ಸಾರಿಗೆ ನೌಕರರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕರೆ: ಮುಷ್ಕರ ಬಿಟ್ಟು ಕೆಲಸಕ್ಕೆ ಮರಳಿದ ನಂತರ ಮಾತುಕತೆ
ಮಾತುಕತೆ ನಡೆಸುವುದಕ್ಕೂ ಮೊದಲು.. ಮುಷ್ಕರ ಬಿಟ್ಟು ಕೆಲಸಕ್ಕೆ ಮರಳಿ ಎಂಬ ಸಂದೇಶ ಕೊಡುತ್ತಲೇ ಸರಕಾರ ಈ ಮುಷ್ಕರಕ್ಕೆ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಕಾರಣ ಎಂದು ಹೇಳುವ ಮೂಲಕ ಉಳಿದ ಕಾರ್ಮಿಕ ಸಂಘಟನೆಗಳ ಹೃದಯ ಗೆಲ್ಲುವ ಪ್ರಯತ್ನ ಮಾಡಿದೆ.
ಸಾರಿಗೆ ಸಂಸ್ಥೆ ನೌಕರರ ಮುಷ್ಕರವನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಮುಷ್ಕರ ಬಿಟ್ಟು ಕೆಲಸಕ್ಕೆ ಮರಳಿದ ನಂತರವೇ ಮಾತುಕತೆ ಎಂಬ ಖಡಕ್ ಸಂದೇಶ ನೀಡಿದೆ. ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರದ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಂದು ಸಾರ್ವಜನಿಕ ಪ್ರಕಟಣೆ ಕೂಡ ಹೊರಡಿಸಿದ್ದಾರೆ. ಸಾಮಾನ್ಯವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಬಿಟ್ಟು ಯಡಿಯೂರಪ್ಪ ಪ್ರಕಟಣೆ ಕೊಟ್ಟಿದ್ದಷ್ಟೇ ಅಲ್ಲ, ಆ ಪ್ರಕಟಣೆಯಲ್ಲಿ ಕರ್ನಾಟಕ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ತರಾಟೆಗೆ ತೆಗೆದುಕೊಂಡು ಎಲ್ಲಿರಗೂ ಆಶ್ಚರ್ಯ ಹುಟ್ಟಿಸಿದ್ದಾರೆ. ಕೋಡಿಹಳ್ಳಿ ಅವರೇ ಈ ಮುಷ್ಕರಕ್ಕೆ ಸಾರಿಗೆ ನೌಕರರನ್ನು ಎತ್ತಿಕಟ್ಟಿದ್ದಾರೆ ಎಂದು ಆಪಾದಿಸಿದ್ದಾರೆ.
ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರಕ್ಕಿಳಿದಿರುವುದು ದುರದೃಷ್ಟಕರ. ಇದರಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ಜನರಿಗೆ ತೊಂದರೆ ಉಂಟಾಗುತ್ತಿದೆ. ಈಗಾಗಲೇ ಸಾರಿಗೆ ಮಂತ್ರಿ ಲಕ್ಷ್ಮಣ ಸವದಿ ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಕೂಡ ಅವರಿಗೆ ಪ್ರಾಮಾಣಿಕವಾಗಿ ಬಗೆಹರಿಸಲು ಪ್ರಯತ್ನಿಸಿ ಎಂಬ ನಿರ್ದೇಶನ ನೀಡಿದ್ದೇನೆ. ಈ ನಿಟ್ಟಿನಲ್ಲಿ ಅವರು ನಿರಂತರ ಪ್ರಯತ್ನದಲ್ಲಿದ್ದಾರೆ, ಎಂದು ಯಡಿಯೂರಪ್ಪ ತಮ್ಮ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಆದರೆ, ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ದುರುದ್ದೇಶದಿಂದ ಕೆಲವು ಸಾರಿಗೆ ನೌಕರರನ್ನು ಎತ್ತಿ ಕಟ್ಟಿ ಮುಷ್ಕರ ನಡೆಸಲು ಮತ್ತು ರಾಜ್ಯದ ವಿವಿಧೆಡೆ ಕೆಎಸ್ಆರ್ಟಿಸಿ ಮತ್ತು ಬಿಎಮ್ಟಿಸಿ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಲು ಪ್ರಚೋದಿಸಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಉಂಟಾಗಲು ಕಾರಣಕರ್ತರಾಗಿರುತ್ತಾರೆ, ಎಂದು ಯಟಿಯೂರಪ್ಪ ನನೇರವಾಗಿ ಆಪಾದಿಸಿದ್ದಾರೆ.
ಒಂದು ಹೆಜ್ಜೆ ಮುಂದೆ ಹೋಗಿ, ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ ಲಘುವಾಗಿ ಮಾತನಾಡಿರುವುದು ಖಂಡನೀಯ ಎಂದು ಹೇಳಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯಿಂದ ಮುಷ್ಕರ ಕೂಡಲೇ ಹಿಪಡೆಯಬೇಕು ಮತ್ತು ಕೆಲಸಕ್ಕೆ ಹಾಜರಾಗಬೇಕು, ಆ ನಂತರ ಸಾರಿಗೆ ಸಚಿವರ ಜೊತೆ ಮಾತುಕತೆಗೆ ಬನ್ನಿ ಎಂದು ಹೇಳುವ ಮೂಲಕ ಯಡಿಯೂರಪ್ಪ ಎರಡು ವಿಚಾರಕ್ಕೆ ತೆರೆ ಎಳೆದಿದ್ದಾರೆ: ಒಂದು, ಕೆಲವು ಮಾಧ್ಯಮಗಳಲ್ಲಿ ಬಂದಂತೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಲಕ್ಷ್ಮಣ ಸಅದಿ ನಡುವೆ ಭಿನ್ನಾಭಿಪ್ರಾಯ ಇದೆ ಎಂಬುದು. ಇನ್ನೊಂದು ವಿಚಾರ ಸವದಿ ತಲೆಮರೆಸಿಕೊಂಡಿದ್ದಾರೆ ಎಂಬ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ಕೋ. ಚಂದ್ರಶೇಖರ ಸ್ವಯಂ ನಾಯಕತ್ವ? ಮುಷ್ಕರದ ಬಗ್ಗೆ ಮಾತುಕತೆ ನಡೆಸುವುದು ಯಾರ ಜೊತೆ? ದಾರಿ ಕಾಣದೇ ಸರಕಾರ ಕಂಗಾಲು