ಬೆಂಗಳೂರು: ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರ ತಾರಕಕ್ಕೇರಿದ್ದು ನಿನ್ನೆ (ಜುಲೈ 8) ಮೈಸೂರು ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ಸುಮಲತಾಗೆ ತಿರುಗೇಟು ನೀಡಿದ್ದರು. ಜತೆಗೆ, ಕುಮಾರಸ್ವಾಮಿ ಅವರ ಪರ ವಹಿಸಿದಂತೆ ಮಾತನಾಡಿದ ಪ್ರತಾಪ್ ಸಿಂಹ, ಹಳೆಯ ಘಟನೆಗಳನ್ನು ನೆನಪಿಸಿಕೊಂಡು ಸುಮಲತಾರನ್ನು ಲೇವಡಿ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಇಂದು ಸುದ್ದಿಗೋಷ್ಠಿ ವೇಳೆ ಉತ್ತರಿಸಿದ ಸುಮಲತಾ, ಪ್ರತಾಪ್ ಸಿಂಹ ಮೈಸೂರು ಸಂಸದರೋ, ಮಂಡ್ಯ ಸಂಸದರೋ ಎಂಬ ಬಗ್ಗೆ ಅವರಿಗೆ ಗೊಂದಲ ಇರಬೇಕು. ಜತೆಗೆ, ಜೆಡಿಎಸ್ನಲ್ಲಿದ್ದಾರೋ, ಬಿಜೆಪಿಯಲ್ಲಿದ್ದಾರೋ ಎಂದು ಸರಿಯಾಗಿ ತಿಳಿದುಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಗೆ ತೊಂದರೆ ಕೊಟ್ಟು, ಬೇರೆ ಕಡೆಗೆ ಕಳುಹಿಸಲಾಗಿದೆ. ಮೈಸೂರಿನಲ್ಲಿ ಕೊರೊನಾ ಸಂದರ್ಭ ಸಾವು, ನೋವಿನ ಸಮಸ್ಯೆ ಆಗಿದೆ. ಆ ಬಗ್ಗೆ ಅವರು ಯೋಚಿಸಬೇಕು. ಆದರೆ, ಅವರಿಗೆ ಏನು ಉತ್ಸಾಹವೋ ಏನೋ ಗೊತ್ತಿಲ್ಲ. ತಾನು ಮೈಸೂರು ಸಂಸದನೋ, ಮಂಡ್ಯ ಸಂಸದನೋ ಎನ್ನುವ ಬಗ್ಗೆ ಗೊಂದಲ ಆಗಿರಬೇಕು ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಅವರನ್ನು ಪರೋಕ್ಷವಾಗಿ ಬೆಂಬಲಿಸಿದ ಬಗ್ಗೆ ಮಾತನಾಡಿ, ಪ್ರತಾಪ್ ಸಿಂಹ ಬಿಜೆಪಿಯಲ್ಲಿದ್ದಾರೋ, ಜೆಡಿಎಸ್ಗೆ ಸೇರಿದ್ದಾರೋ ಎಂದು ತಿಳಿದುಕೊಳ್ಳಲಿ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.
