ಹೆಚ್ಚಿದ ಬಿಸಿಲಿನ ಬೇಗೆ: ಕಲ್ಯಾಣ ಕರ್ನಾಟಕ ಭಾಗದಲ್ಲಿ ನಂದಿನಿ ಮಜ್ಜಿಗೆಗೆ ಬಂತು ಭಾರೀ ಬೇಡಿಕೆ, ಕೆಎಂಎಫ್ ಹೇಳೋದೇನು ನೋಡಿ
ಬೇಸಗೆಯ ಬೇಗೆ ತೀವ್ರಗೊಳ್ಳುತ್ತಿದ್ದಂತೆಯೇ ಜನ ತಂಪು ಪಾನೀಯ, ಎಳನೀರು, ಜ್ಯೂಸ್ ಮೊರೆ ಹೋಗಲಾರಂಭಿಸಿದ್ದಾರೆ. ಆದರೆ, ಇವೆಲ್ಲದಕ್ಕಿಂತಲೂ ಹೆಚ್ಚಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಂದಿನಿ ಮಜ್ಜಿಗೆಯ ಬೇಡಿಕೆ ವಿಪರೀತ ಹೆಚ್ಚಾಗಿದೆಯಂತೆ. ಈ ಬಗ್ಗೆ ಕೆಎಂಎಫ್ ಮಾಹಿತಿ ನೀಡಿದೆ. ಉತ್ತರ ಕರ್ನಾಟಕ ಭಾಗದ ಜನ ನಂದಿನಿ ಮಜ್ಜಿಗೆಗೆ ಮಾರು ಹೋಗಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ.
ಬೆಂಗಳೂರು, ಮಾರ್ಚ್ 25: ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಲು ಆರಂಭವಾಗಿದ್ದು, ತಂಪು ಪಾನೀಯಗಳಿಗೂ ಬೇಡಿಕೆ ಹೆಚ್ಚಾಗಿದೆ. ಬಿಸಿಲಿನ ತಾಪ, ದಾಹದಿಂದ ಬಚಾವಾಗಲು ಜನ ಜ್ಯೂಸ್, ತಂಪು ಪಾನೀಯ, ಮಜ್ಜಿಗೆಯ (Buttermilk) ಮೊರೆ ಹೋಗುತ್ತಿದ್ದಾರೆ. ಪರಿಣಾಮವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೆಎಂಎಫ್ನ ನಂದಿನಿ ಮಜ್ಜಿಗೆಗೆ (Nandini Buttermilk) ಬೇಡಿಕೆ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿರುವುದು ತಿಳಿದುಬಂದಿದೆ. ಕರ್ನಾಟಕ ಹಾಲು ಒಕ್ಕೂಟದ (KMF) ಅಂಕಿಅಂಶಗಳ ಪ್ರಕಾರ, ಫೆಬ್ರವರಿ ತಿಂಗಳಲ್ಲಿ ದಿನಕ್ಕೆ ನಂದಿನಿ ಮಜ್ಜಿಗೆಗೆ ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ 1,243 ಲೀಟರ್ ಬೇಡಿಕೆ ಇತ್ತು. ಆದರೆ ಮಾರ್ಚ್‌ನಲ್ಲಿ ದಿನಕ್ಕೆ 4,615 ಲೀಟರ್ಗೆ ಹೆಚ್ಚಾಗಿದೆ. ಇದು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇನ್ನಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಸದ್ಯ 200 ಮಿ.ಲೀ. ಮಜ್ಜಿಗೆ ಪ್ಯಾಕೆಟ್‌ಗಳಿಗೆ ಭಾರಿ ಬೇಡಿಕೆ ಇದೆ. ಫೆಬ್ರವರಿಯಲ್ಲಿ ದಿನಕ್ಕೆ ಒಟ್ಟು 6,215 ಪ್ಯಾಕೆಟ್‌ಗಳು ಮಾರಾಟವಾಗುತ್ತಿದ್ದವು. ಇದು ಮಾರ್ಚ್‌ನಲ್ಲಿ ದಿನಕ್ಕೆ 23,075 ಪ್ಯಾಕೆಟ್‌ಗಳಿಗೆ ಏರಿಕೆಯಾಗಿದೆ.
ಕೆಎಂಎಫ್ ಅಂಕಿಅಂಶಗಳ ಪ್ರಕಾರ, 2023 ರ ಮಾರ್ಚ್ಗೆ ಹೋಲಿಸಿದರೆ ಮಾರ್ಚ್ 2024 ರಲ್ಲಿ ಮಜ್ಜಿಗೆ ಬೇಡಿಕೆಯು ಶೇ 200 ರ ವರೆಗೆ ಹೆಚ್ಚಾಗಿದೆ. 2023 ರ ಮಾರ್ಚ್‌ನಲ್ಲಿ, ಮಜ್ಜಿಗೆಯ ಬೇಡಿಕೆಯು ದಿನಕ್ಕೆ 2,830 ಲೀಟರ್ ಆಗಿತ್ತು.
ಮಜ್ಜಿಗೆ ಜತೆ ಮೊಸರಿಗೂ ಹೆಚ್ಚಿದ ಬೇಡಿಕೆ
ಈ ಬೇಸಿಗೆಯಲ್ಲಿ ಮಜ್ಜಿಗೆ ಜತೆಗೆ ಮೊಸರಿಗೂ ಬೇಡಿಕೆ ಹೆಚ್ಚಿದೆ. 2024 ರ ಫೆಬ್ರವರಿಯಲ್ಲಿ ದಿನಕ್ಕೆ 9,618 ಲೀಟರ್‌ಗಳ ಬೇಡಿಕೆಯಿತ್ತು. ಇದು ಮಾರ್ಚ್ 20ರ ವೇಳೆಗೆ ದಿನಕ್ಕೆ 10,821 ಲೀಟರ್‌ಗಳಿಗೆ ಹೆಚ್ಚಳವಾಗಿದೆ. ನಂದಿನಿ ಮಜ್ಜಿಗೆಯ ರುಚಿ ಮನೆಯಲ್ಲಿ ತಯಾರಿಸಿದ ಮಜ್ಜಿಗೆಯಂತೆಯೇ ಇದೆ ಎಂದು ಕಲಬುರಗಿ, ಬೀದರ್ ಮತ್ತು ಯಾದಗಿರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ಪಾಟೀಲ ಅಭಿಪ್ರಾಯಪಟ್ಟಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ನಂದಿನಿ ಮಜ್ಜಿಗೆಯ ರುಚಿ ಮತ್ತು ಆರೋಗ್ಯಕರ ಅಂಶಗಳ ಕಾರಣಕ್ಕಾಗಿಯೇ ಜನರು ಈ ಬೇಸಿಗೆಯಲ್ಲಿ ಹೆಚ್ಚಾಗಿ ಅದನ್ನೇ ಆಯ್ದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಾರ್ಚ್ 31ರಿಂದ ಎರಡು ದಿನಗಳ ಕಾಲ ಶಿವಮೊಗ್ಗ, ಮೈಸೂರು ಸೇರಿ ಹಲವೆಡೆ ಮಳೆಯ ಮುನ್ಸೂಚನೆ
ಉತ್ತರ ಕರ್ನಾಟ ಭಾಗದಲ್ಲಿ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. ಮತ್ತೊಂದೆಡೆ, ದಕ್ಷಿಣ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾನುವಾರ ಮಳೆಯಾಗಿದ್ದು, ಬೇಸಗೆಯ ಬೇಗೆಯಿಂದ ಬಸವಳಿದಿದ್ದ ಜನತೆಗೆ ತುಸು ತಂಪೆರೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