ಕೊನೆಗೂ ಸತ್ಯ ಕಕ್ಕಿದ ಸುಳ್ಳುರಾಮಯ್ಯ ಬಿರುದಾಂಕಿತ ಸಿದ್ದರಾಮಯ್ಯ: ಕುಮಾರಸ್ವಾಮಿ ವಾಗ್ದಾಳಿ
ಸುಮಲತಾ ಬಿಜೆಪಿಯಿಂದ ಗೆದ್ದಿದ್ದಲ್ಲ, ಕಾಂಗ್ರೆಸ್ ವೋಟುಗಳಿಂದಲೇ ಗೆದ್ದಿದ್ದು ಆಯಮ್ಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಎಕ್ಸ್ ಖಾತೆಯಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಸುಳ್ಳುರಾಮಯ್ಯ ಬಿರುದಾಂಕಿತರಾದ ನೀವು, ಕೊನೆಗೂ ಸತ್ಯ ಕಕ್ಕಿದ್ದೀರಿ ಎಂದಿದ್ದಾರೆ.
ಮಂಡ್ಯ, ಮಾ.10: ಸುಳ್ಳುರಾಮಯ್ಯ ಬಿರುದಾಂಕಿತರಾದ ಸಿದ್ದರಾಮಯ್ಯ (Siddaramaiah) ಅವರು ಮಂಡ್ಯದಲ್ಲಿ ಸುಮಲತಾ ಅಂಬರೀಶ್ (Sumalatha Ambareesh) ಗೆಲುವಿನ ಬಗ್ಗೆ ಕೊನೆಗೂ ಸತ್ಯ ಕಕ್ಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ. ಸುಮಲತಾ ಬಿಜೆಪಿಯಿಂದ ಗೆದ್ದಿದ್ದಲ್ಲ, ಕಾಂಗ್ರೆಸ್ ವೋಟುಗಳಿಂದಲೇ ಗೆದ್ದಿದ್ದು ಆಯಮ್ಮ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸರಣಿ ಪೋಸ್ಟ್ ಮಾಡಿದ ಕುಮಾರಸ್ವಾಮಿ, “ಮಂಡ್ಯ ಜಿಲ್ಲೆಯ ಗ್ಯಾರಂಟಿಗಳ 2ನೇ ಸಮಾವೇಶದಲ್ಲಿ ಅಲವತ್ತುಕೊಂಡ ಸಿಎಂ ಸಿದ್ದರಾಮಯ್ಯನವರೇ.. ಕೊನೆಗೂ ಸತ್ಯ ನುಡಿದಿದ್ದೀರಿ! ಸುಳ್ಳುರಾಮಯ್ಯ ಬಿರುದಾಂಕಿತರಾದ ನೀವು, ಕೊನೆಗೂ ಸತ್ಯ ಕಕ್ಕಿದ್ದೀರಿ! ಸುಳ್ಳುರಾಮಯ್ಯನೆಂಬ ಕುಖ್ಯಾತಿಯಿಂದ ಹೊರಬರಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೀರಿ. ಅಭಿನಂದನೆಗಳು” ಎಂದು ಹೇಳಿದ್ದಾರೆ.
“ಸತ್ಯ ಗಂಟಲಲ್ಲಿ ಸಿಕ್ಕಿಕೊಂಡ ಬಿಸಿತುಪ್ಪದಂತೆ.. ಕಕ್ಕಲೇಬೇಕು. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಆಯ್ಕೆಯಾದ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ಸೇ ಕಾರಣ ಎಂದು ಸ್ವತಃ ನೀವೇ ಒಪ್ಪಿಕೊಂಡಿದ್ದೀರಿ. ನಿಮ್ಮದೇ ಮಾತುಗಳಲ್ಲಿ ಹೇಳುವುದಾದರೆ.. ಸುಮಲತಾ ಬಿಜೆಪಿಯಿಂದ ಗೆದ್ದಿದ್ದಲ್ಲ.. ಕಾಂಗ್ರೆಸ್ ವೋಟುಗಳಿಂದಲೇ ಗೆದ್ದಿದ್ದು ಆಯಮ್ಮ..!!” ಎಂದರು.
ಇದನ್ನೂ ಓದಿ: ಗ್ಯಾರೆಂಟಿ ಸಮಾವೇಶ: ಸಿದ್ದರಾಮಯ್ಯ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ
“ನಿಮ್ಮ ಗೋಮುಖವ್ಯಾಘ್ರತನ ಅರಿಯಲು ಇಷ್ಟು ಸಾಕು. ಅಂದು ಕಾಂಗ್ರೆಸ್ ಮೈತ್ರಿ ಪಕ್ಷ, ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ. ಅವರ ಜತೆಯಲ್ಲೇ ಪ್ರಚಾರದ ಸೋಗಿನಾಟವಾಡಿ, ಮಾಧ್ಯಮಗಳ ಮುಂದೆ ಗೆಲ್ಲಿಸುತ್ತೇವೆಂದು ಪೋಸು ಕೊಡುತ್ತಲೇ ನಿಖಿಲ್ ಸುತ್ತ ಶಕುನಿವ್ಯೂಹವನ್ನೇ ರಚಿಸಿದ ಕಲಿಯುಗ ಶಕುನಿ ನೀವಲ್ಲದೆ ಮತ್ತ್ಯಾರು ಸಿದ್ದರಾಮಯ್ಯನವರೇ?” ಎಂದು ಪ್ರಶ್ನಿಸಿದರು.
