ಕರ್ನಾಟಕಕ್ಕೆ ಶಾಕ್, ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಹರಿಸಲು ಸುಪ್ರೀಂಕೋರ್ಟ್ ಆದೇಶ

| Updated By: ರಮೇಶ್ ಬಿ. ಜವಳಗೇರಾ

Updated on: Sep 21, 2023 | 11:44 AM

Cauvery River Water Dispute: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್​ ಕರ್ನಾಟಕಕ್ಕೆ ಮತ್ತೆ ಶಾಕ್ ಕೊಟ್ಟಿದೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸಲು ಆದೇಶ ಹೊರಡಿಸಿದೆ. ಈ ಮೂಲಕ ಸುಪ್ರೀಂಕೋರ್ಟ್ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಎತ್ತಿ ಹಿಡಿದಿದೆ.

ಕರ್ನಾಟಕಕ್ಕೆ ಶಾಕ್, ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಹರಿಸಲು ಸುಪ್ರೀಂಕೋರ್ಟ್ ಆದೇಶ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ, (ಸೆಪ್ಟೆಂಬರ್ 21): ತಮಿಳುನಾಡಿಗೆ (Tamil Nadu) ಕೆಆರ್​ಎಸ್​ನಿಂದ 5000 ಕ್ಯೂಸೆಕ್​ ನೀರು ಹರಿಸಬೇಕೆಂದು ಸುಪ್ರೀಂಕೋರ್ಟ್ (Supreme Court) ಆದೇಶ ಹೊರಡಿಸಿದೆ. CWMA ಆದೇಶ ಪಾಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿ, ಮುಂದಿನ 15 ದಿನಗಳ ಕಾಲ ಪ್ರತಿದಿನ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಹರಿಸಲು ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಆದೇಶ ಹೊರಡಿಸಿದೆ. ಇದರೊಂದಿಗೆ ಕಾವೇರಿ ನಿಯಂತ್ರಣ ಆಯೋಗ ಮತ್ತು ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶಗಳನ್ನು ಎತ್ತಿಹಿಡಿದೆ. ಹೀಗಾಗಿ ಬರ ಪರಿಸ್ಥಿತಿ ನಡುವೆ ಕರ್ನಾಟಕಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಾವೇರಿ ನಿಯಂತ್ರಣ ಆಯೋಗ ಮತ್ತು ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶಗಳು ಮತ್ತು ಶಿಫಾರಸುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಲಾಗುವುದಿಲ್ಲ. ಎರಡು ಸಮಿತಿಗಳ ಆದೇಶವನ್ನು ಒಪ್ಪಬೇಕಾಗುತ್ತೆ. ಎರಡು ಸಮಿತಿಗಳ ಆದೇಶವನ್ನು ಕರ್ನಾಟಕ ಪಾಲಿಸಬೇಕು, ಹೀಗಾಗಿ ಕರ್ನಾಟಕ ನೀರು ಹರಿಸಲೇಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಇದನ್ನೂ ಓದಿ: ಕಾವೇರಿ ನೀರಿ ವಿವಾದ: ಕೇಂದ್ರ ಜಲಶಕ್ತಿ ಸಚಿವರನ್ನ ಭೇಟಿಯಾದ ಸಿದ್ದರಾಮಯ್ಯ, ಏನೆಲ್ಲಾ ಚರ್ಚೆ ಆಯ್ತು?

ಕರ್ನಾಟಕದಲ್ಲಿ ಈ ಬಾರಿ ತೀವ್ರ ಮಳೆ ಅಭಾವದ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಆದರೂ ತಮಿಳುನಾಡು ನಮಗೆ ಸಾಮಾನ್ಯ ವರ್ಷಗಳಂತೆ ನೀರು ಹರಿಸುವಂತೆ ಪಟ್ಟು ಹಿಡಿದಿದ್ದು, ಈ ಬಗ್ಗೆ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದವು. ಇಂದು ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಕೋರ್ಟ್, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ 5000 ಕ್ಯೂಸೆಕ್ಸ್‌ ನೀಡು ಬಿಡುವಂತೆ ಆದೇಶ ಹೊರಡಿಸಿದೆ. ಇದಾದ ನಂತರ ನೀರಿನ ಲಭ್ಯತೆಯ ವಾಸ್ತವಾಂಶವನ್ನು ನೋಡಿಕೊಂಡು ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲಾಗುವುದು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು 15 ದಿನಗಳಿಗೊಮ್ಮೆ ಸಭೆಯನ್ನು ಮಾಡಬೇಕು. ಎರಡೂ ರಾಜ್ಯಗಳು ಪ್ರಾಧಿಕಾರದ ಆದೇಶವನ್ನು ಪಾಲಿಸಬೇಕು ಎಂದು ನ್ಯಾಯಮೂರ್ತಿ ಗವಾಯ್‌ ಆದೇಶದಲ್ಲಿ ಸೂಚಿಸಿದ್ದಾರೆ.

ಇತ್ತೀಚೆಗೆ ಸಭೆಗಳನ್ನು ಮಾಡಿದ್ದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣಾ ಸಮಿತಿ, 15 ದಿನಗಳ ಕಾಲ ಪ್ರತಿನಿತ್ಯ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡುಗಡೆ ಕರ್ನಾಟಕಕ್ಕೆ ಆದೇಶಿಸಿದ್ದವು. ಆದ್ರೆ, ಕರ್ನಾಟಕ ಕೆಆರ್​ಎಸ್​ ಜಲಾಶಯದಲ್ಲಿ ನೀರಿನ ಕೊರತೆ ಇರುವುದಿರಂದ ಅಷ್ಟು ನೀರು ಬಿಡಲಾಗುವುದಿಲ್ಲ ಎಂದು ಪಟ್ಟು ಹಿಡಿದಿತ್ತು. ಇದರ ವಿರದ್ಧವಾಗಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ಇದಕ್ಕೆ ಕರ್ನಾಟಕ ಸರ್ಕಾರವೂ ಸಹ ಅಫಿಡೇವಿಟ್ ಸಲ್ಲಿಸಿತ್ತು. ಆದ್ರೆ, ಇದೀಗ ಅಂತಿಮವಾಗಿ ಸುಪ್ರೀಂಕೋರ್ಟ್, ತಮಿಳುನಾಡಿನ ಪರ ತೀರ್ಪು ನೀಡಿದೆ.

Published On - 11:21 am, Thu, 21 September 23