕಾಣುತ್ತಿದೆ ಎನ್ನುವುದು ರಾಜಕೀಯ ವಲಯದಿಂದ ಕೇಳಿಬರುತ್ತಿರುವ ಮಾತು. ಅಂದು ಸಂಸದೆ ಸುಮಲತಾರ ಕಾರ್ಯವೈಖರಿಯನ್ನು ಟೀಕಿಸಿದ್ದ ಜೆಡಿಎಸ್ ನಾಯಕರು, ಎಂಪಿ ಮೇಡಂ ಕೈಗೆ ಸಿಗೋದಿಲ್ಲ ಎಂಬಲ್ಲಿಂದ ಹಿಡಿದು ಆಕ್ಸಿಜನ್ ಸಮಸ್ಯೆ ಹಾಗೂ ಲಸಿಕೆ ವಿಚಾರದಲ್ಲಿ ಸಾಕಷ್ಟು ಕಾಲೆಳೆದಿದ್ದರು.
ಇದೀಗ ಡ್ಯಾಂ ಹಾಗೂ ಗಣಿಗಾರಿಕೆ ವಿಚಾರದಲ್ಲಿ ಅದೇ ಜೆಡಿಎಸ್ ನಾಯಕರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಸುದ್ದಿಯಿದ್ದು, ಅವರ ಬಂಡವಾಳ ಬಯಲು ಮಾಡಲು ಸುಮಲತಾ ಶತಾಯುಗತಾಯ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಕಳೆದ ಲೋಕಸಭಾ ಚುನಾವಣೆ ವೇಳೆಯೂ ಜೆಡಿಎಸ್ ನಾಯಕರ ಹೇಳಿಕೆಗಳು ಸುಮಲತಾ ಪಾಲಿಗೆ ಉತ್ತಮ ರಾಜಕೀಯ ಅಸ್ತ್ರಗಳಾಗಿದ್ದವು. ಇದೀಗ ಮಂಡ್ಯ ಜಿಲ್ಲೆಯ ಭಾವನಾತ್ಮಕ ವಿಷಯವಾದ ಕೆಆರ್ಎಸ್ ಡ್ಯಾಂ ಸುಮಲತಾ ಪಾಲಿಗೆ ಅಸ್ತ್ರವಾಗುತ್ತಿದೆ. ಹೀಗಾಗಿ, ಐತಿಹಾಸಿಕ ಅಣೆಕಟ್ಟಿಗೆ ಜೆಡಿಎಸ್ ನಾಯಕರಿಂದಲೇ ಹಾನಿಯಾಗುತ್ತಿದೆ ಎಂದು ಸಾಬೀತುಪಡಿಸಲು ಹೊರಟಿರುವ ಸುಮಲತಾ, ಅಸ್ತಿತ್ವದ ಹೋರಾಟ ಎಂಬಂತೆ ರಾಜಕೀಯ ದಾಳ ಉರುಳಿಸುತ್ತಿದ್ದಾರಾ ಎಂಬ ಪ್ರಶ್ನೆಗಳು ಗರಿಗೆದರಿವೆ.
ಇನ್ನೊಂದೆಡೆ ಜಿದ್ದಾಜಿದ್ದಿನ ರಾಜಕಾರಣಕ್ಕೆ ಜೆಡಿಎಸ್ ನಾಯಕರು ಕೂಡಾ ಮುಂದಾಗಿದ್ದು, ಹೆಚ್.ಡಿ.ಕುಮಾರಸ್ವಾಮಿ, ರವೀಂದ್ರ ಶ್ರೀಕಂಠಯ್ಯ, ಅನ್ನದಾನಿ ಹಾಗೂ ಪರಿಷತ್ ಸದಸ್ಯ ಶ್ರೀಕಂಠೇಗೌಡ ಸುಮಲತಾರ ವಿರುದ್ಧ ತಿರುಗಿಬಿದ್ದಿದ್ದಾರೆ. 2019 ರ ಚುನಾವಣೆ ಸೋಲಿನ ಕಹಿಯ ಹಿನ್ನೆಲೆಯಲ್ಲಿ ಇನ್ನಷ್ಟು ಜಿದ್ದಿನ ರಾಜಕಾರಣಕ್ಕೆ ಜೆಡಿಎಸ್ ಮುಂದಾದಂತೆ ಕಾಣುತ್ತಿದ್ದು, ರಾಜಕೀಯವಾಗಿ ಪ್ರತಿದಾಳಿ ಮಾಡಲೇಬೇಕಾದ ಸನ್ನಿವೇಶದಲ್ಲಿ ಜೆಡಿಎಸ್ ನಾಯಕರು ಸಿಲುಕಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಹೆಚ್.ಡಿ.ಕುಮಾರಸ್ವಾಮಿ ಕೂಡಾ ಕಳೆದ ಚುನಾವಣೆಯಲ್ಲಿ ನೀವು ನಮ್ಮನ್ನು ಸೋಲಿಸಿದ್ದೀರಿ, ಈ ಬಾರಿ ನಮ್ಮ ರಾಜಕೀಯವನ್ನು ಸೋತ ಜಾಗದಿಂದಲೇ ತೋರಿಸುತ್ತೇವೆ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ.
ಗಮನಾರ್ಹ ವಿಚಾರವೆಂದರೆ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿದ್ದ ಸ್ಥಳಗಳಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ಅಲ್ಲಿನ ಅಧಿಕಾರಿಗಳ ಬಳಿಯಲ್ಲಿ ಮಾಹಿತಿಯೇ ಇಲ್ಲ ಎಂಬ ವಿಷಯ ಹೊರಬಿದ್ದಿದೆ. ಚೆನ್ನನಕೆರೆ, ಹಂಗರಹಳ್ಳಿಗಳ ಗಣಿಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಂಸದೆ ಸುಮಲತಾ ಅಂಬರೀಶ್, ಎರಡೂ ಕಡೆ ಅಪಾರ ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆದಿದೆ ಎನ್ನುತ್ತಿದ್ದಾರೆ. ಆದರೆ, ಮಂಡ್ಯ ಜಿಲ್ಲಾಧಿಕಾರಿ ಅಶ್ವತಿ, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಪದ್ಮಜ ಬಳಿ ಯಾರು ಎಷ್ಟು ಪ್ರಮಾಣದಲ್ಲಿ ಗಣಿಗಾರಿಕೆ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಅಂಕಿ ಅಂಶಗಳೇ ಇಲ್ಲವಾಗಿದೆ. ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಲು ಅಧಿಕಾರಿಗಳು ತಬ್ಬಿಬ್ಬಾಗಿದ್ದು, ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಕೆಲವರು ಅಕ್ರಮ ಗಣಿಗಾರಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ, ಈ ಸಂಬಂಧ ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಜಂಟಿ ಸರ್ವೆ ಕಾರ್ಯ ನಡೆಸಿ ಎಷ್ಟು ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎನ್ನುವ ಕುರಿತು ವರದಿ ಸಂಗ್ರಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಶ್ವತಿ ಹೇಳಿದ್ದಾರೆ.
ಇದನ್ನೂ ಓದಿ:
ದೊಡ್ಡವರೇ ಅಕ್ರಮ ಗಣಿಗಾರಿಕೆ ಮಾಡ್ತಿದ್ದಾರೆ; ಸಿಬಿಐ ತನಿಖೆಗೆ ಆಗ್ರಹಿಸಿ ಸುಮಲತಾ ಆಕ್ರೋಶ