ಹೆಚ್ಡಿ ಕುಮಾರಸ್ವಾಮಿ ಎಕ್ಸ್ ಪೋಸ್ಟ್
ಮಂಡ್ಯ ಜಿಲ್ಲೆಯ ಗ್ಯಾರಂಟಿಗಳ 2ನೇ ಸಮಾವೇಶದಲ್ಲಿ ಅಲವತ್ತುಕೊಂಡ ಸಿಎಂ @siddaramaiah ನವರೇ.. ಕೊನೆಗೂ ಸತ್ಯ ನುಡಿದಿದ್ದೀರಿ! ಸುಳ್ಳುರಾಮಯ್ಯ ಬಿರುದಾಂಕಿತರಾದ ನೀವು, ಕೊನೆಗೂ ಸತ್ಯ ಕಕ್ಕಿದ್ದೀರಿ! ಸುಳ್ಳುರಾಮಯ್ಯನೆಂಬ ಕುಖ್ಯಾತಿಯಿಂದ ಹೊರಬರಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೀರಿ. ಅಭಿನಂದನೆಗಳು. 1/6#ವೋಟಿಗಾಗಿ_ಗ್ಯಾರಂಟಿ_ಸಮಾವೇಶ
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 10, 2024
“ಕಳ್ಳಬೆಕ್ಕು ಕದ್ದು ಹಾಲು ಕುಡಿದರೆ ಗೊತ್ತಾಗದೇ? ಬೂದಿ ಮುಚ್ಚಿದ ಕೆಂಡ ತಣ್ಣಗಿರಲು ಸಾಧ್ಯವೇ? ಕುದಿಯುವ ಕುಲುಮೆಯಂತಿರುವ ನಿಮ್ಮ ಉದರಹುರಿಗೆ ತಂಪೆನ್ನುವುದುಂಟೆ? 5 ವರ್ಷಗಳ ನಂತರವಾದರೂ ಸತ್ಯ ಕಕ್ಕಿದ್ದೀರಿ ಹಾಗೂ ನಂಬಿದವನ ಮನೆ ನಾಶವಾಗಲಿ ಎನ್ನುವ ನಿಮ್ಮಹೇಯತನ ಬಯಲಾಗಿದೆ. ಸತ್ಯಮೇಯ ಜಯತೆ. ಇದಿಷ್ಟೇ ನನ್ನ ಕಳಕಳಿ ಮತ್ತು ನಂಬಿಕೆ” ಎಂದರು.
ಸಕ್ಕರೆ ಕಾರ್ಖಾನೆಗೆ ಮೀಸಲಿಟ್ಟಿದ್ದ 100 ಕೋಟಿ ಎಲ್ಲಿದೆ?
“ಸಕ್ಕರೆ ಕಾರ್ಖಾನೆ ಬಗ್ಗೆ ಹೇಳಿದ್ದೀರಿ. ಬಜೆಟ್ನಲ್ಲಿ ಘೋಷಣೆ ಮಾಡಿದ್ದೀರಿ, ಸರಿ.. ದುಡ್ಡು ಎಲ್ಲಿಟ್ಟಿದ್ದೀರಿ. ನಾನು 2019ರ ಬಜೆಟ್ನಲ್ಲಿಯೇ ಈ ಕಾರ್ಖಾನೆಗೆ 100 ಕೋಟಿ ತೆಗೆದಿರಿಸಿದ್ದೆ. ಎಲ್ಲಿ ಹೋಯಿತು ಆ ದುಡ್ಡು? ಇದರ ಬಗ್ಗೆ ಗ್ಯಾರಂಟಿ ಸಮಾವೇಶದಲ್ಲಿ ಚಕಾರ ಎತ್ತಿಲಿಲ್ಲವೇಕೆ ಸಿದ್ದರಾಮಯ್ಯನವರೇ? ಇಂಥ ಆತ್ಮವಂಚನೆ ಏತಕ್ಕೆ?” ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
“ತನ್ನ ತಲೆಗೇ ಹರಳೆಣ್ಣೆ ಇಲ್ಲ, ಪಕ್ಕದವನಿಗೆ ಸಂಪಂಗೆಣ್ಣೆ ಕೊಟ್ಟನಂತೆ ನಿಮ್ಮಂಥವನೊಬ್ಬ! ನಿಮ್ಮ ವೈಖರಿ ಹಾಗಿದೆ. ಕನ್ನಡಿಗರು ಬರದ ಬೆಂಕಿಯಲ್ಲಿ ಬೇಯುತ್ತಿದ್ದರೆ ನಿಮ್ಮ ಸರಕಾರ ಕದ್ದೂಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ! ಒಂದು ಕೈಲಿ ಅಗ್ಗದ ಗ್ಯಾರಂಟಿ ಕೊಟ್ಟು ಹತ್ತು ಕೈಗಳಲ್ಲಿ ಬದುಕಿನ ಗ್ಯಾರಂಟಿ ಕಿತ್ತುಕೊಳ್ಳುತ್ತಿದ್ದೀರಿ? ಇದು ನ್ಯಾಯವೇ?” ಎಂದು ಪ್ರಶ್ನಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:27 pm, Sun, 10 March 24