ಅಂತೆಯೇ, ಕುಮಾರಸ್ವಾಮಿ ಅವರ ಹೇಳಿಕೆಗೂ ಪ್ರತಿಕ್ರಿಯಿಸಿದ ಅವರು ಚುನಾವಣೆ ಆಗುವ ತನಕವೂ ಅವರೆಲ್ಲಾ ಹೀಗೇ ಹೇಳಿಕೆ ನೀಡುತ್ತಿರಲಿ ಎನ್ನುವುದೇ ನನ್ನ ಬೇಡಿಕೆ. ಅಂಬರೀಶ್ ಮೃತದೇಹ ಮಂಡ್ಯಕ್ಕೆ ಕೊಂಡೊಯ್ದ ವಿಚಾರದ ಬಗ್ಗೆ ಅಂದು ಹೆಚ್‌ಡಿಕೆ ಏನು ಹೇಳಿದ್ದಾರೆ ಎಂಬ ವಿಡಿಯೋ ಇದೆ. ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಬಗ್ಗೆ ಮಾತನಾಡುವಾಗ ಸಂಸ್ಕಾರ ಇಟ್ಟುಕೊಂಡು ಮಾತನಾಡಲಿ. ಅವರ ಮಾತಿನಿಂದ ಅಭಿಮಾನಿಗಳಿಗೆ ನೋವಾಗುತ್ತದೆ. ಅಂಬಿ ಮೇಲಿನ ಅಭಿಮಾನದಿಂದ ಜನರು ಬಂದಿದ್ದರು. ದೂರದೂರದಿಂದ ಬಂದು ಗೌರವ ಸಲ್ಲಿಸಿ ಹೋಗಿದ್ದರು. ಅಂಬರೀಶ್ ಹೆಸರಿನಲ್ಲಿ ರಾಜಕಾರಣ ಮಾಡುವುದು ಬೇಡ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ರಾಜಕಾರಣಿಗಳು ಯಾರೂ ಅವರ ಹೆಸರಲ್ಲಿ ಅಕ್ರಮ ಮಾಡುವುದಿಲ್ಲ. ಬೇನಾಮಿ ಹೆಸರಿನಲ್ಲೇ ಅವರು ಅಕ್ರಮಗಳನ್ನು ಮಾಡುವುದು. ಅಲ್ಲಿಯ ಜನರನ್ನು ಕೇಳಿದರೆ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಅಕ್ರಮ ಗಣಿಗಾರಿಕೆ ಬಗ್ಗೆ ಹೇಳಿದ ಸುಮಲತಾ, ಅದರ ಕುರಿತಾಗಿ ಇವರು ಇಷ್ಟು ಪ್ರತಿಕ್ರಿಯೆ ತೋರಿಸುತ್ತಿರುವುದು ಏಕೆ? ನಾವು ಅಲ್ಲಿಗೆ ತೆರಳದಂತೆ ಅಲ್ಲಲ್ಲಿ ಅಡೆತಡೆಗಳನ್ನು ಮಾಡಿದ್ರು? ಅವರಿಗೆ ಆ ಬಗ್ಗೆ ಯೋಚನೆ ಏಕೆ? ಬೇರೆ ಕಡೆ ಅಕ್ರಮ ಇದೆ ಎನ್ನುವ ಅವರು ಅವರು ಮಾಹಿತಿ ನೀಡಲಿ, ನಾನು ಅಲ್ಲಿಗೂ ಭೇಟಿ ಕೊಡುತ್ತೇನೆ, ಜತೆಯಲ್ಲಿ ನಾನು ಹೋಗುವಲ್ಲೆಲ್ಲಾ ಅವರು ಬರಲಿ ಎಂದು ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ:
ಹಳೆಯ ಪ್ರಕರಣ ಇಟ್ಟುಕೊಂಡು ಸುಮಲತಾಗೆ ಟಾಂಗ್ ಕೊಟ್ಟ ಸಂಸದ ಪ್ರತಾಪ್ ಸಿಂಹ; ಕುಮಾರಸ್ವಾಮಿ ಪರ ಬ್ಯಾಟಿಂಗ್
ಅಂಬರೀಶ್ ಹೆಸರು ಹೇಳೋಕೂ ಯೋಗ್ಯತೆ ಇಲ್ಲದವರು; ಸ್ಮಾರಕ ಸಂಬಂಧ ಭೇಟಿ ಮಾಡಿದಾಗ ಮುಖಕ್ಕೆ ಪೇಪರ್ ಎಸೆದಿದ್ದನ್ನು ನೆನಪಿಸಿಕೊಳ್ಳಲಿ: ಸುಮಲತಾ